ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕ್ಕೇರಿ: ನೆಲಕ್ಕೆ ಬಸಿದ ಪ್ರಾಣಿಗಳ ನೆತ್ತರು

Last Updated 7 ಅಕ್ಟೋಬರ್ 2011, 10:05 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ವಿಜಯದಶಮಿಯ ಆಯುಧ ಪೂಜೆಯ ರಾತ್ರಿ ಆಚರಿಸಲಾಗುವ  ಖಾನಾಪುರ ತಾಲ್ಲೂಕಿನ ಕಕ್ಕೇರಿ ಗ್ರಾಮದ ಬಿಷ್ಟಾದೇವಿ ಜಾತ್ರೆಯ ದಿನದಂದು ಮತ್ತೆ ಯಥಾ ಪ್ರಕಾರ ಪ್ರಾಣಿಗಳ ಮಾರಣಹೋಮ ನಡೆಯಿತು.
 
ಬೀಡಿ-ಅಳ್ನಾವರ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಬುಧವಾರ ತಡರಾತ್ರಿ ನಿಷ್ಪಾಪಿ ಜೀವಿಗಳ ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಕೊಯ್ದಾಗ ಅವುಗಳ ನೆತ್ತರು ಲೀಟರುಗಟ್ಟಲೇ ನೆಲಕ್ಕೆ ಬಸಿಯಿತು.

`ಜಿಲ್ಲಾಡಳಿತದ ನಿರ್ಲಕ್ಷ್ಯ ಹಾಗೂ ಸಾಗರೋಪಾದಿಯಲ್ಲಿ ನುಗ್ಗಿದ ಸಹಸ್ರಾರು ಭಕ್ತರನ್ನು ನಿಯಂತ್ರಿಸಲು ನಿಯೋಜಿಸಿದ್ದ ಸುಮಾರು 80ರಷ್ಟಿದ್ದ ಪೊಲೀಸರ ಅಸಹಾಯಕತೆಯ ಕ್ರಮದಿಂದಾಗಿ ಪ್ರಾಣಿ ಬಲಿ ಈ ಬಾರಿಯೂ ನಿರಾತಂಕವಾಗಿ ನಡೆಯಲು ಕಾರಣ~ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದವು.

ದಯವೇ ಧರ್ಮದ ಮೂಲವೆಂದು ಸಾರಿದ ಹನ್ನೆರಡನೇ ಶತಮಾನದ ಶರಣ ಗಣದ ಡೋಹರ ಕಕ್ಕಯ್ಯನ ಧರ್ಮಪತ್ನಿ ಬಿಷ್ಟಾದೇವಿಯ ಜಾತ್ರೆಯ ರಾತ್ರಿ ಪ್ರಾಣಿ ಬಲಿ ನಿಷೇಧ ನಿಯಮವನ್ನು ಗಾಳಿಗೆ ತೂರಿ ಅವುಗಳ ಹತ್ಯೆ ಮಾಡಲಾಗುತ್ತದೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಸಂಘಟನೆ ಮುಂಚಿತವಾಗಿ ಜಿಲ್ಲಾಡಳಿತಕ್ಕೆ ತಿಳಿಸಿದ್ದರೂ ಅದನ್ನು ನಿಯಂತ್ರಿಸಲು ಅವರಿಂದ ಸಾಧ್ಯವಾಗಲಿಲ್ಲ.

ಬಿಷ್ಟಾದೇವಿಯ ಉಡಿತುಂಬಿದ ನಂತರ ನಡೆಯುವ ಈ ಅಮಾನವೀಯ ಕೃತ್ಯವನ್ನು ಮಂಡಳಿಯ ಕಾರ್ಯಾಧ್ಯಕ್ಷ ದಯಾನಂದ ಸ್ವಾಮೀಜಿ ಕಣ್ಣಾರೆ ಕಂಡರು ಮರುಗಿದರು. ಖಾನಾಪುರ ತಾಲ್ಲೂಕು ಆಡಳಿತ ಮತ್ತು ಬೆಳಗಾವಿ ಪೊಲೀಸ್ ಉಪವಿಭಾಗದ ವರಿಷ್ಠರನ್ನು ಸ್ಥಳಕ್ಕೆ ಆಹ್ವಾನಿಸಿದ್ದರೂ ಅವರಿಂದಲೂ ಮೂಕ ಜೀವಿಗಳ ಪ್ರಾಣವನ್ನು ಉಳಿಸಲಾಗಲಿಲ್ಲ.

ಅವುಗಳನ್ನು ಬಲಿ ನೀಡಿದ ನಂತರ ಅದೇ ಸ್ಥಳದಲ್ಲಿ ಅಡುಗೆ ಮಾಡಿ ಸಾಮೂಹಿಕ ಮಾಂಸದ ಭೋಜನ ಸವಿದು ಭಕ್ತಾದಿಗಳು ಬೀಗಿದರು. ಮೇಕೆ ಹಾಗೂ ಕೋಳಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದ ಹತ್ತಿರ, ಪ್ರಾಥಮಿಕ ಶಾಲೆಯ ಸಮೀಪ ಸೇರಿದಂತೆ ಅನೇಕ ಕಡೆಗಳಲ್ಲಿ ಹತ್ಯೆ ಮಾಡಿದ್ದರಿಂದ ರಕ್ತಸಿಕ್ತ ನೆಲದಲ್ಲಿ ಭಕ್ತಾದಿಗಳು ನಡೆದಾಡುವ ದು:ಸ್ಥಿತಿ ಎದುರಾಗಿತ್ತು.

ಜಾತ್ರೆಯ ದಿನದಂದು ಭಕ್ತಾದಿಗಳ ಕೋಳಿ (ಹುಂಜ)ಗಳ ಬೇಟೆಯ ಹರಕೆ ನೆರವೇರಿಸಲು ಕೊಡಲು ಕೈಯಲ್ಲಿ ಚೂರಿ ಹಿಡಿದು ಕೆಲ ಯುವಕರು ತಿರುಗಾಡಿದರು. ಕೋಳಿ ಬಲಿಗೆ ಹತ್ತು ರೂಪಾಯಿ ಆಕರಣೆ ಮಾಡುತ್ತಿದ್ದರು. ಮತ್ತೆ ಕೆಲ ಭಕ್ತರು ತಾವೇ ತಂದಿದ್ದ ಚೂರಿಯಿಂದ ಅವುಗಳ ಕುತ್ತಿಗೆ ಕೊಯ್ದರು.

ಹರಿದ ಮದ್ಯ: ಜಾತ್ರೆಯ ರಾತ್ರಿಯಂದು ಅಕ್ರಮ ಮದ್ಯವೂ ನೆತ್ತರದ ಜೊತೆ ಇಲ್ಲಿ ಹರಿದಾಡಿತು. ಕುಡಿದು ನೇತಾಡುತ್ತಿದ್ದ ದಂಡೇ ಇಲ್ಲಿ ನೆರೆದಿತ್ತು. ಒಂದು ಭಜನಾ ತಂಡವಂತೂ ವಿದ್ಯುತ್ ಪ್ರವಹಿಸುವ ಕಂಬದ ಮುಖ್ಯ ತಂತಿಗೆ ಕೊಕ್ಕೆ ಹಾಕಿ ಬೆಳಕಿನ ಸೌಲಭ್ಯ ಪಡೆದಿತ್ತು. ಧ್ವನಿವರ್ಧಕವನ್ನು ಈ ಅಕ್ರಮ ಸಂಪರ್ಕದಿಂದಲೇ ಅವರು ಪಡೆದು ಭಜನಾ ಪದಗಳ ಮೂಲಕ ದೇವರ ಸೇವೆ ಮಾಡಿದರು!

ಮಂದಿರ ಎದುರೇ ಚಪ್ಪರ:
ಕೋಳಿ ಹಾಗೂ ಅದರ ಮರಿಗಳನ್ನು ಎಸೆಯಲು ಮಂದಿರದ ಎದುರೇ ಎತ್ತರದ ಚಪ್ಪರವನ್ನು ಹಾಕಲಾಗಿತ್ತು. ಹಸಿರು ಎಲೆಗಳ ಚಪ್ಪರದ ಮೇಲೆ ಎಸೆಯುವ ಇವುಗಳನ್ನು ಹಿಡಿದು ಒಂದು ಕೋಣೆಯೊಳಗೆ ಕೂಡಿಹಾಕಲಾಗುತ್ತಿತ್ತು. ಇವುಗಳಲ್ಲಿ ಬದುಕಿದ್ದೆಷ್ಟೋ, ಸತ್ತವೆಷ್ಟೋ?
ಚಪ್ಪರದ ಮೇಲೆ ಎಸೆಯುವ ಕೋಳಿಗಳನ್ನು ಹಿಡಿಯಲು ವ್ಯಕ್ತಿಯೊಬ್ಬರಿಗೆ ಮೂವತ್ತೈದು ಸಾವಿರ ರೂಪಾಯಿಗಳಿಗೆ ಟೆಂಡರ್ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT