ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ಅಡುಗೆ ಅನಿಲ ಸಮಸ್ಯೆ ಉಲ್ಬಣ

Last Updated 20 ಡಿಸೆಂಬರ್ 2012, 7:13 IST
ಅಕ್ಷರ ಗಾತ್ರ

ಔರಾದ್: ಭಾರತ ಕಂಪೆನಿಯ ಇಲ್ಲಿಯ ಅಡುಗೆ ಅನಿಲ ವಿತರಕರ ಒಳ ಜಗಳದಿಂದ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಿದೆ.
ಗೌರಿ ಹೆಸರಿನ ಇಲ್ಲಿಯ ಅಡುಗೆ ಅನಿಲ ವಿತರಣೆ ಕೇಂದ್ರಕ್ಕೆ ಬೀಗ ಬಿದ್ದ ಪರಿಣಾಮ ಗ್ರಾಹಕರು ಸಂಕಟ ಎದುರಿಸಬೇಕಾಗಿದೆ. ಈ ಹಿಂದೆ ವಿವಿಧ ಸಂಘಟನೆಗಳು ನಡೆಸಿದ ಹೋರಾಟದ ಫಲವಾಗಿ ತಹಸೀಲ್ದಾರ್ ಮಧ್ಯೆ ಪ್ರವೇಶಿಸಿ ಸದ್ಯಕ್ಕೆ ಹುಮನಬಾದ್‌ನವರಿಗೆ ವಿತರಣೆ ಜವಾಬ್ದಾರಿ ವಹಿಸಿಕೊಡಲಾಗಿದೆ. ಆದಾಗ್ಯೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂಬುದು ಗ್ರಾಹಕರ ವಾದ.

ಹುಮನಾಬಾದ್‌ನ ವಿತರಣಾ ಏಜೆನ್ಸಿಯವರು ಈ ಹಿಂದೆ ಎರಡು ಲೋಡ್ ಸಿಲೆಂಡರ್ ತಂದು ಪಟ್ಟಣದಿಂದ 3 ಕಿ.ಮೀ. ದೂರದ ಗೋದಾಮಿನ ಬಳಿ ವಿತರಣೆ ಮಾಡಿದ್ದಾರೆ. ಇದರಿಂದ ಗ್ರಾಹಕರಿಗೆ ತೊಂದರೆ ಆಗುವುದನ್ನು ಅರಿತ ತಹಸೀಲ್ದಾರ್ ಪಟ್ಟಣದ ನಿಗದಿತ ಸ್ಥಳದಲ್ಲಿ ತಂದು ಸಿಲಿಂಡರ್ ವಿತರಿಸುವಂತೆ ಸಲಹೆ ನೀಡಿದ್ದರು.

ಬುಧವಾರ ಮಧ್ಯಾಹ್ನ ಎಪಿಎಂಸಿ ಬಳಿ ಒಂದು ಸಿಲೆಂಡರ್ ಬರುತ್ತಿದ್ದಂತೆ ಗ್ರಾಹಕರು ಜಮಾಯಿಸಿದರು. ನಮಗೆ ಎರಡು ತಿಂಗಳಿನಿಂದ ಸಿಲೆಂಡರ್ ಸಿಕ್ಕಿಲ್ಲ. ನೀವು ಬೇಕಾದಾಗ ರಸ್ತೆ ಬದಿ ತಂದು ವಿತರಣೆ ಮಾಡಿದರೆ ಗೊತ್ತಿಲ್ಲದ ಗ್ರಾಹಕರು ಏನು ಮಾಡಬೇಕು ಎಂದು ವಿತರಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನಮಗೆ ಭಾರತ ಕಂಪೆನಿಯವರು ಇಲ್ಲಿ ತಾತ್ಕಾಲಿಕ ವಿತರಣೆಗೆ ಅವಕಾಶ ನೀಡಿದ್ದಾರೆ. ಹೀಗಾಗಿ ಈಗ ತಂದಿರುವ ಸಿಲೆಂಡರ್ ನಿಯಮಾನುಸಾರ ವಿತರಣೆ ಮಾಡಿ ಮುಂದೆ ನಿಗದಿತ ಸ್ಥಳದಲ್ಲಿ ಮತ್ತು ಎಲ್ಲ ಗ್ರಾಹಕರಿಗೆ ವಿತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹುಮನಾಬಾದ್ ವಿತರಣಾ ಏಜೆನ್ಸಿಯವರು ಹೇಳುತ್ತಾರೆ.

ತಹಸೀಲ್ದಾರ್ ಹೇಳಿಕೆ: ಇಲ್ಲಿಯ ಗೌರಿ ವಿತರಣಾ ಕೇಂದ್ರದ ಮಾಲೀಕರ ಒಳ ಜಗಳದಿಂದ ಸದ್ಯಕ್ಕೆ ಹುಮನಾಬಾದ್ ವಿತರಣಾ ಏಜೆನ್ಸಿಯೊಬ್ಬರಿಗೆ ತಾಲ್ಲೂಕಿನ ಭಾರತ ಅಡುಗೆ ಅನಿಲ ವಿತರಣೆ ಜವಾಬ್ದಾರಿ ವಹಿಸಿಕೊಡಲಾಗಿದೆ. ಒಂದೆರಡು ದಿನಗಳಲ್ಲಿ ನಿಗದಿತ ಸ್ಥಳ ಮತ್ತು ನೋಂದಣಿ ವ್ಯವಸ್ಥೆ ಮಾಡಿಕೊಂಡು ಗ್ರಾಹಕರಿಗೆ ನಿಯಮಿತವಾಗಿ ಅಡುಗೆ ಅನಿಲ ಕಲ್ಪಿಸಲು ಏಜೆನ್ಸಿಯವರಿಗೆ ಸೂಚಿಸಲಾಗಿದೆ ಎಂದು ತಹಸೀಲ್ದಾರ್ ಶಿವಕುಮಾರ ಶೀಲವಂತ ತಿಳಿಸಿದ್ದಾರೆ. ಗ್ರಾಹಕರಿಗೆ ಪದೇ ಪದೇ ಸಮಸ್ಯೆಯಾಗದಂತೆ ಶಾಶ್ವತ ಪರಿಹಾರ ಮಾಡುವಂತೆ ವಿವಿಧ ಸಂಘಟನೆಗಳು ಮತ್ತು ಗ್ರಾಹಕರು ಬೇಡಿಕೆ ಮಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT