ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧಿ ಸಸ್ಯಗಳ ಕಳ್ಳಸಾಗಣೆ ಅಬಾಧಿತ

Last Updated 25 ಜೂನ್ 2011, 19:10 IST
ಅಕ್ಷರ ಗಾತ್ರ

ಕಾರವಾರ: ಪಶ್ಚಿಮಘಟ್ಟ ಅರಣ್ಯ ಪ್ರದೇಶಗಳನ್ನು ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು ಎನ್ನುವ ಕೂಗು ಒಂದೆಡೆ ಜೋರಾಗುತ್ತಿದ್ದರೆ, ಇದೇ ಪಶ್ಚಿಮ ಘಟ್ಟದ ಸಸ್ಯ ಸಂಪತ್ತಿನ, ಸಂಶೋಧನೆ, ಸಂರಕ್ಷಣೆ ಆಗದೆ ಅನೇಕ ಔಷಧಿ ಸಸ್ಯಗಳ ಕಳ್ಳಸಾಗಣೆ ನಿರಂತರವಾಗಿ ಸಾಗಿದೆ.
 
ಬೆಳಗಾವಿ ಜಿಲ್ಲೆಯ ಖಾನಾಪುರ, ಭೀಮಗಡ, ತಳೇವಾಡಿ, ಆಮ್‌ಗಾಂವ್ ಹೋಲ್ದಾ ಅರಣ್ಯದಲ್ಲಿ ಸಿಗುವ `ಸಪ್ತರಂಗಿ~ (salacia reticulate) ಹಾಗೂ `ಗುವಾಡ~ (Mappia Foetida) ಗಿಡಮೂಲಿಕೆಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಡಿಗ್ಗಿ ಸಮೀಪದ ಕುವೇಶಿ, ಮಾಯಾರೇ, ಕ್ಯಾಸಲ್‌ರಾಕ್, ಅನಮೋಡ್ ಅರಣ್ಯ ಪ್ರದೇಶದಿಂದಲೂ ಈ ಗಿಡಮೂಲಿಕೆಗಳ ಕಳ್ಳ ಸಾಗಣೆ ಆಗುತ್ತಿದೆ.ಈ ಔಷಧಿ ಸಸ್ಯಗಳೊಂದಿಗೆ ದಾಲ್ಚಿನಿ ಮೊಗ್ಗು ಮತ್ತು ಎಲೆಗಳ ಕಳ್ಳಸಾಗಣೆಯೂ ನಡೆಯುತ್ತಿದೆ. `ಗುವಾಡ~ ಸಸ್ಯದ ತುಂಡುಗಳನ್ನು ಚೀಲದಲ್ಲಿ ತುಂಬಿ ಸಾಗಿಸುತ್ತಿರುವ ಲಾರಿಯನ್ನು ಅರಣ್ಯಾಧಿಕಾರಿಗಳು ಮೂರು ತಿಂಗಳ ಹಿಂದೆ ಜಗಲಬೇಟ ಸಮೀಪ ವಶಪಡಿಸಿಕೊಂಡಿದ್ದರು.

ಐವತ್ತು ಚೀಲ ಸಸ್ಯ ತುಂಬಿದ್ದ ಲಾರಿಯೊಂದನ್ನು ಗಣೇಶಗುಡಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಮಚಂದ್ರ ಆದ್ಲೆಮನೆ ನೇತೃತ್ವದ ತಂಡ 2009ರಲ್ಲಿ ವಶಪಡಿಸಿಕೊಂಡಿತ್ತು. ಹೀಗೆ ಕೆಲವೊಂದು ಪ್ರಕರಣಗಳು ಮಾತ್ರ ಪತ್ತೆಹಚ್ಚಲು ಅರಣ್ಯ ಇಲಾಖೆಗೆ ಸಾಧ್ಯವಾಗಿದೆ. ಬಹಳ ನಿಗೂಢವಾಗಿಯೇ ಇಂತಹ ಕಳ್ಳದಂಧೆ ನಡೆಯುತ್ತಿದೆ.

ಚೀನಾ ಹಾಗೂ ಜಪಾನ್‌ನಲ್ಲಿ ಕ್ಯಾನ್ಸರ್, ಕರುಳು ಸಂಬಂಧಿ ರೋಗಗಳಿಗೆ ಚಿಕಿತ್ಸೆ ನೀಡಲು `ಗುವಾಡ~ ಸಸ್ಯದಿಂದ ತಯಾರಿಸಿದ ಔಷಧವನ್ನು ಬಳಸುತ್ತಾರೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ. ಈ ಬಗ್ಗೆ ಖಚಿತವಾದ ಮಾಹಿತಿ ಅವರ ಬಳಿಯಿಲ್ಲ. 

ಜಿಲ್ಲೆಯ ಗಡಿಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ವಾಸ ಮಾಡುವ ಮುಗ್ಧ ಜನರನ್ನು ಈ ಕೃತ್ಯಕ್ಕೆ ಬಳಸಿ ಕೊಂಡು ಅವರ ಖರ್ಚಿಗೆ ಸ್ವಲ್ಪ ಹಣ ನೀಡಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸಸ್ಯಗಳನ್ನು ಸಾಗಾಟ ಮಾಡಲಾಗುತ್ತದೆ.

ಸಿಬ್ಬಂದಿ ಸಮಸ್ಯೆ: ಈ ಕಳ್ಳ ದಂಧೆಯನ್ನು ನಿಯಂತ್ರಿಸಲು ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇರುವ ಸಿಬ್ಬಂದಿಯಲ್ಲಿ ಬಹುತೇಕರು 45ರಿಂದ 50 ವರ್ಷದ ಆಸುಪಾಸಿನಲ್ಲಿದ್ದು ಚುರುಕಿನಿಂದ ಕೆಲಸ ಮಾಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಯುವ ಸಿಬ್ಬಂದಿ ಇದ್ದರೆ ಕೆಲಸ ಮಾಡಬೇಕು ಎನ್ನುವ ಹುರುಪು ಅವರಲ್ಲಿಯೂ ಇರುತ್ತದೆ. ಆಗ ಇಂತಹ ಅಕ್ರಮ ದಂಧೆಗಳನ್ನು ನಿಯಂತ್ರಿಸಬಹುದು ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಅರಣ್ಯಾಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT