ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದುಗರ ಪತ್ರ

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

`ಮೌನ ವಸಂತ~ (ಲೇ: ಡಾ.ಜೆ.ಬಾಲಕೃಷ್ಣ; ಸೆ.23) ಗಮನಾರ್ಹ ಲೇಖನ. ಕ್ರಿಮಿನಾಶಕಗಳ ಮಿತಿ ಮೀರಿದ ಬಳಕೆಯ ದುಷ್ಪರಿಣಾಮಗಳಿಂದ ನಾವಿಂದು ಬದುಕುತ್ತಿರುವ ಭೂಮಿ, ನೀರು, ಪರಿಸರವೆಲ್ಲ ಕಲುಷಿತಗೊಂಡು ಬದುಕಲು ಅಯೋಗ್ಯವಾಗುತ್ತಿರುವುದನ್ನು ಸೋದಾಹರಣವಾಗಿ ಹೇಳುತ್ತಿರುವ ರಾಚೇಲ್ ಕಾರ್ಸನ್ ಅವರ ಕಳಕಳಿ ಎಲ್ಲರದೂ ಆಗಬೇಕು. ಒಂದೆಡೆ ಸಮೃದ್ಧಿಯ ಕನಸು, ಇನ್ನೊಂದೆಡೆ ಹಾಲಾಹಲದ ಭೀತಿ- ನಾವಿಂದು ದ್ವಂದ್ವದಲ್ಲಿದ್ದೇವೆ. ಪ್ರಸಕ್ತ ಪರಿಸ್ಥಿತಿಯನ್ನು ಪರಿಚಯಿಸಿ ಮುಂದಾಗುವ ಅನಾಹುತಗಳ ಬಗ್ಗೆ ವಿವೇಕದ ಬರಹ ಪ್ರಕಟಿಸಿದ್ದಕ್ಕೆ ಧನ್ಯವಾದಗಳು.
-ಮೋಹನ್ ರು. ಹಣಗಿ, ಇಲಕಲ್ಲ

`ನನ್ನ ಗಾಂಧಿಯ ಅನ್ವೇಷಣೆ~ (ಲೇ: ಸ.ರಘುನಾಥ; ಸೆ.30) ವಿಶಿಷ್ಟ ಲೇಖನ. ಸಂಕೀರ್ಣ ವ್ಯಕ್ತಿತ್ವವನ್ನು ಹೊಂದಿದ್ದ ಗಾಂಧೀಜಿ ಅವರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಪ್ರಾಥಮಿಕ ಶಾಲಾ ಉಪಾಧ್ಯಾಯರಾದ ಲೇಖಕರು ತಮ್ಮ ಸ್ವಾನುಭವಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. `ಜಿಲ್ ಹಸು ಮತ್ತು ರೈತ ಗಾಂಧಿ~ ( ಎಸ್. ಜಗನ್ನಾಥ ಪ್ರಕಾಶ್) ಲೇಖನ ಕೃಷಿ ಹಾಗೂ ಕೃಷಿಕರ ಬಗ್ಗೆ ಗಾಂಧೀಜಿಯವರ ಮನೋಭಾವವನ್ನು ಸಮರ್ಥವಾಗಿ ತಿಳಿಸಿಕೊಟ್ಟಿತು.
-ಮ.ಸಾ. ತೊದಲಬಾಗಿ, ಬಬಲೇಶ್ವರ

ಗಾಂಧಿ ಕುರಿತ ಮುಖಪುಟ ಲೇಖನ ವಿಚಾರದ ಒರೆಗಲ್ಲಿಗೆ ಹಚ್ಚುವಂತಹದ್ದು. ವಿದ್ಯಾರ್ಥಿಗಳಲ್ಲಿ ಗಾಂಧಿಯನ್ನು ಕಂಡ ಮೇಷ್ಟ್ರು ನಿಜಕ್ಕೂ ಅಪರೂಪ. ಗಾಂಧೀಜಿಯವರ ಬದುಕು ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಸುಲಭದ ಮಾತಲ್ಲ. ಬದಲಾದ ಈ ಜಮಾನದಲ್ಲಿ ಈ ಮೇಷ್ಟು ಭಿನ್ನ.
-ರಾಜಶೇಖರ ಎಸ್ ಗುಬ್ಬಿ, ಮನಗೂಳಿ (ಬಿಜಾಪುರ ಜಿಲ್ಲೆ)

`ಬತ್ತಿಯ ಬೆಂಬತ್ತಿ!~ (ಸೆ.30, ಲೇ: ಜಿ. ಎನ್. ಅಶೋಕವರ್ಧನ) ಬರಹ ವಾಸ್ತವಕ್ಕೆ ಹತ್ತಿರವಾಗಿತ್ತು. ಇನ್ನೂ ವಿದ್ಯುತ್ ಸಂಪರ್ಕ ಬಾರದ ನಮ್ಮ ಮನೆಯ ಸಂಗತಿಯನ್ನೇ ಅವರು ಬರೆದಿದ್ದಾರೆ ಅನ್ನಿಸಿತು. ಚಿಮಣಿ ಮತ್ತು ಬುಡ್ಡಿ ದೀಪವನ್ನು ಶುಚಿಗೊಳಿಸುವ ಹಾಗೂ ಅದಕ್ಕೆ ಎಣ್ಣೆ ಎರೆಯುವ ವಿಷಯದಲ್ಲಿ ನಾವು ಗಂಡ-ಹೆಂಡತಿ ನಿತ್ಯ ಜಗಳ ಮಾಡುತ್ತೇವೆ. ಒಮ್ಮಮ್ಮೆ ಜಗಳ ತಾರಕಕ್ಕೆ ಏರಿ ನಮ್ಮಿಬ್ಬರಲ್ಲಿ ಯಾರೂ ಎಣ್ಣೆ ಎರೆಯದೆ ಇಡೀ ರಾತ್ರೆ ಕತ್ತಲಲ್ಲೇ ಕಳೆದದ್ದೂ ಇದೆ. ಈ ಲೇಖನ ಓದಿ ಬುಡ್ಡಿ ದೀಪದ ಬಗ್ಗೆ ನನ್ನ ಅನುಭವವನ್ನೂ ಬರೆಯಬೇಕು ಅನಿಸಿದೆ.
-ಸಹನಾ ಕಾಂತಬೈಲು, ಬಾಲಂಬಿ

ವರ್ತಮಾನದ ತಲ್ಲಣಗಳಿಗೆ ಸಂವೇದಿಯಾಗಿರುವ `ಎರಡು ವಚನಗಳು~ (ಕವಿ: ಡಾ.ಚಂದ್ರಶೇಖರ ಕಂಬಾರ) 12ನೇ ಶತಮಾನದ ಶರಣರ ಆಶಯ ಪ್ರತಿಧ್ವನಿಸಿದರೂ ಬತ್ತಲಾದರೂ ಬಯಲು ಸಿಗದು ಎಂಬ ಹೊಸ ಸತ್ಯ ಬಿಂಬಿಸುವಂತಿದೆ.
-ಮಲ್ಲಿಕಾರ್ಜುನ ಹುಲಗಬಾಳಿ, ಬನಹಟ್ಟಿ

`ಕಣ್ಣೇ ಕ್ಯಾಮೆರಾ ಆದಾಗ~ (ಲೇ: ಕೃಷ್ಣಾನಂದ ಕಾಮತ್) ಲೇಖನ ಬಹಳ ಸೊಗಸಾಗಿತ್ತು. ಕಾಮತರ ಪುಸ್ತಕಗಳ ಸಂಗ್ರಹ ನನ್ನ ಬಳಿ ಇದೆ. ನಾನು ಅವರ ಅಭಿಮಾನಿ. ತಿಳಿ ಹಾಸ್ಯದೊಂದಿಗೆ ಪಕ್ಷಿ ಲೋಕ ಅನಾವಣರಗೊಳಿಸುತ್ತಿದ್ದ ಅವರ ಶೈಲಿ ಅನನ್ಯ.
-ಜಾಹ್ನವಿ ಭಾರದ್ವಾಜ್, ಕೆ.ಆರ್. ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT