ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯ ಮನ, ಮನೆಗೆ ಹೆಣ್ಣೇ ಕಾರಣ

Last Updated 9 ಜುಲೈ 2012, 5:10 IST
ಅಕ್ಷರ ಗಾತ್ರ

ವಿಜಯಪುರ: ಹೆಣ್ಣಿನ ಸಹನಾಶೀಲ ಗುಣವು ಕುಟುಂಬದ ಸದಸ್ಯರಲ್ಲಿ ಉತ್ತಮ ಸಂಸ್ಕಾರ ಮೂಡಿಸುತ್ತದೆ ಎಂದು ಬೆಂಗಳೂರಿನ ಅಯೋಧ್ಯಾ ನಗರ ಶಿವಾಚಾರ ವೈಶ್ಯ ನಗರ್ತ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಎಸ್. ಬಸವರಾಜ್ ಹೇಳಿದರು.

ಪಟ್ಟಣದ ಸುಬ್ಬಮ್ಮ ಚನ್ನಪ್ಪ ಸಮುದಾಯ ಭವನದಲ್ಲಿ ಭಾನುವಾರ ದಂಪತಿಗಳಿಗಾಗಿ ಏರ್ಪಡಿಸಲಾಗಿದ್ದ ಕುಟುಂಬ ಮಿಲನ ಕಾರ್ಯಕ್ರಮವನ್ನು ತಮ್ಮ ಪತ್ನಿ ಉಮಾದೇವಿ ಅವರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಕುಟುಂಬದಲ್ಲಿ ತಾಯಿಯಾದವಳು ಎಲ್ಲ ಸಂಬಂಧಗಳನ್ನು ಬೆಸೆಯುವ ಜವಾಬ್ದಾರಿ ಹೊಂದಿರುತ್ತಾಳೆ. ಆಕೆ ಎಲ್ಲರ ಮನವನ್ನು ಗೆಲ್ಲುವ ಮೂಲಕ ಒಳ್ಳೆಯ ಮನೆಯನ್ನು ರೂಪಿಸುತ್ತಾಳೆ. ಆಕೆ ಕುಟುಂಬದ ಸದಸ್ಯರಿಗೆ ಮಾದರಿಯಾಗಿ ಜೀವನ ಸಾಗಿಸಿದರೆ ಅಂತಹ ಮನೆಗಳು ಸಂತೋಷ ಮತ್ತು ಸಂತೃಪ್ತಿಯ ಭಾವದಿಂದ ಕೂಡಿರುತ್ತವೆ ಎಂದರು.

ರಾಜ್ಯ ಸಂಸ್ಕಾರ ಭಾರತಿಯ ಮಾತೃಶಕ್ತಿ ಕೇಂದ್ರದ ಪ್ರಮುಖ ಶ್ರಿಪತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಹಿರಿಯರು ಮಕ್ಕಳಲ್ಲಿ ದೇಶ ಭಕ್ತಿಯ ಭಾವವನ್ನು ತುಂಬುವ ಕರ್ತವ್ಯ ಪ್ರಜ್ಞೆ ಮರೆಯಾಗುತ್ತಿದೆ ಎಂದು ವಿಷಾದಿಸಿದರು.

ರಾಷ್ಟ್ರಗೀತೆ, ರಾಷ್ಟ್ರ ಪ್ರೇಮ, ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ನಮ್ಮ ಮಕ್ಕಳಿಗಿಲ್ಲ. ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಸಂಸ್ಕಾರ ಭಾರತಿಯಂತಹ ಸಂಸ್ಥೆಗಳು ಈ ಕಾರ್ಯವನ್ನು ಮಾಡುತ್ತಿದೆ. ನಾವು ಗಳಿಸಿದ್ದರಲ್ಲಿ `ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ~ ಎಂಬ ಅರಿವನ್ನು ನಮ್ಮಲ್ಲಿ ಮೂಡಿಸಿ ಸಮಾಜ ಸೇವೆಗೆ ಬದ್ಧರಾಗುವಂತೆ ಮಾಡುತ್ತಿದೆ ಎಂದರು.

ವಿಜಯಪುರ ಅ.ಶಿ.ವೈ ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಪ್ರಭುದೇವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸಾರದಲ್ಲಿ ಅನ್ಯೋನ್ಯತೆ ಹೆಚ್ಚಾಗಲು ಮತ್ತು ಈ ಒತ್ತಡದ ಬದುಕಿನಲ್ಲಿ ಕೆಲ ಕಾಲವಾದರೂ ಮನರಂಜನೆ ಪಡೆಯಲು ಸಂಘವು ದಂಪತಿಗಳಿಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕುಟುಂಬ ಮಿಲನದಂತಹ ಕಾರ್ಯಕ್ರಮಗಳು ಸಂಬಂಧಗಳ ಗಟ್ಟಿತನಕ್ಕೆ ಉಪಯುಕ್ತ ಹಾಗೂ ಜೀವನದ ಸ್ಮರಣೀಯ ಕ್ಷಣ ಎನಿಸುವುದರಲ್ಲಿ ಸಂಶಯವಿಲ್ಲ ಎಂದರು.
ರಾಜ್ಯ ಸಂಸ್ಕಾರ ಭಾರತಿ ಮತ್ತು ಅ.ಶಿ.ವೈ. ನಗರ್ತ ಮಹಿಳಾ ಸಂಘದಿಂದ ಪಟ್ಟಣದ ಕಲಾವಿದರಾದ ಗುರುಮೂರ್ತಪ್ಪ ಮತ್ತು ಮುಕ್ತಾಂಬ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಸಂಸ್ಕಾರ ಭಾರತಿಯ ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಹಾಗೂ ಅಖಿಲ ಭಾರತ ನಾಟಕ ಪ್ರಮುಖ ಚರ್ಕವರ್ತಿ ತಿರುಮಗನ್, ಸಂಸ್ಕಾರ ಭಾರತಿಯ ಮಾತೃ ಶಕ್ತಿ ಕೇಂದ್ರದ ಧನ್ಯತಾ ಹಾಗೂ ಶ್ರಿಪತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪಟ್ಟಣದ ಅ.ಶಿ.ವೈ. ನಗರ್ತ ಮಹಿಳಾ ಸಂಘ, ಯುವಕ ಸಂಘ, ಹೊಸಕೋಟೆ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಯ ನಗರ್ತ ಮಹಿಳಾ ಸಂಘದ ಹಾಗೂ ಇತರೆ ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ಪಟ್ಟಣದ ಸುಮಾರು 40 ಕ್ಕೂ ಹೆಚ್ಚು ದಂಪತಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಭಾರತಿ ವಿಶ್ವನಾಥ್ ಪ್ರಾರ್ಥಿಸಿದರು. ಶೀಲಾರಾಣಿ ಸುರೇಶ್ ನಿರೂಪಿಸಿದರು. ದೀಪಾ ಮುರಳೀಧರ್ ಸ್ವಾಗತಿಸಿ, ವಾಣಿ ವಿಶ್ವನಾಥ್ ವಂದಿಸಿದರು. ಅ.ಶಿ.ವೈ. ನಗರ್ತ ಮಹಿಳಾ ಸಂಘದ ಕಾರ್ಯದರ್ಶಿ ಚಂದ್ರಕಲಾ ರುದ್ರಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಜಯಪುರದ ಅ.ಶಿ.ವೈ. ನಗರ್ತ ಮಹಿಳಾ ಸಂಘ ಮತ್ತು ಬೆಂಗಳೂರಿನ ರಾಜ್ಯ ಸಂಸ್ಕಾರ ಭಾರತಿ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT