ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದುಗರ ದಾಹ ನೀಗಿಸುವ ಬಸ್ ನಿಲ್ದಾಣ ಗ್ರಂಥಾಲಯ

Last Updated 15 ಅಕ್ಟೋಬರ್ 2012, 5:10 IST
ಅಕ್ಷರ ಗಾತ್ರ

ಬಳ್ಳಾರಿ: ಬಸ್ ತಪ್ಪಿಸಿಕೊಂಡು ಮತ್ತೊಂದು ಬಸ್ ಬರುವವರೆಗೂ  ಪರಿತಪಿಸುವವರು, ಏಕಾಂಗಿಯಾಗಿ ಬಂದು ಬಸ್‌ಗಳಿಗಾಗಿ ಕಾಯುತ್ತ ಕುಳಿತುಕೊಳ್ಳುವವರು, ಪರ ಊರು ಗಳಿಂದ ಬರುವ ಸ್ನೇಹಿತರು ಮತ್ತು ಸಂಬಂಧಿಗಳನ್ನು ಕರೆತರಲು ತೆರಳಿ ಬಸ್ ನಿಲ್ದಾಣದಲ್ಲಿ ಕಾಯುತ್ತ ಕುಳಿತು ಕೊಳ್ಳುವವರು ಈಗ ಬೇಸರಪಡುವಂತಿಲ್ಲ.

`ಹೀಗೆ ಕುಳಿತುಕೊಳ್ಳುವುದರಿಂದ ಸಮಯ ವ್ಯರ್ಥವಾಗುತ್ತಿದೆಯಲ್ಲ~ ಎಂದು ಮಮ್ಮಲ ಮರುಗುವವರ ಬೇಸರವನ್ನು ದೂರ ಮಾಡಲೆಂದೇ, ಬಸ್ ನಿಲ್ದಾಣದಲ್ಲಿ ಇರುವಷ್ಟು ಸಮಯವನ್ನು ಸಾರ್ಥಕ ಮಾಡಿಕೊಳ್ಳ ಲೆಂದೇ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸ ಬಸ್ ನಿಲ್ದಾಣದಲ್ಲಿ ನೂತನ ಬಸ್ ನಿಲ್ದಾಣದಲ್ಲಿ ಗ್ರಂಥಾಲಯವೊಂದನ್ನು ಆರಂಭಿಸಿದೆ.

ಅಕ್ಟೋಬರ್ 2ರಂದು ಮಹಾತ್ಮಾ ಗಾಂಧಿ ಜನ್ಮದಿನಾಚರಣೆಯ ಶುಭ ಸಂದರ್ಭದಲ್ಲಿ ಈ ಗ್ರಂಥಾಲಯವನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ಆರಂಭಿಸಿರುವ ಸಂಸ್ಥೆ, ಸಮಯವ್ಯರ್ಥವಾಗುತ್ತಿದೆಯಲ್ಲ ಎಂಬ ಭಾವನೆ ಪ್ರಯಾಣಿಕರಲ್ಲಿ ಮೂಡದಂತೆ ಮಾಡಿದೆ. ಪತ್ರಿಕೆಗಳು, ನಿಯತಕಾಲಿಕೆಗಳ ಪ್ರಿಯರಿಗೆ 15ಕ್ಕೂ ಅಧಿಕ ಕನ್ನಡ, ಇಂಗ್ಲಿಷ್, ತೆಲುಗು ಪತ್ರಿಕೆಗಳು, ನಿಯತಕಾಲಿಕೆಗಳನ್ನು ಇರಿಸಿದೆ.

ಸಾರ್ವಜನಿಕರಿಗೆ ಮಾತ್ರವಲ್ಲದೆ, ಕರ್ತವ್ಯದ ಮೇಲೆ ಬಂದು, ಬಳ್ಳಾರಿ ಯಲ್ಲಿ ಒಂದೆರಡು ಗಂಟೆಗಳ ಕಾಲ ತಂಗಿ, ಸರದಿಯ ಪ್ರಕಾರ ಮತ್ತೆ ಬಸ್ ತೆಗೆದುಕೊಂಡು ಹೋಗುವ ಚಾಲಕ, ನಿರ್ವಾಹಕರಿಗೂ ಈ ಗ್ರಂಥಾಲಯ ಅನುಕೂಲಕರವಾಗಿ ಪರಿಣಮಿಸಿದೆ.

ಕೆಲಸದ ಒತ್ತಡದ ನಡುವೆ ಹೊರ ಜಗತ್ತಿನ ಸಂಪರ್ಕವೇ ಇಲ್ಲದಂತಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿಯದೇ ಉಳಿದು ಬಿಡುವವರಿಗಾಗಿ,  ದೈನಂದಿನ ಆಗುಹೋಗುಗಳನ್ನು ತಿಳಿದು ಕೊಳ್ಳಲು ಅನುವು ಮಾಡಿಕೊಡಲಾಗಿದೆ.

ಈಶಾನ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಗ್ರಂಥಾಲಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಸಂಸ್ಥೆಯ ವ್ಯಾಪ್ತಿಯ ಬಳ್ಳಾರಿ, ರಾಯಚೂರು, ಕೊಪ್ಪಳ, ಬೀದರ್, ಗುಲ್ಬರ್ಗ, ಯಾದಗಿರಿ ಜಿಲ್ಲಾ ಕೇಂದ್ರದ ಬಸ್ ನಿಲ್ದಾಣಗಳಲ್ಲಿ ಗ್ರಂಥಾಲಯ ಪ್ರಾರಂಭಿ ಸಲು ಸಹಕರಿಸುವಂತೆ ಕೋರಿದ ಹಿನ್ನೆಲೆಯಲ್ಲಿ ಇದೀಗ ಬಳ್ಳಾರಿ ಬಸ್ ನಿಲ್ದಾಣದಲ್ಲೂ ಗ್ರಂಥಾಲಯ ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT