ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಠೀರವದಲ್ಲಿ ಕನ್ನಡದ ಕಲರವ

Last Updated 1 ನವೆಂಬರ್ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ಅಲ್ಲಿ ನಿಜಕ್ಕೂ ಸಾಂಸ್ಕೃತಿಕ ಲೋಕವೇ  ತೆರೆದುಕೊಂಡಿತ್ತು. ಸಾವಿರಾರು ಚಿಣ್ಣರು ಕೇಸರಿ ಹಳದಿ ಬಾವುಟ ಹಿಡಿದು ವಿವಿಧ ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸಿದರು. ಕನ್ನಡ ಗೀತೆಗಳಿಗೆ ಪಾತ್ರಗಳಾಗುತ್ತಾ ಇತಿಹಾಸದ ಮರುಸೃಷ್ಟಿಗೆ ಸಾಕ್ಷಿಯಾದರು.

ಐವತ್ತೈದನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳವಾರ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಡು ಬಂದ ಚಿತ್ರಣ ಇದು. ನಗರದ ವಿವಿಧ ಶಾಲೆಗಳ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳು ರಾಜ್ಯೋತ್ಸವದ ಸಾಂಸ್ಕೃತಿಕ  ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. 

`ಕಸ್ತೂರಿ ಕನ್ನಡ~ ನೃತ್ಯ ಪ್ರದರ್ಶಿಸಿದ ಮಕ್ಕಳು `ಮಾತು ಕನ್ನಡ, ರೀತಿ ಕನ್ನಡ~ ಎಂಬ ಹಾಡಿಗೆ ಹೆಜ್ಜೆ ಹಾಕಿದರು. ಕೇಸರಿ-ಹಳದಿ ಬಣ್ಣದ ಸೀರೆ ರವಿಕೆತೊಟ್ಟ ಚಿಣ್ಣರ ಕುಣಿತ ನೋಡುಗರ ಮನ ಸೂರೆಗೊಂಡಿತು. ಶಿಕ್ಷಣ ಇಲಾಖೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಕ್ಕಳು `ತಮಸೋಮ ಜ್ಯೋತಿರ್ಗಮಯ~  ನೃತ್ಯ ರೂಪಕ ಪ್ರಸ್ತುತ ಪಡಿಸಿದರು. 

`ಜಾನಪದ ಕಲಾ ವೈಭವ~ ಕ್ರೀಡಾಂಗಣಕ್ಕೆ ಜಾನಪದ ಜಗತ್ತನ್ನೇ ಹೊತ್ತು ತಂದಂತಿತ್ತು. ಹಳೇ ಮೈಸೂರು ಪ್ರಾಂತ್ಯದ ಜಾನಪದ ದೈವ ಮಂಟೇಸ್ವಾಮಿಯ `ಆಡಿದವರಾ ಮನವಾ ಬಲ್ಲೆ, ನೀಡಿದವರಾ ನಿಜವಾ ಬಲ್ಲೆ~ ಹಾಡಿನೊಂದಿಗೆ ಮೂಡಿದ ಜಾನಪದ ಕಲಾ ವೈಭವ ಯಕ್ಷಗಾನ, ಬೀಸು ಕಂಸಾಳೆ, ಪೂಜಾ ಕುಣಿತ, ನಂದಿಕೋಲು ಕುಣಿತ, ಕರಗ ಹಾಗೂ ರಂಗನ ಕುಣಿತಗಳನ್ನು ಒಳಗೊಂಡು ಉತ್ತಮ ಜಾನಪದ ಪ್ರಸ್ತುತಿಯಾಗಿತ್ತು. ಸುಮಾರು 600 ಮಕ್ಕಳು ಈ ನೃತ್ಯದಲ್ಲಿ ಪಾಲ್ಗೊಂಡಿದ್ದರು.

`ಗೆಜ್ಜೆ ಮಾತಾಡತಾವೋ~ ನೃತ್ಯದಲ್ಲಿ ಕರ್ನಾಟಕ ಪ್ರಮುಖ ಜಾನಪದ ನೃತ್ಯವಾದ ಕೋಲಾಟದ ಕುಣಿತದ ಮೂಲಕ ಪ್ರೇಕ್ಷಕರರ ಮನದೊಳಗೇ ಕೋಲಾಟ ಆಡಿದರು.

`ಮಾಗಡಿ ಕೆಂಪೇಗೌಡ~ ಹಾಗೂ `ದುರ್ಗದ ವೈಭವ~ ನಾಡಿನ ಇತಿಹಾಸವನ್ನು ಕ್ರೀಡಾಂಗಣದಲ್ಲಿ ಮರು ಸೃಷ್ಟಿಸಿದವು. `ಶಾಸ್ತ್ರೀಯ ಕಲಾ ವೈಭವ~ ನೃತ್ಯದಲ್ಲಿ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಭರತನಾಟ್ಯ, ಕಥಕ್, ಕೂಚುಪುಡಿ, ಓಡಿಸ್ಸಿಗಳನ್ನು ಒಟ್ಟಾಗಿ ಸಂಯೋಜಿಸಲಾಗಿತ್ತು. ರಾಷ್ಟ್ರೀಯ ವಿದ್ಯಾಲಯ ಬಾಲಕಿಯರ ಪ್ರೌಢಶಾಲೆಯ ಮಕ್ಕಳು 22 ಯೋಗಾಸನ ರಚನೆಗಳನ್ನು ಪ್ರದರ್ಶಿಸಿದರು. ಸುಮಾರು 40 ಶಾಲೆಗಳ 2 ಸಾವಿರ ಮಕ್ಕಳು `ಸಾಮೂಹಿಕ ವ್ಯಾಯಾಮ~ ಪ್ರದರ್ಶಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದುದ್ದಕ್ಕೂ ನಿರಂತರವಾಗಿ ಪ್ರೇಕ್ಷಕರ ಚಪ್ಪಾಳೆಯ ಸದ್ದು ನೃತ್ಯ ಪ್ರದರ್ಶಿಸಿದ ಮಕ್ಕಳಲ್ಲಿ ಹುಮ್ಮಸ್ಸು ತುಂಬಿತು.
 

ಕನ್ನಡ ದಿನಪತ್ರಿಕೆ ಹಂಚಿಕೆ...
ಬಸವನಗುಡಿ ಗಿರಿನಗರ ನಾಗರಿಕರ ವೇದಿಕೆಯು `ಪ್ರಜಾವಾಣಿ~ ಸೇರಿದಂತೆ ಕನ್ನಡದ ಪ್ರಮುಖ ದಿನಪತ್ರಿಕೆಗಳನ್ನು ಉಚಿತವಾಗಿ ಹಂಚುವ ಮೂಲಕ ಭಿನ್ನ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿತು.
ಆವಲಹಳ್ಳಿ ಬಿಡಿಎ ಉದ್ಯಾನದ ಸುತ್ತಮುತ್ತಲಿನ ರಸ್ತೆಗಳಲ್ಲಿ ಪತ್ರಿಕೆಗಳನ್ನು ಹಂಚಿ ಕನ್ನಡದ ಮಹತ್ವ ಸಾರಲಾಯಿತು. ವೇದಿಕೆಯ ಸದಸ್ಯರಾದ ವಿ.ಎಸ್.ಮೋಹನ್ ಕುಮಾರ್, ಇ.ಮಂಜುನಾಥ್ ರಾವ್, ಪಿ.ನಾಗರಾಜ್, ಆರ್ ಗೋವಿಂದಯ್ಯ, ಕಾರ್ಯದರ್ಶಿ ಪಿ.ನಾಗರಾಜ್ ಪತ್ರಿಕೆಗಳನ್ನು ಹಂಚಿ ಜನರಿಗೆ ರಾಜ್ಯೋತ್ಸವ ಶುಭಾಶಯ ಕೋರಿದರು.
ಆಂಗ್ಲಮಯ ರಸ್ತೆಗಳಲ್ಲಿ ಕನ್ನಡ ಹಬ್ಬ
ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸಂರಕ್ಷಣಾ ಸಂಘ ನಗರದ ಹಲಸೂರು ಬಸ್ ನಿಲ್ದಾಣದಿಂದ ಎಂ.ಜಿ.ರಸ್ತೆಯ ಅನಿಲ್‌ಕುಂಬ್ಳೆ ವೃತ್ತದವರೆಗೆ ನಡೆಸಿದ ಭುವನೇಶ್ವರಿ ದೇವಿಯ ವೆುರವಣಿಗೆ ನೋಡುಗರ ಗಮನ ಸೆಳೆಯಿತು. ಬ್ರಿಗೆಡ್ ರಸ್ತೆ, ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತ, ರೆಸಿಡೆನ್ಸಿ ರಸ್ತೆ, ಚರ್ಚ್ ಸ್ಟ್ರೀಟ್, ಮೇಯೊ ಹಾಲ್ ರಸ್ತೆ ಮೂಲಕ ಹಾದು ಹೋದ ಮೆರವಣಿಗೆಯ ಸೌಂದರ್ಯವನ್ನು ಜನರು ಆಸ್ವಾದಿಸಿದರು. ಡೊಳ್ಳು ಕುಣಿತ, ಪೂಜಾ ಕುಣಿತ, ಕರಡಿ ಮಜಲು, ಜಗ್ಗಲಿಗೆ, ನಾದಸ್ವರ, ಯಕ್ಷಗಾನ, ಸೋಮನ ಕುಣಿತ, ವೀರಗಾಸೆ, ಕಂಸಾಳೆ ಮತ್ತಿತರ ತಂಡಗಳು, ಎತ್ತಿನ ಗಾಡಿಗಳು ವೆುರವಣಿಗೆಯ ರಂಗನ್ನು ಹೆಚ್ಚಿಸಿದವು. ಉತ್ಸವಕ್ಕೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಚಾಲನೆ ನೀಡಿದರು.  ಬಿಬಿಎಂಪಿ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ಮಂಜುನಾಥ್ ರಾಜು, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.ರಾಮಮೂರ್ತಿ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಲ್. ಶಿವಕುಮಾರ್, ಚಿತ್ರ ನಿರ್ಮಾಪಕ ಮದನ್ ಪಟೇಲ್, ಸಂಘದ ರಾಜ್ಯ ಘಟಕದ ಅಧ್ಯಕ್ಷ ಕನ್ನಡ ಸೋಮು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT