ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲೈಕೆಯ ರಾಜಕೀಯ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಭಾರತೀಯ ಸಂಜಾತ ಲೇಖಕ ಸಲ್ಮಾನ್ ರಶ್ದಿಯವರ ಉದ್ದೇಶಿತ ಭಾರತ ಭೇಟಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಶುಕ್ರವಾರದಿಂದ ಜೈಪುರದಲ್ಲಿ ಆರಂಭವಾಗಲಿರುವ ಸಾಹಿತ್ಯ ಸಮ್ಮೇಳನಕ್ಕೆ ಅದರ ಸಂಘಟಕರು ಅವರನ್ನು ಆಹ್ವಾನಿಸಿರುವುದೇ ವಿವಾದದ ಕೇಂದ್ರ.
 
ರಶ್ದಿ ಅವರನ್ನು ಭಾರತಕ್ಕೆ ಬರದಂತೆ ಮಾಡಬೇಕೆಂದು ಮುಸ್ಲಿಮರ ಬಹುಮುಖ್ಯ ಧಾರ್ಮಿಕ ಸಂಸ್ಥೆ ದಾರುಲ್ ಉಲೂಮ್ ದೇವ್‌ಬಂದ್ ಒತ್ತಾಯಿಸಿರುವುದರಿಂದ ಕಾಂಗ್ರೆಸ್ ನೇತೃತ್ವದ ಕೇಂದ್ರ ಹಾಗೂ ರಾಜಸ್ತಾನದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರಗಳು ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡಿವೆ.

ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯಲಿರುವ ಈ ಸಂದರ್ಭದಲ್ಲಿ ಸರ್ಕಾರ ಆ ವಿಚಾರದಲ್ಲಿ ದಿಟ್ಟವಾದ ನಿಲುವನ್ನು ತಾಳಲು ಹಿಂದೇಟು ಹಾಕುತ್ತಿದೆ.

ಉತ್ತರಪ್ರದೇಶದಲ್ಲಿ ಶೇ 18ರಷ್ಟು ಮುಸ್ಲಿಮ್ ಮತದಾರರಿದ್ದಾರೆ. ಮುಸ್ಲಿಮ್ ಮತದಾರರನ್ನು ಓಲೈಸಲೆಂದೇ ಕಾಂಗ್ರೆಸ್ ಪಕ್ಷ ದೇವ್ ಬಂದ್ ಒತ್ತಾಯದ ವಿರುದ್ಧ ಮಾತನಾಡಲು ಅಂಜುತ್ತಿದೆ.

ಕಾನೂನು ಸುವ್ಯವಸ್ಥೆ ಮುಂತಾದ ಸಮಸ್ಯೆ ಮುಂದೊಡ್ಡಿ ರಶ್ದಿ ಅವರು ಸಮ್ಮೇಳನಕ್ಕೆ ಬರದಂತೆ ಮಾಡುವ ಹುನ್ನಾರವನ್ನು ರಾಜ್ಯಸರ್ಕಾರ ಮಾಡುತ್ತಿರುವಂತಿದೆ.  ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡೇ ಕೇಂದ್ರ ಸರ್ಕಾರ ಇತ್ತೀಚೆಗೆ ಮುಸ್ಲಿಮರಿಗೆ ಮೀಸಲಾತಿ ಘೋಷಿಸಿತು.

ಈಗ ಆ ವಿಚಾರವನ್ನು ಚುನಾವಣೆ ಸಂದರ್ಭದಲ್ಲಿ ಪ್ರಸ್ತಾಪಿಸದಂತೆ ಚುನಾವಣೆ ಆಯೋಗ ತಡೆ ನೀಡಿದ್ದರೂ ಪರೋಕ್ಷವಾಗಿ ಆಮಿಷದ ಪ್ರಸ್ತಾಪ ಆಗುತ್ತಲೇ ಇದೆ. ಇದೀಗ ರಶ್ದಿ ಅವರ ವಾಕ್ ಸ್ವಾತಂತ್ರ್ಯವನ್ನೇ ಬಲಿಕೊಡಲು ಕಾಂಗ್ರೆಸ್ ಸಿದ್ಧವಾಗಿದೆ.
 
ಇಷ್ಟು ಕಾಲ ಮುಸ್ಲಿಮರ ಬಗ್ಗೆ ಇಲ್ಲದ ಪ್ರೀತಿ ಈಗ ಉಕ್ಕಿ ಹರಿಯುತ್ತಿದೆ. ಇದು ಮತ ಬ್ಯಾಂಕ್ ರಾಜಕೀಯವಲ್ಲದೆ ಮತ್ತೇನೂ ಅಲ್ಲ.  ಕಾಂಗ್ರೆಸ್ ಹೀಗೆ ಮುಸ್ಲಿಮ್ ಓಲೈಕೆಯ ರಾಜಕೀಯ ಮಾಡುತ್ತಿರುವುದು ಇದು ಮೊದಲೇನಲ್ಲ.

ಮುಸ್ಲಿಮರ ಧಾರ್ಮಿಕ ಭಾವನೆಗೆ ಆಘಾತ ಉಂಟುಮಾಡಿದ ಆರೋಪದ ಮೇಲೆ ರಶ್ದಿ ಅವರ `ಸಟಾನಿಕ್ ವರ್ಸಸ್~ ಕಾದಂಬರಿಯನ್ನು ರಾಜೀವ್ ಗಾಂಧಿ ಸರ್ಕಾರ 1988ರಲ್ಲಿಯೇ ನಿಷೇಧಿಸಿತ್ತು. ಆಗಲೂ ಲೇಖಕನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರ್ಕಾರ ಗೌರವಿಸಿರಲಿಲ್ಲ.

ಭಾರತದ ಸಂವಿಧಾನ ಧಾರ್ಮಿಕ ಸ್ವಾತಂತ್ರ್ಯ ನೀಡಿದಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಯೊಬ್ಬರಿಗೂ ನೀಡಿದೆ. ಧಾರ್ಮಿಕ ಸ್ವಾತಂತ್ರ್ಯವನ್ನು ಮುಂದಿಟ್ಟುಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಮಾಡುವುದು ಅಪಾಯಕಾರಿ.

ರಾಜಕೀಯ ಲಾಭಕ್ಕೋಸ್ಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಲಿಕೊಡುವಂಥ ಕೆಲಸವನ್ನು ಸರ್ಕಾರ ಮಾಡಬಾರದು. ರಶ್ದಿ ಅವರನ್ನು ದೇಶದೊಳಕ್ಕೆ ಬರದಂತೆ ತಡೆಯೊಡ್ಡಬೇಕೆಂಬ ಬೇಡಿಕೆ ಸಂವಿಧಾನವಿರೋಧಿಯಾದುದು ಎನ್ನುವುದನ್ನು ಸರ್ಕಾರ ದೇವ್‌ಬಂದ್ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಡಬೇಕು.
 
ರಶ್ದಿ ಅವರಿಗೆ ಎಲ್ಲ ರೀತಿಯ ರಕ್ಷಣೆ ನೀಡುವುದು ಮತ್ತು ಅವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಬಿಜೆಪಿಯೇನೂ ಕಾಂಗ್ರೆಸ್‌ಗಿಂತ ಭಿನ್ನವಲ್ಲ.

ಈಗಿನ ರಶ್ದಿ ವಿವಾದವನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಹಣಿದು ಚುನಾವಣೆಗಳಲ್ಲಿ ರಾಜಕೀಯ ಲಾಭ ಗಳಿಸುವ ಹುನ್ನಾರ ಬಿಜೆಪಿಯದ್ದು. ಧರ್ಮದ ಹೆಸರಿನಲ್ಲಿ ಕಲಾವಿದ ಎಂ.ಎಫ್. ಹುಸೇನ್ ಅವರನ್ನು ದೇಶಬಿಟ್ಟು ಹೋಗುವಂತೆ ಮಾಡಿದವರು ಬಿಜೆಪಿಯ ಬೆನ್ನೆಲುಬಾದ ಹಿಂದುತ್ವ ಮತಾಂಧರು ಎನ್ನುವುದನ್ನು ಮರೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT