ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯ ಪುಸ್ತಕಗಳು ನನ್ನನ್ನ ಯಾವತ್ತೂ ಕೈಹಿಡಿದು ನಡೆಸಿವೆ

ಸಾಹಿತ್ಯ ಸಾಂಗತ್ಯ
Last Updated 31 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಯಾವಾಗ ನಿಮ್ಮ ಓದಿನ ಯಾನ ಆರಂಭವಾಯಿತು? ಬಾಲ್ಯದಲ್ಲಿ ಓದಿಗೆ ಇದ್ದ ವಾತಾವರಣ ಯಾವ ಬಗೆಯದು? ಅದು ನಿಮ್ಮ ಓದಿಗೆ ಪೂರಕವಾಗಿತ್ತೆ? ಓದಿನತ್ತ ಆಕರ್ಷಿಸಿದ ಪುಸ್ತಕಗಳು, ಆ ಕುರಿತ  ಸಂಗತಿಗಳನ್ನು ನೆನಪು ಮಾಡಿಕೊಳ್ಳಬಹುದೆ?

ಓದಿನ ಸಂಪ್ರದಾಯಕ್ಕಿಂತ ಮಾತಿನ ಸಂಪ್ರದಾಯವನ್ನು ನಂಬಿದ ಕುಟುಂಬದ ಹಿನ್ನೆಲೆ ನಮ್ಮದು. ತಾಳಮದ್ದಲೆ, ಯಕ್ಷಗಾನಗಳನ್ನು ನೊಡುತ್ತ ಬೆಳೆದ ನನಗೆ ಈಗಲೂ ಕೂಡ ನೆನಪಿರುವ ಓದು, ಕನ್ನಡಶಾಲೆ (ಪ್ರಾಥಮಿಕ ಶಾಲೆ)ಯಲ್ಲಿ ಸಿಗುತ್ತಿದ್ದ `ವಿಶ್ವಭಾರತಿ' ಮಾಲಿಕೆಯದು. ಪ್ರತಿ ಶುಕ್ರವಾರ ಮಾತ್ರ ಸಿಗುವ ಆ ಪುಸ್ತಕಕ್ಕಾಗಿ ನಾವು ವಾರವಿಡೀ ಶಾಲೆಗೆ ಹೊಗುತ್ತಿದ್ದೆವು. ನಂತರ ಊರಿನ ವಾಚನಾಲಯದಲ್ಲಿ ಸಿಗುತ್ತಿದ್ದ ಎನ್. ನರಸಿಂಹಯ್ಯ ಅವರ ಪತ್ತೆದಾರಿ ಕಾದಂಬರಿಗಳತ್ತ ನಾನು ತಿರುಗಿಕೊಂಡಂತೆ ನೆನಪು. ಕಾಲೇಜಿನ ದಿನಗಳಲ್ಲಿ ಕನ್ನಡ ಪ್ರಾಧ್ಯಾಪಕರಾದ ಆರ್.ಪಿ. ಹೆಗಡೆಯವರು ಒಳ್ಳೆಯ ಸಾಹಿತ್ಯಕ್ಕೆ ನಾನು ತೆರೆದುಕೊಳ್ಳಲು ಕಾರಣರಾದರು. ಆ ನಿಟ್ಟಿನಲ್ಲಿ ನಾನು ಮೊದಲು ಓದಿನ ಪುಸ್ತಕ ಶಿವರಾಮ ಕಾರಂತರ `ಬೆಟ್ಟದ ಜೀವ' ಕಾದಂಬರಿ. ಅದು ಇವತ್ತಿಗೂ ನನ್ನನ್ನು ಕಾಡುವ ಪುಸ್ತಕ.

ನಿಮ್ಮ ಪ್ರಕಾರ ಅತ್ಯುತ್ತಮ ಸಾಹಿತ್ಯ ಕೃತಿ ಎಂದರೆ ಯಾವುದು? ನಿಮ್ಮ ಓದಿನ ವ್ಯಾಪ್ತಿಯಲ್ಲಿ ಒಂದೆರಡು ಉದಾಹರಣೆ ಕೊಡಲು ಸಾಧ್ಯವೆ?

ಒಂದು ಕೃತಿ ನಮ್ಮ ಬುದ್ದಿಪೂರ್ವಕವಾದ ನಂಬಿಕೆಯನ್ನು ಪ್ರಶ್ನಿಸಬೇಕು. ನಮ್ಮಳಗಿನ ವಿಶ್ವಕ್ಕೊಂದು ಹೊಸಕಿಂಡಿಯನ್ನು ಕಟ್ಟಬೇಕು ಮತ್ತು ಜೀವಚೈತನ್ಯಗಳ ಕುರಿತು ಇರುವ ನಂಬುಗೆ, ಪ್ರೀತಿಯನ್ನು ಅದು ವಿಸ್ತರಿಸಬೇಕು. ಅಂತಹ ಕೃತಿಯನ್ನು ನಾನು ಉತ್ತಮ ಕೃತಿಯೆಂದು ಭಾವಿಸುತ್ತೆನೆ. ಕಸಬುದಾರಿಕೆಯ ಘನತೆಯನ್ನು ತೋರುವ ಪೂರ್ಣಚಂದ್ರ ತೇಜಸ್ವಿಯವರ `ಚಿದಂಬರ ರಹಸ್ಯ', ಅನಂತಮೂರ್ತಿಯವರ `ಸಂಸ್ಕಾರ', ಯಶವಂತ ಚಿತ್ತಾಲರ `ಛೇದ', ದೇವನೂರರ `ಕುಸಮಬಾಲೆ', ಲಂಕೇಶರ `ಟೀಕೆ- ಟಿಪ್ಪಣಿ' ಮತ್ತು ಶಂಕರ ಮೊಕಾಶಿ ಪುಣೇಕರರ `ಗಂಗವ್ವ ಗಂಗಾಮಾಯಿ' ನನ್ನ ಉದ್ದ ಪಟ್ಟಿಯಲ್ಲಿರುವ ಕೆಲವು ಹೆಸರುಗಳು. ಸಂಬಂಧದ ಸೂಕ್ಷ್ಮತೆಯನ್ನು, ಒಂದು ಬಿಡುಗಡೆಯ ಹಗುರತನದ ಭಾವನೆಯನ್ನು ಏಕಕಾಲಕ್ಕೆ ಕಾಣಿಸುವ ಜಯಂತ ಕಾಯ್ಕಿಣಿಯವರ ಕಥೆ `ಮೋಗ್ರಿಯ ಸತ್ಸಂಗ', ಅಥವಾ ಸ್ವಾತಂತ್ರ್ಯದ ನಂತರ ದೇಶ ಪಡೆದುಕೊಳ್ಳುತ್ತಿರುವ ನಿರ್ಭಾವುಕ ಕ್ರೂರತನವನ್ನು ಬಿಂಬಿಸುವ ತೇಜಸ್ವಿಯವರ `ತಬರನಕತೆ'ಯನ್ನು ಇಲ್ಲಿ ಹೆಸರಿಸದಿದ್ದರೆ ತಪ್ಪಾದೀತು.

ಯಾವ ಸಾಹಿತ್ಯ ಕೃತಿ (ಕೃತಿಗಳು) ನಿಮ್ಮ ಮೇಲೆ ತೀರಾ ಪ್ರಭಾವ ಬೀರಿವೆ? ಅವು ನಿಮ್ಮ, ಬದುಕು ಹಾಗೂ ಸಾಹಿತ್ಯವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿವೆಯೇ?  ಉತ್ತಮ ಸಾಹಿತ್ಯ ಕೃತಿಗಳೊಂದಿಗಿನ ನಿಮ್ಮ ಸ್ಪಂದನ ಯಾವ ಬಗೆಯದು?

ರಾಜ್‌ಕುಮಾರ್ ನಾಯಕರಾಗಿರುವ `ಬಂಗಾರದ ಮನುಷ್ಯ' ಸಿನಿಮಾ ನನ್ನ ಬದುಕಿನ ಮೇಲೆ ಅಪಾರ ಪರಿಣಾಮ ಬೀರಿದ ಸಿನಿಮಾ. ಅದನ್ನ ನಾನು ಒಂದು ಸಾಹಿತ್ಯಕೃತಿ ಎಂದೇ ಭಾವಿಸುತ್ತೇನೆ. ಅದು ಕಾರಂತರ `ಬೆಟ್ಟದ ಜೀವ'ದ ಮುಂದುವರಿಕೆ ಎಂದರೆ ನೀವು ತಪ್ಪುತಿಳಿಯಲಾರಿರಿ ಎಂದು ಅಂದುಕೊಂಡಿದ್ದೇನೆ. ಕಾಯಕವೆ ಕೈಲಾಸವಾಗುವ, ತನ್ನ ಉದಾತ್ತತೆಯಲ್ಲಿ ಬದುಕಿನ ಕ್ಷುದ್ರತೆಯನ್ನು ಮೀರುವ ಆ ಚಿತ್ರ ನಾನು ಓದಿದ ಒಳ್ಳೆಯ ಸಿನಿಮಾ. ಒಂದು ಸಾಹಿತ್ಯ ನನಗೆ ಏನನ್ನು ಹೇಳುತ್ತದೆ ಎನ್ನುವದು ಮುಖ್ಯವಲ್ಲ.  ಆ ಸಾಹಿತ್ಯದ ಓದು ನನ್ನನ್ನು ಯಾಕೆ ಕಾಡಿತು ಎನ್ನುವದು ನನಗೆ ಮುಖ್ಯವಾಗುತ್ತದೆ. ಇಡಿಯ ಪುಸ್ತಕ, ಒಂದು ಕತೆ, ಕವಿತೆಯಲ್ಲಿನ ಒಂದು ಸಾಲು ಸಾಕು ನನಗೆ ಓದನ್ನು ಸಂಭ್ರಮಿಸಲು. `ಸಂಸ್ಕಾರ' ಕಾದಂಬರಿಯಲ್ಲಿ ಅನಂತಮೂರ್ತಿಯವರು ಬರೆಯುವ ಬೆಳಗಿನ ಬಿಸಿಲಿನ ಬಗೆಗೆಗಿನ ಒಂದು ಪ್ಯಾರಾ ನನ್ನನ್ನ ಎಷ್ಟು ಕಾಡಿತ್ತೆಂದರೆ ದಿನಗಟ್ಟಲೆ ಅದನ್ನ ಹೇಳಿಕೊಳ್ಳುತ್ತಲೇ ಸಂಭ್ರಮಿಸಿದ್ದೆ. `ನಾಳೆ ಒಂದು ದಿನಬಿಟ್ಟು ಗುಳಿಗೆ ತೆಗೆದುಕೊಳ್ಳುತ್ತೇನೆ...' ಎಂದು ಹೇಳುವ ಜಯಂತರ `ಸೇವಂತಿ ಹೂವಿನ ಟ್ರಕ್ಕು' ಕತೆಯ ಅಜ್ಜಿ ಇಡೀ ಮನುಕುಲದ ಆಶೋತ್ತರಕ್ಕೆ ಧ್ವನಿ ಆಗಬಲ್ಲಳು. ಪುಣೇಕರರ `ನಟನಾರಾಯಣಿ'ಯನ್ನು ನಾವು ಹೇಗೆ ಅರ್ಥೈಸಬಹುದು. ಒಂದು ಸಾಹಿತ್ಯದ ಕೃತಿ ನನ್ನ ಅರಿವನ್ನು ಯಾವತ್ತೂ ಹೆಚ್ಚಿಸುತ್ತದೆ ಎನ್ನುವ ನಂಬುಗೆ ನನ್ನದು. ನಾನು ಓದಿದ ಒಳ್ಳೆಯ ಪುಸ್ತಕಗಳು ನನ್ನನ್ನ ಯಾವತ್ತೂ ಕೈಹಿಡಿದು ನಡೆಸಿವೆ.

ಓದು ಮನುಷ್ಯನ ಬದುಕಿಗೆ ಅಗತ್ಯ, ಅನಿವಾರ್ಯ ಅನ್ನಿಸುತ್ತದೆಯೇ? ನಿಮ್ಮ ಪ್ರಕಾರ ಬದುಕಿನಲ್ಲಿ ಅವುಗಳ ಸ್ಥಾನ ಏನು?

ಓದು ನಮ್ಮ ಪ್ರಜ್ಞೆಗೆ ಸಂಬಂಧಿಸಿದ್ದರಿಂದ ಅದನ್ನು ಸುಸ್ಥಿತಿಯಲ್ಲಿಡಲು ಅನಿವಾರ್ಯ! ಜಗತ್ತಿಗೆ ತೆರೆಯುವ ಈ ಕಿಂಡಿಯ ಸ್ಥಾನ ಏನು ಎನ್ನುವ ಪ್ರಶ್ನೆಯೇ ಆಘಾತಕಾರಿಯಾದದ್ದು. 

ಈಗ ಗಂಭೀರ ಸಾಹಿತ್ಯ ಕೃತಿಗಳ ಓದು ಕಡಿಮೆಯಾಗುತ್ತಿದೆ, ಪುಸ್ತಕಗಳಿಗೆ ಭವಿಷ್ಯವಿಲ್ಲ ಎಂಬ ಮಾತುಗಳು ಆಗಾಗ ಕೇಳಿಬರುತ್ತಿವೆ. ಕನ್ನಡದ ಪ್ರಮುಖ ಬರಹಗಾರರಾಗಿ ಈ ಕುರಿತು ಏನೆನ್ನಿಸುತ್ತದೆ?

ಗಂಭೀರ ಸಾಹಿತ್ಯ ಅಂದರೆ ಎನು ಎನ್ನುವದು ನನ್ನ ಅರಿವಿನ ಆಚಿನದು. ಒಂದು ಪುಸ್ತಕ ಮನರಂಜನೆಯನ್ನು ಮೀರಿ ನಮ್ಮನ್ನ ಕಾಡಿದರೆ ಅದನ್ನು ಗಂಭೀರ ಸಾಹಿತ್ಯ ಅನ್ನಬಹುದೆ? ಒಳ್ಳೆಯ ಪುಸ್ತಕಗಳಿಗೆ ಭವಿಷ್ಯವಿಲ್ಲ ಎಂಬ ಮಾತುಗಳನ್ನ ನಾನು ಒಪ್ಪುವುದಿಲ್ಲ. ಪುಸ್ತಕಗಳು ಜನರಿಗೆ ತಲುಪುವ ವಿಧಾನಗಳು ಬದಲಾಗಬಹುದು. ಆದರೆ, ಸಾಹಿತ್ಯಕ್ಕೊಂದು ಓದುವ ವರ್ಗ ಯಾವತ್ತಿಗೂ ಇರುತ್ತದೆ ಮತ್ತು ಅದು ಒಬ್ಬ ಲೇಖಕನನ್ನು ಸದಾ ಜಾಗ್ರತಾವಸ್ಥೆಯಲ್ಲಿಯೇ ಇಡುತ್ತದೆ ಎನ್ನುವ ನಂಬುಗೆ ನನ್ನದು. ಒಳ್ಳೆಯ ಲೇಖಕರ ಸಂಖ್ಯೆ ಕಡಿಮೆಯಾಗಬಹುದು, ಒಳ್ಳೆಯ ಓದುಗರ ಸಂಖ್ಯೆ ಯಾವತ್ತೂ ಹೆಚ್ಚಾಗಿಯೇ ಇರುತ್ತದೆ.

ಉತ್ತಮ ಓದಿನ ಪಟ್ಟಿ ಮಾಡಬಹುದಾದರೆ ಎಷ್ಟು ಕನ್ನಡದ ಪುಸ್ತಕಗಳನ್ನು ನೀವು ಆಯ್ಕೆ ಮಾಡುತ್ತೀರಿ?  ಮತ್ತು ಅಂಥ ಕೆಲವು ಪುಸ್ತಕಗಳ ಉದಾಹರಣೆ  ಕೊಡಬಹುದೆ?

ಕನ್ನಡದ ಒಳ್ಳೆಯ ಪುಸ್ತಕದ ಪಟ್ಟಿ ಬಹುದೊಡ್ಡದಿದೆ. ನನಗೆ ಬಹುವಾಗಿ ಕಾಡಿದ ಕತೆ, ಕಾವ್ಯ ಮತ್ತು ವೈಚಾರಿಕ ಬರಗಳನ್ನು ಪಟ್ಟಿಮಾಡುವದು ಕಷ್ಟದ ಕೆಲಸ. ಆದರೂ ನನಗಿಷ್ಟವಾಗುವ ಕೆಲವು ಕನ್ನಡದ ಬರಹಗಾರರನ್ನು ಹೆಸರಿಸಲು ಇಷ್ಟಪಡುತ್ತೆನೆ. ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ, ಯಶವಂತ ಚಿತ್ತಾಲ, ಪಿ. ಲಂಕೇಶ, ದೇವನೂರ ಮಹಾದೇವ, ಶಂಕರ ಮುಖಾಶಿ ಪುಣೇಕರ, ಗಂಗಾಧರ ಚಿತ್ತಾಲ, ಎಚ್.ಎಸ್. ಶಿವಪ್ರಕಾಶ್, ಕೆ.ವಿ. ತಿರುಮಲೇಶ್, ಸಂಧ್ಯಾದೇವಿ, ಜಯಂತ ಕಾಯ್ಕಿಣಿ. ಕಾರಂತರ ಬೆಟ್ಟದ ಜೀವ, ಶಂಕರ ಮೊಕಾಶಿ ಪುಣೇಕರರ `ಗಂಗವ್ವ ಗಂಗಾಮಾಯಿ', ಅನಂತಮೂರ್ತಿಯವರ `ಸೂರ್ಯನ ಕುದುರೆ', ಕೆ. ಸದಾಶಿವರ `ರಾಮನ ಸವಾರಿ ಸಂತೆಗೆ ಹೋದದ್ದು' ಇವೆಲ್ಲ ಯಾಕೋ ಯಾವತ್ತೂ ಕಾಡುವ ಕನ್ನಡದ ಕೃತಿಗಳು.

ಪುಸ್ತಕಗಳ ಓದಿನಿಂದ ಯಾವುದೇ ಲಾಭವಿಲ್ಲ ಎನ್ನುವ ಮನಸ್ಥಿತಿ ಅನೇಕರದು. ಹೀಗಿರುವಾಗ ಲೇಖಕನೊಬ್ಬ ಮಾಡಬಹುದಾದದ್ದು, ಮಾಡಬೇಕಾದದ್ದು ಏನು?

ಲಾಭ ನಷ್ಟದ ಮನಸ್ಥಿತಿಯನ್ನು ಮೀರಬೇಕು ಅಂದರೆ ಪುಸ್ತಕ ಓದಬೇಕು. ಲೇಖಕನಿಗೆ ತಾನು ಏನನ್ನು ಬರೆಯುತ್ತಿದ್ದೇನೆ ಮತ್ತು ಯಾಕೆ ಬರೆಯುತ್ತಿದ್ದೇನೆ ಎನ್ನುವ ಪ್ರಜ್ಞೆ ಮುಖ್ಯ. ತಾನು ಒಬ್ಬ ಪ್ರತಿಷ್ಠಿತ ಸಾಹಿತಿ, ತಾನು ಬರೆದುದ್ದನ್ನೆಲ್ಲ ಓದುಗ ಒಪ್ಪಿಕೊಳ್ಳುತ್ತಾನೆ ಎನ್ನುವ ಅಹಂಕಾರದಿಂದ ಬರಹಗಾರ ಮುಕ್ತನಾದರೆ, ಓದುಗನೊಬ್ಬ ಓದಬಹುದಾದುದ್ದನ್ನು ಬರೆಯಲು ಸಾಧ್ಯ.
 
ಈಗ ಬಹುಪಾಲು ಮಕ್ಕಳು ಕನ್ನಡದ ಕಥೆಗಳನ್ನು ಕೇಳುವುದರಿಂದ, ಓದುವುದರಿಂದ ಗೊತ್ತಿಲ್ಲದಂತೆ ವಂಚಿತರಾಗುತ್ತಿದ್ದಾರೆ. ಅವುಗಳ ಜಾಗದಲ್ಲಿ ಬೇರೆಬೇರೆ ಮನರಂಜನೆಗಳು ಬಂದಿವೆ. ಹೀಗಿರುವಾಗ ಭವಿಷ್ಯದ ಓದುಗರು ಹೇಗಿರಬಹುದೆಂದು ನಿಮಗೆ ಅನ್ನಿಸುತ್ತದೆ?

ಮಕ್ಕಳು ಮನೆಯವಾತಾವರಣದಲ್ಲಿ ಬೆಳೆಯುವದರಿಂದ ಪಾಲಕರಾಗಿ ನಾವು ಅವರೊಳಗೆ ಯಾವ ಅಭಿರುಚಿಯನ್ನು ಬೆಳೆಸುತ್ತೆವೆ ಎನ್ನುವದು ಮುಖ್ಯ. ಪರೀಕ್ಷೆಯಲ್ಲಿ ಬರುವ ಅಂಕಗಳಿಗಾಗಿ, ಪ್ರಸಿದ್ಧಿಗಾಗಿ ಓದಿಸುವ ಈ ಪಾಲಕರ ದುಷ್ಟತನದಿಂದ ಮಕ್ಕಳನನ್ನು ನಾವು ಹೇಗೆ ಪಾರುಮಾಡಬೇಕು ಎನ್ನುವುದರ ಕುರಿತು ಯೋಚಿಸಬೇಕು. ಮಕ್ಕಳನ್ನ ಸಹಜವಾಗಿ ಇರಲು ನಾವು ಬಿಟ್ಟಷ್ಟು ಅವು ತಮ್ಮ ಓದಿನ ದಾರಿಯನ್ನು ಕಂಡುಕೊಳ್ಳುತ್ತವೆ. ಮೊದಲು ಪುಸ್ತಕವನ್ನು ಮನೆಗೆ ನಾವು ತರುವದನ್ನ ಕಲಿಯಬೇಕು ಮತ್ತು ನಮ್ಮ ಭಾಷೆ ನೆಲದ ಬಗೆಗೆ ನಾವು ಗೌರವದಿಂದ ಇದ್ದರೆ ನಮ್ಮ ಮಕ್ಕಳು ನಮ್ಮನ್ನ ಅನುಸರಿಸಬಲ್ಲವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT