ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದೆಲಗು ನಿಘಂಟು ರಚನೆಗೆ ಚಾಲನೆ

Last Updated 26 ಡಿಸೆಂಬರ್ 2012, 5:52 IST
ಅಕ್ಷರ ಗಾತ್ರ

ಕೋಲಾರ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವತಿಯಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕನ್ನಡ-ತೆಲುಗು ದ್ವಿಭಾಷೀಯ ಪರಿಸರದ ಪದಕೋಶವನ್ನು ರಚಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದು ಪದಕೋಶದ ಜಿಲ್ಲಾ ಸಂಪಾದಕ ಸ.ರಘುನಾಥ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎರಡೂ ಜಿಲ್ಲೆಗಳಲ್ಲಿ ಕನ್ನಡ-ತೆಲುಗು (ಕಂದೆಲುಗು) ಭಾಷಿಕ ಪರಿಸರವಿದ್ದು, ಜನ ತಮ್ಮ ನಿತ್ಯಜೀವನದಲ್ಲಿ ಕನ್ನಡ-ತೆಲುಗು ಪದಗಳನ್ನು ಒಟ್ಟಿಗೆ ಬಳಸುವುದು ವಾಡಿಕೆ. ಅಂಥ ಪದಗಳೂ ಸೇರಿದಂತೆ ವಿವಿಧ ವೃತ್ತಿ, ಕಲೆ, ಆಚರಣೆಗಳಲ್ಲಿ ಬಳಕೆಯಾಗುವ ಪದಗಳನ್ನು ಸಂಕಲಿಸಿ ಪದಕೋಶ ರಚಿಸಲಾಗುವುದು ಎಂದರು.

ಜನಪದ ಕವಿಗಳಾದ ಪಾಲವೇರಿ ಕದಿರೀಪತಿ, ಕೈವಾರ ತಾತಯ್ಯ, ಇಡಗೂರು ರುದ್ರಕವಿ, ಹೊಸಹುಡ್ಯಂ ವೆಂಕಟರೆಡ್ಡಿ, ಗುಮ್ಮರಾಜು ರಾಮಕವಿ, ಕಾಹಳ ಬೈಯ್ಯಾರೆಡ್ಡಿ, ಜೋಂಕಣಿ ಮುನಿಯಪ್ಪ, ಕೋನಿಗ ಹನುಮಪ್ಪ, ಕೇಳಿಕೆ ಕಲಾವಿದರು, ಕೋಲಾಟದವರು, ಗಬ್ಬಿಳ್ಳು ಹಾಡುಗಾರರು, ಅಸಂಖ್ಯ ಜನಪದ ಗಾಯಕರು, ರೈತರು ಕನ್ನಡದ ಕಂಪನ್ನು ತೆಲುಗುಮಿಶ್ರಿತವಾಗಿ ಹೆಚ್ಚಿಸಿದ್ದಾರೆ. ಈ ಎಲ್ಲರೂ ಅಕ್ಕರೆಯಿಂದ ನೀಡಿದ ಪದ ಸಂಪತ್ತನ್ನು ಸಂಕಲಿಸುವ ಅಪೂರ್ವ ಅವಕಾಶವನ್ನು ವಿಶ್ವವಿದ್ಯಾಲಯ ನೀಡಿದೆ ಎಂದರು.

ಕೋಲಾರ-ಚಿಕ್ಕಬಳ್ಳಾಪುರ ಭಾಷಿಕವಾಗಿ ಇತರೆ ಜಿಲ್ಲೆಗಳಿಗಿಂತ ಬಹಳ ಭಿನ್ನ. ಕೆಲವು ಕಡೆ ಹಳ್ಳಿಯಿಂದ ಹಳ್ಳಿಗೆ ಭಾಷೆ ಬಳಕೆ ಭಿನ್ನವಾಗಿರುವುದನ್ನು ಕಾಣಬಹುದು. ಆಂಧ್ರಪ್ರದೇಶ, ತಮಿಳುನಾಡು ಗಡಿ ಪ್ರದೇಶಗಳ ಕಡೆಗೆ ಹೋದರೆ ಮತ್ತೂ ವೈವಿಧ್ಯತೆಯನ್ನು ಕಾಣಬಹುದು. ಈ ಜಿಲ್ಲೆ ಬಹುಭಾಷೆಗಳ ಸುಂದರ ತೋಟ. ಇದರ ಅಂದವನ್ನು ಮತ್ತೂ ಹೆಚ್ಚಿಸಿರುವುದು ಇಲ್ಲಿರುವ ಒಳನುಡಿ (ಯಾಸ). ಇದನ್ನು ಗಮನಿಸಿದರೆ ಇಲ್ಲಿನವರ ಕನ್ನಡದಲ್ಲಿ ಒಂದು ರೀತಿ ಪೊಗರು, ಪರಿಮಳವಿದೆ ಎಂಬುದು ಅನುಭವಕ್ಕೆ ಬರುತ್ತದೆ. ಇಲ್ಲಿನ ಭಾಷೆ ಆ ಕಾರಣಕ್ಕೆ ಕಂದೆಲುಗು ಅನ್ನಿಸಿದೆ ಎಂದರು.

6 ತಿಂಗಳು: ಪದಕೋಶದ ದೃಷ್ಟಿಯಲ್ಲಿ ಅಷ್ಟೇ ಅಲ್ಲದೇ ಹೊಸ ತಲೆಮಾರಿನ ಜನರಿಗೆ ಸಾಂಸ್ಕೃತಿಕ ಪರಿಸರವನ್ನು ನಿರ್ಮಿಸಿಕೊಡುವ ಪ್ರಯತ್ನವೂ ನಡೆಯಲಿದೆ. 6 ತಿಂಗಳ ಅವಧಿಯೊಳಗೆ ಪದಕೋಶವನ್ನು ರಚಿಸುವಂತೆ ವಿಶ್ವವಿದ್ಯಾಲಯ ಗಡುವು ನೀಡಿದೆ. ಎರಡೂ ಜಿಲ್ಲೆಯ ಭಾಷಿಕ ಸ್ವರೂಪ ಮತ್ತ ಸಾಮಾಜಿಕ ಭಾಷೆಯು ಒಂದೇ ಆಗಿರುವುದರಿಂದ ಈ ಅವಧಿಯೊಳಗೆ ಪದಕೋಶವನ್ನು ಪೂರ್ಣಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಗೆ ಸಂಬಂಧಿಸಿದಂತೆ ಇರುವ ಜನಪದರು, ಜನರು ಕಟ್ಟಿರುವ ಪದಗಳನ್ನು ಸಂಗ್ರಹಿಸಿ ಕೊಡಲು ಸಹಕರಿಸುವ ಸಹೃದಯರನ್ನು ಶೀಘ್ರದಲ್ಲೇ ಆಹ್ವಾನಿಸಿ ಈ ಬಗ್ಗೆ ಚರ್ಚಿಸಲಾಗುವುದು. ಈ ಬಗ್ಗೆ ಆಸಕ್ತಿ ಇರುವವರು 9980593921, 9483137885 ಸಂಖ್ಯೆಗಳನ್ನು ಸಂಪರ್ಕಿಸಿ ವಿವರ ಪಡೆಯಬಹುದು. ಪದಕೋಶ ರಚನೆಗೆಂದೇ  ವಿಶ್ವವಿದ್ಯಾಲಯವು ಡಾ.ಕೆ.ವಿ.ನೇತ್ರಾವತಿ ಎಂಬುವರನ್ನು ಕ್ಷೇತ್ರ ತಜ್ಞರನ್ನಾಗಿ ನೇಮಿಸಿದೆ ಎಂದು ಮಾಹಿತಿ ನೀಡಿದರು.

ಗ್ರಾಮ ಚರಿತ್ರೆ ಕೋಶ: ಪದಕೋಶದ ಜೊತೆಗೆ ವಿಶ್ವವಿದ್ಯಾಲಯವು ಗ್ರಾಮ ಚರಿತ್ರೆ ಕೋಶವನ್ನು ರಚಿಸಲು ಉದ್ದೇಶಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಗಳ ಗ್ರಾಮ ಚರಿತ್ರೆ ಕೋಶವನ್ನು ರಚಿಸಲು ತಮಗೆ ವಿಶ್ವವಿದ್ಯಾಲಯ ಪತ್ರ ಬರೆದಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಜಿ.ಶ್ರೀನಿವಾಸಯ್ಯ ಇದೇ ಸಂದರ್ಭದಲ್ಲಿ ತಿಳಿಸಿದರು.  ಚಿಕ್ಕಬಳ್ಳಾಪುರ ಜಿಲ್ಲೆಯ ಸುಮಾರು 2 ಸಾವಿರ ಹಳ್ಳಿಗಳ ಚರಿತ್ರೆ ಕೋಶ ರಚನೆಗೆ ಸಿದ್ಧತೆ ನಡೆದಿದೆ. ಈ ನಿಟ್ಟಿನಲ್ಲಿ ಕ್ಷೇತ್ರ ಸಹಾಯಕರ ಆಯ್ಕೆ ಪ್ರಕ್ರಿಯೆ ಡಿ.28ರಂದು ನಡೆಯಲಿದೆ ಎಂದರು.

ಜಿಲ್ಲೆಯಲ್ಲಿ ಹಿರಿಯರು ಬಳಸುತ್ತಿದ್ದ ಕನ್ನಡ-ತೆಲುಗು ಮಿಶ್ರಿತ ಪದಗಳು, ಬೈಯ್ಗುಳ ಸೇರಿದಂತೆ ಹಲವು ಪದಗಳ ಬಳಕೆ ನಿಂತಿರುವುರಿಂದ ಹೊಸ ತಲೆಮಾರಿನವರಿಗೆ ಭಾಷಿಕ ಪರಂಪರೆ ಅರಿವು ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಜಾನಪದ ವಿಶ್ವವಿದ್ಯಾಲಯದ ಪ್ರಯತ್ನ ಸ್ವಾಗತಾರ್ಹವಾದದ್ದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜಿ.ನಾಗರಾಜ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT