ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್ ಆನ್ಗೆ ಕ್ಷಣ ಕ್ಷಣ ...

Last Updated 23 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ


ನೀವು ಕಚೇರಿ ಕೆಲಸ ಮುಗಿಸಿ   ಮನೆಗೆ ಹೊರಡುವ ಅವಸರದಲ್ಲಿದ್ದೀರಿ, ಕಂಪ್ಯೂಟರ್-ಸಿಸ್ಟಮ್ ‘ಆಫ್ ‘ ಮಾಡಿಯೂ ಆಗಿದೆ. ಅಷ್ಟರಲ್ಲೇ ಮೇಲಧಿಕಾರಿಯಿಂದ ‘ಇ-ಮೇಲ್ ಪರೀಕ್ಷಿಸಿ ’ ಎಂಬ ಫೋನ್ ಸಂದೇಶ ಬಂದಿದೆ...ನಿಮ್ಮ ಅವಸ್ಥೆ ಹೇಗಾಗಬೇಡ ಹೇಳಿ. ತುರ್ತಾಗಿ ಮನೆಗೆ ಹೋಗಬೇಕಿದೆ. ಅದೇನೋ ಕಾರ್ಯಕ್ರಮ ಇರಿಸಿಕೊಂಡಿದ್ದೀರಿ. ಅಲ್ಲಿ ನಿಮಗಾಗಿ ಎಲ್ಲರೂ ಕಾಯುತ್ತಿರುತ್ತಾರೆ. ಇಲ್ಲಿ  ಸ್ಥಗಿತಗೊಂಡಿರುವ  ಕಂಪ್ಯೂಟರ್  ‘ಆನ್’ ಮಾಡಬೇಕು... ಇದೇನು ಹೇಳಿದಷ್ಟು ಸುಲಭವೇ? ಆನ್ ಆಗಲು ಕೆಲವು ನಿಮಿಷ, ಇ-ಮೇಲ್ ವ್ಯವಹಾರ ಮುಗಿಸಲು ಕಡಿಮೆ ಎಂದರೂ 15ರಿಂದ 20 ನಿಮಿಷ ಕಾಲವಾದರೂ ಬೇಕು...

ಈ ಹೊತ್ತಲ್ಲಿ ಇ-ಮೇಲ್ ಕಳುಹಿಸಿದವರಿಗೆ ಹಿಡಿಶಾಪ ಹಾಕುವುದರೊಂದಿಗೆ, ‘ಶಿಟ್, ಈ ಕಂಪ್ಯೂಟರ್ ತುಂಬಾ ಸ್ಲೊ... ಹಾಳಾದ್ದು’ ಅಂತ ಗೊಣಗುವುದಷ್ಟೇ ನಿಮ್ಮ ಅಸಹಾಯಕತೆಯಲ್ಲಿ ಉಳಿದಿರುವ ಪರಿಹಾರ...!ಆದರೆ, ಇನ್ನು ಮುಂದೆ ಚಿಂತೆ ಬೇಡ.  ದಶಕಗಳಷ್ಟು ಹಳೆಯ ‘ಬೂಟ್ ಸಿಸ್ಟಮ್’ (ಕಂಪ್ಯೂಟರ್ ಆನ್ ಆಗುವ ತಾಂತ್ರಿಕತೆ) ‘ಬಯೋಸ್’ (ಬೇಸಿಕ್ ಇನ್‌ಪುಟ್ ಔಟ್‌ಪುಟ್ ಸಿಸ್ಟಮ್) ಈಗ ಬದಲಾಗುತ್ತಿದೆ. ಹೊಸ ತಂತ್ರಜ್ಞಾನ, ಹೊಸ ಸಾಫ್ಟ್‌ವೇರ್ ನಿಮ್ಮ ನೆರವಿಗೆ ಬಂದಿದೆ.  ಕೆಲವು ನಿಮಿಷಗಳ ಕಾಲ ಕಾಯಬೇಕಿಲ್ಲ. ಬೆರಳೆಣಿಕೆಯ ಸೆಕೆಂಡುಗಳ ಅಲ್ಪಾವಧಿಯಲ್ಲಿ ಇನ್ನು ಕಂಪ್ಯೂಟರ್ ಆನ್ ಆಗಿ ಕೆಲಸಕ್ಕೆ ಸಿದ್ಧವಾಗುತ್ತದೆ.

ವಿಜ್ಞಾನಿಗಳು ಈ ನಿಟ್ಟಿನಲ್ಲಿ ಅತ್ಯಂತ ವೇಗವಾಗಿ ಕಡಿಮೆ ಅವಧಿಯಲ್ಲಿ ಕಾರ್ಯ ನಿರ್ವಹಿಸಬಲ್ಲ ತಂತ್ರಜ್ಞಾನವನ್ನು ಸಿದ್ಧಪಡಿಸಿದ್ದಾರೆ. ಬಯೋಸ್ ಸಮಸ್ಯೆ: ಬಯೋಸ್  ಎಂದರೆ ‘ಬೇಸಿಕ್ ಇನ್‌ಪುಟ್ ಔಟ್‌ಪುಟ್ ಸಿಸ್ಟಮ್’. ಇದು  25 ವರ್ಷಗಳಷ್ಟು  ಹಳೆಯದು. ಕಂಪ್ಯೂಟರ್ ಆನ್ ಆಗಲು ಬಳಸುವ ಸಾಂಪ್ರದಾಯಿಕ ಬಯೋಸ್ ತಂತ್ರಜ್ಞಾನವನ್ನು 1979 ರಿಂದಲೂ ಬಳಸಲಾಗುತ್ತಿದೆ. ಆಗಿನಿಂದ ಇದುವರೆಗೂ ಅದನ್ನು ಪುನರ್ ವಿನ್ಯಾಸ ಮಾಡದಿರುವುದು ಆಧುನಿಕ ಕಂಪ್ಯೂಟರ್‌ಗಳು ಆನ್ ಆಗಲು ಸಾಕಷ್ಟು ದೀರ್ಘ ಸಮಯ ಹಿಡಿಯುವುದು ಒಂದು ಕಾರಣ.

ಹೊಸ ಯುಇಎಫ್‌ಐ
ಹೊಸ  ತೀಕ್ಷ್ಣ ಸಾಫ್ಟವೇರ್‌ನ ಹೆಸರು ‘ಯುಇಎಫ್‌ಐ’. ಇದು ಕಂಪ್ಯೂಟರ್‌ಗಳು ಆನ್ ಆಗುವ ವೇಗವನ್ನು ಹೆಚ್ಚಿಸುತ್ತದೆ. ಮುಂದಿನ ಪೀಳಿಗೆ- ಕಂಪ್ಯೂಟರ್‌ಗಳನ್ನು ಕೆಲವೇ ಸೆಕೆಂಡುಗಳಲ್ಲಿ ಆನ್ ಆಗುವಂತೆ ಈ ತಂತ್ರಜ್ಞಾನ ಮೂಲಕ ತ್ವರಿತಗೊಳಿಸಲು ಸಾಧ್ಯವಿದೆ ಎಂದು ತಜ್ಞನರು ಹೇಳುತ್ತಿದ್ದಾರೆ.

‘ಯುಇಎಫ್‌ಐ’ - ಇದು ಏಕೀಕೃತ ಮುಂದುವರಿಸಬಹುದಾದ ಗಣಕಯಂತ್ರದ ಅಂತರ ಸಂಪರ್ಕ ಸಾಧನ. ಆಧುನಿಕ ಕಂಪ್ಯೂಟರ್‌ಗಳ ಅಗತ್ಯತೆಗಳನ್ನು ಪೂರೈಸುತ್ತದೆ. ಹೊಸ ಪೀಳಿಗೆ ಕಂಪ್ಯೂಟರ್‌ಗಳಲ್ಲಿ ಸುಧಾರಿತ ತಂತ್ರಜ್ಞಾನವಾಗಿ ಬಳಕೆಯಾಗುತ್ತದೆ.ಸಾಮೂಹಿಕ ಮತ್ತು ಸಾರ್ವತ್ರಿಕ ಬಳಕೆಯ ಕಂಪ್ಯೂಟರ್‌ಗಳ ಆವಿಷ್ಕಾರದೊಂದಿಗೆ ‘ಬಯಾಸ್’ಅನ್ನೇ ಬಳಸಲಾಯಿತು. ಆದರೆ ಆಧುನಿಕತೆಯ ಅಗತ್ಯಕ್ಕೆ ತಕ್ಕಂತೆ ಪರಿವರ್ತನೆಗೊಳ್ಳಲು ಅದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ  ಸುಧಾರಿತ ಸಾಫ್ಟ್‌ವೇರ್ ‘ಯುಇಎಫ್‌ಐ’ ಹೆಚ್ಚಿನ ಕ್ಷಮತೆಗೆ ಕಾರಣವಾಗಲಿದೆ. 

ಭಾರಿ ಬೇಡಿಕೆ: ‘ಯುಇಎಫ್‌ಐ’ ತಂತ್ರಜ್ಞಾನವು ಹೆಚ್ಚಿನ ಕಾರ್ಯಕ್ಷಮತೆ ಹೊಂದಿದೆ. ಕಂಪ್ಯೂಟರ್, ಕೀ- ಬೋರ್ಡ್‌ಗೆ ವೇಗ ನೀಡುವುದರೊಂದಿಗೆ, ಹಬ್, ಪೋರ್ಟ್‌ಗಳ  ಬಾಹ್ಯ ಸಂಪರ್ಕ ಸಲಕರಣೆಗಳ ವೇಗವನ್ನೂ ಇದು ಹೆಚ್ಚಿಸಲು ಸಮರ್ಥವಾಗಿದೆ. ಟಚ್-ಸ್ಕ್ರೀನ್ ಮತ್ತು ಇತರ ಅತ್ಯಾಧುನಿಕ ಕಂಪ್ಯೂಟರ್‌ಗಳಿಗೂ ಸುಲಭವಾಗಿ ಬಳಸಬಹುದು.

ಕಂಪ್ಯೂಟರ್ ರಂಗದ ಮಾರುಕಟ್ಟೆಯಲ್ಲಿ ‘ಯುಇಎಫ್‌ಐ’ ತಂತ್ರಜ್ಞಾನಕ್ಕೆ ಭಾರಿ ಬೇಡಿಕೆ ಕಂಡುಬಂದಿದೆ. ಆದರೆ ಇದರ ಲಭ್ಯತೆಗೆ ನೀವು ಇನ್ನೊಂದು ವರ್ಷ ಕಾಯಬೇಕು. ಆನ್-ಸಮಯ ಕಡಿಮೆ ಮಾಡುವ ಪ್ರಯತ್ನ ಕಂಪ್ಯೂಟರ್‌ಗಳಿಗಷ್ಟೇ ಸೀಮಿತವಲ್ಲ, ಈಗ ಮೊಬೈಲ್ ನೋಟ್‌ಬುಕ್-ನೆಟ್ ಕಂಪ್ಯೂಟರ್ ತಯಾರಿಕಾ ಕಂಪೆನಿಗಳ ನಿದ್ದೆಕೆಡಿಸಿವೆ. ಅವರೂ ಈ ನಿಟ್ಟಿನಲ್ಲಿ ಸಜ್ಜಾಗಿದ್ದಾರೆ.

ಗೂಗಲ್ ಸಾಧನೆ: ಪ್ರತಿಷ್ಠಿಯ ಗೂಗಲ್ ಕಂಪೆನಿ ಕೂಡ ಈ ನಿಟ್ಟಿನಲ್ಲಿ ದಾಪುಗಾಲಿಟ್ಟಿದೆ. ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಗೂಗಲ್‌ನ ‘ಕ್ರೋಮ್ ಒಎಸ್’ನಲ್ಲಿ ಆನ್ ವಿಧಾನ (ಬೂಟ್ ಟೈಮ್) ಕೆಲವು ಸೆಕೆಂಡುಗಳ ಕಾಲ ಮಾತ್ರ ಇರುತ್ತದೆ ಎಂಬ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT