ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವಿನ ಸಂಭ್ರಮ

Last Updated 5 ಜನವರಿ 2011, 9:55 IST
ಅಕ್ಷರ ಗಾತ್ರ

ಔರಾದ್: ಭಾರಿ ಪೈಪೋಟಿ ಮತ್ತು ವ್ಯಾಪಕ ಕುತೂಹಲ ಕೆರಳಿಸಿರುವ ತಾಲ್ಲೂಕಿನ ಆರು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಒಂದು ಕ್ಷೇತ್ರದಲ್ಲಿ ಗೆಲ್ಲುವು ಸಾಧಿಸುವ ಮೂಲಕ ಜೆಡಿಎಸ್ ತನ್ನ ಖಾತೆ ತೆರೆದಿದೆ. ಆದರೆ ಒಂದೂ ಕ್ಷೇತ್ರದಲ್ಲಿ ಗೆಲ್ಲಲಾಗದೆ ಕಾಂಗ್ರೆಸ್‌ಗೆ ಮುಖ ಭಂಗವಾಗಿದೆ.

ಟಿಕೆಟ್ ಹಂಚಿಕೆಯಿಂದ ಕೆಲ ನಾಯಕರ ಅಸಮಾಧಾನ, ಅಸಹಕಾರದ ನಡುವೆಯೂ ಬಿಜೆಪಿ ಐದು ಸ್ಥಾನ ಗೆಲ್ಲುವು ಮೂಲಕ ಶಾಸಕ ಪ್ರಭು ಚವ್ಹಾಣ ಅವರು ಮೇಲುಗೈ ಸಾಧಿಸಿದ್ದಾರೆ. ತೀವ್ರ ಹಣಾಹಣಿ ಕ್ಷೇತ್ರವಾದ ಕಮಲನಗರದಲ್ಲಿ ಬಿಜೆಪಿ ಅಭ್ಯರ್ಥಿ ನೀಲಮ್ಮ ವಡ್ಡೆ ಕಾಂಗ್ರೆಸ್‌ನ ಮೀನಾಕ್ಷಿ ಸಂಗ್ರಾಮ ಅವರನ್ನು 2864 ಮತಗಳ ಅಂತರದಿಂದ ಸೋಲಿಸಿ ಅಚ್ಚರಿ ಮೂಡಿಸಿದರು. ಅದೇ ರೀತಿ ಸಂತಪುರ ಕ್ಷೇತ್ರದಲ್ಲಿ ಬಿಜೆಪಿಯ ದೀಪಿಕಾ ಸಚಿನ್ ಅವರು ಕಾಂಗ್ರೆಸ್‌ನ ಮಾಜಿ ಜಿಪಂ. ಉಪಾಧ್ಯಕ್ಷೆ ಜ್ಯೋತಿ ರಾಠೋಡ ಅವರನ್ನು 1800 ಮತಗಳ ಅಂತರದಿಂದ ಸೋಲಿಸಿದರು.

ಅತ್ಯಂತ ಜಿದ್ದಾ ಜಿದ್ದಿ ಕಣವಾಗಿದ್ದ ಚಿಂತಾಕಿ ಜಿಪಂ.ನಲ್ಲಿ ಬಿಜೆಪಿಯ ಕಾಶಿನಾಥ ಜಾಧವ್ ಗೆಲುವು ಸಾಧಿಸಿದ್ದಾರೆ. ಇಲ್ಲಿ ಜೆಡಿಎಸ್‌ನಿಂದ  ಸ್ಪರ್ಧಿಸಿದ್ದ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಕಟ್ಟಾ ಬೆಂಬಲಿಗ ಝರೆಪ್ಪ ಮಮದಾಪುರ 1466 ಮತಗಳಿಂದ ಸೋತಿದ್ದಾರೆ. ಝರೆಪ್ಪ ಮಮದಾಪುರ ಸೋಲಿನಿಂದ ನಾಗಮಾರಪಳ್ಳಿಯವರಿಗೆ ಹಿನ್ನಡೆಯಾಗಿದೆ ಎಂಬ ಮಾತು ಚರ್ಚೆಗೆ ಬಂದಿದೆ.

ವಡಗಾಂವ್ ಜಿಪಂ. ಕ್ಷೇತ್ರದಲ್ಲಿ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಮತ್ತು ಮಾಜಿ ತಾಪಂ. ಅಧ್ಯಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಇಲ್ಲಿ ಜೆಡಿಎಸ್‌ನ ವಸಂತ ವಕೀಲ ಬಿಜೆಪಿಯ ಶರಣಪ್ಪ ಮೀಠಾರೆ ಅವರಿಗಿಂತ 777 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇಲ್ಲಿ ಕೊನೆಯ 8ನೇ ಸುತ್ತಿನ ವರೆಗೂ ಬಿಜೆಪಿ ಅಭ್ಯರ್ಥಿ ಮುಂದಿದ್ದರು. 9ನೇ ಸುತ್ತಿನ ಮತ ಎಣಿಕೆಯಲ್ಲಿ ಜೆಡಿಎಸ್ 900 ಮತ ಪಡೆದು ವಿಜಯಶಾಲಿಯಾದರು. ದಾಬಕಾದಲ್ಲಿ ಬಿಜೆಪಿಯ ರಾಜೇಶ್ರೀ ಪಾಟೀಲ ಕಾಂಗೆಸ್‌ನ ಲಕ್ಷ್ಮಿಬಾಯಿ ಗಡದೆ ಅವರಿಗಿಂತ 5751 ಮತ ಪಡೆದು ಜಯಗಳಿಸಿದರು. ಠಾಣಾಕುಶನೂರ್‌ನಲ್ಲಿ ಬಿಜೆಪಿಯ ಧೂಳಪ್ಪ ಮಾರುತಿ 313 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ತಾಲ್ಲೂಕಿನ 23 ತಾಲ್ಲೂಕು ಪಂಚಾಯ್ತಿ ಪೈಕಿ 16 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಮತ್ತೊಮ್ಮೆ ತಾಲ್ಲೂಕು ಪಂಚಾಯ್ತಿ ಅಧಿಕಾರ ತನ್ನ ವಶಕ್ಕೆ ತೆಗೆದುಕೊಂಡಿದೆ. 4 ಸ್ಥಾನಕ್ಕೆ ಕಾಂಗ್ರೆಸ್ ತೃಪ್ತಿ ಪಟ್ಟುಕೊಂಡರೆ ಜೆಡಿಎಸ್ 2 ಸ್ಥಾನ ಪಡೆದುಕೊಂಡಿದೆ. ಒಂದು ಸ್ಥಾನದಲ್ಲಿ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ವಿಜಯೋತ್ಸವ: ಫಲಿತಾಂಶದ ನಂತರ ಪಟ್ಟಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರತ್ಯೇಕವಾಗಿ ವಿಜಯೋತ್ಸವ ಮೆರವಣಿಗೆ ನಡೆಸಿ ಸಂಭ್ರಮಿಸಿದರು. ಎಲ್ಲಡೆ ಜಯಘೋಷ, ಪಟಾಕಿ, ಗುಲಾಲ್ ಹಾಕಿಕೊಂಡು ವಿಜಯೋತ್ಸವ ಆಚರಿಸಲಾಯಿತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT