ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದನಿಗೆ ಬೇಕು ಹಿರಿಯರ ಆಸರೆ

Last Updated 18 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಅಜ್ಜ, ಅಜ್ಜಿ ಇದ್ದಾರೆ ಎಂದರೆ ಮಗು ಹಾಗೂ ಮಗುವಿನ ಹೆತ್ತವರು ಅದೃಷ್ಟವಂತರು, ಪುಣ್ಯ ಮಾಡಿರಬೇಕು ಎಂಬ ಮಾತು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಏಕೆಂದರೆ ಹೆಚ್ಚುತ್ತಿರುವ ವಿಭಕ್ತ ಕುಟುಂಬದಲ್ಲಿ ಹಿರಿಯರು ಅಪರೂಪವಾಗುತ್ತಿದ್ದಾರೆ. ಉದ್ಯೋಗಸ್ಥ ತಾಯಂದಿರು ಹೆಚ್ಚುತ್ತಿದ್ದಾರೆ. ಪತಿ -ಪತ್ನಿಯರಿಬ್ಬರೂ ಉದ್ಯೋಗಸ್ಥರಾಗಿದ್ದರೆ, ಹೆತ್ತವರು ತಮ್ಮ ಅನುಪಸ್ಥಿತಿಯಲ್ಲಿ ಮಗುವನ್ನು ಕೆಲಸದಾಕೆ ಅಥವಾ ಬೇಬಿ ಸಿಟ್ಟರ್ ಜೊತೆ ಬಿಡಲು ಹೆದರಿಕೆ, ಆತಂಕ ಪಡುತ್ತಿದ್ದಾರೆ.

ಏಕೆಂದರೆ ಇವರು ಮಗುವಿಗೆ ನಿದ್ರೆ ಔಷಧಿ ನೀಡಿ ನಿದ್ರೆಮಾಡಿಸಿ ಆರೈಕೆ ಭಾರದಿಂದ ತಪ್ಪಿಸಿಕೊಳ್ಳುವ ಅಥವಾ ಹೆತ್ತವರಿಲ್ಲದ ಸಮಯದಲ್ಲಿ ಎಳೆ ಮಗುವನ್ನು ಭಿಕ್ಷಾಟನೆಗೆ ಬಳಸಿಕೊಳ್ಳುವ ಕೆಲವೊಂದು ಘಟನೆಗಳೂ ವರದಿಯಾಗುತ್ತಿವೆ.

ಈ ಹಿನ್ನೆಲೆಯಲ್ಲಿ ಮೊದಲಿನ 3-4 ವರ್ಷಗಳವರೆಗೆ ಎಳೆ ಮಗುವಿನ ಪಾಲನೆಗಾಗಿ ಮನೆಯಲ್ಲಿ ಹಿರಿಯರ ಅವಶ್ಯಕತೆ, ಮಹತ್ವ ಹೆಚ್ಚುತ್ತಿದೆ. ಎಳೆ ಮಕ್ಕಳು ದೇವರು. ಇವರ ಆರೈಕೆ ಮಡಲು ಇನ್ನೊಬ್ಬ ದೇವರು ಸೃಷ್ಟಿಯಾದ. ಆ ದೇವರು ಅಜ್ಜ, ಅಜ್ಜಿ. ದೇವರಿಂದ ಮಗುವಿಗೆ ಶ್ರೇಷ್ಠ ಉಡುಗೊರೆ ಎಂದರೆ ಅಜ್ಜ-ಅಜ್ಜಿ ಎಂಬ ಮಾತಿದೆ. ಹಾಗಾದರೆ ಕೆಲಸದಾಕೆ ಅಥವಾ ಹೆತ್ತವರಿಗಿಂತ ಅಜ್ಜ-ಅಜ್ಜಿಯರಿಂದ ಪಾಲನೆ ಹೇಗೆ ಭಿನ್ನ?

ಮಗುವಿನ ಶೇ 80 ಮನೋದೈಹಿಕ ಬೆಳವಣಿಗೆ ಮೊದಲ ಮೂರು ವರ್ಷಗಳಲ್ಲಾಗುತ್ತದೆ. ಈ ಅವಧಿಯಲ್ಲಿನ ಭಾವನಾತ್ಮಕ, ಮನೋವಿಕಾಸಗಳು ಮಗುವಿನ ಉತ್ತಮ ಭವಿಷ್ಯಕ್ಕೆ ಅಡಿಪಾಯ. ಮೂರು ವರ್ಷಗಳಲ್ಲಿ ಕಲಿತದ್ದು ನೂರು ವರ್ಷಗಳವರೆಗೆ. ಈ ಸಮಯದಲ್ಲಿ ಆತ್ಮೀಯರ ಒಡನಾಟ ಅವಶ್ಯ. ಸುಮಾರು 25-30 ವರ್ಷ ಮಕ್ಕಳಾಡಿಸಿ ಅನುಭವದ ಅಜ್ಜ ಅಜ್ಜಿಯರು ಎಳೆ ಮಗುವಿಗೆ ಸೂಕ್ತ. ಇವರು ಮಗುವಿಗೆ ಎಣೆಯಿಲ್ಲದ ಪ್ರೀತಿ, ಮಮತೆ, ಸಹನೆ, ವಿನೋದ, ಸಾಂತ್ವನ, ನೀತಿ ಪಾಠ ನೀಡಬಲ್ಲರು.

ಹೆತ್ತವರಿಗಿಂತ ಮಕ್ಕಳ ಪಾಲನೆಯಲ್ಲಿ ಅಜ್ಜ ಅಜ್ಜಿ ಒಂದು ಹೆಜ್ಜೆ ಮುಂದು. ಯಾವ ವಯಸ್ಸಿನಲ್ಲಿ ಏನು ಅವಶ್ಯ, ಬೇಕು ಬೇಡಗಳು, ಮಗು ಏಕೆ ಹಟಮಾಡುತ್ತಿದೆ, ಏಕೆ ನಿದ್ರೆ ಹೋಗುತ್ತಿಲ್ಲ ಎಂಬುದನ್ನೆಲ್ಲಾ ಅಜ್ಜ ಅಜ್ಜಿ ಬೇಗ ಊಹಿಸಬಲ್ಲರು. ಅಪ್ಪ, ಅಮ್ಮನಿಂದ ಆಗದಿರುವುದು ಈ ಹಿರಿಯರಿಂದ ಸಾಧ್ಯ. 

ವಿಶೇಷವಾಗಿ ಉದ್ಯೋಗಸ್ಥ ದಂಪತಿ ದಿನವೆಲ್ಲಾ ದುಡಿದು ಮನೆಗೆ ಬರುವ ಹೊತ್ತಿಗೆ ತುಂಬ ಬಳಲಿರುತ್ತಾರೆ.  ಇದರಿಂದಾಗಿ ಮಗುವಿನ ದೈಹಿಕ ಮತ್ತು ಭಾವನಾತ್ಮಕ ಅವಶ್ಯಕತೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಅಹಾಯಕರಾಗಿರುತ್ತಾರೆ. ಹೆತ್ತವರ ಈ ಅಸಹಾಯಕತೆಯನ್ನು ತುಂಬಿಸಲು ಅಜ್ಜ, ಅಜ್ಜಿಯರಿಂದ ಸಾಧ್ಯ.

ಹಿರಿಯರ ಕೈಯಲ್ಲಿ ಮಗು ಅತ್ಯಂತ ಸುರಕ್ಷಿತವಾಗಿರುತ್ತದೆ. ಇದು ಹೆತ್ತವರಿಗೆ ನೆಮ್ಮದಿ ನೀಡುವುದರಿಂದ ಉದ್ಯೋಗಸ್ಥ ತಂದೆ-ತಾಯಿ ತಮ್ಮ ಉದ್ಯೋಗ, ವ್ಯಾಪಾರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಪೂರ್ಣ ಪ್ರಯತ್ನದಿಂದ ತಮ್ಮ ಗುರಿ ತಲುಪಬಹುದು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಗುವನ್ನು ಚೆನ್ನಾಗಿ ಓದಿಸಿ, ಒಳ್ಳೆ ಉದ್ಯೋಗ ಕೊಡಿಸಬೇಕೆಂದು ಹೆತ್ತವರು ಆತಂಕದಲ್ಲಿರುತ್ತಾರೆ.ಇಂಥವರಿಗೆ ಆಸರೆ, ಬೆಂಬಲ ಅನುಭವಿ ಹಿರಿಯರಿಂದ ಸಾಧ್ಯ. ಅಜ್ಜಿ ಅಕ್ಕರೆಯ ಗೂಡು, ಅಜ್ಜ ಆತ್ಮವಿಶ್ವಾಸದ ಅಕ್ಷಯಗಣಿ ಎಂಬ ಮಾತು ಇದಕ್ಕೆ ಸಾಕ್ಷಿ

ಮಕ್ಕಳ ಆರೈಕೆಗಾಗಿ ಉತ್ತಮ ಬೇಬಿ ಸಿಟ್ಟರ್ ಕೆಲಸದಾಕೆ ದೊರೆಯುವುದು ಅಪರೂಪ ಹಾಗೂ ದುಬಾರಿ.  ಅನೇಕ ಉದ್ಯೋಗ ಸ್ಥಳದಲ್ಲಿ ಎಳೆ ಮಕ್ಕಳ ಪಾಲನಾ ಕೇಂದ್ರಗಳಿಲ್ಲ (ಕ್ರಶ್).ಇಂಥ ಕೇಂದ್ರಗಳಿದ್ದರೂ ಅರ್ಧ ಸಂಬಳ ಇದಕ್ಕೆ ಖರ್ಚಾಗುತ್ತದೆ. ಹಿರಿಯರು ಮನೆಯಲ್ಲಿದ್ದರೆ ಮಕ್ಕಳ ಪಾಲನೆ ಕಡಿಮೆ ಖರ್ಚಿನದು.

ಅಜ್ಜನ ಕೈ ಬೆರಳು ಹಿಡಿದುಕೊಂಡು ಮನೆ ಹೊರಗೆ ತಿರುಗಾಡಲು ಮಗುವಿಗೆ ಬಹಳ ಇಷ್ಟ. ಏಕೆಂದರೆ ಬೆಳ್ಳಿ ಕೂದಲಿನ ಅಜ್ಜನ ಹೃದಯದಲ್ಲಿ ಬಂಗಾರದ ಅನುಕಂಪವಿರುತ್ತದೆ.

ಈಗಿನ ಕೆಲವು ಉದ್ಯೋಗಸ್ಥ ದಂಪತಿ ರಜೆ ಮತ್ತು ವಾರಾಂತ್ಯ ದಿನಗಳಲ್ಲೂ ಕಚೇರಿ ಕೆಲಸವೆಂದು ಕಂಪ್ಯೂಟರ್ ಮುಂದಿರುತ್ತಾರೆ ಅಥವಾ ಪ್ರವಾಸದಲ್ಲಿರುತ್ತಾರೆ. ಹೀಗಾಗಿ ಮಕ್ಕಳ ಆರೈಕೆಗೆ ಸಮಯವಿಲ್ಲ. ಮಕ್ಕಳು ಅಸ್ವಸ್ಥರಾದಾಗ ವೈದ್ಯರಲ್ಲಿಗೆ ಕರೆದುಕೊಂಡು ಹೋಗಲು ಬಿಡುವಿಲ್ಲ. ಇಂಥ ಸಂದರ್ಭದಲ್ಲಿ ಹಿರಿಯರ ಆಸರೆ ಅತೀ ಅವಶ್ಯ. ಮನೆಯ ಸಂಸ್ಕೃತಿ, ಮಾತೃಭಾಷೆ, ಸಂಸ್ಕಾರವನ್ನು ಮಗುವಿಗೆ ಕಲಿಸಿಕೊಡಲು ಹೆತ್ತವರು ಮತ್ತು ಮನೆ ಹಿರಿಯರಿಂದ ಮಾತ್ರ ಸಾಧ್ಯ. ಬಾಡಿಗೆ ಆರೈಕೆದಾರರಿಂದ ಮಗುವಿನ ದೈಹಿಕ ಬೆಳವಣಿಗೆ ಮಾತ್ರ ಸಾಧ್ಯ.

ಹೆತ್ತವರಿಗೆ ಕಿವಿ ಮಾತು:
*ಹಿರಿಯರು ನಿಮ್ಮ ಜೊತೆಗಿರಲು  ಪ್ರೋತ್ಸಾಹಿಸಿರಿ. ಹಳೆ ಕಾಲದವರು ಏನೂ ಗೊತ್ತಿಲ್ಲದವರೆಂದು ನಿರ್ಲಕ್ಷಿಸದಿರಿ.
*ಇಳಿ ವಯಸ್ಸಿನಲ್ಲಿಯೂ ನಿಮ್ಮ ಹಾಗೂ ಮಗುವಿಗಾಗಿ ಯಾವ ತ್ಯಾಗವನ್ನು ಮಾಡಲು ಸಿದ್ಧರಿರುತ್ತಾರೆಂದು ನೆನಪಿಡಿ.
*ಮಗುವಿನ ಪಾಲನೆ ಬಗ್ಗೆ ಇವರೊಂದಿಗೆ ಮುಕ್ತವಾಗಿ ಚರ್ಚಿಸಿರಿ
*ಇವರ ಇಳಿವಯಸ್ಸಿನ ದೈಹಿಕ ಬದಲಾವಣೆ, ಅರಳು ಮರಳು, ಮರೆಯುವ ಸ್ವಭಾವ ಗಮನದಲ್ಲಿರಲಿ. ನಿಮ್ಮ ಹಾಗೆ ಮಗುವಿನ ಪಾಲನೆಯಲ್ಲಿ ಇವರಿಂದಲೂ ಲೋಪ ಸಹಜ. ಇವುಗಳನ್ನು ಗಂಭೀರವಾಗಿ ಪರಿಗಣಿಸದಿರಿ.
* ಆಗಾಗ ಇವರಿಗೆ ಬಿಡುವು ನೀಡಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT