ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಡೆಯಾ ತಬೂಬಿಯಾ ನಗೆಯ...

Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಚಳಿಗಾಲದಲ್ಲಿ ಚಳಿಯ ಮಾತು ಬಿಟ್ಟರೆ ಬೇರೇನಿದೆ? ಮರಗಳೆಲ್ಲ ಎಲೆಯುದುರಿಸಿ ಬೋಳು ಬೋಳಾಗುವ ಕಾಲ ಸನ್ನಿಹಿತವಾಗುತ್ತಿದ್ದಂತೆ ಕೆಲ ಮರಗಳು ಹೂ ಬಿಡುತ್ತವೆ. ವಿಶೇಷವೆಂದರೆ ಕಬ್ಬನ್ ಪಾರ್ಕ್‌ನಲ್ಲಿ ಒಂದು ಮರ ಎಲೆಯುದುರಿಸುತ್ತಿದ್ದರೆ, ಇನ್ನೊಂದು ಮರ ಹೂ ಉಟ್ಟು ನಗುತ್ತಿರುತ್ತದೆ. ಸದ್ಯ ಸಂಕ್ರಮಣಕ್ಕೆ ಮುನ್ನುಡಿಯೆಂಬಂತೆ ಗುಲಾಬಿ ಬಣ್ಣವನ್ನೇ ಹೊದ್ದಂತೆ ಬೀಗುತ್ತಿರುವುದು ಅಮೆರಿಕಾ ಮೂಲದ ‘ಪಿಂಕ್ ತಬೂಬಿಯಾ’ ಮರ. ತಿಳಿಗುಲಾಬಿ ಬಣ್ಣದ ಹೂ ಮುಡಿದು ನಿಂತ ಸುಂದರಿಯಂತೆ ಈ ಮರ ಕಂಗೊಳಿಸುತ್ತಿದೆ. ಶೀತಗಾಳಿಗೆ ಮೈಯೊಡ್ಡಿ ವಯ್ಯಾರದಿಂದ ಬೀಗುವಾಗಲೆಲ್ಲ, ನೆಲದ ಮೇಲೆ ಹೂಹಾಸು. 

ಬೆಂಗಳೂರೆಂದರೆ ಹಾಗೆ. ಎಲ್ಲಿಂದಲೋ ಬಂದವರ ಸ್ವರ್ಗ. ಈ ಮಾತು ಮನುಷ್ಯರಿಗಷ್ಟೇ ಸೀಮಿತವಾಗಿಲ್ಲ. ಹೂ, ಮರ, ಹಣ್ಣು, ತರಕಾರಿಗಳಿಗೂ ಅನ್ವಯಿಸುತ್ತದೆ. ಯಾರೋ ವಿದೇಶದಿಂದ ತಂದು ಹಾಕಿದ ಬೀಜವೊಂದು ಈ ನೆಲದ ಸತ್ವ ಹೀರಿ ಇಲ್ಲಿಯೇ ಬೇರು ಬಿಟ್ಟಿದೆ. ಹೀಗೆ ಬ್ರಿಟಿಷ್ ದಿನಗಳಲ್ಲಿ ನಗರಕ್ಕೆ ಅನೇಕ ವಿದೇಶಿ ಸಸ್ಯಗಳು ಬಂದಿವೆ. ಲಾಲ್‌ಬಾಗ್ ಮತ್ತು ಕಬ್ಬನ್‌ಪಾರ್ಕ್‌ನಲ್ಲಿ ವಿದೇಶದ ಲಕ್ಷಾಂತರ ತಳಿಗಳಿವೆ. ಬೆಂಗಳೂರು ಉದ್ಯಾನನಗರಿ ಎನಿಸಿಕೊಳ್ಳಲು, ಸೌಂದರ್ಯ ಹೆಚ್ಚಿಸುವ ಈ ಮರಗಳೂ ಕಾರಣ. ಹೀಗೆ ಬಂದ ಗುಲ್‌ಮೊಹರ್, ಮೇ ಫ್ಲವರ್ ಮುಂತಾದ ಹತ್ತಾರು ಜಾತಿಯ ಮರಗಳೇ ಒಂದಾದ ಮೇಲೆ ಒಂದರಂತೆ ಹೂ ಬಿಡುತ್ತ ನಗರದಲ್ಲಿ ಸದಾ ಹೂವಿನ ಲೋಕ ಸೃಷ್ಟಿಸುತ್ತವೆ. ನಗರದ ರಸ್ತೆ ಬದಿ, ಉದ್ಯಾನಗಳಲ್ಲಿ ಈಗ ಪಿಂಕ್ ತಬೂಬಿಯಾದ್ದೇ ಕಾರುಬಾರು. ಹೇಮಂತ ಋತುವಿನಿಂದ ಆರಂಭವಾಗುವ ಈ ಕುಸುಮಯಾನ ಮಳೆಗಾಲ ಬರುವವರೆಗೂ ಸಾಗುತ್ತದೆ. 

ಕಬ್ಬನ್‌ಪಾರ್ಕ್‌, ಲಾಲ್‌ಬಾಗ್‌ಗಳಲ್ಲಿ ಮಾತ್ರವಲ್ಲ; ರಸ್ತೆಬದಿಯಲ್ಲೂ ಎಲ್ಲಾ ಋತುಗಳಲ್ಲೂ ವಿದೇಶಿ ಮರಗಳು ಹೂ ಬಿಡುತ್ತಲೇ ಇರುತ್ತವೆ. ತರಗೆಲೆಯನ್ನು ಮುಚ್ಚುವಂತೆ ಬಣ್ಣಬಣ್ಣದ ಹೂವಿನ ದಳಗಳು ನೆಲದ ಮೇಲೆ ಬಿದ್ದು ನೆಲಕ್ಕೂ ಬಣ್ಣ. ಮಳೆ ನಿಲ್ಲುತ್ತಿದ್ದಂತೆ ಹಳದಿ ಬಣ್ಣದ ಹೂಬಿಟ್ಟ ಮರ ಎಲ್ಲರ ಗಮನ ಸೆಳೆದಿತ್ತು. ಈಗ ಚಳಿಗಾಲ ಕಾಲಿಡುತ್ತಿದ್ದಂತೆ ನಗರದ ಅಲ್ಲಲ್ಲಿ ಗುಲಾಬಿ ಬಣ್ಣದ, ಹೂಗಳನ್ನೇ  ಹೊದ್ದಂತಿರುವ ಮರಗಳು ಆಕರ್ಷಿಸುತ್ತಿವೆ.

ತಬೂಬಿಯಾವನ್ನು ‘ಟ್ರಂಪೆಟ್‌ ಟ್ರೀಸ್‌’ ಎಂದೂ ಕರೆಯುತ್ತಾರೆ. ಅಮೆರಿಕಾ, ಮೆಕ್ಸಿಕೋ, ಅರ್ಜೆಂಟೀನಾ ಮುಂತಾದ ದೇಶಗಳಲ್ಲಿ ವಿಶೇಷವಾಗಿ ಇವುಗಳನ್ನು ಹೂವಿಗೆಂದೇ ಬೆಳೆಸಲಾಗುತ್ತದೆ. ಮನೆ ಮುಂದೆ  ಅಲಂಕಾರಕ್ಕೆಂದೇ ಈ ಮರಗಳನ್ನು ಬೆಳೆಸುತ್ತಾರೆ. ಇದರಲ್ಲಿ ಸುಮಾರು 99 ಬಗೆಯ ಪ್ರಭೇದಗಳು ಇವೆ. ಪೀಠೋಪಕರಣಗಳಿಗೂ ಇದರ ಕೆಲ ಪ್ರಭೇದದ ಮರಗಳನ್ನು ಬಳಸಲಾಗುತ್ತದೆ.

ಈ ಮರಗಳ ವಿಶೇಷವೆಂದರೆ ಹೂಬಿಡುವ ಕಾಲದಲ್ಲಿ ಮರದಲ್ಲಿ ಒಂದೂ ಹಸಿರೆಲೆ ಇರದು.  ಕಬ್ಬನ್‌ ಪಾರ್ಕ್ನಲ್ಲಿರುವ ಕೇಂದ್ರ ಗ್ರಂಥಾಲಯದ ಮುಂಭಾಗದಲ್ಲಿರುವ  ಪಿಂಕ್‌ ತಬೂಬಿಯಾ ಮರಗಳು ಈಗ ಹೂ ಉಟ್ಟು ನಳನಳಿಸುತ್ತಿವೆ; ನೋಡುಗರೂ ಗುಲಾಬಿಯಾಗುವಂತೆ!

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT