ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಾರ ಅಭಿನಂದನೆಗೆ ವಿರೋಧ: ಪ್ರತಿಭಟನೆ

Last Updated 1 ಅಕ್ಟೋಬರ್ 2011, 10:00 IST
ಅಕ್ಷರ ಗಾತ್ರ

ಬೆಳಗಾವಿ: ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿರುವ ಖ್ಯಾತ ನಾಟಕಕಾರ ಡಾ. ಚಂದ್ರಶೇಖರ ಕಂಬಾರರ ಅಭಿನಂದನಾ ಗೊತ್ತುವಳಿಗೆ ವಿರೋಧ ವ್ಯಕ್ತಪಡಿಸಿದ ಮಹಾನಗರ ಪಾಲಿಕೆಯ ಮರಾಠಿ ಪರ ಸದಸ್ಯ ಸಂಭಾಜಿ ಚೌವಾಣರ ಪ್ರತಿಕೃತಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದಹಿಸುವ ಮೂಲಕ ಶುಕ್ರವಾರ ಪ್ರತಿಭಟಿಸಿದರು.

ಗುರುವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಡಾ. ಚಂದ್ರಶೇಖರ ಕಂಬಾರ ಅವರಿಗೆ ಅಭಿನಂದನೆ ಸಲ್ಲಿಸುವ ಗೊತ್ತುವಳಿಗೆ ಮರಾಠಿ ಪರ ಸದಸ್ಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಗರದ ಚನ್ನಮ್ಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಚನ್ನಮ್ಮ ವೃತ್ತದಲ್ಲಿ ಪ್ರತಿಕೃತಿ ದಹಿಸಿದ ಕರವೇ ಕಾರ್ಯಕರ್ತರು, ಬಳಿಕ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ಮಹಾನಗರ ಪಾಲಿಕೆಯಲ್ಲಿ ಕನ್ನಡಕ್ಕೆ ನಿರಂತರವಾಗಿ ಅನ್ಯಾಯ ಹಾಗೂ ಅಪಮಾನ ಮಾಡಲಾಗುತ್ತಿದೆ. ಗುರುವಾರ ನಡೆದ ಪಾಲಿಕೆ ಸಾಮಾನ್ಯ ಸಭೆ ಇದಕ್ಕೆ ಸಾಕ್ಷಿಯಾಗಿದೆ. ಚಂದ್ರಶೇಖರ ಕಂಬಾರರು ಬೆಳಗಾವಿ ಜಿಲ್ಲೆಯವರೇ ಎಂಬ ಜ್ಞಾನವೂ ಇಲ್ಲದೇ ಸದಸ್ಯ ಸಂಭಾಜಿ ಚೌವಾಣ ಅಭಿನಂದನಾ ಗೊತ್ತುವಳಿಯ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಮೂಲಕ ಕನ್ನಡಕ್ಕೆ ಅವಮಾನ ಮಾಡಲಾಗಿದೆ ಎಂದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ದೇಸಿ ಸೊಗಡು ಹಾಗೂ ಉತ್ತರ ಕರ್ನಾಟಕ ಭಾಷೆಗೆ ಸಾಹಿತ್ಯಿಕ ಗೌರವವನ್ನು ಕಂಬಾರರು ತಂದುಕೊಟ್ಟಿದ್ದಾರೆ. ಇಂಥ ಧೀಮಂತ ಸಾಹಿತಿಗೆ ಅಭಿನಂದನೆ ಸಲ್ಲಿಸಲು ವಿರೋಧ ವ್ಯಕ್ತಪಡಿಸಿದ ಸಂಭಾಜಿ ಚೌವಾಣ ಹಾಗೂ ಅವರನ್ನು ಬೆಂಬಲಿಸಿ ಇನ್ನಿತರ ಮರಾಠಿ ಪರ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗಣೇಶ ರೋಕಡೆ, ಮಹಾದೇವ ತಳವಾರ, ರಾಜು ನಾಶಿಪುಡಿ, ಬಾಳು ಜಡಗಿ, ಹೊಲೆಪ್ಪ ಸುಳದಾಳ, ಸುರೇಶ ಗವನ್ನವರ, ಭೂಪಾಲ ಅತ್ತು, ಟಿ. ಶಾಂತಮ್ಮ, ಶಾಂತಾ ಹಣಬರ, ರೇಖಾ ಸವಾಶೇರಿ ಮತ್ತಿತರರು ಹಾಜರಿದ್ದರು.

`ಪಾಲಿಕೆಯಿಂದ ನಾಗರಿಕ ಸನ್ಮಾನವಾಗಲಿ~
“ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ. ಚಂದ್ರಶೇಖರ ಕಂಬಾರರಿಗೆ ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ನಾಗರಿಕ ಸನ್ಮಾನ ನೀಡಿ ಗೌರವಿಸಬೇಕು” ಎಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ನಡೆದ ಕನ್ನಡಪರ ಮುಖಂಡ ಸಭೆಯಲ್ಲಿ ಒತ್ತಾಯಿಸಲಾಯಿತು.

“ಡಾ. ಕಂಬಾರರನ್ನು ಗೌರವಪೂರ್ವಕವಾಗಿ ಪಾಲಿಕೆಗೆ ಆಹ್ವಾನಿಸಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಾಗರಿಕ ಸನ್ಮಾನ ಮಾಡಬೇಕು. ಮಹಾನಗರ ಪಾಲಿಕೆ ಇದಕ್ಕೆ ಒಪ್ಪದಿದ್ದರೆ, ರಾಜ್ಯ ಸರ್ಕಾರವು ಪಾಲಿಕೆಯನ್ನು ವಿಸರ್ಜಿಸಬೇಕು” ಎಂದು ಆಗ್ರಹಿಸಲಾಯಿತು.

ಸಭೆಯಲ್ಲಿ ಮಾಜಿ ಮೇಯರ್ ಸಿದ್ಧನಗೌಡ ಪಾಟೀಲ, ಪ್ರೊ. ಟಿ.ಟಿ. ಮರಕಟ್ನಾಳ, ರಮೇಶ ಸೊಂಟಕ್ಕಿ, ಅಶೋಕ ಚಂದರಗಿ, ರಾಜು ಟೋಪಗಿ ಮತ್ತಿತರರು ಹಾಜರಿದ್ದರು.

`ಕನ್ನಡಪರ ಧ್ವನಿ ಮೊಳಗಲಿ~
“ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪ್ರತಿ ಬಾರಿಯೂ ಕಿತಾಪತಿ ನಡೆಯುವುದು ಇತಿಹಾಸವಾಗಿದೆ. ಯಾವುದನ್ನೂ ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಿಲ್ಲ. ಪ್ರತಿ ಬಾರಿಯೂ ಕನ್ನಡ ಭಾಷೆ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿದೆ. ಹೀಗಾಗಿ ಮಹಾನಗರ ಪಾಲಿಕೆಯಲ್ಲಿ ಕನ್ನಡಪರ ಧ್ವನಿ ಮೊಳಗಬೇಕಾಗಿದೆ” ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬಸವರಾಜ ಜಗಜಂಪಿ ಅಭಿಪ್ರಾಯಪಟ್ಟಿದ್ದಾರೆ.

“ಸಿದ್ಧನಗೌಡ ಪಾಟೀಲ, ಎಂ.ಬಿ. ನಿರ್ವಾಣಿ ಮೇಯರ್ ಇದ್ದಾಗ ಪಾಲಿಕೆಯಲ್ಲಿ ಕನ್ನಡಪರ ಧ್ವನಿ ಕೇಳಿ ಬರುತ್ತಿತ್ತು. ಇದೀಗ ಮತ್ತೆ ಕನ್ನಡ ಪರ ಧ್ವನಿ ಕ್ಷೀಣಿಸುತ್ತಿದೆ. ಎಂಇಎಸ್‌ನವರ ಪುಂಡುತನವನ್ನು ಮಟ್ಟಹಾಕಲು ಪಾಲಿಕೆಯಲ್ಲಿ ಎಲ್ಲ ಕನ್ನಡ ಪರ ಸದಸ್ಯರು ಒಂದಾಗಿ ಧ್ವನಿ ಎತ್ತಬೇಕು” ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT