ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ಅದಾಲತ್: 291 ಪ್ರಕರಣ ಇತ್ಯರ್ಥ

ಎಲ್ಲ ತಾಲ್ಲೂಕುಗಳಲ್ಲೂ ಆಯೋಜನೆ: ಡಿ.ಸಿ
Last Updated 10 ಡಿಸೆಂಬರ್ 2013, 8:39 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ನರಸಾಪುರ ಹೋಬಳಿಯ ಬೆಳ್ಳೂರು ಸರ್ಕಾರಿ ಪ್ರೌಢ­ಶಾಲೆಯಲ್ಲಿ ಸೋಮವಾರ ಎಂದಿ­ನಂತೆ ತರಗತಿ ಪಾಠಗಳು ನಡೆಯಲಿಲ್ಲ. ಬದಲಿಗೆ ಗ್ರಾಮದ ಹಲವರ ಕಂದಾಯ ಭೂಮಿ ದಾಖಲೆಗಳ ಸಮಸ್ಯೆಗಳು ಪರಿಹಾರವಾದವು.

ಮುಖ್ಯಶಿಕ್ಷಕರ ಸ್ಥಾನದಲ್ಲಿ ಜಿಲ್ಲಾಧಿ­ಕಾರಿ ಡಿ.ಕೆ.ರವಿ ಇದ್ದರು. ವಿದ್ಯಾರ್ಥಿಗಳ ಸ್ಥಾನದಲ್ಲಿ ಹಳ್ಳಿಗರಿದ್ದರು. ಶೈಕ್ಷಣಿಕ ಚಟುವಟಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಇದೇ ಮೊದಲ ಬಾರಿಗೆ ‘ಕಂದಾಯ ಅದಾಲತ್’ ನಡೆಯಿತು. ಕಂದಾಯ ಇಲಾಖೆ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯ ಜವಾಬ್ದಾರಿಗಳ ನಿರ್ವಹಣೆ ಪಾಠಗಳನ್ನೂ ಹೇಳಿ-­ಕೊಟ್ಟರು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಬೆಳ್ಳೂರಿನಲ್ಲಿ ನಡೆದರೆ, ಮಧ್ಯಾಹ್ನದ ಬಳಿಕ ಅದೇ ಹೋಬಳಿಯ ಚೌಡದೇನ­ಹಳ್ಳಿಯ ಗ್ರಾಮ ಪಂಚಾಯತಿ ಸಭಾಂಗ­ಣ­ದಲ್ಲಿ ಅದಾಲತ್ ನಡೆಯಿತು. ಪಹಣಿ ತಿದ್ದುಪಡಿಯ 161 ಪ್ರಕರಣ­ಗಳೂ ಸೇರಿ­ದಂತೆ ಒಟ್ಟಾರೆ 291 ಪ್ರಕರಣ ಸ್ಥಳದಲ್ಲೇ ಇತ್ಯರ್ಥಪಡಿಸ­ಲಾಯಿತು.

45 ಪ್ರಕರಣಗಳಿಗೆ ಸಂಬಂಧಿ­ಸಿದಂತೆ ಹೆಚ್ಚುವರಿ ದಾಖಲೆ­ಗಳ ಪರಿಶೀಲನೆಗೆ ಜಿಲ್ಲಾಧಿಕಾರಿ ಆದೇಶಿಸಿದರು. ಸಾಮಾ­ಜಿಕ ಭದ್ರತಾ ಯೋಜನೆ ಅಡಿ ನಿವೃತ್ತಿ ವೇತನ ದೊರೆತಿಲ್ಲ ಎಂಬ ಒಂದು ದೂರಿಗೆ ಸಂಬಂಧಿಸಿದ ಅಧಿಕಾರಿ­ಯೊಡನೆ ದೂರ­ವಾಣಿ ಮೂಲಕವೇ ಮಾತನಾಡಿದ ಡಿ.ಸಿ, ಅರ್ಜಿದಾರರಿಗೆ ಅನುಕೂಲ ಮಾಡಿಕೊಟ್ಟರು.

ತಮ್ಮ ಹಳ್ಳಿಗೇ ಜಿಲ್ಲಾಡಳಿತ ಬಂದು ಸ್ಥಳದಲ್ಲೇ ಸಮಸ್ಯೆಗಳನ್ನು ಪರಿಹರಿಸಿ ಕೊಟ್ಟದ್ದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

ಹಲವಾರು ವರ್ಷಗಳಿಂದ ಪರಿಹಾರ­ವಾಗದೆ ಉಳಿದಿದ್ದ ಕಂದಾಯ ಭೂಮಿ ದಾಖಲೆಗಳ ಸಮಸ್ಯೆಗಳನ್ನು ಗದ್ದಲ, -ಗೊಂದವಿಲ್ಲದೆ ಮುಕ್ತ ಹಾಗೂ ಪಾರದರ್ಶಕವಾಗಿ ದಾಖಲೆಗಳ ಆಧಾರದೊಂದಿಗೆ ಸಂಬಂಧಿಸಿದವರ ಸಮ್ಮುಖದಲ್ಲೇ ಇತ್ಯರ್ಥ ಪಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಕಂದಾಯ ಇಲಾಖೆಯಲ್ಲಿ ಇತ್ಯರ್ಥವಾಗದೆ ಉಳಿದಿದ್ದ ಪಹಣಿ ತಿದ್ದುಪಡಿ, ಫವತಿವಾರು ಖಾತೆ ಬದಲಾವಣೆ, ಖಾತೆ ಬದಲಾವಣೆ ಪ್ರಕರಣಗಳನ್ನು ಅದಾಲತ್ ಸಲುವಾಗಿ ಮೊದಲೇ ಸಿಬ್ಬಂದಿ ಗುರುತಿಸಿದ್ದರು. ಅವುಗಳನ್ನಷ್ಟೇ ಅದಾಲತ್‌ನಲ್ಲಿ ಇತ್ಯರ್ಥ ಪಡಿಸುವ ಕೆಲಸ ಸೋಮವಾರ ನಡೆಯಿತು.

ಹೋಬಳಿ ಹಾಗೂ ಆಯಾ ಗ್ರಾಮ ಮಟ್ಟದ ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಕಡತಗಳ ಸಮೇತ ಹಾಜರಾಗಿದ್ದ ಪರಿಣಾಮ ಅದಾಲತ್ ಗೊಂದಲವಿಲ್ಲದೆ ನಡೆಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಕುಮಾರ್ ರಾಜು, ಉಪವಿಭಾಗಾಧಿ ಕಾರಿ ಸಿ.ಎನ್.ಮಂಜುನಾಥ್, ತಹ­ಶೀಲ್ದಾರ್ ನಾಗರಾಜ್ ಗೌಡ, ತಾ.ಪಂ. ಕಾರ್ಯ­ನಿರ್ವ­­ಹಣಾಧಿಕಾರಿ ಜಾನಕಿ ರಾಮ್, ಭೂ ದಾಖಲೆಗಳ ಸಹಾಯಕ ನಿರ್ದೇ­ಶಕಿ ಮೋನಿಷಾ, ಹಕ್ಕು ದಾಖಲೆ-ಗಳ ಶಿರಸ್ತೇ ದಾರ್ ನಾಗ­ರಾಜ್ ಸೇರಿದಂತೆ ಹಲವು ಅಧಿಕಾರಿ­ಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT