ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯ ದಿನಗಳು ಬಂದಾವು...

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಮ್ಮನ್ನು ಈಗ ನಪಾಸಾದವರ ತಟ್ಟೆಯಲ್ಲಿ ಇಟ್ಟಿದ್ದೀರಿ. ಪಾಸಾಗಲು ಪ್ರಯತ್ನ ಮಾಡುತ್ತೇವೆ. ನಾನೇನು 80 ಅಂಕ ತೆಗೆದುಕೊಳ್ಳುತ್ತೇನೆ ಎಂದು ಹೇಳುವುದಿಲ್ಲ. ಕನಿಷ್ಠ 45 ಅಂಕಗಳನ್ನಾದರೂ ತೆಗೆದುಕೊಳ್ಳಲು ಪ್ರಯತ್ನ ಮಾಡುವೆ.~

-ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಮಂಗಳವಾರ ಸಂಜೆ ತಮ್ಮ ಗೃಹ ಕಚೇರಿ `ಕೃಷ್ಣಾ~ದಲ್ಲಿ ಸಂಪಾದಕರ ಜತೆಗೆ ಅನೌಪಚಾರಿಕವಾಗಿ ಮಾತನಾಡುತ್ತ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವರ್ಚಸ್ಸಿಗೆ ಆದ ಧಕ್ಕೆಯನ್ನು ಸರಿಪಡಿಸಲು ತಾವು ಏನು ಕ್ರಮ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಅವರು ಮನಸ್ಸು ಬಿಚ್ಚಿ ಮಾತನಾಡಿದರು.

`ಜನರು ಪತ್ರಿಕೆಗಳಲ್ಲಿ ಬರೀ ಕೆಟ್ಟ ಶೀರ್ಷಿಕೆಗಳನ್ನೇ ನೋಡುತ್ತಿದ್ದಾರೆ. ಇದ್ದಕಿದ್ದಂತೆ ಮಂಗಳವಾರ ಎಲ್ಲ ಪತ್ರಿಕೆಗಳಲ್ಲಿ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ  ಪ್ರಶಸ್ತಿ ಬಂದ ಸುದ್ದಿ ಮುಖ್ಯ ಶೀರ್ಷಿಕೆಯ ಸುದ್ದಿ ಆಗಿದೆ. ಇಂಥದೇ ಒಂದಿಷ್ಟು ಒಳ್ಳೆಯ ಸುದ್ದಿಗಳು ಬಂದರೆ ಜನರಿಗೆ ಕೆಟ್ಟ ನೆನಪುಗಳು ಮರೆತು ಹೋಗುತ್ತವೆ.

ಮೂರು ವರ್ಷಗಳಲ್ಲಿ ಸರ್ಕಾರದ ವರ್ಚಸ್ಸಿಗೆ ಆಗಿರುವ ಧಕ್ಕೆಯನ್ನು ಸರಿಪಡಿಸಲು ಉಳಿದ ಎರಡು ವರ್ಷ ಪೂರ್ತಿ ಬೇಕು ಎಂದು ನನಗೇನು ಅನಿಸುವುದಿಲ್ಲ. ಆರು ತಿಂಗಳು ನಾವು ಚೆನ್ನಾಗಿ ಕೆಲಸ ಮಾಡಿದರೆ ಜನರು ಕೆಟ್ಟ ದಿನಗಳನ್ನು ಮರೆತು ಬಿಡುತ್ತಾರೆ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

`ಸಾರ್ವಜನಿಕರ ನೆನಪಿನ ಶಕ್ತಿ ಕಡಿಮೆ ಎಂದು ನಾನು ಇದನ್ನೆಲ್ಲ ಹೇಳುತ್ತಿಲ್ಲ. ಆದರೆ, ಈ ಮನುಷ್ಯ ಪರವಾಗಿಲ್ಲ ಎಂಬ ಭಾವನೆ ಅವರಲ್ಲಿ ಬರುವಂತೆ ಕೆಲಸ ಮಾಡುವೆ. ಈ ಹಿಂದೆ ಕೇವಲ ಶೇ 17ರಷ್ಟು ಸಚಿವರು ವಿಧಾನಸೌಧಕ್ಕೆ ಬಂದು ಕೆಲಸ ಮಾಡುತ್ತಿದ್ದರು. ಈಗ ಅದು ಶೇ 52ಕ್ಕೆ ಏರಿದೆ. ಅಷ್ಟರ ಮಟ್ಟಿನ ಸುಧಾರಣೆ ಆಗಿದೆ.

15 ದಿನಗಳಲ್ಲಿ ಎಲ್ಲ ಕಡತ ವಿಲೇವಾರಿ ಮಾಡಬೇಕು ಎಂದು ಹೇಳಿದ್ದೆ. ಕಾನೂನಿನ ತೊಡಕು ಇರುವ, ಹೆಚ್ಚಿನ ಪರಿಶೀಲನೆ ಅಗತ್ಯ ಇರುವ ಕಡತಗಳನ್ನು ಬಿಟ್ಟು ಬಾಕಿ ಎಲ್ಲ ಕಡತಗಳನ್ನು ವಿಲೇವಾರಿ ಮಾಡುತ್ತಿರುವೆ. ಈಗ ನನ್ನ ಬಳಿ ಶೇ 10ರಷ್ಟು ಕಡತಗಳು ಮಾತ್ರ ಬಾಕಿ ಉಳಿದಿವೆ~ ಎಂದು ಮುಖ್ಯಮಂತ್ರಿ ತಿಳಿಸಿದರು.

`ರಾಜಕಾರಣಿಗಳು ಸ್ವಜನಪಕ್ಷಪಾತಿಗಳು, ಭ್ರಷ್ಟರು ಎಂಬ ಭಾವನೆ ಜನರಲ್ಲಿ ಮನೆ ಮಾಡಿದೆ. ನನ್ನ ಕಚೇರಿ ಬಗ್ಗೆ ಒಂದೇ ಒಂದು ಭ್ರಷ್ಟಾಚಾರದ ಆರೋಪ ಬಂದರೂ ನಾನು ಅಧಿಕಾರದಲ್ಲಿ ಇರುವುದಿಲ್ಲ. ವ್ಯವಸ್ಥೆಯನ್ನು ಸರಿಪಡಿಸಲು ವ್ಯಕ್ತಿಗತವಾಗಿ ನಾನು ಕೆಲಸ ಮಾಡುವೆ.

ನಾನು ಸರಿಯಾಗಿ ಕೆಲಸ ಮಾಡಿದರೆ ಇತರರೂ ಅನುಸರಿಸುತ್ತಾರೆ. ನಿಮ್ಮ ನಿಮ್ಮ ವಿಷಯಗಳ ಬಗ್ಗೆ ಸಂಪುಟ ಸಭೆಯಲ್ಲಿ ಕಡ್ಡಾಯವಾಗಿ ಮಾತನಾಡಲೇಬೇಕು ಎಂದು ಸೂಚಿಸಿರುವೆ.

ಎಲ್ಲ ಸಚಿವರ ಜತೆಗೆ ವೈಯಕ್ತಿಕವಾಗಿ ಮಾತನಾಡಿರುವೆ. ನನ್ನ ಉದ್ದೇಶ ಅವರಿಗೆ ಮನವರಿಕೆ ಆಗುತ್ತದೆ ಎಂಬ ನಂಬಿಕೆ ಇದೆ~ ಎಂದು ಅವರು ಆಶಿಸಿದರು.

`ಪಕ್ಷದ ಅಧ್ಯಕ್ಷನಾಗಿದ್ದಾಗ ಜಾಸ್ತಿ ಮಾತನಾಡುತ್ತಿದ್ದೆ. ಜಾಸ್ತಿ ಮಾತನಾಡಿದಷ್ಟೂ ಒಳ್ಳೆಯದು ಎಂದೂ ಆಗ ಅಂದುಕೊಂಡಿದ್ದೆ. ಈಗ ಹಾಗಲ್ಲ. ಎಷ್ಟು ಮಾತನಾಡಬೇಕೋ ಅಷ್ಟೇ ಮಾತನಾಡುವೆ. ನಿಮಗೆ ನನ್ನ ಮೊಬೈಲ್ ಸಂಖ್ಯೆ ಕೊಟ್ಟಿರುವೆ. ನಾನು ಇಕ್ಕಟ್ಟಿನಲ್ಲಿ ಇದ್ದಾಗ ನನ್ನ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಉಳಿದ ವೇಳೆಯಲ್ಲಿ ನಾನೇ ನಿಮಗೆ ವಾಪಸು ಫೋನ್ ಮಾಡುತ್ತೇನೆ~ ಎಂದು ಚಟಾಕಿ ಹಾರಿಸಿದರು.

`ಸರ್ಕಾರದ ವರ್ಚಸ್ಸಿಗೆ ಧಕ್ಕೆ ಬಂದು ಕೆಲವರು ಸಚಿವರು ಜೈಲು ಪಾಲಾಗಿರುವುದರಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಹಿಂಜರಿಕೆ ಆಗಿರುವುದು ನಿಜ. ಆದರೆ, ಕಳೆದು ಹೋಗಿರುವ ವರ್ಚಸ್ಸನ್ನು ಮತ್ತೆ ಗಳಿಸುವಲ್ಲಿ ಯಶಸ್ವಿಯಾದರೆ ಅವರು ರಾಜ್ಯದಲ್ಲಿ ಬಂಡವಾಳ ಹೂಡಲು ಬರುತ್ತಾರೆ~ ಎಂದ ಅವರು ಕೈಗಾರಿಕೆ ಸಚಿವರ ವಿರುದ್ಧದ ಭೂ ಕಬಳಿಕೆ ಆರೋಪಗಳ ಬಗ್ಗೆ ಖಚಿತ ಉತ್ತರ ನೀಡಲಿಲ್ಲ. ಆ ಬಗ್ಗೆ ಮಾಹಿತಿ  ಪಡೆದು ತಿಳಿಸುವುದಾಗಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಿಮಗೆ  ಎಷ್ಟು ಮುಕ್ತವಾಗಿ ಕೆಲಸ ಮಾಡಲು ಬಿಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಈಗ ನಿಮ್ಮ ಮುಂದೆ  ಎಷ್ಟು ಮುಕ್ತವಾಗಿ ಮಾತನಾಡುತ್ತಿದ್ದೇನೆಯೋ ಅಷ್ಟು ಮುಕ್ತವಾಗಿ ಕೆಲಸ ಮಾಡಲು ಬಿಟ್ಟಿದ್ದಾರೆ~ ಎಂದರು.

ಕೊಪ್ಪಳ ಉಪ ಚುನಾವಣೆ ಮುಖ್ಯಮಂತ್ರಿಯಾಗಿ ತಮಗೆ ಮುಖ್ಯವಲ್ಲ. `ಆದರೆ, ಪಕ್ಷಕ್ಕೆ ಪ್ರತಿ ಚುನಾವಣೆಯೂ ಮುಖ್ಯ. ಅಲ್ಲಿ ನಮ್ಮ ಪಕ್ಷಕ್ಕೆ ಗೆಲುವು ಕೂಡ ಖಚಿತ~ ಎಂದು ಅವರು ಭರವಸೆಯ ಮಾತು ಆಡಿದರು.

`ಕೊಪ್ಪಳ ಉಪಚುನಾವಣೆ ಮುಗಿಯುವ ವರೆಗೆ (ಸೆ 26) ನೂತನ ಲೋಕಾಯುಕ್ತರ ನೇಮಕ ಕುರಿತು ಚಿಂತಿಸುವುದಿಲ್ಲ. ನಂತರವೇ ಆ ಕಡೆ ಗಮನ ಹರಿಸುತ್ತೇವೆ~ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಬಳ್ಳಾರಿ ರೆಡ್ಡಿ ಸೋದರರು ಕರ್ನಾಟಕದಲ್ಲಿಯೇ ಹೆಚ್ಚು ಗಣಿಗಾರಿಕೆ ಮಾಡಿರುವ ಪ್ರಕರಣವನ್ನು ಸಿಬಿಐಗೆ ಕೊಡುವ ಪ್ರಶ್ನೆಯಿಲ್ಲ. ಲೋಕಾಯುಕ್ತ ವರದಿ ಕುರಿತು ಕ್ರಮ ತೆಗೆದುಕೊಳ್ಳಲು ಮೂರು ತಿಂಗಳ ಅವಧಿಯಿದೆ.

ಸರ್ಕಾರಿ ಅಧಿಕಾರಿಗಳ ಬಗ್ಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ನೇತೃತ್ವದ ಸಮಿತಿ ಕೊಡುವ ವರದಿಯನ್ನು ಮತ್ತು ಗಣಿ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಸಚಿವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ಕುರಿತ ವಿಚಾರಣೆಯನ್ನು ಇನ್ನೊಂದು ಸಂಸ್ಥೆಗೆ ವಹಿಸಿಕೊಡುವ ಉದ್ದೇಶವೇನೂ ತಮಗೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಗಣಿಗಾರಿಕೆ ನಿಂತ ನಂತರ 1.5 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸರ್ಕಾರಕ್ಕೆ ಈಗಾಗಲೇ 400 ಕೋಟಿ ರೂಪಾಯಿ ಆದಾಯವೂ ಕೈ ತಪ್ಪಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬುದು ಸರ್ಕಾರದ ಮುಂದಿರುವ ಸವಾಲು.

ಸುಪ್ರೀಂ ಕೋರ್ಟು ಪರಿಸರದ ದೃಷ್ಟಿಯಿಂದ ಗಣಿಗಾರಿಕೆ ನಿಷೇಧ ಮಾಡಿದೆ. ಆದರೆ, 1.5 ಲಕ್ಷ ಜನ ನಿರುದ್ಯೋಗಿಗಳು ತಮ್ಮ ಹೊಟ್ಟೆ ಪಾಡಿಗೆ ಏನು ಮಾಡಬೇಕು? ಅವರು ದರೋಡೆ, ಡಕಾಯಿತಿ ಮಾಡಲು ಬೆಂಗಳೂರಿಗೇ ಬರಬಹುದಲ್ಲವೇ ಎಂದು ಅವರು ಪ್ರಶ್ನಿಸಿದರು.

ಆದರೆ, ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ 27,000 ಕೋಟಿ ರೂಪಾಯಿ ಹಾನಿಯಾಗಿದೆ ಎಂಬ ಲೋಕಾಯುಕ್ತರ ವರದಿ ಬಗ್ಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ಅವರು ನೇರ ಉತ್ತರ ಕೊಡಲಿಲ್ಲ.

ಮೆಟ್ರೊಗೆ ಸದ್ಯದಲ್ಲೇ ಹಸಿರು ನಿಶಾನೆ
ಬೆಂಗಳೂರು ಮೆಟ್ರೊ ರೈಲು ಸಂಚಾಕ್ಕೆ ಒಂದೆರಡು ದಿನದಲ್ಲಿ ರೈಲ್ವೆ ಇಲಾಖೆಯಿಂದ ಹಸಿರು ನಿಶಾನೆ ದೊರೆಯುವ ಸಾಧ್ಯತೆ ಇದೆ. ಪ್ರಧಾನಿಯವರೇ ಬಂದು ಮೆಟ್ರೊ ರೈಲು ಉದ್ಘಾಟನೆ ಮಾಡಬೇಕು ಎಂಬುದು ಸರ್ಕಾರ ಇಚ್ಛೆ. ಪ್ರಧಾನಿಯವರು ಅಮೆರಿಕ ಪ್ರವಾಸ ಮುಗಿಸಿಕೊಂಡು ಬಂದ  ನಂತರ ಅವರನ್ನು ಸಂಪರ್ಕಿಸಿ ಅವರ ವೇಳೆ ನಿಗದಿ ಮಾಡಲಾಗುವುದು.
 
ಅವರು ಬಂದರೆ ಮುಂದಿನ ಮೆಟ್ರೊ ರೈಲು ಯೋಜನೆಗಳಿಗೆ ಹೆಚ್ಚಿನ ನೆರವು ಕೇಳಲೂ ಅನುವಾಗುತ್ತದೆ. ರೈಲ್ವೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರೂ ಈ ವಿಚಾರದಲ್ಲಿ ಸರ್ಕಾರಕ್ಕೆ ಸಹಾಯ ಮಾಡುತ್ತಾರೆ ಎಂದು ಸದಾನಂದಗೌಡರು ತಿಳಿಸಿದರು.

ದಸರಾಕ್ಕೆ ಮೋದಿ
ಮೈಸೂರು ದಸರಾ ವೀಕ್ಷಣೆಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬರಲಿದ್ದಾರೆ. ಅವರು ಪ್ರತ್ಯೇಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬರುತ್ತಿದ್ದು ದಸರಾ ವೀಕ್ಷಣೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT