ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಕಳಿಪುರ ಸಿಗ್ನಲ್ ರಹಿತ ಕಾರಿಡಾರ್‌ಗೆ ಇಂದು ಚಾಲನೆ

115.50 ಕೋಟಿ ರೂಪಾಯಿ ವೆಚ್ಚ; 18 ತಿಂಗಳಲ್ಲಿ ಯೋಜನೆ ಪೂರ್ಣ
Last Updated 19 ಡಿಸೆಂಬರ್ 2012, 19:33 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ಕೇಂದ್ರ ಭಾಗದಲ್ಲಿರುವ ಓಕಳಿಪುರದ ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ರೂಪಿಸಿರುವ `ಓಕಳಿಪುರ ಸಿಗ್ನಲ್ ರಹಿತ ಕಾರಿಡಾರ್' ನಿರ್ಮಾಣ ಕಾಮಗಾರಿಗೆ ಗುರುವಾರ (ಡಿ. 20) ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭೂಮಿ ಪೂಜೆ ನೆರವೇರಿಸಲಿದ್ದಾರೆ.

ಸದ್ಯ ಓಕಳಿಪುರದ ಪ್ಲಾಟ್‌ಫಾರಂ ಜಂಕ್ಷನ್ ಬಳಿ, ಫೌಂಟೇನ್ ವೃತ್ತದ ಬಳಿ ರಸ್ತೆಯ ಅಗಲ ಕೇವಲ 9 ಮೀಟರ್‌ಗಳಷ್ಟು ಮಾತ್ರ ಇದ್ದು, ಸಂಚಾರ ದಟ್ಟಣೆ ಸಮಸ್ಯೆ ತೀವ್ರವಾಗಿದೆ. ದಟ್ಟಣೆ ವೇಳೆ ಬಸವಳಿಯುತ್ತಿದ್ದ ವಾಹನ ಸವಾರರಿಗೆ ಸಿಗ್ನಲ್ ರಹಿತ ಕಾರಿಡಾರ್ ಯೋಜನೆಯು ವರದಾನವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಪಶ್ಚಿಮ ಭಾಗದಿಂದ ನಗರದೊಳಕ್ಕೆ ಪ್ರವೇಶಿಸುವ ವಾಹನಗಳಿಗೆ ಸಂಚಾರ ನಿರಾಳವಾಗಲಿದೆ.

ಫೌಂಟೇನ್ ವೃತ್ತ (ಖೋಡೆ ವೃತ್ತ) ಮತ್ತು ಓಕಳಿಪುರ ಜಂಕ್ಷನ್ ಮಧ್ಯೆ ತಲೆಯೆತ್ತಲಿರುವ ಈ ಕಾರಿಡಾರ್‌ನಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಇರುವ ಎಂಟು ಪಥಗಳ ರಸ್ತೆಯಲ್ಲದೆ ವಿವಿಧೆಡೆಗೆ ಸಾಗಲು ಅನುಕೂಲ ಕಲ್ಪಿಸುವ ರ‌್ಯಾಂಪ್‌ಗಳು ನಿರ್ಮಾಣಗೊಳ್ಳಲಿವೆ. ಯೋಜನೆಯ ಗುತ್ತಿಗೆಯನ್ನು ಕೋಲ್ಕತ್ತಾದ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಪಡೆದುಕೊಂಡಿದೆ.

ಈ ಕಾರಿಡಾರ್‌ಗಾಗಿ ರೈಲ್ವೆ ಇಲಾಖೆಯು ತನಗೆ ಸೇರಿದ 12,818 ಚದರ ಮೀಟರ್ ಜಾಗವನ್ನು ಸರ್ಕಾರಕ್ಕೆ ಹಸ್ತಾಂತರಿಸಿದೆ. ಅದಕ್ಕೆ ಬದಲಿಯಾಗಿ ಬೃಹತ್ ಬೆಂಗಳೂರು ನಗರ ಪಾಲಿಕೆಯ ವತಿಯಿಂದ ಬಿನ್ನಿ ಮಿಲ್, ಶೇಷಾದ್ರಿ ರಸ್ತೆ ಜಾಗಗಳಲ್ಲಿ ಈಗಾಗಲೇ ಸುಮಾರು ಎರಡು ಎಕರೆಯಷ್ಟು ಜಾಗವನ್ನು ನೀಡಲಾಗಿದೆ. ಉಳಿದ 3.16 ಎಕರೆ ಜಮೀನನ್ನು ಬಿನ್ನಿಮಿಲ್ ಜಾಗದಲ್ಲಿ ನೀಡಲಾಗುವುದು. ಖಾಸಗಿಯವರಿಗೆ ಸೇರಿದ 251 ಚದರ ಮೀಟರ್ ಜಾಗವನ್ನು ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ.

`ರೈಲ್ವೆ ಇಲಾಖೆ, ಬಿಬಿಎಂಪಿ, ಬಿಎಸ್‌ಎನ್‌ಎಲ್, ಬೆಂಗಳೂರು ಜಲಮಂಡಳಿ ಸೇರಿದಂತೆ ಅನೇಕ ಇಲಾಖೆಗಳೊಂದಿಗೆ ಕಳೆದ ನಾಲ್ಕು ವರ್ಷಗಳ ಸತತ ಸಭೆಗಳು, ಪರಾಮರ್ಶೆಗಳ ನಂತರ ನನ್ನ ಬಹುದಿನಗಳ ಕನಸಿನ ಈ  ಯೋಜನೆಗೆ ಅಂತಿಮ ರೂಪ ದೊರಕಿದೆ' ಎಂದು ರಾಜಾಜಿನಗರ ಕ್ಷೇತ್ರದ ಶಾಸಕರೂ ಆದ ಸಚಿವ ಎಸ್.ಸುರೇಶ್‌ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

`2014ರ ಜೂನ್ ಒಳಗೆ ಈ ಯೋಜನೆಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಅಲ್ಲಿಯವರೆಗೆ ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು ಸಹಕಾರ ನೀಡಬೇಕು' ಎಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT