ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪಳರಂಗಸ್ವಾಮಿ ಜಾತ್ರೆಗೆ ತೆರೆ

Last Updated 14 ಫೆಬ್ರುವರಿ 2011, 8:20 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಮ್ಯಾಸನಾಯಕ ಜನಾಂಗದ ಕುಲದೇವರ ಮೂಲ ಸ್ಥಳವಾದ ತಾಲ್ಲೂಕಿನ ತುಮಕೂರ್ಲಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕುಂತಿಯ ಕಂಪಳರಂಗ ಸ್ವಾಮಿ ಜಾತ್ರೆಗೆ ಭಾನುವಾರ ಸಂಜೆ ವೈಭವದ ತೆರೆಬಿದ್ದಿತು.

ಭಕ್ತರು ತಂದಿದ್ದ ಮೀಸಲು ಬೆಣ್ಣೆಯನ್ನು ಎತ್ತಿನ ಕೊಂಬಿನಿಂದ ವಿಶೇಷವಾಗಿ ತಯಾರಿಸಿದ ದೀವಿಕೆಗಳಿಗೆ ಅರ್ಪಣೆ ಮಾಡಲಾಯಿತು. ನಂತರ ಮಹಾಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಂತಿಮವಾಗಿ ಸ್ವಾಮಿಯ ಬೆಳ್ಳಿಬೆತ್ತ, ಜೋಳಿಗೆ ಕಾರ್ಯಕ್ರಮಗಳು ನಡೆದ ನಂತರ ಪಕ್ಕದ ಬಳ್ಳಾರಿ ಜಿಲ್ಲೆ ಹೂಡೇಂನ ಬೋಸೇದೇವ ನಾಯಕ, ವಲಸೆಯ ಮೀಸಲು ನಾಯಕ ಮತ್ತು ಮೊಳಕಾಲ್ಮುರು ತಾಲ್ಲೂಕಿನ ಸೂರಮ್ಮನಹಳ್ಳಿಯ ಗಟ್ಟಿ ಮುತ್ತಿನಾಯಕ ಹಾಗೂ ಕುಮುತಿ ಗ್ರಾಮದ ದಾದನೂರು ನಾಯಕರ ಸಂತೋಷದ ಕುಣಿತ ಕಾರ್ಯಕ್ರಮ ಬಳಿಕ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಸ್ವಗ್ರಾಮಗಳಿಗೆ ಬೀಳ್ಗೊಡುವ ಕಾರ್ಯಕ್ರಮ ನಡೆಯಿತು.

ಭಾನುವಾರ ಸಂಜೆ ವೈಭವದ ಮೆರವಣಿಗೆ ಮೂಲಕ ದೇವರಹಟ್ಟಿಯ ಪದಿಯಲ್ಲಿ ಸ್ಥಾಪಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗಿದ್ದ ಜಗಳೂರು ಪಾಪನಾಯಕ, ಕಂಪಳರಂಗ ಸ್ವಾಮಿ ಮತ್ತು ಅಪ್ಪೇನಹಳ್ಳಿ ಗ್ರಾಮದ ಜೋಗೇಶ್ವರ ದೇವರನ್ನು ವಿವಿಧ ಬಗೆಯ ಜಾನಪದ ಕಲಾ ತಂಡಗಳ ಸಮ್ಮುಖದಲ್ಲಿ ಭವ್ಯ ಮೆರವಣಿಗೆಯಲ್ಲಿ ಕರೆದೊಯ್ದು ಗುಡಿಗಳಲ್ಲಿ ಮರು ಸ್ಥಾಪಿಸಲಾಯಿತು. ಭಕ್ತರಿಂದ ಬಾಳೆಹಣ್ಣು, ಸೂರು ಬೆಲ್ಲ, ಬೆಲ್ಲ ಮಣೇವು ಅರ್ಪಣೆ, ಮಂಡಕ್ಕಿ, ಹೂವು ಅರ್ಪಣೆ ನಡೆಯಿತು.

ಜಿ.ಪಂ. ಸದಸ್ಯ ಎಚ್.ಟಿ. ನಾಗರೆಡ್ಡಿ, ನರಸಮ್ಮ, ಮಾರಕ್ಕ, ಲಕ್ಷ್ಮೀದೇವಿ, ಮಾಜಿ ಸದಸ್ಯ ಪಟೇಲ್ ತಿಪ್ಪೇಸ್ವಾಮಿ, ತಾ.ಪಂ. ಸದಸ್ಯರಾದ ರತ್ನಮ್ಮ, ತಿಪ್ಪಮ್ಮ, ಗ್ರಾ.ಪಂ. ಅಧ್ಯಕ್ಷೆ ಮಂಜಮ್ಮ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT