ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಗಳಿಗೆ `ಚಿನ್ನ'ದ ಲೇಪನ

ಮೈಸೂರು ಅಂಬಾವಿಲಾಸ ಅರಮನೆ ದರ್ಬಾರ್ ಹಾಲ್
Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ಅಂಬಾವಿಲಾಸ ಅರಮನೆಯ ಖಾಸಗಿ ದರ್ಬಾರ್ ಹಾಲ್‌ನಲ್ಲಿರುವ ಕಂಬಗಳು, ಕಲ್ಯಾಣ ಮಂಟಪ ಹಾಗೂ ಗೋಡೆಗಳ ಮೇಲಿರುವ ಚಿತ್ರಗಳಿಗೆ `ಚಿನ್ನ'ದ ಲೇಪನದ (ಗೋಲ್ಡ್ ಲೀಪ್) ಭಾಗ್ಯ ಒದಗಿ ಬಂದಿದೆ.

ಖಾಸಗಿ ದರ್ಬಾರ್‌ನಲ್ಲಿ ಒಟ್ಟು 36 ಕಂಬಗಳಿವೆ. ಇವುಗಳ ಮೇಲೆ ಈ ಮೊದಲೇ ಚಿನ್ನದ ಲೇಪನ ಮಾಡಲಾಗಿತ್ತು. ಆದರೆ, ಕಾಲಾಂತರದಲ್ಲಿ ಹಾಗೂ ಪ್ರವಾಸಿಗರ ಸ್ಪರ್ಶದಿಂದ ಕಂಬಗಳು ಬಣ್ಣ ಹಾಗೂ ಚಿನ್ನದ ಹೊಳಪು ಕಳೆದುಕೊಂಡಿದ್ದವು.

ಖಾಸಗಿ ದರ್ಬಾರ್‌ನ ವೈಭೋಗ ಹಾಗೂ ಕಲಾತ್ಮಕತೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಅರಮನೆ ಆಡಳಿತ ಮಂಡಳಿ ಈ ಕೆಲಸಕ್ಕೆ ಮುಂದಾಗಿದೆ.

`ಕಂಬಗಳು ಹಾಗೂ ಅವುಗಳಲ್ಲಿನ ಕಲಾತ್ಮಕ ಕೆಲಸಗಳ ಸಂರಕ್ಷಣೆ ಮಾಡುವಾಗ ಮೂಲದಲ್ಲಿ ಉಪಯೋಗಿಸಲಾಗಿದ್ದ ಸಾಮಗ್ರಿಗಳನ್ನೇ ಬಳಸಿ, ಸಂರಕ್ಷಿಸಿ, ಪುನರುಜ್ಜೀವನಗೊಳಿಸಬೇಕು. ಕೃತಕ ಬಣ್ಣದ ಬಳಕೆಯನ್ನು ಸಂಪೂರ್ಣ ಕೈಬಿಟ್ಟು ಮೂಲ ಬಣ್ಣಗಳನ್ನೇ ಬಳಸಬೇಕು' ಎಂಬ ಷರತ್ತುಗಳೊಂದಿಗೆ ಗಂಜೀಫಾ ಕಲೆಯಲ್ಲಿ ಪರಿಣತರಾದ ರಘುಪತಿ ಭಟ್ ಅವರಿಗೆ ಇದರ ಉಸ್ತುವಾರಿ ವಹಿಸಲಾಗಿದೆ.

ಅರಮನೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ನೀಡಿರುವ ರೂ25 ಕೋಟಿ ಅನುದಾನದಲ್ಲಿ ಚಿನ್ನದ ಲೇಪನ ಹಾಗೂ ಕಂಬಗಳ ಸಂರಕ್ಷಣೆಗಾಗಿ ರೂ3.5 ಕೋಟಿ ವೆಚ್ಚ ಮಾಡಲಾಗುತ್ತಿದೆ. ರಘುಪತಿ ಭಟ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ನುರಿತ ಕುಶಲಕರ್ಮಿಗಳು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ಶೇ 80ರಷ್ಟು ಕೆಲಸವನ್ನು ಪೂರ್ಣಗೊಳಿಸಿದ್ದಾರೆ.

`ಒಟ್ಟು ನಾಲ್ಕು ಹಂತದಲ್ಲಿ ಕಂಬಗಳನ್ನು ಸಂರಕ್ಷಿಸುವ ಕೆಲಸ ಮಾಡಲಾಗುತ್ತಿದೆ. ಅಳಲೆ, ಭಜೆ, ಕುರುಳೆ, ಗರಿಕೆ, ಮುರು, ಕುಸುಂಭ, ಅತಿ ಮಧುರ, ಗುಗ್ಗಲು, ಹಾವಿನ ಸೋಲೆ, ಕರ್ಪೂರ, ಬೇವು ಮಿಶ್ರಣದ ಕಷಾಯವನ್ನು ಕುದಿಸಲಾಗುತ್ತದೆ. ಕಂಬವನ್ನು ಶುದ್ಧ ನೀರಿನಿಂದ ತೊಳೆದು, ಆ ಬಳಿಕ ಕಷಾಯದಲ್ಲಿ ಶುಚಿಗೊಳಿಸಲಾಗುತ್ತದೆ.

ಎರಡನೇ ಹಂತದಲ್ಲಿ ಕ್ರಿಮಿನಾಶಕ, ಸಿಲ್ವರ್ ಫಿಶ್ ಹಾಗೂ ಫಂಗಸ್ ನಿರೋಧಕ ಮತ್ತು ಸ್ತಂಭನ ಶಕ್ತಿ ವರ್ಧಕದಿಂದ ಶುಚಿ ಮಾಡಲಾಗುತ್ತದೆ. ಮೂರನೇ ಹಂತದಲ್ಲಿ ಸೋರೆಕಾಯಿ, ಸಂಧನ ಚಕ್ಕೆ, ಕುಮಾರಿ ಮಿಶ್ರಣವನ್ನು ಒಂದು ದಿನ ನೀರಿನಲ್ಲಿ ನೆನೆಸಿ ಆ ಬಳಿಕ ಅದನ್ನು ಬಳಸಿ ಶುದ್ಧೀಕರಣ ಮಾಡಲಾಗುತ್ತದೆ. ಇದರಿಂದ ಕಂಬಗಳ ಮೇಲಿನ ವರ್ಣಗಳಲ್ಲಿ ಹಿಂದಿನ ಕಾಂತಿ ಮರುಕಳಿಸುತ್ತದೆ.

ಶುದ್ಧ ಮರಳು, ಬೆಲ್ಲ, ಸುಣ್ಣ, ಆನೆಕಾಯಿ, ಬಿಲ್ವ ಮರದ ಅಂಟುಗಳನ್ನು ಪ್ರಮಾಣಕ್ಕೆ ತಕ್ಕಂತೆ ಮಿಶ್ರಣಗೊಳಿಸಿ, ಸ್ವಲ್ಪ ಸಿಮೆಂಟ್ ಬೆರೆಸಿ ಭಿನ್ನವಾಗಿರುವ ಕಂಬಗಳ ಭಾಗಕ್ಕೆ ಲೇಪಿಸಲಾಗುತ್ತದೆ' ಎನ್ನುತ್ತಾರೆ ರಘುಪತಿ ಭಟ್.

`ಬೇರು, ಮಣ್ಣು, ಎಲೆ, ತೊಗಟೆ, ಕೆಲವು ಗಿಡಗಳ ಬೀಜ ಮತ್ತು ಹೂವುಗಳನ್ನು ಬಳಸಿ ಬಣ್ಣಗಳನ್ನು ತಯಾರಿಸಲಾಗುತ್ತದೆ. ಇನ್ನು ಕೆಲವು ಭಾಗಗಳಲ್ಲಿ ಪುರಾತನ ತಂತ್ರ ಮತ್ತು ಆಧುನಿಕ ತಂತ್ರಗಳ ಮಿಶ್ರಣಗಳಿಂದ ಉಂಟಾದ ಬಣ್ಣಗಳನ್ನು ಉಪಯೋಗಿಸಲಾಗುತ್ತದೆ.

ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಚಿನ್ನದ ಲೇಪನ ಮಾಡಲಾಗುತ್ತದೆ.ಇದು ಅತ್ಯಂತ ಸೂಕ್ಷ್ಮ ಕೆಲಸವಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಅರಮನೆಯ ಅಂದ ಹೆಚ್ಚಲಿದೆ' ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT