ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧ, ಗಳಿಕೆಗೂ ಮುಂದು ಮುರುಗಲು

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಪಿತ್ತ ಎಂದ ತಕ್ಷಣ ನೆನಪಾಗುವುದೇ ಮುರುಗಲು ಹುಳಿ. ಪುನರ್ಪುಳಿ, ಆಮ್‌ಸೋಲ್‌, ಸಾರಾಮ್ಲ, ಬೀರುಂಡ ಎಂದೂ ಕರೆಸಿಕೊಳ್ಳುವ ಇದು ‘ಕೋಕಂ’ ಎಂದೇ ಪ್ರಸಿದ್ಧ. ಕಡುಗೆಂಪು ಬಣ್ಣದ ನಿಂಬೆಗಾತ್ರದ ಹಣ್ಣು ಮುರುಗಲು ಸಸ್ಯದ ವೈಜ್ಞಾನಿಕ ಹೆಸರು ‘ಗಾರ್ಸಿನೀಯಾ ಇಂಡಿಕಾ’. ಕ್ಲೂಸಿಯೇಸಿಯಾ ಕುಟುಂಬಕ್ಕೆ ಸೇರಿದೆ ಈ ಸಸ್ಯ.

ಇದರ ಎಲೆ, ಸಿಪ್ಪೆ ಹಾಗೂ ಬೀಜ ಎಲ್ಲವೂ ಔಷಧವೇ. ಆದ್ದರಿಂದ ಇದನ್ನು ಕಲ್ಪವೃಕ್ಷ ಎಂದೂ ಕರೆಯಲಾಗುತ್ತದೆ. ಪಿತ್ತದೋಷ ಅಷ್ಟೇ ಅಲ್ಲದೇ ರಕ್ತದೋಷ, ತಲೆ ತಿರುಗುವಿಕೆ, ಮೂಲವ್ಯಾಧಿ, ಅತಿಸಾರ ಮತ್ತು ಹೃದಯ ಸಂಬಂಧಿ ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುವ ಇದು ಅಡುಗೆಯ ರುಚಿ ಹೆಚ್ಚಿಸುವಲ್ಲಿಯೂ ಎತ್ತಿದ ಕೈ.

ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೇರಳವಾಗಿ ಔಷಧಗಳಿಗೆ ಬಳಕೆಯಾಗುವ ಇದರ ತವರು ಪಶ್ಚಿಮ ಘಟ್ಟ. ಮುರುಗಲು ಹುಳಿಯಿಂದ ತಯಾರಿಸುವ ಪಾನೀಯದಲ್ಲಿ ಅದರ ಸಿಪ್ಪೆ ಮುಳುಗಿಸಿಟ್ಟು ಮೀನಿನ ಸಾಂಬಾರಕ್ಕೆ ಹುಳಿಯ ಬದಲಿಗೆ ಬಳಕೆ ಮಾಡುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯ. ಇದರಿಂದ ಚಟ್ನಿಯನ್ನೂ ತಯಾರಿಸಿ ಅನ್ನದ ಜತೆ ಬಾಯಿ ಚಪ್ಪರಿಸಿ ಸೇವಿಸಬಹುದು.

ಮಹಾರಾಷ್ಟ್ರದ ಸಿಂಧುದುರ್ಗ, ರತ್ನಾಗಿರಿ ಜಿಲ್ಲೆಗಳು ಪುನರ್ಪುಳಿ ಕೃಷಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಭಾರತದಲ್ಲಿ  ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ ಇದರ ಕೃಷಿ ಕೈಗೊಳ್ಳಲಾಗುತ್ತಿದೆ. ವರ್ಷಕ್ಕೆ ಸುಮಾರು ೧0 ಸಾವಿರ ಟನ್‌ ಹಣ್ಣು ನಮ್ಮಲ್ಲಿಯೇ ಬೆಳೆಯುತ್ತಿರುವುದು ಹೆಗ್ಗಳಿಕೆ. ಆಯುರ್ವೇದದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಇದಕ್ಕೆ ಸಿಂಗಪುರ, ಇಂಗ್ಲೆಂಡ್‌, ನೆದರ್‌ಲ್ಯಾಂಡ್‌, ಇಟಲಿ ಸೇರಿದಂತೆ ಇತರ ದೇಶಗಳಲ್ಲಿ ಅಧಿಕ ಬೇಡಿಕೆ ಉಂಟು.

ಕೃಷಿ ವಿಧಾನ ಹೀಗಿದೆ
ಇದರಲ್ಲಿ ಕೆಂಪು ಮತ್ತು ಬಿಳಿ ಮುರುಗಲು ಎಂಬ ಎರಡು ವಿಧಗಳಿವೆ. ಇದರ ಮರ ತೆಳ್ಳಗಿದ್ದು, ಹಸಿರಿನಿಂದ ಕೂಡಿರುತ್ತದೆ. ಎಲೆಗಳು ವೃತ್ತಾಕಾರವಾಗಿ ಮೃದುವಾಗಿರುತ್ತದೆ. ಮರದ ರೆಂಬೆಗಳು ಜೋತುಬಿದ್ದಂತೆ ಕಾಣಿಸುತ್ತದೆ. ಮೇಲಿನ ಭಾಗ ಕಡುಹಸಿರು ಹಾಗೂ ಎಲೆಯ ಅಡಿಭಾಗ ತಿಳಿಹಸಿರು ಬಣ್ಣದ್ದಾಗಿರುತ್ತದೆ. ಎಲೆಯು ಹುಳಿಯಾಗಿರುತ್ತದೆ.

ಇದು ಮಳೆಯಾಧಾರಿತ ಕೃಷಿ. ಮುರುಗಲು ಗಿಡ ೧೦ ರಿಂದ ೧೫ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಇದು ಸಾಮಾನ್ಯವಾಗಿ ಎಲ್ಲ ರೀತಿಯ ಮಣ್ಣು ಮತ್ತು ಹವಾಗುಣದಲ್ಲಿ ಬೆಳೆಯಬಲ್ಲದು. ಇದರ ಬೀಜ ಲಭ್ಯವಿದ್ದರೂ ಅದರಿಂದ ಸಸಿ ತಯಾರಿಕೆ ಕಷ್ಟ. ಗಿಡಕ್ಕೆ ಕಸಿಕಟ್ಟುವುದರಿಂದ ಸಸ್ಯಾಭಿವೃದ್ಧಿ ಸಾಧ್ಯ. 20–25 ಗ್ರಾಂ ಹಟ್ಟಿಗೊಬ್ಬರ ನೀಡಿದರೆ ಇದರ ಇಳುವರಿ ಚೆನ್ನಾಗಿ ಪಡೆಯಬಹುದು. ರಸಗೊಬ್ಬರ ಬಳಕೆ ಮಾಡಿಯೂ ಇದನ್ನು ಬೆಳೆಯುತ್ತಿದ್ದಾರೆ. ಕಸಿಕಟ್ಟಿದ ಗಿಡವನ್ನು ಜುಲೈ- ಆಗಸ್ಟ್ ತಿಂಗಳೊಳಗೆ ನಾಟಿ ಮಾಡಬೇಕು.

ಈ ಸಮಯದಲ್ಲಿ ನಾಟಿ ಮಾಡಿದರೆ ಮಾರ್ಚ್‌– ಮೇ ತಿಂಗಳೊಳಗೆ ಹಣ್ಣುಗಳನ್ನು ಕೊಯ್ಲು ಮಾಡಬಹುದು. ಕೊಯ್ಲು ಮಾಡಿದ ಬಳಿಕ ಹಣ್ಣುಗಳನ್ನು ಒಣಗಿಸಬೇಕು. ಸುಮಾರು ಮೂರು ಎಕರೆ ಜಮೀನಿನಲ್ಲಿ ಒಂಬತ್ತು ಟನ್‌ಗಳವರೆಗೂ ಹಣ್ಣನ್ನು ಗಳಿಸಬಹುದು. ಇಷ್ಟಕ್ಕೆ ನಿಮಗೆ ಸುಮಾರು 15 ಸಾವಿರ ರೂಪಾಯಿ ವೆಚ್ಚ ತಗುಲಿದರೆ, 50 ಸಾವಿರ ರೂಪಾಯಿಗಳವರೆಗೂ ಆದಾಯ ಗಳಿಸಬಹುದು.

ಇದರ ಹಣ್ಣು ಪಕ್ವವಾದ ಮೇಲೆ ಬೀಜಗಳನ್ನು ತೆಗೆಯಿರಿ. ನಂತರ ಸಿಪ್ಪೆಗೆ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಸಕ್ಕರೆ ಮಿಶ್ರಮಾಡಿ 12ರಿಂದ 15 ಗಂಟೆ ಒಂದು ಕಡೆ ಇಡಬೇಕು. ಹಣ್ಣಿನಿಂದ ಕೆಂಪು ಬಣ್ಣದ ರಸ ಬಿಡಲು ಆರಂಭಿಸುತ್ತದೆ. ನಂತರ ಸಿಪ್ಪೆ ತೆಗೆದಿಡಿ. ರಸಕ್ಕೆ ಚಿಟಿಕೆಯಷ್ಟು ಉಪ್ಪು ಸೇರಿಸಿ ಒಂದೆರಡು ದಿನ ಮಂದ ಬಿಸಿಲಿನಲ್ಲಿ ಒಣಗಿಸಿ, ಈ ಸಿಪ್ಪೆಯನ್ನು ಅಡುಗೆಯಲ್ಲಿ ಹುಣಸೆಹಣ್ಣಿಗೆ ಬದಲಾಗಿ ಉಪಯೋಗಿಸಿದರೆ ಆರೋಗ್ಯಕರ ಅಡುಗೆ ಸಿದ್ಧವಾಗುತ್ತದೆ. ಚೆನ್ನಾಗಿ ಒಣಗಿದ ಸಿಪ್ಪೆಯನ್ನು ಪುಡಿ ಮಾಡಿ ಶೇಖರಿಸಿಟ್ಟುಕೊಂಡೂ ಅದನ್ನು ಅಡುಗೆಗೆ ಹುಳಿಯ ಬದಲು ಉಪಯೋಗಿಸಬಹುದು.

ಪಿತ್ತದ ಸಮಸ್ಯೆ ಇದ್ದವರು ಒಂದು ಚಮಚ ಜೀರಿಗೆ, ಎರಡು ಕಾಳು ಮೆಣಸು, ಶ್ರೀಗಂಧದ ಜೊತೆ ಮುರುಗಲು ಹಣ್ಣನ್ನು ಅರೆದು ನಿಂಬೆ ಹುಳಿ ಅಥವಾ ಹುಳಿ ಮಜ್ಜಿಗೆಯೊಂದಿಗೆ ಸೇರಿಸಿ ಕುಡಿಯಬೇಕು. ಇಲ್ಲವೇ ಸಿಪ್ಪೆಯನ್ನು ಕೆಲವು ಕಾಲ ನೆನೆಸಿಟ್ಟು ಹಸಿದ ಹೊಟ್ಟೆಯಲ್ಲಿ ಕುಡಿಯಬೇಕು. ಪುನರ್ಪುಳಿ ಬೀಜದಿಂದ ತಯಾರಿಸುವ ಬೆಣ್ಣೆ ಕೂಡ ಲಭ್ಯವಿದ್ದು, ಚಳಿಗಾಲದಲ್ಲಿ ಕಾಲು ಒಡೆಯುವುದರಿಂದ ಮುಕ್ತಿ ಪಡೆಯಲು ಇದು ಮದ್ದು.

ತೋಟಗಾರಿಕೆ ಇಲಾಖೆಯ ಶಿರಸಿ ವಿಭಾಗದಲ್ಲಿ ಕೋಕಂ ಗಿಡಗಳು ಲಭ್ಯವಿದೆ. ಸಂಪರ್ಕಕ್ಕೆ: ಡಾ.ಲಕ್ಷ್ಮಿನಾರಾಯಣ ಹೆಗಡೆ 8762189133. ಬೆಂಗಳೂರಿನ ತೋಟಗಾರಿಕಾ ಇಲಾಖೆಯಿಂದಲೂ ಮಾಹಿತಿ ಪಡೆಯಬಹುದು
080- – 26576733.
–ಸವಿತಾ ಡಿ.ಎನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT