ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪೆನಿ ಸ್ಥಾಪನೆ: ಭೂಸ್ವಾಧೀನಕ್ಕೆ ವಿರೋಧ

Last Updated 7 ಸೆಪ್ಟೆಂಬರ್ 2011, 11:20 IST
ಅಕ್ಷರ ಗಾತ್ರ

ಮಂಗಳೂರು: ಬಂಟ್ವಾಳ ತಾಲ್ಲೂಕಿನ ಬಾಳೆಪುಣಿ, ಕೈರಂಗಳ, ಕುರ್ನಾಡು ಸುತ್ತಮುತ್ತಲಿನ ಗ್ರಾಮಗಳಲ್ಲಿ ಖಾಸಗಿ ಕಂಪೆನಿಗಳ ಸ್ಥಾಪನೆಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ವತಿಯಿಂದ ಸುಮಾರು 200 ಎಕರೆ ಭೂಸ್ವಾಧೀನ ಕಾರ್ಯ ಆರಂಭವಾಗಿದ್ದು, ಜಿಲ್ಲೆಯಲ್ಲಿ ಇಂತಹ ಪ್ರಕ್ರಿಯೆಗಳನ್ನು ನಡೆಸಲೇಬಾರದು ಎಂದು ವಿವಿಧ ನಾಗರಿಕ ಸಂಘಟನೆಗಳು ಒತ್ತಾಯಿಸಿವೆ.

ಮಂಗಳವಾರ ಇಲ್ಲಿ `ಸಾಂವಿಧಾನಿಕ ಚಳವಳಿ~ ಸಂಘಟನೆ ಆಶ್ರಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಹಿಂದ ಜಿಲ್ಲಾ ಘಟಕ ಅಧ್ಯಕ್ಷ ಲೋಲಾಕ್ಷ ಅವರು ಈ ಒತ್ತಾಯ ಮಾಡಿದರು. ಸಂಘಟನೆ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಅವರಿಗೆ ಸಲ್ಲಿಸಲಾದ ಮನವಿಯನ್ನು ಓದಿ ಹೇಳಿದರು.

ಕೆಐಎಡಿಬಿ ಈಗಾಗಲೇ ಜಿಲ್ಲೆಯಲ್ಲಿ ಕೈಗಾರಿಕೆಗಳಿಗಾಗಿ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದೆ. ಅದರಲ್ಲಿಯೇ ಇನ್ನೂ ಸಾಕಷ್ಟು ಜಮೀನು ಬಳಕೆಯಾಗಿಯೇ ಇಲ್ಲ. ಸ್ವಾಧೀನಪಡಿಸಿಕೊಂಡ ಭೂಮಿಯನ್ನೇ ಪೂರ್ಣ ಬಳಕೆ ಮಾಡದೇ ಇನ್ನಷ್ಟು ಭೂಮಿಯ ಸ್ವಾಧೀನಕ್ಕೆ ಮುಂದಾಗಿರುವುದು ಸರಿಯಲ್ಲ. ಈ ಕ್ರಮ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

ರಸ್ತೆ, ರೈಲು ಮಾರ್ಗ, ವಿಮಾನ ನಿಲ್ದಾಣ, ಸರ್ಕಾರ ಕಟ್ಟಡ ಸಂಕೀರ್ಣಗಳ ನಿರ್ಮಾಣದಂತಹ ನೈಜ ಉದ್ದೇಶಗಳಿಗೆ ಭೂಸ್ವಾಧೀನ ಮಾಡಿದರೆ ಅಡ್ಡಿ ಇಲ್ಲ ಎಂದ ಅವರು, ಈಗಾಗಲೇ ಸ್ವಾಧೀನಪಡಿಸಿಕೊಂಡು ಬಳಸದೆ ಇರುವ ಜಮೀನನ್ನು ವಸತಿ ರಹಿತ ಬಡವರಿಗೆ ವಿತರಿಸಬೇಕು ಎಂದು ಒತ್ತಾಯಿಸಿದರು.
ಕೆಐಎಡಿಬಿ ಕಾಯ್ದೆಯ ಸೆಕ್ಷನ್ 28(1) ಅಡಿಯಲ್ಲಿ ಭೂಸ್ವಾಧೀನಕ್ಕೆ ಮಂಡಳಿ ಮುಂದಾಗಿದ್ದು, ಇದನ್ನು ತಕ್ಷಣ ರದ್ದುಪಡಿಸಬೇಕು.

ಅತ್ಯಂತ ಸೂಕ್ಷ್ಮ ಪರಿಸರ ಮತ್ತು ಜೀವ ವೈವಿಧ್ಯ ಇರುವ ಈ ಜಿಲ್ಲೆಯಲ್ಲಿ ಖಾಸಗಿ ಕಂಪೆನಿಗಳ ಪರವಾಗಿ ಸರ್ಕಾರ `ದಲ್ಲಾಳಿ~ ಪಾತ್ರ ನಿರ್ವಹಿಸಬಾರದು ಎಂದು ಅವರು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ರೋಹಿತಾಶ್ವ ರೈ ಕುಳಾಯಿಬೆಟ್ಟು ಮಾತನಾಡಿ, 17 ವರ್ಷದ ಹಿಂದೆಯೇ ಕುಳಾಯಿಯಲ್ಲಿ 610 ಎಕರೆ ಜಮೀನನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದೆ. ಆದರೆ ಅಲ್ಲಿ ಈವರೆಗೂ ಕೈಗಾರಿಕೆಗಳು ಸ್ಥಾಪನೆಗೊಂಡಿಲ್ಲ. ಇನ್ನು ಮುಂದೆ ರೈತರು ತಮ್ಮ ಜಮೀನನ್ನು ಕೆಐಎಡಿಬಿಗೆ ಯಾವ ಕಾರಣಕ್ಕೂ ನೀಡಬಾರದು ಎಂದರು.

ಸಾಂವಿಧಾನಿಕ ಚಳವಳಿಯ ಸಂಚಾಲಕಿ ರೀಟಾ ನರೋನ್ಹಾ ಮಾತನಾಡಿ, ನೈಸರ್ಗಿಕ ಸಂಪನ್ಮೂಲವನ್ನು ಸಮುದಾಯದ ಕಲ್ಯಾಣಕ್ಕಾಗಿ ಬಳಸಬೇಕೇ ಹೊರತು ಸ್ವಂತಕ್ಕಲ್ಲ. ಆದರೆ ಇಂದಿನ ರಾಜಕೀಯ ನೀತಿಗಳಿಂದಾಗಿ ಫಲವತ್ತಾದ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ.

ದೇಶದಲ್ಲಿ ಕೈಗಾರಿಕಾ ದೊರೆಗಳನ್ನು ಸೃಷ್ಟಿಸುತ್ತಿರುವಂತೆ ಕಾಣುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಕೀಲ ಮಧುಕರ ಅಮೀನ್, ಪಿ.ವಿ.ಮೋಹನ್, ಧನಕೀರ್ತಿ ಬಲಿಪ ಮೂಡುಬಿದಿರೆ, ಹನೀಫ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT