ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಂ ಶಕ್ತಿ ಓಂ ಶಕ್ತಿ

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ಚಿತ್ರ: ಶಕ್ತಿ
ಶಕ್ತಿಯ ಲೀಲಾವಿಲಾಸ ಸಾಮಾನ್ಯದ್ದಲ್ಲ. ಆಕೆಯ ನಿಟ್ಟುಸಿರಿಗೆ ಎದುರಾಳಿಗಳ ಕಂಗೆಡಿಸುವ ಪ್ರಖರತೆಯಿದೆ. ಆಕೆ ಕಾಲು ಅಪ್ಪಳಿಸಿದರೆ ನೆಲ ಚಿಂದಿಚಿಂದಿ. ಒಂದು ಡಿಚ್ಚಿ ಹೊಡೆದರೆ ಎದುರಾಳಿ ಅಪ್ಪಚ್ಚಿ. ಆಕೆಯ ಕೈಯಲ್ಲಿ ಕಾರುಗಳು ಗಿರಗಿಟ್ಲೆ. ಗಾಜುಗಳೆಲ್ಲ ನೆಲದಲ್ಲಿ ರಂಗೋಲಿ. ಬೋಳು ಬಯಲನ್ನು ಆಕೆ ರಕ್ತದಿಂದ ತಣಿಸುತ್ತಾಳೆ. ಹೋಮಕುಂಡಕ್ಕೆ ರುಂಡವನ್ನೇ ಅರ್ಪಿಸುತ್ತಾಳೆ. ಇಂತಿಪ್ಪ ಶಕ್ತಿಗೆ ಟೀ-ಬನ್ನು ಎಂದರೆ ಸಿಕ್ಕಾಪಟ್ಟೆ ಇಷ್ಟ.

ಎದುರಾಳಿಗಳ ಅದೃಷ್ಟ ದೊಡ್ಡದು! ಬನ್ನು ತಿಂದೇ ಇಷ್ಟೊಂದು ಲೀಲಾವಿನೋದ ಮೆರೆಯುವ ಈ `ಶಕ್ತಿ~ ಒಂದು ವೇಳೆ ಕೋಳಿ ಮಸಾಲೆ ತಿನ್ನುವಂತಿದ್ದರೆ... ಶಾಂತಂ ಪಾಪಂ ಶಾಂತಂ ಪಾಪಂ...

ಶಕ್ತಿಲೀಲೆಗಳಿಂದ ಹೊರಬಂದು ಕಥನದತ್ತ ನೋಡೋಣ. ರಾಯಲಸೀಮೆಯನ್ನು ನೆನಪಿಸುವಂಥ ಪರಿಸರ. ಊರಿನ ಯಜಮಾನ ದಯಾಳು. ಆತನ ಮನೆ ಸೇರುವ ದುಷ್ಟ ಬಂಧುಕೂಟ ಯಜಮಾನನನ್ನು ಕೊಲ್ಲುತ್ತದೆ. ಅಲ್ಲಿಂದ ತಪ್ಪಿಸಿಕೊಳ್ಳುವ ಪುಟ್ಟ ಬಾಲಕಿ, ಬೆಂಗಳೂರು ಸೇರಿ, ಚೆನ್ನಾಗಿ ಓದಿ, ಐಪಿಎಸ್ ಅಧಿಕಾರಿಯಾಗುತ್ತಾಳೆ. ಆಮೇಲೆ ದುಷ್ಟಮರ್ದನ ಆರಂಭ. ಆದರೆ, ಈಗ ಹೇಳಿದಂತೆ ಸರಳರೇಖೆಯ ರೀತಿಯಲ್ಲಿಲ್ಲ ಕಥೆ. ಚಿತ್ರದ ಮೊದಲ ಭಾಗದಲ್ಲಿ ನೆನಪುಗಳನ್ನು ಕಳೆದುಕೊಂಡ ಶಕ್ತಿಯಿದ್ದಾಳೆ. ಎರಡನೇ ಭಾಗದಲ್ಲಿ ನೆನಪುಗಳ ಮರುಕಳಿಕೆಯ ಚಾಮುಂಡಿ ಬರುತ್ತಾಳೆ. ಶಕ್ತಿಪ್ರದರ್ಶನದಲ್ಲಿ ಮಾತ್ರ ಎರಡೂ ಭಾಗಗಳಲ್ಲಿ ಸಮತೋಲನವಿದೆ.

ನಟಿ ಮಾಲಾಶ್ರೀ ಅವರ ಇಮೇಜ್‌ಗೆ `ಶಕ್ತಿ~ ಹೇಳಿಮಾಡಿಸಿದಂತಿದೆ. ಈ ಇಮೇಜ್ ಪೋಷಿಸುವಲ್ಲಿ ನಿರ್ದೇಶಕ ಅನಿಲ್‌ಕುಮಾರ್ ಮುತುವರ್ಜಿ ವಹಿಸಿದ್ದಾರೆ. ನಿರ್ದೇಶನ ಅವರಿಗಿದು ಮೊದಲ ಅನುಭವ. ಅವರ ಉತ್ಸಾಹ ಚಿತ್ರದಲ್ಲಿ ಎದ್ದುಕಾಣುತ್ತದೆ. ನಾಟಕೀಯ ಅಂಶಗಳನ್ನವರು ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ. ರಾಜೇಶ್‌ರ ಛಾಯಾಗ್ರಹಣ, ರವಿವರ್ಮರ ಸಾಹಸ, ವರ್ಧನ್‌ರ ಸಂಗೀತವೂ ಚಿತ್ರವನ್ನು ಪೊರೆದಿದೆ.

ಮಾಲಾಶ್ರೀ ಅವರಿಗಿದು ಲೀಲಾಜಾಲ ಪಾತ್ರ. ಚಹಾದಲ್ಲಿ ಒದ್ದೆಯಾದ ಬನ್ನನ್ನವರು ಚಿತ್ರದುದ್ದಕ್ಕೂ ಪ್ರೀತಿಯಿಂದ ತಿನ್ನುತ್ತಾರೆ. ಈ ಬನ್ನು ಚಿತ್ರದಲ್ಲಿ ಎಷ್ಟು ಪರಿಣಾಮಕಾರಿ ಆಗಿದೆಯೆಂದರೆ, ಭಾವುಕ ಪ್ರೇಕ್ಷಕರಿಗೆ ನಾಯಕಿಯೇ ಒಂದು ಮುದ್ದಾದ ಬನ್ನಿನಂತೆ ಕಂಡರೆ ಅಚ್ಚರಿಯಿಲ್ಲ.

ಮಾಲಾಶ್ರೀ ಹೊರತುಪಡಿಸಿದರೆ ರವಿಶಂಕರ್ ಚಿತ್ರದ ಹೀರೊ. ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ಎಂದು ಹಾಡುತ್ತಾ, ಮಾತಿನ ಜೊತೆಗೆ ಕಣ್ಣಲ್ಲೂ ಕೆಂಡ ಉಗುಳುವ ಅವರನ್ನು ತೆರೆಯ ಮೇಲೆ ನೋಡುವುದೇ ಒಂದು ಚೆಂದ. ಪುಟ್ಟ ಪಾತ್ರವಾದರೂ ಅವಿನಾಶ್ ಅಭಿನಯ ಗಮನಸೆಳೆಯುತ್ತದೆ.

`ಶಕ್ತಿ~ ಸಿನಿಮಾ ನೋಡುವಾಗ ಕನ್ನಡದ ಇತ್ತೀಚಿನ ಯಶಸ್ವಿ ಚಿತ್ರ `ಸಾರಥಿ~ ನೆನಪಾಗುತ್ತದೆ. ರಾಯಲಸೀಮೆಯ ಸುಡುಬಯಲು, ಮೂಳೆಮಾಂಸದ ಬಣವೆ, ರಕ್ತದ ಹೊನಲು... ತೆಲುಗು ಚಿತ್ರರಂಗದ ತುಣುಕೊಂದು ಕನ್ನಡ ಚಿತ್ರೋದ್ಯಮದಲ್ಲಿ ಬಂದು ಬಿದ್ದಂತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT