ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲೈಕೆ, ಅಸಮಾಧಾನ, ಶಾಂತಿಯುತ

Last Updated 11 ಜನವರಿ 2012, 9:05 IST
ಅಕ್ಷರ ಗಾತ್ರ

ಕೋಲಾರ: ತೀವ್ರ ಕುತೂಹಲ ಕೆರಳಿಸಿರುವ ತಾಲ್ಲೂಕಿನ ವೇಮಗಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರ, ಮುಳಬಾಗಲು ತಾಲ್ಲೂಕಿನ ಬೂಡಿದೇರು ಕ್ಷೇತ್ರ ಮತ್ತು ಮಾಲೂರು ಪುರಸಭೆ 5ನೇ ವಾರ್ಡ್‌ನ ಉಪ ಚುನಾವಣೆ ಮತದಾನ ಮಂಗಳವಾರ ಶಾಂತಿಯುತವಾಗಿ ನಡೆಯಿತು.

ಅಲಲ್ಲಿ ಮತದಾರರ ನಡುವೆ, ಮತದಾರರು-ಪೊಲೀಸರ ಮಧ್ಯೆ ವಾಗ್ವಾದ ಹೊರತುಪಡಿಸಿದರೆ ಚುನಾವಣೆ ಶಾಂತಿಯುತವಾಗಿತ್ತು. ಬೆಳಿಗ್ಗೆ 7 ಗಂಟೆಗೆ ಆರಂವಾದ ಮತದಾನ 11 ಗಂಟೆವರೆಗೂ ನೀರಸವಾಗಿತ್ತು. ನಂತರ ಚುರುಕುಗೊಂಡಿತು. ಜಿ.ಪಂ. ಕ್ಷೇತ್ರದಲ್ಲಿ ಒಟ್ಟಾರೆ ಶೇ.84.67 ಮತದಾನವಾಗಿದೆ.

ವೇಮಗಲ್: ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು, ಜಿಲ್ಲಾ ಉಸ್ತುವಾರಿ ಸಚಿವ ವರ್ತೂರು ಪ್ರಕಾಶ್ ಹಾಗೂ ಡಿ.ಆರ್.ಶಿವಕುಮಾರಗೌಡ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು, ಅವರ ಬೆಂಬಲಿಗರು ಮತಗಟ್ಟೆಗಳ ಸಮೀಪ ಬೆಳಿಗ್ಗೆಯಿಂದಲೇ ಮತದಾರರನ್ನು ಓಲೈಸುತ್ತಿದ್ದರು. ಎಲೆ-ಅಡಿಕೆ ನೀಡಿ ಬೆಂಬಲಿಗರು ಮತ ಯಾಚಿಸುತ್ತಿದ್ದರು. ಹಿಂದುಳಿದ ವರ್ಗದ ಎ ಗುಂಪಿನ ಮಹಿಳೆಗೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಯಾರೇ ಗೆದ್ದರೂ ಜಿ.ಪಂ. ಅಧ್ಯಕ್ಷ ಸ್ಥಾನದ ಪ್ರಮುಖ ಅಭ್ಯರ್ಥಿಯಾಗುವ ಅವಕಾಶವೂ ಇರುವುದರಿಂದ ಚುನಾವಣೆ ರಂಗೇರಿತ್ತು.

ಮತಯಂತ್ರ ದೋಷ: ತಾಲ್ಲೂಕಿನ ಸಿಂಗೇಹಳ್ಳಿಯಲ್ಲಿ  ಮತಯಂತ್ರ ದೋಷದಿಂದಾಗಿ ಮತದಾನ ಸುಮಾರು ಅರ್ಧ ಗಂಟೆ ತಡವಾಗಿ ಆರಂಭವಾಯಿತು. ವಿಷಯ ತಿಳಿದೊಡನೆ ಸ್ಥಳಕ್ಕೆ ಉಪವಿಭಾಗಾಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ, ತಹಸೀಲ್ದಾರ್ ಡಾ.ದಯಾನಂದ್ ಭೇಟಿ ನೀಡಿ ಪರಿಶೀಲಿಸಿ ಸುಗಮ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. ಕೆಲ ಮತಗಟ್ಟೆಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಸಾಂಪ್ರದಾಯಿಕವಾಗಿ ತಾಂಬೂಲ ನೀಡುತ್ತಿದ್ದರೆ ಮತ್ತೆ ಕೆಲವು ಕಡೆಗಳಲ್ಲಿ ಹಣ ಹಂಚಿಕೆ ಮಾಡುತ್ತಿದ್ದುದು ಕಂಡು ಬಂತು.

ವಾಗ್ವಾದ: ಕುರುಗಲ್‌ನಲ್ಲಿ ಚುನಾವಣಾ ಏಜೆಂಟರನ್ನು ಪೊಲೀಸರು ನಿಂದಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಕೆಲ ಕಾಲ ಪ್ರತಿಭಟಿಸಿದ ಘಟನೆಯೂ ನಡೆಯಿತು. ಎಲ್ಲರನ್ನೂ ಪೊಲೀಸರು ಅನವಶ್ಯವಾಗಿ ಮತಗಟ್ಟೆಯೊಳಕ್ಕೆ ಬಿಡುತ್ತಿದ್ದಾರೆ ಎಂದು ಆರೋಪಿಸಿದರು.

ಅದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಾಗ್ವಾದವೂ ನಡೆಯಿತು. ಮತಗಟ್ಟೆ ಒಳಗಿನಿಂದ ಹೊರಕ್ಕೆ ಪದೇಪದೆ ಓಡಾಡುತ್ತಿದ್ದ ಏಜೆಂಟನನ್ನು ಪ್ರಶ್ನಿಸಿದ್ದೇ ತಪ್ಪಾಯಿತು ಎಂದು ಪೊಲೀಸರು ಕೂಡ ಅಸಮಾಧಾನ ವ್ಯಕ್ತಪಡಿಸಿದರು.

ಸುದರ್ಶನ್ ಮತದಾನ: ವೇಮಗಲ್ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 187 ನೇ ಮತಗಟ್ಟೆಯಲ್ಲಿ ವಿಧಾನ ಪರಿಷತ್ ಸದಸ್ಯ ವಿ.ಆರ್. ಸುದರ್ಶನ್ ಮತದಾನ ಮಾಡಿದರು.

ಕ್ಷೇತ್ರದಲ್ಲಿ ಒಟ್ಟು 27,843 ಮತದಾರರಿದ್ದಾರೆ, ಈ ಪೈಕಿ 14,278 ಪುರುಷರು ಮತ್ತು 13,565 ಮಹಿಳೆಯರಿದ್ದಾರೆ. ಒಟ್ಟು 42 ಮತಗಟ್ಟೆಗಳಲ್ಲಿಯೂ ಸುಗಮವಾಗಿ ಮತದಾನ ನಡೆಸಲು ಅವಕಾಶವಾಗುವಂತೆ 168 ಮಂದಿ ಮತದಾನ ಸಿಬ್ಬಂದಿ ಹಾಗೂ 84 ಪೊಲೀಸರನ್ನು ನಿಯೋಜಿಸಲಾಗಿತ್ತು.

ಶಾಂತಿಯುತ ಮತದಾನ
ಮುಳಬಾಗಲು: ತಾಲ್ಲೂಕಿನ ಬೂಡದೇರು ತಾಲ್ಲೂಕು ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಮಂಗಳವಾರ ಮರುಚುನಾವಣೆ ಶಾಂತಿಯುತವಾಗಿ ನಡೆಯಿತು. ಶೇ.81.71 ಮತದಾನವಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಬ್ಬರೇ ಕಣದಲ್ಲಿದ್ದುದರ ಪರಿಣಾಮ ಮತಗಟ್ಟೆಗಳ ಸಮೀಪ ಈ ಎರಡೂ ಪಕ್ಷಗಳ ಮುಖಂಡರು ಹೆಚ್ಚು ಕಂಡು ಬಂದರು. ಅದರಲ್ಲೂ ಜೆಡಿಎಸ್ ಮುಖಂಡರ ಸಂಖ್ಯೆ ಹೆಚ್ಚಿತ್ತು. ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿಲ್ಲದ ಪರಿಣಾಮ ಆ ಪಕ್ಷದ ಮುಖಂಡರು ವಿರಳವಾಗಿದ್ದರು.

ಕಳೆದ ಬಾರಿ ಚುನಾವಣೆ ನಡೆದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿ ನಡೆದಿತ್ತು. ಜೆಡಿಎಸ್‌ನ ಚೌಡೇಗೌಡರು ಹೆಚ್ಚಿನ ಜನಬಲದಿಂದ ಆಯ್ಕೆಯಾಗಿದ್ದರು. ನಂತರ ಅವರು ಕೊಲೆಯಾಗಿದ್ದರು. ಅದೇ ಉಪಚುನಾವಣೆಗೆ ಕಾರಣವಾಯಿತು. ಜೆಡಿಎಸ್‌ನಿಂದ ಚೌಡೇಗೌಡರ ಪತ್ನಿ ಉಮಾದೇವಿ ನಾಮಪತ್ರ ಸಲ್ಲಿಸಿದ ನಂತರ ಅವರು ಅವಿರೋಧವಾಗಿ ಆಯ್ಕೆಯಾಗಲು ಸಹಾಯವಾಗುವಂತೆ  ಕಾಂಗ್ರೆಸ್  ತನ್ನ ಅಭ್ಯರ್ಥಿಯನ್ನು ಕೊನೆಯ ಗಳಿಗೆಯಲ್ಲಿ ಕಣದಿಂದ ವಾಪಸು ಪಡೆಯಿತು. ಆದರೆ ಬಿಜೆಪಿ ಮಾತ್ರ ತನ್ನ ಅಭ್ಯರ್ಥಿ ಎಸ್.ನಾರಾಯಣಗೌಡರನ್ನು ಕಣದಲ್ಲಿ ಉಳಿಸಿತು.

ಜೆಡಿಎಸ್‌ನ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ಯಾಮೇಗೌಡ, ರಾಜಗೋಪಾಲ್, ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಎಸ್.ಶ್ರೀನಿವಾಸರೆಡ್ಡಿ, ಪಿ.ಶಿವರಾಮರೆಡ್ಡಿ, ಆರ್.ಎಂ.ಸಿ. ಮಾಜಿ ಅಧ್ಯಕ್ಷ ಕುರುಡುಮಲೆ ಮಂಜುನಾಥ್, ಸನ್ಯಾಸಪಲ್ಲಿ ರಾಜು,ರಾಮಾಂಜನೇಯಲು ಮತಗಟ್ಟೆಗಳ ಬಳಿ ತೆರಳಿ ಮತದಾರರನ್ನು ಓಲೈಸಿದರು.  ಕಾಂಗ್ರೆಸ್‌ನ ಕೆಲವು ಸ್ಥಳೀಯ ಮುಖಂಡರು ಕೂಡ ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದು ಗಮನ ಸೆಳೆಯಿತು. ಬಿಜೆಪಿಯ ಕೆಲವೇ ಮುಖಂಡರು ಕ್ಷೇತ್ರದಲ್ಲಿ ಕಂಡು ಬಂದರು.ಜಿಲ್ಲೆಯ ಶ್ರೀನಿವಾಸಪುರದ ರಾಯಲ್‌ಪಾಡ್ ಇತರೆ ಕಡೆಗಳಿಂದಲೂ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.  11 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. 44 ಮತದಾನ ಸಿಬ್ಬಂದಿ ಮತ್ತು 66 ಪೊಲೀಸರು ಕರ್ತವ್ಯ ನಿರ್ವಹಿಸಿದರು.
 

ಮಾತಿನ ಚಕಮಕಿ
ಮಾಲೂರು: ಪಟ್ಟಣದ ಪುರಸಭೆ 5ನೇ ವಾರ್ಡ್‌ನಲ್ಲಿ ಮಂಗಳವಾರ ನಡೆದ ಉಪಚುನಾವಣೆಯಲ್ಲಿ ಗುಂಪುಗಳ ಮಧ್ಯೆ ಮಾತಿನ ಚಕಮಕಿ ಹೊರತುಪಡಿಸಿದರೆ ಶಾಂತಿಯುತ ಮತದಾನ ಆಯಿತು.

ಪಟ್ಟಣದ ಪುರಸಭೆ 5ನೇ ವಾರ್ಡ್‌ನ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಬೆಳಿಗ್ಗೆಯಿಂದಲೇ ಮತದಾರರನ್ನು ಓಲೈಸುತ್ತಿದ್ದರು. ರಾಮಕೃಷ್ಣ ವಿದ್ಯಾಪೀಠ ಶಾಲೆಯಲ್ಲಿ ಮತದಾನ ಕೇಂದ್ರ ಇತ್ತು. ಮಧ್ಯಾಹ್ನ 3ರ ಹೊತ್ತಿಗೆ ಶೇ. 90ರಷ್ಟು ಮತದಾನವಾಗಿತ್ತು.

ಮತ ಕೇಂದ್ರದಿಂದ  ನೂರು ಮೀಟರ್ ವ್ಯಾಪ್ತಿಯಲ್ಲಿ ಪ್ರತಿಬಂಧಕ ಆಜ್ಞೆ ಘೋಷಿಸಿದ್ದರೂ ಮತದಾರರನ್ನು ಮನವೊಲಿಸುವ ಪ್ರಯತ್ನ ಕಂಡುಬಂತು. ಮತದಾನ ಕೇಂದ್ರದಲ್ಲಿ ಒಬ್ಬ ಮತಗಟ್ಟೆ ಅಧಿಕಾರಿ ಜೊತೆಗೆ 3 ಮಂದಿ ಸಹಾಯಕಾಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಮತ ಎಣಿಕೆ ಜ.13 ರಂದು ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆಯಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT