ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲೇಕಾರ್ ಅವಧಿ ವಿಸ್ತರಣೆ: ಕೋರ್ಟ್ ಅಸಮಾಧಾನ

Last Updated 17 ಫೆಬ್ರುವರಿ 2011, 17:10 IST
ಅಕ್ಷರ ಗಾತ್ರ

ಬೆಂಗಳೂರು:ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಅಧ್ಯಕ್ಷರಾಗಿ ಒಂದೇ ಒಂದು ಸಭೆ ನಡೆಸದ ಹಾವೇರಿ ಶಾಸಕ ನೆಹರು ಓಲೇಕಾರ್ ಅವರ ಅಧಿಕಾರಾವಧಿಯನ್ನು ಎರಡನೇ ಬಾರಿಗೆ ವಿಸ್ತರಿಸಿರುವ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಗುರುವಾರ  ಅಸಮಾಧಾನ ವ್ಯಕ್ತಪಡಿಸಿತು.

‘ಕೆಲಸದ ಬಗ್ಗೆ ಬದ್ಧತೆ ಇರುವವರನ್ನು ಇಂತಹ ಸ್ಥಾನಕ್ಕೆ ನೇಮಿಸಿ. ಈ ಶಾಸಕರು ಬಹಳ ಕೆಲಸದ ಒತ್ತಡದಲ್ಲಿ ಇರುವಂತೆ ತೋರುತ್ತಿದೆ. ಇಂಥವರನ್ನು ಏಕೆ ನೇಮಿಸಬೇಕು, ಅದು ಕೂಡ ಅಧ್ಯಕ್ಷರಾಗಿ ಒಂದೇ ಒಂದು ಸಭೆ ನಡೆಸದ ಮೇಲೆ, ಅದನ್ನು ತಿಳಿದಿದ್ದೂ ಸರ್ಕಾರ ಅವರನ್ನೇ ಮುಂದುವರಿಸಿರುವ ಔಚಿತ್ಯವೇನು’ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿರುವ  ವಿಭಾಗೀಯ ಪೀಠ ಪ್ರಶ್ನಿಸಿತು.

‘ಇವರ ಮರುನೇಮಕ ಕುರಿತು ಸರ್ಕಾರ ಇನ್ನೊಮ್ಮೆ ಪರಿಶೀಲನೆ ಮಡುವ ಅಗತ್ಯವಿದೆ. ಇದು ಕೋರ್ಟ್ ಮಧ್ಯೆ ಪ್ರವೇಶಿಸುವ ವಿಷಯವಲ್ಲ. ಆದರೆ ಸರ್ಕಾರ ಏನೂ ಕ್ರಮ ತೆಗೆದುಕೊಳ್ಳದೇ ಹೋದರೆ, ಕೋರ್ಟ್ ಪ್ರವೇಶ ಮಾಡಬೇಕಾಗುತ್ತದೆ’ ಎಂದು ನ್ಯಾಯಮೂರ್ತಿಗಳು ಹೇಳಿದರು.

ಅರ್ಜಿದಾರರ ಆರೋಪ: 2007ರ ಫೆ.2ರಂದು ಪ್ರಥಮ ಬಾರಿಗೆ ನೇಮಕಗೊಂಡಿದ್ದ ಓಲೇಕಾರ್ ಅವರ ಅವಧಿ 2010ರ ಫೆಬ್ರುವರಿಗೆ ಮುಗಿದಿದೆ. ಈ ಅವಧಿಯಲ್ಲಿ ಅವರು ಒಂದೇ ಒಂದು ಸಭೆ ನಡೆಸಿಲ್ಲ.

ಆದರೂ ಕೂಡ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ ಎಂದು ದೂರಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದೆ. ಇವರು ತಮ್ಮ ಕ್ಷೇತ್ರವಾಗಿರುವ ಹಾವೇರಿಯಲ್ಲಿಯೇ ಹೆಚ್ಚಿನ ಸಮಯ ಕಳೆಯುವ ಕಾರಣ, ಆಯೋಗದತ್ತ ಹೆಚ್ಚಿನ ಗಮನ ಕೊಡುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಬಗ್ಗೆ ಹೆಚ್ಚಿನ ಕಾಳಜಿ ಇರುವವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ಆದೇಶಿಸುವಂತೆ ಅವರು ಕೋರಿದ್ದಾರೆ.
ಇದನ್ನು ಪೀಠ ಗಂಭೀರವಾಗಿ ಪರಿಗಣಿಸಿತು. ‘ಇದು ಬಹಳ ಸೂಕ್ಷ್ಮವಾದ ವಿಚಾರ. ಈ ರೀತಿಯ ಕ್ರಮದಿಂದ ಸಾರ್ವಜನಿಕರು ಕಷ್ಟ ಅನುಭವಿಸುವುದನ್ನು ನಾವು ಸಹಿಸಲಾರೆವು’ ಎಂದು ನ್ಯಾಯಮೂರ್ತಿಗಳು ಇದೇ ವೇಳೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT