ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದುಗರ ಪತ್ರ

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

`ಇಂಗ್ಲಿಷ್ ಎಂಬ ಕನ್ನಡದ ಸಂಕೀರ್ಣತೆ~- ಕೆ.ಸತ್ಯನಾರಾಯಣ ಅವರ ಲೇಖನ (ಸಾಪು, ಜ. 8) ಮನೋಜ್ಞವಾಗಿದೆ. ಕಗ್ಗಂಟಾಗಿರುವ ಇಂಗ್ಲಿಷ್ ಮಾಧ್ಯಮದ ಪ್ರಶ್ನೆ ಕುರಿತು, ಇಂಗ್ಲಿಷ್ ಭಾಷೆಯ ಪ್ರಶ್ನೆ ಕುರಿತು ಲೇಖನ ಹೊಸ ಬೆಳಕು ಚೆಲ್ಲುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಪ್ರತಿಯೊಬ್ಬರೂ ಇದನ್ನು ಓದಿ ಗಂಭೀರವಾಗಿ ಚಿಂತಿಸಬೇಕು, ಚರ್ಚಿಸಬೇಕು.

ಜುಲೈ 17, 2011ರ ಪುರವಣಿಯಲ್ಲಿ ಪ್ರಕಟವಾದ ಚಂದ್ರಭಾನ್ ಪ್ರಸಾದ್ ಹಾಗೂ ಆನಂದ್ ತೇಲ್ತುಂಬ್ಡೆ ಅವರ ಸಂದರ್ಶನ ಲೇಖನಗಳು (ಸಂ: ಎನ್.ಎ.ಎಂ. ಇಸ್ಮಾಯಿಲ್) ಮತ್ತೊಮ್ಮೆ ನೆನಪಿಗೆ ಬರುತ್ತಿವೆ. ದಲಿತ ವಿಮೋಚನೆ ಕುರಿತ ಪ್ರಶ್ನೆಗಳಲ್ಲಿ, ಮುಖ್ಯವಾಗಿ ದಲಿತ ವಿಮೋಚನೆಗೂ ಇಂಗ್ಲಿಷ್ ಭಾಷೆಗೂ ಇರಬಹುದಾದ ಸಂಬಂಧಗಳ ಕುರಿತು ನನ್ನ ಮನಸ್ಸಿನಲ್ಲಿ ಹುಟ್ಟಿದ ಅಸ್ಪಷ್ಟತೆ ಸತ್ಯನಾರಾಯಣ ಅವರ ಲೇಖನದ ಬೆಳಕಿನಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.
-ಜಿ.ಎಸ್. ಜಯದೇವ, ಚಾಮರಾಜನಗರ

ಡಿ.ಎಸ್.ಚೌಗಲೆ ಮತ್ತು ಚಂದ್ರಕಾಂತ ಪೋಕಳೆ ಅವರ `ನಮ್ಮೂರಲ್ಲಿ ತಂಪು, ದೂರದಲ್ಲಿ ಕಾವು~ ಲೇಖನ ಸಕಾಲಿಕ. ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕನಾದ ನಾನು ಮೌಲ್ಯಮಾಪನ ಮತ್ತಿತರ ಕೆಲಸಗಳಿಗಾಗಿ ಹತ್ತು ವರ್ಷಗಳಿಂದ ಬೆಳಗಾವಿಗೆ ಹೋಗಿಬರುತ್ತಿರುವೆ. ಲೇಖಕರು ಹೇಳಿದಂತೆ ಬೆಳಗಾವಿ ತಣ್ಣಗಿದೆ. ಅಲ್ಲಿನ ಕನ್ನಡಿಗರು - ಮರಾಠಿಗರು ಸೌಹಾರ್ದದಿಂದ ಇದ್ದಾರೆ.
-ಜಿ.ಬಿ.ಕೃಷ್ಣಪ್ಪ, ಮೈಸೂರು

`ನಮ್ಮೂರಲ್ಲಿ ತಂಪು, ದೂರದಲ್ಲಿ ಕಾವು~ ಬರಹದಲ್ಲಿ ಹಲವು ಪಾಠಗಳಿವೆ. ಭಾಷೆ-ಗಡಿ ಹೆಸರಲ್ಲಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವವರು ಎಲ್ಲೆಡೆಯೂ ಇರುತ್ತಾರೆ. ಅಂಥವರನ್ನು ನಿರ್ಲಕ್ಷಿಸುವುದು ಒಳಿತು.
-ವಿಜಯ ಮಠ, ಬಾಗಲಕೋಟೆ

`ಆನೆದಾರಿಯಲ್ಲಿ ಅಲ್ಲೋಲಕಲ್ಲೋಲ~ ಲೇಖನದಲ್ಲಿ (ಜ.8) ಆನೆಗಳಿಂದ ಅನೇಕ ರೀತಿಯ ತೊಂದರೆಗೊಳಗಾಗಿದ್ದರೂ ಸಾಮಾನ್ಯ ರೈತರಿಗೆ ಆನೆಗಳ ಬಗ್ಗೆ ಸಿಟ್ಟಾಗಲೀ, ರೋಷವಾಗಲೀ ಇಲ್ಲ ಎಂಬ ಲೇಖಕರ (ಪ್ರಸಾದ್ ರಕ್ಷಿದಿ) ಮಾತು ಅಕ್ಷರಶಃ ಸತ್ಯ. ಸಿಟ್ಟು-ರೋಷ ಇರುವುದು ಅಭಿವೃದ್ಧಿಪರ ಹಿತಾಸಕ್ತಿಗಳೆಂಬ ಸೋಗು ಹಾಕುವವರಿಗೆ, ದೊಡ್ಡ ಯೋಜನೆಗಳ  ನಿರೂಪಕರಿಗೆ.

ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ಬಡ ರೈತರು ನಾವು. ನಮ್ಮ ಕೃಷಿ ಭೂಮಿಗೆ ನಿರಂತರ ಆನೆ ಹಾವಳಿ ಇದ್ದರೂ ನಾವು ಆನೆಗಳೊಂದಿಗೆ ಸಹಬಾಳ್ವೆ ನಡೆಸುತ್ತಿದ್ದೇವೆ. ಮನೆಯಲ್ಲಿ ಕೋವಿ ಇಟ್ಟುಕೊಂಡಿದ್ದರೂ, ಆನೆ ಬಂದಾಗ ಪಟಾಕಿ ಸಿಡಿಸಿ ಓಡಿಸುತ್ತೇವೆ ಅಷ್ಟೇ. ಅದು ತಿಂದು ಹಾಳು ಮಾಡಿದ, ಗಿಡ ಕಿತ್ತು ಬಿಸಾಡಿದ ಜಾಗದಲ್ಲಿ ಹೊಸ ಗಿಡ ನೆಡುತ್ತೇವೆ. ಇದು ನಮ್ಮಲ್ಲಿ ಎಷ್ಟೋ ವರ್ಷಗಳಿಂದ ನಡೆದು ಬಂದ ಪ್ರಕ್ರಿಯೆ.

ಆನೆಗೂ ಬದುಕುವ ಹಕ್ಕು ಇದೆ. ಆನೆ ಹಿಂದೆ ನಡೆದಂತೆ ಈಗಲೂ ಅದರ ದಾರಿಯಲ್ಲೇ ನಡೆಯಲಿ. ನಾವು ಅಡ್ಡಿಪಡಿಸುವುದು ಬೇಡ. ಆನೆಗೆ ಹೊಸ ದಾರಿಯ ಅಗತ್ಯ ಇಲ್ಲ.
-ಸಹನಾ ಕಾಂತಬೈಲು, ಬಾಲಂಬಿ ಅಂಚೆ

ಷ.ಶೆಟ್ಟರ್ ಅವರ `ನದಿಯ ದಡದ ಮೇಲಿನ ಒಂದು ಊರಿನ ನೆನಪು~ ಮಾಲಿಕೆ ಭಾನುವಾರದ ಪುರವಣಿಯ ದಾರಿ ಕಾಯುವಂತೆ ಮಾಡಿದೆ. ಹೊಸ ಅಂಕಣಗಳಾದ ಡಾ.ಆಶಾ ಬೆನಕಪ್ಪ ಅವರ `ಅಂತಃಕರಣ~ ಹಾಗೂ ಓ.ಎಲ್.ನಾಗಭೂಷಣ ಸ್ವಾಮಿ ಅವರ `ನುಡಿಯೊಳಗಾಗಿ~ ಚೆನ್ನಾಗಿವೆ, ಹೊಸ ನಿರೀಕ್ಷೆಗಳನ್ನು ಹುಟ್ಟಿಸಿವೆ
-ಬ್ಯಾ.ಮ. ಲಕ್ಷ್ಮಣ ತೇಜಸ್ವಿ, ಬ್ಯಾಗಡಹಳ್ಳಿ; ಹರೀಶ್ ಕುಮಾರ್ ಕುಡ್ತಡ್ಕ, ಕಂಕನಾಡಿ ಕುಡ್ತಡ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT