ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದದೇ ಪಾಸಾಗಿ ಬದುಕು ಗೆದ್ದಾಗ...

ನನ್ನ ಕಥೆ
ಅಕ್ಷರ ಗಾತ್ರ

ಅದುವರೆಗೂ ನಾನು ಸ್ಟಿಲ್ ಕ್ಯಾಮೆರಾದಲ್ಲಿ ಒಂದು ಫೋಟೊ ತೆಗೆದವನಲ್ಲ. ಪತ್ರಿಕೆಗಳಲ್ಲಿ ಬರುವ ನಿಸರ್ಗದ ಚಿತ್ರಗಳನ್ನು ಕುತೂಹಲದಿಂದ ನೋಡುತ್ತಿದ್ದೆ. ಛಾಯಾಚಿತ್ರಗಳತ್ತ ಏನೋ ಆಕರ್ಷಣೆ. ಪತ್ರಿಕೆಯೊಂದರಲ್ಲಿ ಬಂದಿದ್ದ ಜಾಹೀರಾತು ಕೈಯಲ್ಲಿ ಹಿಡಿದು ಸೀದಾ ಕಾಲೇಜಿನತ್ತ ನಡೆದೆ. ಮನದಲ್ಲಿ ನನಗೇ ಗೊತ್ತಾಗದಂತೆ ಛಾಯಾಗ್ರಹಣದ ಆಸಕ್ತಿ ಕುಡಿಯೊಡೆದಿತ್ತು. ಕಾಲೇಜು ಮೆಟ್ಟಿಲೇರಿದವನೇ ಹಿಂದು ಮುಂದು ನೋಡದೆ ಕೋರ್ಸ್‌ಗೆ ಪ್ರವೇಶಪಡೆದು ಹಿಂದಿರುಗಿದೆ. ಆ ಆಯ್ಕೆ ಹೇಗೆ, ಯಾಕೆ ಮಾಡಿದೆನೋ ಗೊತ್ತಿಲ್ಲ.

ನಾನು ಹುಟ್ಟಿದ್ದು ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ತಾಳಕಟ್ಟಿ ಎಂಬ ಊರಿನಲ್ಲಿ. ಕೃಷಿಯನ್ನು ನೆಚ್ಚಿಕೊಂಡಿದ್ದ ಕುಟುಂಬ. ಬರುತ್ತಿದ್ದ ಆದಾಯ ಕಡಿಮೆ. ಸಂಕಷ್ಟದ ಬದುಕು. ಓದಿಸಿ ಬೆಳೆಸುವ ಸಾಮರ್ಥ್ಯ ಅಪ್ಪ ಅಮ್ಮನಿಗಿರಲಿಲ್ಲ. ನನ್ನ ಶಿಕ್ಷಣದ ವೆಚ್ಚ ಭರಿಸಿ ನೋಡಿಕೊಂಡವರು ನನ್ನ ಬಂಧುಗಳು. ಹುಟ್ಟೂರು ತಾಳಕಟ್ಟಿಯಾದರೂ ಬೆಳೆದದ್ದು ಚಿಕ್ಕಮಗಳೂರಿನ ಯಗಟಿ ಊರಿನಲ್ಲಿ. ಈಗಲೂ ಹುಟ್ಟೂರಿಗೆ ಹೋದಾಗ ಎಷ್ಟೋ ಜನರಿಗೆ ನನ್ನ ಗುರುತೇ ಸಿಗುವುದಿಲ್ಲ. ಚಿಕ್ಕಂದಿನಿಂದಲೂ ಸ್ವಂತ ಮಗನಿಗಿಂತ ಹೆಚ್ಚು ಪ್ರೀತಿಯಿಂದ ಬೆಳೆಸಿದವರು ದೊಡ್ಡಮ್ಮ. ಅಕ್ಷರ ಕಲಿಕೆಯಿಂದ 10ನೇ ತರಗತಿಯವರೆಗೂ ಓದಿ ಬೆಳೆದದ್ದು ದೊಡ್ಡಮ್ಮನ ಮನೆಯಲ್ಲಿಯೇ. ಓದಿದ್ದು ಎಂದರೆ ಕಷ್ಟಪಟ್ಟು ಓದುತ್ತಿದ್ದೆ ಎಂದಲ್ಲ. ಮಿಗಿಲಾಗಿ ನಾನು ಓದುತ್ತಿದ್ದದ್ದು ಅಷ್ಟಕಷ್ಟೇ. ಕುಳಿತು ಓದುವುದು ನನಗಾಗದ ವಿಷಯ.

ಪರೀಕ್ಷೆಯೆಂದರೂ ಭಯವೇನಿಲ್ಲ ಎಂಬ ಮೊಂಡುತನದಿಂದ ಸುತ್ತಾಡುತ್ತಿದ್ದವನು. ಪಾಸಾಗುವುದಿಲ್ಲ ಎಂದುಕೊಂಡಿದ್ದರೂ ಹೇಗೋ ಮುಂದಿನ ತರಗತಿಗೆ ಬಡ್ತಿ ಸಿಗುತ್ತಿತ್ತು. ಜ್ಞಾಪಕ ಶಕ್ತಿ ಚೆನ್ನಾಗಿದ್ದರಿಂದ ಕ್ಲಾಸ್‌ರೂಮಿನಲ್ಲಿ ಕೇಳಿದ್ದು ಹಾಗೆಯೇ ಉಳಿದಿರುತ್ತಿತ್ತು. ನೆನಪಿನಲ್ಲಿ ಉಳಿದದ್ದಷ್ಟನ್ನೂ ಹಾಳೆಯ ಮೇಲೆ ಇಳಿಸುತ್ತಿದ್ದೆ. ಹೀಗಾಗಿ ಓದದಿದ್ದರೂ ಪಾಸಾಗುತ್ತಿದ್ದೆ.

10ನೇ ತರಗತಿಯಲ್ಲೂ ಹೀಗೇ ಆಗಿತ್ತು. ಪಾಸಾಗುವುದಿಲ್ಲ ಎಂದು ಗೊತ್ತಿತ್ತು. ಮನೆಯಲ್ಲೂ ಎಲ್ಲರೂ ಅದನ್ನೇ ನಿರೀಕ್ಷಿಸಿದ್ದರು! ಆದರೆ ಫಲಿತಾಂಶ ಬಂದಾಗ ನನ್ನ ಕಣ್ಣನ್ನು ನನಗೇ ನಂಬಲು ಆಗಲಿಲ್ಲ. ನಿಜಕ್ಕೂ ಇದು ಸಾಧ್ಯವೇ ಎಂಬ ಅಚ್ಚರಿ. ಫಸ್ಟ್‌ಕ್ಲಾಸ್‌ನಲ್ಲಿ ಪಾಸಾಗಿದ್ದೆ. ಪಾಸಾದೆ ಅಂತ ಮನೆಯಲ್ಲಿ ಹೇಳಿದಾಗ ಎಲ್ಲರೂ `ಹೋಗಪ್ಪಾ. ನೀನು ಪಾಸಾಗುವುದು ಚಾನ್ಸೇ ಇಲ್ಲ' ಎಂದು ಜೋರಾಗಿ ನಕ್ಕಿದ್ದರು! ನನಗೇ ನಂಬಲು ಆಗಿರಲಿಲ್ಲ ಎಂದ ಮೇಲೆ ನನ್ನ ಆಟಾಟೋಪಗಳನ್ನು ಕಂಡ ಅವರು ತಾನೆ ಹೇಗೆ ನಂಬುತ್ತಾರೆ? ದೊಡ್ಡಮ್ಮನ ಮನೆಯಲ್ಲಿದ್ದುಕೊಂಡು ಅಂತೂ ಇಂತೂ ಹೈಸ್ಕೂಲು ಮುಗಿಸಿದವನು ಹೊರಟಿದ್ದು ಬೆಂಗಳೂರಿನತ್ತ. ಅಲ್ಲಿ ಅಂಕಲ್ ಮನೆಯಲ್ಲಿದ್ದುಕೊಂಡು ಪಿಯುಸಿ ಮುಗಿಸಿದೆ. ಮುಂದೇನು ಎಂದು ಯೋಚಿಸುತ್ತಿರುವಾಗಲೇ ಕಣ್ಣಿಗೆ ಕಂಡದ್ದು ಸಿನಿಮಾಟೊಗ್ರಫಿ ಡಿಪ್ಲೊಮಾ ಕೋರ್ಸ್‌ನ ಜಾಹೀರಾತು.

ಕ್ಯಾಮೆರಾ ಎಂದರೆ ಏನೆಂಬುದೇ ಆಗ ಗೊತ್ತಿರಲಿಲ್ಲ. ಆರಂಭದಲ್ಲಿದ್ದ ಕುತೂಹಲ ಆಸಕ್ತಿಯಾಗಿ ಬದಲಾಯಿತು. ಛಾಯಾಗ್ರಹಣದ ಒಳಗುಟ್ಟುಗಳು ಅರಿವಾಗುತ್ತಿದ್ದಂತೆ ಅದು ನನ್ನಲ್ಲಿ ಚಿತ್ರರಂಗ ಪ್ರವೇಶಿಸುವ ಆಸೆ ಚಿಗುರಿಸಿತು. ಬಾಲ್ಯದಿಂದಲೂ ಊಟ ತಿಂಡಿ ಬಿಟ್ಟು ಸಿನಿಮಾ ನೋಡುವ ಹುಚ್ಚು ಹೊತ್ತಿಸಿಕೊಂಡವನು ನಾನು. ಹೀಗಿರುವಾಗ ಸಿನಿಮಾ ಸೆಳೆಯದೆ ಇರುತ್ತದೆಯೇ... ಓದಿನ ನಂಟು ಇರಲಿಲ್ಲವಾದ್ದರಿಂದ ದಿನ ಕಳೆಯುತ್ತಿದ್ದದ್ದು ಕ್ರಿಕೆಟ್ ಮತ್ತು ವಾಲಿಬಾಲ್ ಮೈದಾನದಲ್ಲಿ. ಕ್ಲಾಸಿನಲ್ಲಿ ಇಲ್ಲದ ಹಾಜರಾತಿ ಚಿತ್ರಮಂದಿರಗಳಲ್ಲಿರುತ್ತಿತ್ತು. ಅದರಲ್ಲೂ ಕ್ರಿಕೆಟ್ ಎಂದರೆ ಬಿಡಿಸಲಾಗದ ಹುಚ್ಚು. ಬಹುಶಃ ಛಾಯಾಗ್ರಾಹಕನಾಗದೆ ಹೋಗಿದ್ದರೆ ಕ್ರಿಕೆಟರ್ ಆಗಿರುತ್ತಿದ್ದೆನೋ ಏನೋ...! ಬೆಂಗಳೂರಿಗೆ ಬಂದಮೇಲೆ ಎಲ್ಲವೂ ಬದಲಾಯಿತು.

ಛಾಯಾಗ್ರಹಣ ಕ್ಷೇತ್ರದಲ್ಲಿಯೇ ಕೈತುಂಬಾ ಸಂಬಳ ತರುವ ಅವಕಾಶಗಳು ಸಾಕಷ್ಟಿದ್ದವು. ಬಹುಶಃ ಸಿನಿಮಾರಂಗಕ್ಕೆ ಬಾರದಿದ್ದಲ್ಲಿ ಬೇರೆ ಉದ್ಯೋಗ ಈಗ ಗಳಿಸುವುದಕ್ಕಿಂತ ಹೆಚ್ಚು ಆದಾಯ ಕೊಡುತ್ತಿತ್ತೇನೋ. ಆದರೆ ಸಿನಿಮಾವನ್ನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ. ಮಾಡಿರುವ ಚಿತ್ರಗಳು ತೃಪ್ತಿ ನೀಡಿವೆ. ಇಲ್ಲಿ ಸಿಗುವ ಖುಷಿ ಬೇರೆಲ್ಲೂ ಸಿಗುತ್ತಿರಲಿಲ್ಲ ಎನಿಸುತ್ತದೆ. ಏನೂ ಗೊತ್ತಿಲ್ಲದ ಕೋರ್ಸ್ ಅನ್ನು ಏಕೆ ತೆಗೆದುಕೊಂಡೆ ಎಂದು ಮನೆಯಲ್ಲಿ ಬೈಗುಳವನ್ನೂ ತಿಂದಿದ್ದೆ. ಆರಂಭದಲ್ಲಿ ಅಂಕಲ್ ಅವರಿಂದ ಪ್ರೋತ್ಸಾಹ ಸಿಕ್ಕಿರಲಿಲ್ಲ. ಕೋರ್ಸ್ ಏನೆಂದು ಸರಿಯಾಗಿ ತಿಳಿದಿಲ್ಲ, ಅದರ ಉಪಯೋಗದ ಕುರಿತೂ ಅರಿವಿಲ್ಲ ಎಂಬುದು ಅವರ ಕೋಪಕ್ಕೆ ಕಾರಣ. ಈ ಕೋರ್ಸ್ ಸೇರಿ ಒಳ್ಳೆಯ ಕೆಲಸ ಮಾಡಿದ್ದಿ ಎಂದು ಅವರು ಇಂದು ನನ್ನ ಬೆನ್ನುತಟ್ಟುತ್ತಿದ್ದಾರೆ.

ಕೋರ್ಸ್ ಮುಗಿಯುತ್ತಿದ್ದಂತೆ ಸೇರಿಕೊಂಡದ್ದು ಛಾಯಾಗ್ರಾಹಕ ಸೀತಾರಾಮ್ ಅವರ ಬಳಿ. ಅವರಂತೆಯೇ ಸಿನಿಮಾ ಛಾಯಾಗ್ರಹಣದ ಪಟ್ಟುಗಳನ್ನು ಕಲಿಸಿಕೊಟ್ಟ ಗುರುಗಳು ರಮೇಶ್ ಬಾಬು. ಸಹಾಯಕ ಛಾಯಾಗ್ರಾಹಕನಾಗಿ ಸುಮಾರು 20 ಚಿತ್ರಗಳಿಗೆ ಕೆಲಸ ಮಾಡಿದೆ. `ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ' ಚಿತ್ರದಲ್ಲಿ ನನ್ನ ಕೆಲಸ ನೋಡಿ ಅವಕಾಶವಿತ್ತವರು ನಿರ್ದೇಶಕ ರಾಜ್‌ಕಿಶೋರ್. ಹೀಗೆ ಅಧಿಕೃತವಾಗಿ `ಛಾಯಾಗ್ರಾಹಕ' ವೃತ್ತಿ ಬದುಕು ಶುರುವಾಗಿದ್ದು `ನೀಲ ಮೇಘ ಶ್ಯಾಮ' ಚಿತ್ರದ ಮೂಲಕ. ನಟಿ ರಾಧಿಕಾ ಮತ್ತು ಸೃಜನ್ ಲೋಕೇಶ್ ಅವರಿಗೂ ಅದು ಮೊದಲ ಚಿತ್ರ. ಬಳಿಕ ನಾಗಣ್ಣ `ಪ್ರೇಮಖೈದಿ'ಯಲ್ಲಿ ಅವಕಾಶ ನೀಡಿದರು. ಡಿ. ರಾಜೇಂದ್ರ ಬಾಬು ಅವರ `ನಂದಿ' ಚಿತ್ರದ ಬಳಿಕ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಮಹೇಂದರ್ ನಿರ್ದೇಶನದಲ್ಲಿ `ಪ್ರೀತಿಗಾಗಿ' ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದೆ. ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದ ನಿರ್ಮಾಪಕ ರಮೇಶ್ ಯಾದವ್ ಇಂಟರ್‌ವೆಲ್‌ನಲ್ಲಿ ಕರೆ ಮಾಡಿ ನನ್ನ ಮುಂದಿನ ಚಿತ್ರಕ್ಕೆ ನೀನೇ ಛಾಯಾಗ್ರಾಹಕ ಎಂದರು.

ವೃತ್ತಿ ಬದುಕಿಗೆ ಹೊಸ ತಿರುವು ಸಿಕ್ಕಿತು. ಅವರ `ಕೃಷ್ಣ' ಸಿನಿಮಾ ಹೆಸರು ಕೀರ್ತಿ ತಂದುಕೊಟ್ಟಿತು. ಈ ವಾರ ತೆರೆಕಾಣುತ್ತಿರುವ `ಬಚ್ಚನ್' ನನ್ನ 25ನೇ ಸಿನಿಮಾ. `ಅರಮನೆ', `ಸರ್ಕಸ್', `ಕೃಷ್ಣನ್ ಲವ್‌ಸ್ಟೋರಿ', `ಜರಾಸಂಧ' ಮುಂತಾದವು ಈ ಪಟ್ಟಿಯಲ್ಲಿರುವ ಪ್ರಮುಖ ಚಿತ್ರಗಳು. ಗಾಡ್‌ಫಾದರ್ ಇಲ್ಲದೆ ಚಿತ್ರರಂಗಕ್ಕೆ ಬಂದ ನನಗೆ ದಾರಿ ತೋರಿದವರು ಸೀತಾರಾಮ್ ಮತ್ತು ರಮೇಶ್ ಬಾಬು. ಹಾಂ... ಮರೆತಿದ್ದೆ. ನನ್ನ ಮೂಲ ಹೆಸರು ಚಂದ್ರಶೇಖರ. ಇದೇ ರೀತಿಯ ಹೆಸರುಳ್ಳವರು ಬಹಳ ಜನ ಇದ್ದಾರೆ ಎಂದು ಅದನ್ನು ಅದಲು ಬದಲಿಸಿ ಶೇಖರ್ ಚಂದ್ರು ಎಂದು ಕರೆದವರು ಮಹೇಂದರ್.

ಸಿನಿಮಾ ಛಾಯಾಗ್ರಹಣ ಅಷ್ಟು ಸಲೀಸಾಗಿ ಇರಲಿಲ್ಲ. ನಾವು ಕೋರ್ಸ್‌ನಲ್ಲಿ ಕಲಿತು ಬಂದ ಬಗೆಯೇ ಒಂದಾದರೆ, ಸಿನಿಮಾರಂಗದ ಛಾಯಾಗ್ರಹಣದ್ದೇ ಬೇರೆ ದಿಕ್ಕು. ನಾನು, ಸತ್ಯ ಹೆಗಡೆ, ಕೃಷ್ಣ ಒಂದೇ ಕಾಲಘಟ್ಟದಲ್ಲಿ ಕೋರ್ಸ್ ಮುಗಿಸಿ ಬಂದ ಛಾಯಾಗ್ರಾಹಕರು. ಕೋರ್ಸ್‌ನಲ್ಲಿ ಕಲಿತಿದ್ದಕ್ಕಿಂತ ವಿಭಿನ್ನವಾದ ಸಿನಿಮಾ ಶೈಲಿಯನ್ನು ಅರಗಿಸಿಕೊಳ್ಳಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಈಗ ಜನ ಗುರುತಿಸುತ್ತಾರೆ. ದೊಡ್ಡ ದೊಡ್ಡ ನಿರ್ಮಾಪಕರು, ನಿರ್ದೇಶಕರು ಕರೆದು ಅವಕಾಶ ನೀಡುತ್ತಾರೆ. 10 ವರ್ಷಗಳ ಶ್ರಮದ ಫಲವಿದು.

ವೃತ್ತಿ ಆರಂಭಿಸಿದ ಹತ್ತು ವರ್ಷಗಳಲ್ಲಿ ದುಡಿದ ಚಿತ್ರಗಳ ಸಂಖ್ಯೆ ಹೆಚ್ಚಿಸಿಕೊಳ್ಳಬಹುದಾಗಿತ್ತು. ಆದರೆ ನಾನೇ ಹಾಕಿಕೊಂಡ ನಿಯಮಗಳನ್ನು ಎಂದಿಗೂ ಮೀರುವುದಿಲ್ಲ. ಒಂದು ಚಿತ್ರವನ್ನು ಒಪ್ಪಿಕೊಂಡ ಬಳಿಕ ಅದರಲ್ಲಿ ಸಂಪೂರ್ಣ ತೊಡಗಿಕೊಳ್ಳುವುದು ನನ್ನ ನೀತಿ. ಹೀಗಾಗಿ ಅದರ ಮಧ್ಯೆ ಇನ್ನಾವ ಚಿತ್ರವನ್ನೂ ಒಪ್ಪಿಕೊಳ್ಳುವುದಿಲ್ಲ. ನಿರ್ದೇಶಕ ಕಥೆ ವಿವರಿಸುವಾಗಲೇ ಕಣ್ಣಮುಂದೆ ದೃಶ್ಯಗಳನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಅವರೊಂದಿಗೆ ಚರ್ಚಿಸುತ್ತೇನೆ. ಏಕೆಂದರೆ ನಿರ್ದೇಶಕರ ಮನದಲ್ಲಿ ಮೂಡುವಂತೆ ಕ್ಯಾಮೆರಾ ಕಣ್ಣಿನಲ್ಲಿ ದೃಶ್ಯಗಳನ್ನು ಸೆರೆ ಹಿಡಿಯುವುದು ನಮ್ಮ ಕರ್ತವ್ಯ. ಆ ಕೆಲಸವನ್ನು ಚಿತ್ರೀಕರಣಕ್ಕೆ ಮೊದಲೇ ಶುರುಮಾಡಿಕೊಳ್ಳುತ್ತೇನೆ. ಎಲ್ಲಾ ವಿಧದ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದರೂ ಆ್ಯಕ್ಷನ್ ಚಿತ್ರದ ಸವಾಲು ಅಚ್ಚುಮೆಚ್ಚು.

ಛಾಯಾಗ್ರಹಣ ಕೆಲಸ ಎಷ್ಟು ಸವಾಲಿನದೋ ಅಷ್ಟೇ ಖುಷಿಯನ್ನೂ ನೀಡುತ್ತದೆ. ಇಲ್ಲಿಂದ ಒಂದು ಹೆಜ್ಜೆ ಮುಂದಿಟ್ಟು ನಿರ್ದೇಶನಕ್ಕಿಳಿದವರು ತುಂಬಾ ಜನ. ನನ್ನಲ್ಲಿ ಸದ್ಯಕ್ಕೆ ಅಂಥ ಬಯಕೆ ಇಲ್ಲ. ಈಗಿರುವ ಗುರಿ ಎಂದರೆ ಅನ್ಯ ಭಾಷೆಯ ಸಿನಿಮಾಗಳಲ್ಲಿಯೂ ಛಾಯಾಗ್ರಹಣ ಮಾಡಬೇಕು ಎನ್ನುವುದು. ಇದು ಬೇರೆ ಭಾಷೆಗೆ ಜಿಗಿಯುವ ಆಸೆಯಲ್ಲ. ಕನ್ನಡಿಗನಾಗಿ ಪರಭಾಷಾ ಚಿತ್ರಗಳಲ್ಲಿ ಹೆಸರು ಗಳಿಸಬೇಕು. ಅದು ಸಾಧ್ಯವಾಗುತ್ತದೆ ಎಂಬ ನಂಬಿಕೆ ಖಂಡಿತಾ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT