ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಹೋ... ಕುಸುಮಭೋಜನ

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ರಸಾಸ್ವಾದ

ಅದು ಅಡುಗೆ ಮನೆಯೋ, ಹೂವಿನ ತೋಟವೋ ಎಂಬಷ್ಟು ಗೊಂದಲದಲ್ಲಿಯೇ ಒಳಗೆ ಕಾಲಿಟ್ಟಾಗ ಕಂಡದ್ದು ಬಾಣಸಿಗ ವಿಮಲ್. ತುಟಿಯಂಚಿನಲ್ಲಿ ನಗುತ್ತಾ ಕೋರಮಂಗಲದಲ್ಲಿರುವ `ಗ್ರ್ಯಾಂಡ್ ಮರ್‌ಕ್ಯುರೆ' ಹೋಟೆಲ್‌ನಲ್ಲಿ ಆಯೋಜಿಸಿದ್ದ ಒಂದು ದಿನದ ಕುಕ್ಕಿಂಗ್ ಡೆಮೋದಲ್ಲಿ ತಮ್ಮ ಕೈಚಳಕ ತೋರಿಸಲು ಕರೆದೊಯ್ದರು. ಹೂವಿನಿಂದ ಅಲಂಕಾರ ಮಾಡಿದ ಟೇಬಲ್ ಮುಂದೆ ಕೂರಿಸಿದಾಗ ಹಿತವಾದ ಹೂವಿನ ಸುಗಂಧಕ್ಕೆ ಮನಸ್ಸು ಮುದಗೊಂಡಿತ್ತು.

`ಹೂವಿನ ಬಗ್ಗೆ ನಿಮಗೆಷ್ಟು ಗೊತ್ತಿದೆ' ಎಂಬ ಸರಳವಾದ ಪ್ರಶ್ನೆ ಕೇಳಿದರು. `ಹೂವಿನಿಂದ ಔಷಧ ಮಾಡುತ್ತಾರೆ', `ಸುಗಂಧ ದ್ರವ್ಯ ಮಾಡುತ್ತಾರೆ' ಎಂಬ ಉತ್ತರಗಳು ಅಲ್ಲಿ ಬಂದವು. `ಹೂವಿನಿಂದ ನಾನು ನಿಮಗೆ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಾಡಿಕೊಡುತ್ತೇನೆ. ಅದೂ ತಿನ್ನಲು ಯೋಗ್ಯವಾದ ಹೂವುಗಳಿಂದ' ಎಂದು ವಿಮಲ್ ಹೇಳಿದಾಗ, ಅಲ್ಲಿದ್ದವರಲ್ಲಿ ಇನ್ನಷ್ಟು ಪ್ರಶ್ನೆಗಳು ಹುಟ್ಟಿದವು. `ಹೂವನ್ನು ತಿನ್ನುವುದಾ?' `ಹಸಿ ಹೂವಿನ ದಳವನ್ನು ಹೇಗೆ ತಿನ್ನುವುದು?' ಎಂದು ಮುಖಮುಖ ನೋಡಿಕೊಳ್ಳಲು ಶುರು ಮಾಡಿದರು. ಎಲ್ಲರ ಮುಖದ ಮೇಲಿನ ಪ್ರಶ್ನಾರ್ಥಕ ಭಾವವನ್ನು ಗುರುತಿಸಿದ ವಿಮಲ್, ಅಡುಗೆಮನೆಗೆ ಕರೆದುಕೊಂಡು ಹೋಗಿ ಹೂವಿನ ಖಾದ್ಯ ಸಿದ್ಧಪಡಿಸತೊಡಗಿದರು.
ಬಿಳಿ ತಟ್ಟೆಯ ಮೇಲೆ ತೆಳುವಾಗಿ ಕತ್ತರಿಸಿದ ಸೌತೆಕಾಯಿ ತುಂಡನ್ನು ಇಟ್ಟರು. ಅದರ ಮೇಲೆ ಅಷ್ಟೇ ತೆಳುವಾಗಿ ಕತ್ತರಿಸಿದ ಮಾವಿನ ಹಣ್ಣು, ಪರಂಗಿ ಹಣ್ಣನ್ನು ಇಟ್ಟರು. ಹೂವಿನಿಂದ ಮಾಡುತ್ತಿರುವ ಖಾದ್ಯ ಎಂದು ಹೇಳಿ, ಇಲ್ಲಿ ಹಣ್ಣನ್ನು ಬಳಸುತ್ತಿದ್ದಾರೆ ಎಂದು ಪಕ್ಕದಲ್ಲಿ ಗುಸುಗುಸು ಶುರುವಾಯಿತು.  ಬಾಣಸಿಗ ಮಾತ್ರ ತಮ್ಮ ಕೆಲಸದಲ್ಲಿ ನಿರತರಾಗಿದ್ದರು.

ಮಂದಹಾಸ ಬೀರುತ್ತಾ ಹೂವಿನ ಎಸಳುಗಳಿರುವ ಬಟ್ಟಲನ್ನು ತೆಗೆದುಕೊಂಡರು. ಚೆಂಡುಹೂವಿನ ಎಸಳು, ಕೊತ್ತಂಬರಿ ಸೊಪ್ಪಿನ ಎಲೆಯಷ್ಟು ಚಿಕ್ಕದಾಗಿರುವ ಹೂವುಗಳು, ರಾಸ್‌ಬೇರಿ ಹಣ್ಣಿನ ರಸ, ಗುಲಾಬಿ ದಳಗಳ ಮಿಶ್ರಣ ಮಾಡಿ, `ಇದೇ ಸಲಾಡ್, ರುಚಿ ನೋಡಿ...' ಎಂದಾಗ ಚಮಚ ಹಿಡಿದು ಸಿದ್ಧರಾದೆವು. ಚಮಚದ ಹಿಡಿತಕ್ಕೆ ಸಿಕ್ಕದ ಅದನ್ನು ಚುಚ್ಚಲು ಫೋರ್ಕ್ ಕೈಗೆತ್ತಿಕೊಳ್ಳ ಬೇಕಾಯಿತು. ಯಾವುದೇ ರುಚಿಯಿಲ್ಲದ ಅದು ಸಪ್ಪೆ ಎನ್ನಿಸಿತು.

ನಂತರ ಸೂಪ್ ಮಾಡಲು ಶುರು ಮಾಡಿದರು ವಿಮಲ್. ಬಾಣಲೆಗೆ ಸ್ವಲ್ಪ ಬೆಣ್ಣೆ ಹಾಕಿದರು. ಚಿಕ್ಕದಾಗಿ ಕತ್ತರಿಸಿಕೊಂಡ ಈರುಳ್ಳಿ, ಆಲೂಗಡ್ಡೆ ಹಾಕಿ ಕರಿಯಲು ಶುರುಮಾಡಿದರು. ಅದಕ್ಕೆ ಕೆಂಪು ದಾಸವಾಳದ ಎಸಳುಗಳನ್ನು ಚಿಕ್ಕದಾಗಿ ಕತ್ತರಿಸಿ ಮಿಶ್ರಣ ಮಾಡಿ ಸ್ವಲ್ಪ ನೀರು, ಮೈದಾಹಿಟ್ಟನ್ನು ಹಾಕಿ ಕುದಿಸಲು ಶುರು ಮಾಡಿದರು. ದಾಸವಾಳದ ಹೂವು ಬಣ್ಣ ಬಿಡಲು ಶುರು ಮಾಡಿದಾಗ ಬಾಣಲೆಯನ್ನು ಕೆಳಗೆ ಇಳಿಸಿದರು. ಮಿಶ್ರಣ ತಣ್ಣಗಾದ ಮೇಲೆ ಅದನ್ನು ರುಬ್ಬಿದರು. ನಂತರ ಆ ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿ ಅದರ ಮೇಲೆ ಸ್ವಲ್ಪ ಕೆನೆ, ಕೊತ್ತಂಬರಿ ಸೊಪ್ಪು, ಉಳಿದ ದಾಸವಾಳದ ಹೂವಿನಿಂದ ಅಲಂಕಾರ ಮಾಡಿದರು. ಇದರ ರುಚಿಯೂ ಸಪ್ಪೆಯಾಗಿತ್ತು. ಬಾಣಸಿಗ ಮಾತ್ರ ಇದರಿಂದ ಆರೋಗ್ಯಕ್ಕೆ ಆಗುವ ಒಳಿತುಗಳ ಕುರಿತು ಪಟ್ಟಿ ನೀಡುತ್ತಾ ಇದ್ದರು. ಆ ಕಾರಣದಿಂದ ಎಲ್ಲರೂ ಎರಡು ಚಮಚ ಕುಡಿದು ಸುಮ್ಮನಾದರು.

ಹೂವು, ಸೊಪ್ಪು ತಿಂದು ಸಪ್ಪಗಾದ ಬಾಯಿಗೆ ಮಾಂಸಾಹಾರದ ಸ್ವಾದ ಉಣಬಡಿಸಲು ಅಲ್ಲಿ ಬಿಳಿ ಮಾಂಜಿ (ಸಿಲ್ವರ್ ಫಿಶ್ ಪಾಂಪ್ಲೆಟ್) ಕೂಡ ತಯಾರಾಗಿತ್ತು. ಸ್ವಲ್ಪ ಮೈದಾ, ಕರಿಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಣ್ಣೆಯಲ್ಲಿ ಹುರಿದಾಗ ಅಷ್ಟು ಹೊತ್ತು ಅಲ್ಲಿದ್ದ ಹೂವಿನ ಪರಿಮಳ ಮಾಯವಾಗಿತ್ತು. ತಟ್ಟೆಗೆ ಬಿಸಿಬಿಸಿಯಾದ ಮೀನಿನ ತುಂಡನ್ನು ಹಾಕಿದಾಗ ಅದರಲ್ಲಿ ಹೂವಿನ ದಳಗಳು ಇಲ್ಲವಲ್ಲ ಎಂದು ಖಾತರಿಪಡಿಸಿಕೊಂಡು ಎಲ್ಲರೂ ಖುಷಿಯಿಂದ ಸವಿದರು. ಆದರೆ ಬಾಣಸಿಗ ಮಾತ್ರ ಹೂವು ಮತ್ತು ಎಲೆ ಇಲ್ಲದಿದ್ದರೆ ಆಹಾರ ಕಳೆಗಟ್ಟದು ಎಂದು ಪಾಲಾಕ್‌ನಿಂದ ಮಾಡಿದ ಮಿಶ್ರಣವನ್ನು ತಂದಿಟ್ಟರು. ಆ ಮಿಶ್ರಣದ ಸುತ್ತಲೂ ಸಿಂಪಡಿಸಿದ ಹಸಿರು ಬಗೆಯ ಸಿರಪ್ ಹಾಕಿದಾಗ ನೋಡುವ ಕಂಗಳಿಗೆ ಮುದನೀಡಿತ್ತು. `ಏನಿದು, ಹೇಗೆ ಮಾಡುತ್ತಾರೆ' ಎಂದಾಗ, ವಿಮಲ್ ಅದರ ಬಗ್ಗೆ ಚಿಕ್ಕ ವಿವರಣೆ ನೀಡಿದರು: `ಸೌತೆಕಾಯಿಯ ಸಿಪ್ಪೆ, ಪುದೀನಾ ಎಲೆಗಳನ್ನು ಚೆನ್ನಾಗಿ ರುಬ್ಬಿ ಒಂದು ಬಟ್ಟೆಯಲ್ಲಿ ಕಟ್ಟಿ ನೇತು ಹಾಕಬೇಕು. ಯಾವುದೇ ಕಾರಣಕ್ಕೂ ಬಟ್ಟೆಯನ್ನು ಹಿಂಡಬಾರದು. ಅದೇ ಹನಿಹನಿಯಾಗಿ ಬೀಳಬೇಕು. ಆಗ ಮಾತ್ರ ದಪ್ಪಗಾಗಿ, ಹಸಿರುಬಣ್ಣ ಬರುತ್ತದೆ. ಇದೇ ರೀತಿ ದಾಳಿಂಬೆ ಹಣ್ಣಿನ ಸಿರಪ್ ಕೂಡ ಮಾಡುತ್ತಾರೆ'.

ಸಿಹಿ ತಿನಿಸಿಲ್ಲದಿದ್ದರೆ ಊಟ ಸಂಪೂರ್ಣವಾಗುವುದು ಹೇಗೆ? ಸುಲಭವಾಗಿ ಮಾಡುವ ಸಿಹಿ ತಿನಿಸಿನ ಕುರಿತು ಹೇಳುತ್ತೇನೆಂದು ಒಂದು ಕಪ್ ಹಾಲು, ಒಂದು ಕಪ್ ಕೆನೆ ತೆಗೆದುಕೊಂಡು ಹತ್ತು ನಿಮಿಷದವರೆಗೆ ಕುದಿಸಲು ಶುರು ಮಾಡಿದರು. ನಂತರ ಅದಕ್ಕೆ ರೋಸ್ ವಾಟರ್, ಸ್ವಲ್ಪ ಸಕ್ಕರೆ, ವೆನಿಲ್ಲಾ, ಹಾಲಿನಲ್ಲಿ ನೆನೆಸಿದ ಗುಲಾಬಿ ದಳಗಳನ್ನು ಮಿಶ್ರಣ ಮಾಡಿದರು. ಅದು ದಪ್ಪಗಾದಾಗ ಫ್ರಿಡ್ಜ್‌ನಲ್ಲಿಟ್ಟರು. ಮೊದಲೇ ಸಿದ್ಧಮಾಡಿಟ್ಟುಕೊಂಡ ರೋಸ್‌ಮಿಲ್ಕ್ ತಂದಿಟ್ಟರು. ಗುಲಾಬಿ ಹೂವಿನ ಪರಿಮಳವಿರುವ ಅದು ಐಸ್‌ಕ್ರೀಮ್‌ನಂತೆ ತಣ್ಣಗಿತ್ತು. ಹದವಾದ ಸಿಹಿ, ಗುಲಾಬಿ ದಳಗಳು ರುಚಿಯನ್ನು ಹೆಚ್ಚಿಸಿದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT