ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಂ ಬೆಳ್ಳಿಹಬ್ಬ!

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ತಾಂತ್ರಿಕವಾಗಿ ನಮ್ಮದು ಅದ್ಭುತ ಸಿನಿಮಾ! ನಿರ್ದೇಶಕ ಓಂಪ್ರಕಾಶ್ ರಾವ್ ಮಾತುಗಳಲ್ಲಿ ಪುಳಕ ಬೆರೆತ ಹೆಮ್ಮೆಯಿತ್ತು.

ಓಂಪ್ರಕಾಶ್ ಮಾತನಾಡುತ್ತಿದ್ದುದು `ಎಕೆ 56~ ಚಿತ್ರದ ಬಗ್ಗೆ. ನಿರ್ದೇಶಕರು ತಮ್ಮೆಲ್ಲ ಸಿನಿಮಾಗಳ ಬಗ್ಗೆ ಭಾವುಕತೆಯಿಂದ ಮಾತನಾಡುವುದು ಸಹಜ. ಆದರೆ, `ಎಕೆ 56~ ಬಗ್ಗೆ ಓಂಪ್ರಕಾಶ್ ಭಾವುಕತೆಗೆ ಬೇರೆಯದೇ ಆಯಾಮವಿದೆ. ಇದು ಅವರ ನಿರ್ದೇಶನದ ಇಪ್ಪತ್ತೈದನೇ ಚಿತ್ರ. ಅಲ್ಲದೆ, ಈ ಮೊದಲು ಅವರು ನಿರ್ದೇಶಿಸಿದ್ದ, ಶಿವರಾಜ್‌ಕುಮಾರ್ ನಾಯಕರಾಗಿ ಅಭಿನಯಿಸಿದ್ದ `ಎಕೆ 47~ ಚಿತ್ರ ದೊಡ್ಡ ಗೆಲುವು ಕಂಡಿತ್ತು. ಅದಾದ ಹತ್ತು ವರ್ಷಗಳ ನಂತರ ಓಂಪ್ರಕಾಶ್ `ಎಕೆ 56~ ರೂಪಿಸಿದ್ದಾರೆ. ತಮ್ಮ ವೃತ್ತಿಜೀವನದ ರಜತ ಸಂಭ್ರಮದ ಈ ಚಿತ್ರವೂ ಗೆಲ್ಲುವ ನಿರೀಕ್ಷೆ ಅವರದ್ದು.

`ಪಂಜಾಬ್‌ನಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಚಿತ್ರಕಥೆ ರೂಪಿಸಿದ್ದೇನೆ~ ಎನ್ನುವ ಓಂಪ್ರಕಾಶ್ ಮಾತು, `ಇದು ರೀಮೇಕ್ ಚಿತ್ರವಲ್ಲ~ ಎನ್ನುವುದನ್ನು ಸ್ಪಷ್ಟಪಡಿಸುವಂತಿತ್ತು. ಅಂದಹಾಗೆ, ಚಿತ್ರದ ವಿಶೇಷಗಳಾದರೂ ಏನು?

`ಹನ್ನೆರಡು ಕೋಟಿ ರೂಪಾಯಿಗಳ ಚಿತ್ರವಿದು. ಈವರೆಗಿನ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದೊಡ್ಡ ಬಜೆಟ್‌ನ ಚಿತ್ರ. ಚಿತ್ರದಲ್ಲಿ ನೋಡುಗರ ಮೈ ನವಿರೇಳಿಸುವ ಸಾಹಸ ದೃಶ್ಯಗಳಿವೆ. ಈ ದೃಶ್ಯಗಳೇ ನಮ್ಮ ಚಿತ್ರದ ಪ್ರಮುಖ ಬಂಡವಾಳ.
 
ಸಾಹಸ ದೃಶ್ಯವೊಂದಕ್ಕೆ ಒಂದೂ ಮುಕ್ಕಾಲು ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ. ಪಳನಿ ರಾಜ್ ಅವರ ಸಾಹಸ ದೃಶ್ಯಗಳು ವಿಶಿಷ್ಟವಾಗಿವೆ. ಚೇಸಿಂಗ್ ದೃಶ್ಯಗಳಂತೂ ಪ್ರೇಕ್ಷಕರನ್ನು ಸೀಟಿನ ತುದಿಗೆ ಕೂರಿಸುವುದು ಖಚಿತ. ಇಷ್ಟೆಲ್ಲ ಮಾರಾಮಾರಿ ಇದ್ದರೂ, ಈ ತಲೆಮಾರಿನ ಯುವಜನತೆಗೆ ಒಂದು ಸಂದೇಶವೂ ಚಿತ್ರದಲ್ಲಿದೆ. ದೇಶಭಕ್ತಿಯನ್ನು ಸಾರುವ ಸಿನಿಮಾ ನಮ್ಮದು~- ಹೀಗೆಂದು ಹೇಳುವಾಗ ಓಂಪ್ರಕಾಶ್‌ರ ಮೇಲೇರಿದ ಹುಬ್ಬು ಕೆಳಗಿಳಿಯುತ್ತದೆ.

`ಸಾಹಸ ದೃಶ್ಯಗಳಷ್ಟೇ ಆಕರ್ಷಣೆಯಾ? ಬೇರೇನೂ ಇಲ್ಲವಾ~ ಎಂದರೆ ಓಂ ಬೆಟ್ಟು ಮಾಡಿದ್ದು ತಾಂತ್ರಿಕ ಬಳಗದತ್ತ. `ಮನೋಹರ್ ಅವರ ಛಾಯಾಗ್ರಹಣ, ಎಂ.ಎಸ್.ರಮೇಶ್‌ರ ಸಂಭಾಷಣೆ, ಅಭಿಮನ್ ರಾಯ್ ಅವರ ಸಂಗೀತ ಸವಿಯಲಿಕ್ಕಾಗಿ ಸಿನಿಮಾ ನೋಡಬೇಕು~ ಎನ್ನುವ ಪ್ರಮಾಣಪತ್ರ ಅವರದ್ದು.

ಸಿದ್ಧಾರ್ಥ `ಎಕೆ 56~ ಚಿತ್ರದ ನಾಯಕ. ಈ ಚಿತ್ರದ ಮೂಲಕ ಅತ್ಯುತ್ತಮ ತಂತ್ರಜ್ಞರೊಂದಿಗೆ ಕೆಲಸ ಮಾಡಿದ ಖುಷಿ ಅವರದ್ದು. `ಚಿತ್ರದ ಕಥೆ ಹೊಸ ಮುಖ ಬಯಸುತ್ತದೆ~ ಎನ್ನುವ ಕಾರಣಕ್ಕಾಗಿ ಓಂಪ್ರಕಾಶ್ ಸಿದ್ಧಾರ್ಥ್ ಅವರನ್ನು ಆರಿಸಿಕೊಂಡರಂತೆ. ಅವರು ಸಾಹಸ ದೃಶ್ಯಗಳಲ್ಲಿ ಡ್ಯೂಪ್ ಇಲ್ಲದೆ ನಟಿಸಿರುವುದು ನಿರ್ದೇಶಕರಿಗೆ ಖುಷಿ ಕೊಟ್ಟಿದೆ.

ಸುಚೇಂದ್ರ ಪ್ರಸಾದ್ ಅವರಿಗೆ ಚಿತ್ರದಲ್ಲಿ ಪ್ರಮುಖ ಪಾತ್ರ ಇದೆಯಂತೆ. ನಾಯಕನಷ್ಟೇ ಪ್ರಮುಖ ಪಾತ್ರ ಅದಂತೆ. ಶಿರಿನ್ ಚಿತ್ರದ ನಾಯಕಿ. `ನಿರ್ದೇಶಕರ ಮೇಲಿನ ವಿಶ್ವಾಸದಿಂದ ಈ ಚಿತ್ರ ಒಪ್ಪಿಕೊಂಡೆ. ಓಂಪ್ರಕಾಶ್ ಚಿತ್ರ ಎಂದಮೇಲೆ ಕಥೆ ಕೇಳುವ ಅಗತ್ಯವೇ ನನಗಿಲ್ಲ~ ಎಂದ ಶಿರಿನ್ ಅವರಿಗೆ ಈ ಚಿತ್ರದ ಪಾತ್ರ ಖುಷಿ ಕೊಟ್ಟಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT