ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಚಿತ್ಯದ ಪ್ರಶ್ನೆ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಮತ್ತೆ ವಿವಾದದ ಹುತ್ತಕ್ಕೆ ಕೈಹಾಕಿದ್ದಾರೆ. ಅವರೇ ಬಣ್ಣಿಸಿರುವ ಭಗವದ್ಗೀತೆಯ ಗುಣವಿಶೇಷಗಳೆಲ್ಲವೂ ನಿಜ ಇರಬಹುದು, ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಾದ ಧರ್ಮಗ್ರಂಥವೂ ಅದಾಗಿರಬಹುದು. ಇವುಗಳನ್ನು ಯಾರೂ ಅಲ್ಲಗಳೆಯುವುದಿಲ್ಲ.

ಆದರೆ ಇದನ್ನು ಪಠ್ಯಕ್ರಮದಲ್ಲಿ ಅಳವಡಿಸುವುದು ಎಷ್ಟು ಉಚಿತ ಎನ್ನುವುದಷ್ಟೇ ಈಗಿನ ಪ್ರಶ್ನೆ. ಭಗವದ್ಗೀತೆ ಮಾತ್ರವಲ್ಲ, ಬೇರೆ ಧರ್ಮಗ್ರಂಥಗಳು ಕೂಡಾ ಮಾನವ ಕಲ್ಯಾಣದ ಬಗ್ಗೆಯೇ ಮಾತನಾಡುತ್ತವೆ, ಯಾವುದೂ ಸಮಾಜವಿರೋಧಿ ಚಿಂತನೆಯನ್ನು ಒಳಗೊಂಡಿಲ್ಲ. ಹೀಗಿರುವಾಗ ನಾಳೆ ಮುಸ್ಲಿಮರು, ಕ್ರಿಶ್ಚಿಯನರು, ಬೌದ್ಧರು, ಜೈನರು, ಸಿಖ್ಖರು ಎಲ್ಲರೂ ತಮ್ಮ ಧರ್ಮಗ್ರಂಥಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕೆಂದು ಬಯಸಿದರೆ ಸರ್ಕಾರ ಏನು ಮಾಡುತ್ತದೆ? ಸಂವಿಧಾನದ ಮೂಲಕ ಒಪ್ಪಿಕೊಂಡಂತೆ ನಮ್ಮದು ಧರ್ಮನಿರಪೇಕ್ಷ ರಾಷ್ಟ್ರ. ಹೀಗಿರುವಾಗ ಬೇರೆ ಧರ್ಮಾವಲಂಬಿಗಳ ಬೇಡಿಕೆಯನ್ನು ಹೇಗೆ ನಿರಾಕರಿಸಲು ಸಾಧ್ಯ? ಅವರ ಬೇಡಿಕೆಗಳನ್ನೂ ಈಡೇರಿಸಲು ಹೊರಟರೆ ಶಾಲೆಗಳು ಶಾಲೆಗಳಾಗಿ ಉಳಿಯಲಾರವು.
ಶಿಕ್ಷಣ ಸಂಸ್ಥೆಗಳು ಇರುವುದು ಧರ್ಮ ಬೋಧನೆಗಲ್ಲ ಎನ್ನುವ ಸಾಮಾನ್ಯ ಜ್ಞಾನ ಇಲ್ಲದಷ್ಟು ನಮ್ಮನ್ನು ಆಳುವವರು ಮತಿಹೀನರಾಗಿ ಬಿಟ್ಟಿದ್ದಾರೆ. ಮಕ್ಕಳಲ್ಲಿ ವೈಜ್ಞಾನಿಕ ದೃಷ್ಟಿಕೋನ ಮತ್ತು ವೈಚಾರಿಕ ಚಿಂತನೆಯನ್ನು ಬೆಳೆಸಿ ಅವರನ್ನು ಪ್ರಜ್ಞಾವಂತ ನಾಗರಿಕರನ್ನಾಗಿ ರೂಪಿಸುವುದು ಶಿಕ್ಷಣದ ಮೂಲ ಉದ್ದೇಶ. ಇದನ್ನೇ ಮರೆತು ಶಾಲೆಗಳನ್ನು ಮಠ-ಮಂದಿರವನ್ನಾಗಿ ಮಾಡಲು ಹೊರಡುವುದು ಜನವಿರೋಧಿ ನಿರ್ಧಾರ.

ಭಗವದ್ಗೀತೆಯಲ್ಲಿನ ಸದಾಶಯಗಳ ಅರಿವಿನ ಅಗತ್ಯ ಇಂದು ಯಾರಿಗಾದರೂ ಅತೀ ಅವಶ್ಯವಾಗಿದ್ದರೆ ಅದು ನಮ್ಮ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಹೊರತು ವಿದ್ಯಾರ್ಥಿಗಳಿಗೆ ಅಲ್ಲ. ಪ್ರತಿಫಲದ ಅಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ಜನರ ಸೇವೆ ಮಾಡಬೇಕಾಗಿರುವ ಈ ಎರಡು ವರ್ಗಗಳು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಲ್ಲಿ ಮುಳುಗಿವೆ. ಇವರೇನಾದರೂ ಭಗವದ್ಗೀತೆಯನ್ನು ಅಧ್ಯಯನ ಮಾಡಿ `ತಮ್ಮ ಅಂತರಂಗ ಮತ್ತು ಬಹಿರಂಗಗಳನ್ನು ಶುದ್ಧೀಕರಿಸಿ~ಕೊಂಡರೆ ಅದಕ್ಕಿಂತ ಮಿಗಿಲಾದ ಸಮಾಜ ಕಲ್ಯಾಣ ಕಾರ್ಯ ಬೇರೊಂದಿರಲಾರದು. ಭಗವದ್ಗೀತೆಯ ಅಧ್ಯಯನದ ಪರಿಣಾಮದ ಬಗ್ಗೆ ಮುಖ್ಯಮಂತ್ರಿಗಳು ಅಷ್ಟೊಂದು ಆತ್ಮವಿಶ್ವಾಸ ಹೊಂದಿದ್ದರೆ ಬೀದಿ ಜಗಳದಲ್ಲಿ ತೊಡಗಿರುವ ತಮ್ಮ ಪಕ್ಷದ ನಾಯಕರಿಗಾಗಿಯೇ ಭಗವದ್ಗೀತೆ ಅಧ್ಯಯನದ ವಿಶೇಷ ಶಿಬಿರವನ್ನು ಏರ್ಪಡಿಸಲಿ. ಇದರಿಂದ ಪ್ರತಿದಿನ ಆಳುವ ಪಕ್ಷದ ಬೀದಿ ಜಗಳವನ್ನು ವೀಕ್ಷಿಸುವ ಕಷ್ಟದಿಂದಾದರೂ ಜನರನ್ನು ಪಾರು ಮಾಡಿದಂತಾಗುತ್ತದೆ.

ಸರ್ಕಾರವೊಂದು ಇಂತಹ ಅನಗತ್ಯ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದೆಯೆಂದರೆ ಅದಕ್ಕೆ ತನ್ನ ಆದ್ಯತೆಯ ಅರಿವಿಲ್ಲ ಎಂದು ಅರ್ಥ. ರಾಜ್ಯದ ಸರ್ಕಾರಿ ಶಾಲೆಗಳು ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿವೆ. ಪಾಠ ಪ್ರವಚನಗಳು ನಿಯಮಿತವಾಗಿ ನಡೆಯುತ್ತಿಲ್ಲ, ಶಿಕ್ಷಕರು ನಿಯತ್ತಿನಿಂದ ಕೆಲಸ ಮಾಡುತ್ತಿಲ್ಲ. ಈ ಕಾರಣಗಳಿಂದಾಗಿ ಹೆತ್ತವರು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಂದ ಬಿಡಿಸಿ ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳ ಸುಧಾರಣೆ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ ಭಗವದ್ಗೀತೆಯನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದು ಬೇಜವಾಬ್ದಾರಿತನದ ಪರಮಾವಧಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT