ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒವೈಸಿ ಶರಣು, ನ್ಯಾಯಾಂಗ ಬಂಧನಕ್ಕೆ

Last Updated 21 ಜನವರಿ 2013, 19:59 IST
ಅಕ್ಷರ ಗಾತ್ರ

ಹೈದರಾಬಾದ್(ಪಿಟಿಐ): ಎಂಟು ವರ್ಷಗಳ (2005ರಲ್ಲಿ) ಹಿಂದೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ಬಂಧನ ವಾರೆಂಟ್ ಎದುರಿಸುತ್ತಿದ್ದ ಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸತ್ ಸದಸ್ಯ ಅಸಾದುದ್ದೀನ್ ಒವೈಸಿ ಅವರು ಸೋಮವಾರ ಮೇದಕ್ ಜಿಲ್ಲೆಯ ಸಂಗಾರೆಡ್ಡಿ ಪಟ್ಟಣದ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ನ್ಯಾಯಾಲಯವು ಅಸಾದುದ್ದೀನ್ ಅವರನ್ನು ಫೆಬ್ರುವರಿ 2ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
2005ರಲ್ಲಿ ನಡೆದ ಪ್ರಕರಣದ ಮೊದಲ ಆರೋಪಿಯಾಗಿರುವ ಅಸಾದುದ್ದೀನ್ ಒವೈಸಿ ಅವರು ಜಾಮೀನು ರಹಿತ ವಾರೆಂಟ್ ರದ್ದುಗೊಳಿಸುವಂತೆ ಕೋರಿ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಆದರೆ ಈ ಅರ್ಜಿಯನ್ನು ತಿರಸ್ಕರಿಸಿದ  ನ್ಯಾಯಾಲಯ, ಅಸಾದುದ್ದೀನ್ ಅವರನ್ನು ಫೆಬ್ರುವರಿ 2ರವರಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೇದಕ್‌ನ ಮಾಜಿ ಜಿಲ್ಲಾಧಿಕಾರಿ ಎ.ಕೆ. ಸಿಂಘಾಲ್ ಅವರ ಕರ್ತವ್ಯ ನಿರ್ವಹಣೆಗೆ ತಡೆ ಒಡ್ಡಿದ ಮತ್ತು ಇತರ ಆರೋಪಗಳಲ್ಲಿ ಮಜ್ಲಿಸ್-ಎ ಇತ್ತೆಹಾದುಲ್ ಮುಸ್ಲಿಮೀನ್ (ಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಹಾಗೂ ಅವರ ಸಹೋದರ ಹಾಗೂ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಎಂಐಎಂ ಶಾಸಕ ಅಕ್ಬರುದ್ದೀನ್ ಒವೈಸಿ ಸೇರಿದಂತೆ ಇತರರ ವಿರುದ್ಧ ಪಠಾಣ್‌ಚೆರುವು ಪೊಲೀಸರು ಪ್ರಕರಣ ದಾಖಲಿಸಿದ್ದರು.

ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಅಸಾದುದ್ದೀನ್ ಒವೈಸಿ, ನ್ಯಾಯಾಲಯಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ವಾರೆಂಟ್‌ನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಅಕ್ಬರುದ್ದೀನ್ ಒವೈಸಿ ಅವರನ್ನು ಜನವರಿ 17ರಂದು ಸಂಗಾರೆಡ್ಡಿ ಪಟ್ಟಣದಲ್ಲಿರುವ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ್ದರು.

ಒವೈಸಿ ಸಹೋದರರು ಹಾಗೂ ಎಂಐಎಂನ ಮುಖಂಡರ  ವಿರುದ್ಧ 2005ರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರು.ಹೈದರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಪಠಾಣ್‌ಚೆರುವು ವ್ಯಾಪ್ತಿಯ ಮುತ್ತಂಗಿ ಗ್ರಾಮದಲ್ಲಿ ಪ್ರಾರ್ಥನಾ ಮಂದಿರ ಕೆಡಹುವುದನ್ನು ಎಂಐಎಂ ಮುಖಂಡರು ಪ್ರತಿಭಟಿಸಿದ್ದರು.

ಈ ಸಂದರ್ಭದಲ್ಲಿ ಒವೈಸಿ ಸಹೋದರರು ಮೇದಕ್‌ನ ಮಾಜಿ ಜಿಲ್ಲಾಧಿಕಾರಿ ಎ.ಕೆ ಸಿಂಘಾಲ್ ಹಾಗೂ ಇತರ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದರು.

ಹೈದರಾಬಾದ್ ಉದ್ವಿಗ್ನ
ಹೈದರಾಬಾದ್ (ಐಎಎನ್‌ಎಸ್):
  ಎಂಐಎಂ ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಒವೈಸಿ ಅವರ ಬಂಧನ ಖಂಡಿಸಿ ಬೆಂಬಲಿಗರು ಹಿಂಸಾತ್ಮಾಕ ಪ್ರತಿಭಟನೆಗೆ ಇಳಿದಿದ್ದು, ಹೈದರಾಬಾದ್‌ನ ಹಲವು ಪ್ರದೇಶಗಳಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಅಸಾದುದ್ದೀನ್ ಒವೈಸಿ ನ್ಯಾಯಾಲಯಕ್ಕೆ ಶರಣಾಗಿ ಬಂಧನಕ್ಕೆ ಒಳಗಾಗುತ್ತಿದ್ದಂತೆಯೇ ಎಂಐಎಂ ಕಾರ್ಯಕರ್ತರು ಹಳೇ ಹೈದರಾಬಾದ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದರು.

ಉದ್ರಿಕ್ತ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ಹಲವು ಬಸ್ ಹಾಗೂ ಅಂಗಡಿಗಳಿಗೆ ಹಾನಿ ಮಾಡಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಅವರ ಪ್ರತಿಕೃತಿ ದಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT