ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದುಗರ ಪತ್ರ

Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ಆರೋಗ್ಯಕರ ಸಮಾಜಕ್ಕಾಗಿ ಉತ್ತಮ ಸಾರ್ವಜನಿಕ ಶಿಕ್ಷಣ’ -ಅನುರಾಗ್‌ ಬೆಹರ್ ಅವರೊಂದಿಗಿನ ಎನ್.ಎ.ಎಂ. ಇಸ್ಮಾಯಿಲ್ ಅವರ ಸಂದರ್ಶನ (ನ.24) ಸಂದರ್ಭೋಚಿತ. ಪ್ರಾಥಮಿಕ, ಪ್ರೌಢಶಿಕ್ಷಣದಲ್ಲಿ ಖಾಸಗಿ ಶಾಲೆಗಳ ವ್ಯಾಮೋಹ ನಮ್ಮ ಸಮಾಜದಲ್ಲಿ ಒಂದು ಪಿಡುಗಿದ್ದಂತೆ. ಖೇದದ ವಿಷಯವೆಂದರೆ ಪ್ರಾಥಮಿಕ ಶಾಲಾ ಶಿಕ್ಷಕಿಯಾದ ನಾನೂ ಕೂಡ ಸರ್ಕಾರಿ ಶಾಲೆಗೆ ನನ್ನ ಮಕ್ಕಳನ್ನು ಸೇರಿಸುವ ಧೈರ್ಯ ಮಾಡಲಾರೆ. ಕೇವಲ ಶಾಲೆಗಳ ಭೌತಿಕ ಸ್ವರೂಪವಾಗಲೀ ಶಿಕ್ಷಕರ ಸಾಮರ್ಥ್ಯ ಆಸಕ್ತಿಗಳಾಗಲೀ ಸಮಾಜದ ಈ ಮನೋಭಾವ ಬದಲಾಯಿಸಲು ಸಾಧ್ಯವಿಲ್ಲ.

ಅನುರಾಗ್ ಅವರು ಹೇಳುವಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಇಡೀ ವ್ಯವಸ್ಥೆಯ ಕೊನೆಯ ಕೊಂಡಿಯಾಗಿರುವುದನ್ನು ತಪ್ಪಿಸಬೇಕು. ಶೈಕ್ಷಣಿಕ ಸ್ತರದಲ್ಲಿ ಮುಖ್ಯ ಸ್ಥಾನ ಹಾಗೂ ಆಕರ್ಷಕ ವೇತನ ದೊರೆತಲ್ಲಿ ಪೋಷಕರು ಕುತೂಹಲಕ್ಕೆ ಆದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡಬಹುದು. ಇಡೀ ದಿನ ದೇಹ ಮತ್ತು ಮನಸ್ಸನ್ನು ದಂಡಿಸಿ ಮಕ್ಕಳೊಂದಿಗೆ ಮಕ್ಕಳಾಗುವ ನಮ್ಮಂಥವರು ಕೆಲವೊಮ್ಮೆ ಪ್ರಾಥಮಿಕ ಶಾಲಾ ಶಿಕ್ಷಕ/ಕಿ ಎಂದು ಹೇಳಿಕೊಳ್ಳಲು ಹಿಂಜರಿಯುವಂಥ ಸ್ಥಿತಿ ಇದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಶಿಕ್ಷಕರನ್ನು ಸುಧಾರಿಸುವತ್ತ ಸರ್ಕಾರ ಮನಸ್ಸು ಮಾಡಲಿ ಎಂಬುದೇ ನನ್ನ ಆಶಯ.
–ಶ್ರೀಲಕ್ಷ್ಮಿ, ಶಿವಮೊಗ್ಗ

ಅಪ್ಪಟ ಪರಿಸರ ಪ್ರೇಮಿ, ಪರಿಸರ ಕಾರ್ಯಕರ್ತ ಡಿ.ವಿ. ಗಿರೀಶ್‌ ಅವರ ಬಗೆಗಿನ ಡಿ.ಎಂ. ಘನಶ್ಯಾಮ್‌ ಅವರ ಬರಹ ವಿಶಿಷ್ಟವಾಗಿದೆ. ಸರ್ಕಾರದ ಬಗ್ಗೆ ಗಿರೀಶರು ಖಿನ್ನರಾಗುವ ಹಾಗೆ ನಮಗೂ ಬೇಸರವಾಗುತ್ತದೆ. ಮೂಲತಃ ಕಡೂರು ಬಳಿಯ ಹಳ್ಳಿಯವಳು ನಾನು. ನನ್ನ ಭಾಗಕ್ಕೂ ನಗದಿಯಾತ್‌ ಕಾವಲು 20 ಎಕರೆ ಇದೆ. ಕಾವಲುಗಳನ್ನೆಲ್ಲಾ ಸವರಿ ಕೃಷಿಭೂಮಿಯಾಗಿ ಪರಿವರ್ತಿಸಿದ್ದಾರೆ. ಬರೀ ನಾವೇ ತಿಂದರೆ ಹೇಗೆ? ಎಂದು ಈ ವರ್ಷದಿಂದ ಆ ಜಾಗವನ್ನು ಗೋಮಾಳಕ್ಕಾಗಿ ಬಿಟ್ಟಿದ್ದೇವೆ.

ಸರ್ಕಾರ ಕನಿಷ್ಠ 5 ವರ್ಷ ಕಾಡಿಗೆ ಯಾರನ್ನೂ ಬಿಡದೆ ನಿರ್ಬಂಧಿಸಿದರೆ ಒಳಿತು. ಪ್ರವಾಸೋದ್ಯಮದಿಂದ ಬರುವ ಆದಾಯ ತಪ್ಪಬಹುದು. ಆದರೆ ಅದಕ್ಕಿಂತ ಮಿಗಿಲಾಗಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಲಕ್ಷಾಂತರ ಜನರ ಆರೋಗ್ಯ ಸುಧಾರಿಸುವ ಅರಣ್ಯ ಉಳಿಯುವುದಲ್ಲವೇ?
–ಶ್ರೀಲತಾ ಜಗದೀಶ್‌, ಬೆಂಗಳೂರು

ಕೋಡಿಬೆಟ್ಟು ರಾಜಲಕ್ಷ್ಮಿ ಅವರು ಪರಿಚಯಿಸಿದ ‘ಧರ್ಮಾತೀತ ದಾಂಪತ್ಯ’ದ ಶಫೀಕುದ್ದೀನ್‌–ಶಬಾನಾರ ಕುರಿತ ಲೇಖನ ಹೃದಯಂಗಮ. ನನ್ನಂಥವನ ಬಹುದಿನಗಳ ಒಂದು ಅಪೇಕ್ಷೆ–ನಿರೀಕ್ಷೆ ಸಫಲಗೊಳಿಸಿರುವ ಉದಾಹರಣೆ ಇದು. ನೃತ್ಯ–ನಾಟಕ (ಅಭಿನಯ), ಸಂಗೀತ ಕಲೆಗಳು ಧರ್ಮದ ಭಿತ್ತಿಯ ಮೇಲೆಯೇ ಬೆಳೆದು ಬಂದು ‘ಸಂಪ್ರದಾಯ’ವಾಗಿ ಮಾತ್ರ ಉಳಿದಾಗ ಪರ ಮತದಲ್ಲಿ ಹುಟ್ಟಿದವರಿಗೆ ಪರಕೀಯವಾಗಿ ಹೋಗುತ್ತವೆ. ಆದರೆ ಧರ್ಮದ ನೈಜತೆಯೆಂದರೆ ಅದು ವ್ಯಕ್ತಿ ಪ್ರತಿಭೆಯನ್ನು ಹೊಸತುಗೊಳಿಸುವ ಕಡೆಗೆ ಪ್ರೇರಣೆ ಕೊಡುತ್ತಿರುವುದು. ಶಫೀಕುದ್ದೀನರು ಭರತನಾಟ್ಯದಂತಹ ಆತ್ಮದ ಅಭಿವ್ಯಕ್ತಿ ಕಲೆಯನ್ನು ರೂಢಿಸಿಕೊಂಡೂ, ತಮ್ಮ ಮುಸ್ಲಿಂ ಧರ್ಮದ ಆಚರಣೆಯನ್ನು ತ್ರಿಕರಣಪೂರ್ವಕ ನಡೆಸಬಲ್ಲವರಾಗಿದ್ದಾರೆ. ಈ ಮುಸ್ಲಿಂ ದಂಪತಿಯ ಕಲಾಜೀವನ ಜಾತ್ಯತೀತ ಸಂಸ್ಕೃತಿ ಬೆಳೆಸುವವರಿಗೆ ಉನ್ನತ ಮಾದರಿಯಾಗಿದೆ. ಇಂಥವರ ಶೋಧನೆ ಆಗಲಿ, ಲೇಖನಗಳು ಬರುತ್ತಿರಲಿ.
–ಸರ್ವಜಿತ, ನವನಗರ ಹುಬ್ಬಳ್ಳಿ

‘ಚಂದಕ್ಕಿಮಾಮ’ ಮಕ್ಕಳ ಸಂಚಿಕೆಯಲ್ಲಿನ ಸಿದ್ದರಾಮಯ್ಯನವರ ಅನಿಸಿಕೆ ಕುರಿತಂತೆ ಸಂಪಾಜೆಯ ವಿದ್ಯಾರ್ಥಿ ಆದರ್ಶ ಕಾಂತಬೈಲು ಪತ್ರ (ನ.24) ಓದಿದೆ. ಅದಕ್ಕೆ ನನ್ನ ಪ್ರತಿಕ್ರಿಯೆ.

‘‘ಪ್ರಿಯ ಆದರ್ಶ, ಮುಖ್ಯಮಂತ್ರಿಗಳ ಆಶಯವನ್ನು ನೀನು ತಪ್ಪಾಗಿ ಗ್ರಹಿಸಿದ್ದೀಯಾ. ನಿನ್ನ ವಯಸ್ಸು ಇನ್ನೂ ತೀರಾ ಪುಟ್ಟದು. ಆದುದರಿಂದ ಈ ತಪ್ಪು ಗ್ರಹಿಕೆ ಆಗಿದೆ ಅಷ್ಟೇ. ಸಿದ್ದರಾಮಯ್ಯನವರೂ ಸಹ ಆಗಿನ ಕಾಲದಲ್ಲೇ, ನಿನ್ನ ವಯಸ್ಸಿನಲ್ಲೇ ‘ಅಂಥಾ’ ಕನಸುಗಳನ್ನು ಕಾಣಲು ಸಾಧ್ಯವಿರಲಿಲ್ಲ, ನಿಜ. ಅದಕ್ಕೆ ಕೇವಲ ‘ಕನ್ನಡ ಮಾಧ್ಯಮ’ ಒಂದೇ ಕಾರಣವಾಗಿರಲಿಲ್ಲ. ಅದಕ್ಕೆಲ್ಲಾ ಬೇರೆ ಬೇರೆ ಕಾರಣಗಳೂ ಇದ್ದವು. ಇವೆಲ್ಲಾ ಕಾಲಕ್ರಮೇಣ ನಿನಗೇ ಮುಂದೆ ಅರ್ಥವಾಗುತ್ತವೆ.

ಚಿಂತಿಸಬೇಡ. ಆದರೆ ಸಿದ್ದರಾಮಯ್ಯನವರು ಸ್ವತಃ ತಾವು ಒಂಬತ್ತನೇ (ಒತ್ತಕ್ಷರ ಗಮನಿಸು) ತರಗತಿಯ ವಿದ್ಯಾರ್ಥಿಯಾಗಿದ್ದಾಗ ಇದ್ದಾಗಿದ್ದುದಕ್ಕಿಂತ ನೀನು ಹೆಚ್ಚಿಗೆ ಬುದ್ಧಿವಂತನಿರುವಂತೆ ಮೇಲ್ನೋಟಕ್ಕೆ ಖಂಡಿತಾ ಅನಿಸುತ್ತಿದೆ! ಯಾರಿಗೆ ಗೊತ್ತು, ಆ ಭಗವಂತನ ಕೃಪೆ ಇದ್ದರೆ ನಾವೆಲ್ಲರೂ ಸರ್ಕಾರದ ಸೇವೆಯಿಂದ ನಿವೃತ್ತರಾಗುವುದರ ಒಳಗೆ ನೀನು ಪ್ರಥಮ ಸೋಪಾನವಾಗಿ ನಮ್ಮೆಲ್ಲರ ಸಚಿವರೇ ಆಗಬಹುದು! ನಾವೆಲ್ಲರೂ ಸರ್ಕಾರಿ ಶಾಲೆಗಳಲ್ಲಿ, ಕನ್ನಡ ಮಾಧ್ಯಮಗಳಲ್ಲಿ ಓದಿಯೇ ಮುಂದೆ ಬಂದಿರುವವರು. ನನ್ನ ತಮ್ಮ ಓರ್ವ ಐ.ಪಿ.ಎಸ್‌. ಅಧಿಕಾರಿ. ನಾನು ಓರ್ವ ಡೆಪ್ಯುಟಿ ಕಮೀಷನರ್‌, ನಮ್ಮ ತಂಗಿ ಓರ್ವ ರೋಟರಿ ಪಿಎಚ್‌ಎಫ್‌. ಅಂತರರಾಷ್ಟ್ರೀಯ ರೋಟರಿ ಮಹಿಳೆ. ನಮ್ಮ ತಂದೆ ಚಿನ್ನದ ಪದಕ ವಿಜೇತ ಸರ್ಜನ್‌, ನೀನೂ ನಮ್ಮಂತೆಯೇ ಏಕಾಗಬಾರದು? ಖಂಡಿತಾ ಆಗಿಯೇ ಆಗುತ್ತೀಯಾ, ಆದುದರಿಂದ ಚಿಂತೆ ಬಿಡು. ನೀನಷ್ಟೇ ಅಲ್ಲ; ಎಲ್ಲಾ ಮಕ್ಕಳೂ ಚಿಂತೆ ಬಿಡಿ. ಚೆನ್ನಾಗಿ ಓದಿ, ಅಷ್ಟೆ. ಇಷ್ಟನ್ನು ಮಾತ್ರವೇ ಈ ಸಮಾಜ ನಿಮ್ಮಿಂದ ಅಪೇಕ್ಷಿಸುತ್ತದೆ!’’.
–ಡಾ. ಎಸ್‌.ಕೆ. ಕುಮಾರ್‌, ಗುಲ್ಬರ್ಗಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT