ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಂಡೋರ್ ಮಕ್ಳು ರಾಜಕೀಯಕ್ಕೆ ಬರಬೇಕು'

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಾವು ಮೇಲುಕೋಟೆಯಲ್ಲಿ ಇದ್ದಾಗ, ಅಂಬರೀಷ್ ಅವರು ಶಿವಳ್ಳಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಮೊಬೈಲ್ ಸಂದೇಶ ಬಂತು. ಅವರನ್ನು ಮಾತನಾಡಿಸಲೇಬೇಕು ಎನ್ನುವ ಹಂಬಲದಿಂದ ಅಲ್ಲಿಗೆ ಹೊರಟೆ.

ದುದ್ದ, ಶಿವಳ್ಳಿ, ಅಡ್ಯ, ಉಳ್ಳೇನಹಳ್ಳಿ, ಜೈಪುರ, ತಿಪ್ಪಹಳ್ಳಿ, ಮಾಚಳ್ಳಿ ಮೂಲಕ ಹುಲಿಕೆರೆ ತಲುಪಿದಾಗ ಅಂಬರೀಷಣ್ಣ, ಪಕ್ಷದ ಮೇಲುಕೋಟೆ ಅಭ್ಯರ್ಥಿ ಎಲ್. ಡಿ. ರವಿ ಪರವಾಗಿ ಮಾತನಾಡುತ್ತ, `ಕಣ್ಣೀರಲ್ಲ, ರಕ್ತ ಹರಿಸಿಯೇ ರಾಜಕಾರಣ ಮಾಡ್ತಾ ಬಂದೀನಿ. ಅಂಬರೀಷ್  ಇದ್ದ, ಬಂದ ಅನುಭವಿಸಿದ, ಸತ್ತ ಎನ್ನುವುದಕ್ಕಿಂತ, ಸಾಯುವುದಕ್ಕಿಂತ ಮುಂಚೆ ಒಳ್ಳೆಯ ಕೆಲ್ಸ ಮಾಡಿ ಸತ್ತ ಅಂತ ಅನಿಸಿಕೊಳ್ಳಬೇಕು ಅಂತ ಆಸೆ ಅಷ್ಟೆ' ಎಂದು  ಭಾವುಕರಾಗಿ  ಮಾತನಾಡುತ್ತಿದ್ದರು. ಆಗ `ಅಂಬರೀಷಣ್ಣನಿಗೆ ಜಯವಾಗಲಿ' ಎಂಬ ಜಯಘೋಷ ಮೊಳಗತೊಡಗಿದವು.

ಕಾರ್ಯಕರ್ತರೊಬ್ಬರ ನೆರವಿನ ಮೂಲಕ ಎರಡು ಹಳ್ಳಿಗಳ ಮಧ್ಯೆ ರಸ್ತೆಯಲ್ಲಿಯೇ  ಅವರ ವಾಹನ ಅಡ್ಡಗಟ್ಟಿ ನಿಲ್ಲಿಸಿ ಸಂದರ್ಶನಕ್ಕೆ ಮನವಿ ಸಲ್ಲಿಸಿದೆ. `ಇಲ್ಲೇ ಬನ್ನಿ' ಎಂದು ಟೆಂಪೊ ಹಿಂಭಾಗಕ್ಕೆ  ಕರೆಯಿಸಿಕೊಂಡರು. `ಇದ್ಕ ಸ್ವಲ್ಪ ನೀರ್ ಹಾಕ್ರೊ' ಎಂದು ಬಾಚಣಿಕೆ ತೇವ ಮಾಡಿಕೊಂಡು ತಲೆಗೂದಲು ಒಪ್ಪ ಮಾಡಿಕೊಂಡರು. ಮುಖದ ಮೇಲಿನ ಬೆವರು ಒರೆಸಿಕೊಂಡು  ಮಾತಿಗೆ ಅಣಿಯಾಗಿ `ಹ್ಞೂ ಹೇಳ್ರಿ' ಎಂದರು.

*ಹೈಕಮಾಂಡನ್ನೇ ಎದ್ರು ಹಾಕ್ಕೊಂಡ್ರಲ್ಲ?
-ಅದು ರೆಬೆಲ್ ಅಲ್ಲ. ಅದು ನನ್ನ ಅನಿಸಿಕೆ ಅಷ್ಟೆ. ನಾಲ್ಕು ಬಾರಿ ಪಕ್ಷ ವಿರೋಧಿ ಕೆಲ್ಸ ಮಾಡಿದವ್ರಿಗೆ ಟಿಕೆಟ್ ಕೊಟ್ರೆ ನನಗೆ ಗ್ರಾಮಸ್ಥರನ್ನು, ಕಾರ್ಯಕರ್ತರನ್ನು ಫೇಸ್ ಮಾಡೋದು ಕಷ್ಟ.  ನನಗೇನೂ ದ್ವೇಷ - ರೋಷ ಮಾಡೋದು ಬೇಕಾಗಿಲ್ಲ.

ಅವ್ರಿಗೆ ಕೊಟ್ರೆ ನನಗೆ ಬೇಡ ಎಂದೆ ಅಷ್ಟೆ. ನಾನು ಜೆ ಪಿ ನಗರಕ್ಕೆ ಹೋಗಿ ನಿಲ್ಲಕ್ಕೆ ಆಗುತ್ತಾ. ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ಮಾಡೋದು ಅಷ್ಟು ಸುಲಭವಲ್ಲ. ಕಷ್ಟ ಆಗುತ್ತೆ ಅಂತ. ಬೇರೆ ಉದ್ದೇಶ ಇದ್ದಿರಲಿಲ್ಲ. ಬಂಡಾಯ ಏನ್ ಬಂತು ಅದರಲ್ಲಿ. ಬಂಡಾಯ ಅಭ್ಯರ್ಥಿಯಾಗಿ ನಿಂತ್ಕೊತೀನಿ ಅಂತ ನಾನೇನೂ ಹೇಳಿರಲಿಲ್ಲ. ಆಗದವರು ಏನಾದರೊಂದು ಸುಳ್ಳು ಸುದ್ದಿ ಹರಡಿಸ್ತಾರೆ.

*ರಕ್ತ ಕಣ್ಣೀರು ರಾಜಕೀಯದ ಬಗ್ಗೆ..
-ನನ್ನ ರಾಜಕೀಯ ಜೀವನದ ಆರಂಭದಿಂದಲೂ ತುಳಿತಾ ಬಂದಿದ್ದಾರೆ. ಮಾದೇಗೌಡರು ಇರೋ ತನಕ ನಾನು ರಾಜಕೀಯಕ್ಕೆ ಬರಲ್ಲ ಎಂದಿದ್ದೆ. ಇದು ಪವರ್‌ಫುಲ್ ನೆಲ. ನಿಷ್ಠಾವಂತ ರಾಜಕಾರಣಿಗಳನ್ನು ಬೆಳೆಸಿರುವ ಗುಣ ಈ ಮಣ್ಣಿನಲ್ಲಿ ಇದೆ. ಇಲ್ಲಿಯ ಜನರಲ್ಲಿ ಕೆಚ್ಚಿದೆ. ಸಾಹುಕಾರ ಚೆನ್ನಯ್ಯ ಅವರು ಆಸ್ತಿ ಮಾರಿ ರಾಜಕಾರಣ ಮಾಡಿದೋರು. ಜಿಲ್ಲೆಯ ಶಕ್ತಿ ಕೆಲವರಿಗೆ ಗೊತ್ತಿದೆ, ಕೆಲವರಿಗೆ ಗೊತ್ತಿಲ್ಲ. ನೀವೇ ನೋಡಿದ್ರಲ್ಲ ಈ ಜನರ ಪ್ರೀತಿ. ಅದು ನನಗೆ ಬೇಕು. ಯಾರೋ ದುಡ್ಡು ಕೊಟ್ಟು ಹಾರ ಹಾಕಲ್ಲ.

*ಜನರ ಕೆಚ್ಚಿನಲ್ಲಿ ಒಡಕು ಕಾಣಿಸಿಕೊಂಡಿದೆಯಲ್ಲ?
ಏನೂ ಮಾಡಕಾಗಲ್ಲ. ಜನರಲ್ಲಿ ಒಗ್ಗಟ್ಟು ಇದೆ. ಹಳ್ಳಿ ಜನ ಒಂದು ಫ್ಲ್ಯಾಗ್ ಹಿಡಿಬೇಕಾದ್ರೆ ಅದನ್ನು ಬದಲಾಯಿಸಬೇಕಾದ್ರೆ ತುಂಬಾ ಕಷ್ಟ. ಅವರಲ್ಲಿ ಸ್ವಾಭಿಮಾನ ಇರ್ತದೆ. ನಮ್ಮಂಥ ಲೀಡರ್ರುಗಳು  ಬೇರೆ ಪಕ್ಷ ಸುಲಭವಾಗಿ ಸೇರಬಹುದು. ಜನಸಾಮಾನ್ಯರ ಪಕ್ಷ ನಿಷ್ಠೆ ಗಟ್ಟಿಯಾಗಿರುತ್ತದೆ ಕಣ್ರಿ.

*ಲಿಂಗರಾಜು ಬಗ್ಗೆ ಟಿಕೆಟ್ ಕೊಡಿಸಿದ್ರೂ ಅವರ ಬಗ್ಗೆ ನಿಮ್ಮ ಬಣದಲ್ಲಿ  ಅಸಮಾಧಾನ ಇದೆಯೇ?
- ಇರ್ಲಿ ಬಿಡಿ. ಅದೇನೂ ದೊಡ್ಡ ವಿಷಯವಲ್ಲ. ಅವನಿಗೆ ರಾಜಕೀಯ ಎಕ್ಸ್‌ಪಿರಿಯನ್ಸ್ ಇಲ್ಲ ಅಂತಾರೆ ಕೆಲವರು. ಅದು ತಪ್ಪು. 13 ವರ್ಷಗಳಿಂದ ರಾಜಕಾರಣದಲ್ಲಿ ಇದ್ದಾರೆ. ಬರೀ ಎಂಎಲ್‌ಎ, ಎಂಪಿ ಮಕ್ಳೆ ರಾಜಕೀಯಕ್ಕೆ ಬರಬೇಕಾ. ಕಂಡೋರ್ ಮಕ್ಳು ಬರಬಾರ್ದಾ.  ವೆರಿ ಸಿಂಪಲ್ ಲಾಜಿಕ್. ನನ್ನ ಮಗನ್ನ, ಹೆಂಡ್ತೀನ್ ರಾಜಕೀಯಕ್ಕೆ ತರಲ್ಲ. ನನ್ನ ತಲೆಗೆ ಲಾಸ್ಟ್.

*ಕೃಷ್ಣ ಪ್ರಚಾರಕ್ಕೆ ಬಂದ್ರೆ ಒಡಕು ದೂರವಾಗುತ್ತಾ?
- ಗ್ಯಾರಂಟಿ. ಒಡಕೇನಿಲ್ಲ ಬಿಡಿ. ಕೃಷ್ಣ ಬಂದ್ರೆ ಮೂವರೂ (ಮಾದೇಗೌಡ, ಕೃಷ್ಣಾ, ಅಂಬಿ) ಒಟ್ಟಿಗೆ ಓಡಾಡ್ತೀವಿ.
ಕೊನೆಯಲ್ಲಿ `ಈ ಎಡಿಷನ್‌ಗೆ ಬರಬೇಕಮ್ಮ ಇದು'  ಎಂದು ಹೇಳಿದ್ದಕ್ಕೆ, `ಆಲ್ ಎಡಿಷನ್‌ಗೆ ಬರುತ್ತೆ ಬಿಡಿ' ಎಂದು ನಗುತ್ತಲೇ ಹೇಳಿ ವಾಹನ ಇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT