ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದು ಬಣ್ಣದ ಹಾಲು: ಡಿಡಿಪಿಐಗೆ ವರದಿ

Last Updated 3 ಸೆಪ್ಟೆಂಬರ್ 2013, 9:30 IST
ಅಕ್ಷರ ಗಾತ್ರ

ಮುಂಡಗೋಡ:  ಕ್ಷೀರಭಾಗ್ಯ ಯೋಜನೆಯಡಿ ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ವಿತರಿಸಿದ ಹಾಲಿನ ಪುಡಿ ಪೊಟ್ಟಣದಲ್ಲಿಯೇ ಗಟ್ಟಿಯಾಗಿದ್ದರಿಂದ ಮತ್ತು ಹಾಲನ್ನು ಕಾಯಿಸಿದಾಗ ಕಂದು ಬಣ್ಣಕ್ಕೆ ತಿರುಗಿದ ಪ್ರಕರಣದ ಹಿನ್ನೆಲೆಯಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಂಜುನಾಥ್ ಸಾಲಂಕಿ ಅವರು ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಪ್ರಸನ್ನಕುಮಾರ್ ಅವರಿಗೆ ವರದಿ ನೀಡಿದ್ದಾರೆ.

ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ. 31ರಂದು ಹಾಲಿನ ಪ್ಯಾಕೆಟ್‌ಗಳನ್ನು ಪರಿಶೀಲಿಸಿದಾಗ ಹಾಲಿನ ಪುಡಿ ಗಟ್ಟಿಯಾಗಿ ಕಾಯಿಸಿದಾಗ ಕಂದು ಬಣ್ಣಕ್ಕೆ ತಿರುಗಿತ್ತು. ಈ ಹಿನ್ನೆಲೆಯಲ್ಲಿ ಶಾಲಾ ಮುಖ್ಯ ಶಿಕ್ಷಕರು, ಅಕ್ಷರ ದಾಸೋಹ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಆಗ ಕೆಲವು ಹಾಲಿನ ಪ್ಯಾಕೆಟ್‌ಗಳ ಮೇಲೆ ಇಲಾಖೆಯ ನಿಯಮದಂತೆ ಉತ್ಪನ್ನದ ದಿನಾಂಕ, ಅವಧಿ ಮುಗಿಯುವ ದಿನಾಂಕ ನಮೂದಾಗಿರಲಿಲ್ಲ. ಕೆಲ ಪ್ಯಾಕೆಟ್‌ಗಳಲ್ಲಿ ಪೌಡರ್ ಗಟ್ಟಿಯಾಗಿರುವುದು ಕಂಡುಬಂದಿತ್ತು.

`ಹಾಲನ್ನು ಕಾಯಿಸಿದ ನಂತರವೂ ಸರಿಯಾಗಿ ಮಿಶ್ರಣವಾಗದೇ ಗಟ್ಟಿಯಾಗಿರುತ್ತದೆ. ಈ ಹಾಲಿನ ಪೌಡರ್ ಮಾದರಿಯನ್ನು ಆರೋಗ್ಯ ಇಲಾಖೆಗೆ ಪರೀಕ್ಷೆಗಾಗಿ ನೀಡಿದ್ದು, ನ್ಯೂನತೆ ಇರುವ ಪ್ಯಾಕೆಟ್‌ಗಳನ್ನು ಬಳಸದಂತೆ ಶಾಲೆಯವರಿಗೆ ಸೂಚಿಸಲಾಗಿದೆ' ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರು ವರದಿಯಲ್ಲಿ ತಿಳಿಸಿದ್ದಾರೆ.

ಅಧಿಕಾರಿಗಳ ಭೇಟಿ: ಈ ಪ್ರಕರಣದ ಹಿನ್ನೆಲೆಯಲ್ಲಿ ಕೆಎಂಎಫ್‌ನ ಬೆಂಗಳೂರು ಮತ್ತು ಧಾರವಾಡದ ಅಧಿಕಾರಿಗಳು, ಶಿರಸಿ ಆರೋಗ್ಯ ಇಲಾಖೆಯ ನಿರೀಕ್ಷಕರು ಸೋಮವಾರ ಶಾಲೆಗೆ ಭೇಟಿ ನೀಡಿ, ಹಾಲಿನ ಪುಡಿ ಪರೀಕ್ಷೆಗಾಗಿ ಮತ್ತೊಮ್ಮೆ ಹಾಲಿನ ಪುಡಿ ಪ್ಯಾಕೆಟ್‌ಗಳನ್ನು ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಕೆ.ಎಂ.ಎಫ್ ಧಾರವಾಡದ ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕ ಸುರೇಶ ನಾಯ್ಕ, ಸಹಾಯಕ ವ್ಯವಸ್ಥಾಪಕ ಕೆ.ಎಲ್. ಬಡಿಗೇರ ಮತ್ತು ಜಿ.ಡಿ. ದೇಸಾಯಿ, ಕೆ.ಎಂ.ಎಫ್ ಶಿರಸಿಯ ಶೇಖರಣೆ ಮತ್ತು ಉತ್ಪಾದನೆ ವಿಭಾಗದ ಜಯರಾಂ ಭಟ್, ಕೆ.ಎಂ.ಎಫ್. ಬೆಂಗಳೂರಿನ ಗುಣಮಟ್ಟ ನಿಯಂತ್ರಣದ ಉಪನಿರ್ದೇಶಕ ನಾಗರಾಜ, ಶಿರಸಿ ಆರೋಗ್ಯ ಇಲಾಖೆಯ ಆಹಾರ ಸಂರಕ್ಷಣಾಧಿಕಾರಿ ಅರುಣ, ತಾಲ್ಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀದೇವಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೋದ ಪಡ್ತಿ ಮತ್ತಿತರರು ಇದ್ದರು. 
ಶಿರಸಿ ಆರೋಗ್ಯ ಇಲಾಖೆಯ ಆಹಾರ ಸಂರಕ್ಷಣಾಧಿಕಾರಿ ಅರುಣ ಅವರು ಈ ಹಾಲಿನಪುಡಿಯ ಗುಣಮಟ್ಟದ ಪರೀಕ್ಷೆಗಾಗಿ 4 ಹಾಲಿನ ಪುಡಿ ಪ್ಯಾಕೆಟ್‌ಗಳನ್ನು ಬೆಳಗಾವಿಗೆ ಕಳಿಸಿದ್ದಾರೆ.

ಉತ್ಪನ್ನ ದಿನಾಂಕ ಮತ್ತು ಅವಧಿ ಮುಗಿಯುವ ದಿನಾಂಕ ನಮೂದಾಗದೇ ಇರುವ ಅನೇಕ ಹಾಲಿನ ಪುಡಿ ಪ್ಯಾಕೇಟು ತಾಲ್ಲೂಕಿನ ಬೇರೆ ಯಾವುದೇ ಶಾಲೆಗಳಿಗೆ ನೀಡಿದ್ದರೇ ಅವುಗಳನ್ನು ಬದಲಾವಣೆ ಮಾಡಿ ಬೇರೆ ಹಾಲಿನ ಪುಡಿ ಪ್ಯಾಕೆಟ್ ನೀಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT