ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಗ್ಗಂಟಾದ ಒತ್ತುವರಿ ಸಮಸ್ಯೆಗೆ ಪರಿಹಾರವೇನು?

ಕಗ್ಗಂಟಾದ ಒತ್ತುವರಿ ಸಮಸ್ಯೆಗೆ ಪರಿಹಾರವೇನು? -1 (ನೋವು-ನಲಿವು)
Last Updated 23 ಸೆಪ್ಟೆಂಬರ್ 2013, 10:04 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯನ್ನು ನಾಲ್ಕು ದಶಕ­ಗಳಿಂದ ಕಾಡುತ್ತಿರುವ ಅತ್ಯಂತ ಜ್ವಲಂತ ಸಮಸ್ಯೆ ಎಂದರೆ ಅದು ಅರಣ್ಯ ಮತ್ತು ಸರ್ಕಾರಿ ಭೂಮಿ ಒತ್ತುವರಿ!

ಒತ್ತುವರಿದಾರರ ಸಾಲಿನಲ್ಲಿ ಯಾರುಂಟು? ಯಾರಿಲ್ಲ? ಎನ್ನುವಂತಿಲ್ಲ. ಕಡುಬಡವರು, ಮಧ್ಯಮ ವರ್ಗದವರು, ಶ್ರೀಮಂತರು, ಉದ್ಯ­ಮಿಗಳು, ರಾಜಕಾರಣಿಗಳು, ಅಧಿಕಾರಸ್ಥರು, ಧಾರ್ಮಿಕ ಸಂಸ್ಥೆಗಳು ಹೀಗೆ ಎಲ್ಲರೂ ಇದ್ದಾರೆ. ಅದರಲ್ಲೂ ಅರಣ್ಯ ಒತ್ತುವರಿ ಭೂಮಿ ನಮ್ಮದಲ್ಲ, ಇಂದಲ್ಲ ನಾಳೆ ಬಿಡಲೇಬೇಕಾ­ಗುತ್ತದೆ ಎನ್ನುವ ಸತ್ಯದ ಅರಿವು ಇದ್ದರೂ ಯಾವುದಾದರೂ ಮಾರ್ಗದಲ್ಲಿ ಭೂಮಿ ಉಳಿಸಿಕೊಳ್ಳಲು ಸಾಧ್ಯವೇ? ಎಂದು

ಚೌಕಾಶಿ ನಡೆಸುತ್ತಿರುವ ಪರಿಣಾಮ? ದೊಡ್ಡ ಪ್ರಮಾ­ಣದ ಭೂಒತ್ತುವರಿದಾರರ ಬೆನ್ನಿಗೆ ಪ್ರಭಾವಿ ರಾಜಕಾರಣಿಗಳು ನಿಂತಿರುವ ಪರಿಣಾಮ ಸಮಸ್ಯೆ ದಿನದಿನಕ್ಕೂ ಸಮಸ್ಯೆ ಜಟಿಲವಾಗುತ್ತಿದೆ.

ಬಡವರು ಬದುಕಿಗಾಗಿ ಒತ್ತುವರಿ ಮಾಡಿದ್ದರೆ, ಉಳ್ಳವರು ದುರಾಸೆಗಾಗಿ ಒತ್ತು­ವರಿ ಮಾಡಿದ್ದಾರೆ. ಉಳ್ಳವರು ತಾವು ಮಾಡಿರುವ ನೂರಾರು ಎಕರೆ ಒತ್ತುವರಿಯನ್ನು ಬಡವರು ಮಾಡಿರುವ ತುಂಡು ಭೂಮಿ ಒತ್ತುವರಿ ಮುಂದಿಟ್ಟುಕೊಂಡು ರಕ್ಷಿಸಿಕೊಳ್ಳು­ತ್ತಿದ್ದಾರೆ ಎನ್ನುವುದನ್ನು ಯಾರೂ ಅಲ್ಲಗಳೆ­ಯುವುದಿಲ್ಲ. 

ಪ್ರತಿ ಬಾರಿ ಸರ್ಕಾರ ಬದಲಾದಾಗ, ಅಷ್ಟೇ ಏಕೆ? ಜಿಲ್ಲೆಯ ದಂಡಾಧಿಕಾರಿ ಬದಲಾದಾ­ಗಲೂ `ಒತ್ತುವರಿ ತೆರವು ತೂಗುಗತ್ತಿ' ಒತ್ತುವರಿದಾರರ ಮೇಲೆ ತೂಗುತ್ತಲೇ ಇರುತ್ತದೆ. ಈಗ ರಾಜ್ಯದಲ್ಲಿ ಸರ್ಕಾರ, ಜಿಲ್ಲೆಯಲ್ಲಿ ಅಧಿಕಾರಿಗಳು ಬದಲಾಗಿದ್ದಾರೆ. ಮತ್ತೆ `ಒತ್ತುವರಿ ತೆರವು ಭೂತ' ಜಿಲ್ಲೆಯಲ್ಲಿ ಎದ್ದು ನಿಂತಿದೆ.

ತೆರವಿಗೆ ಬಾಕಿ ಉಳಿದಿದ್ದ ಪ್ರಕರಣಗಳನ್ನು ಅರಣ್ಯ ಇಲಾಖೆ ಕೈಗೆತ್ತಿಕೊಂಡು ತೆರವಿಗೆ ಮುಂದಾಗುತ್ತಿದ್ದಂತೆ ಇಡೀ ಒತ್ತುವರಿದಾರರು ನಿದ್ರೆ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆಗೆ ಆದೇಶ ನೀಡಿರುವುದರಿಂದ ರೋಗಿಗೆ ಕೃತಕ ಉಸಿರಾಟ ನೀಡಿದಂತಾಗಿದೆ!

ಪರಿಸರವಾದಿಗಳು ಮತ್ತು ಸಾಮಾಜಿಕ ಹೋರಾಟಗಾರರು `ಅರಣ್ಯ ಅಥವಾ ಸರ್ಕಾರಿ ಭೂಮಿಯನ್ನು ಒತ್ತುವರಿ ಯಾರೇ ಮಾಡಿದ್ದರೂ ಅದನ್ನು ಖುಲ್ಲಾಪಡಿಸಬೇಕು' ಎಂದು ದನಿಯೆತ್ತುತ್ತಿದ್ದಾರೆ. ಬಡವರು ತಾವು ಬದುಕಿಗಾಗಿ ಮಾಡಿರುವ ಒತ್ತುವರಿಗೆ ಕೈ ಹಾಕಬೇಡಿ, ಜೀವನಾಂಶಕ್ಕೆ ಸಾಗುವಳಿ ಮಾಡಿಕೊಂಡಿರುವ ಭೂ ಒತ್ತುವರಿ ಸಕ್ರಮ ಮಾಡಿ ಎಂದು ಮೊರೆ ಇಡುತ್ತಿದ್ದಾರೆ.

ಈ ನಡುವೆ ವಿ.ಬಾಲಸುಬ್ರಮಣ್ಯನ್ ವರದಿ ಅನುಷ್ಠಾನಗೊಳಿಸಬೇಕೆಂದು ಧಾರವಾಡದ ಸಮಾಜ ಪರಿವರ್ತನ ಸಮುದಾಯದ ಎಸ್.ಆರ್.ಹಿರೇಮಠ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಹಿರೇಮಠ ಅವರು ಮಲೆನಾಡಿನಲ್ಲಿ ಒತ್ತುವರಿ ತೆರವು ಪರ ಹೋರಾಟಕ್ಕೆ ದುಮುಕಿರುವ ಪರಿಣಾಮ, ಒತ್ತುವರಿ ತೆರವು ಪರ ಇದ್ದ ಸ್ಥಳೀಯ ಹೋರಾಟಗಾರರಿಗೆ ಬಲ ಬಂದರೆ, ಒತ್ತುವರಿದಾರರಿಗೆ ಆತಂಕ ಶುರುವಾಗಿದೆ.

ಅರಣ್ಯ ಮತ್ತು ಕಂದಾಯ ಭೂಮಿ ಒತ್ತುವರಿಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದ `ಕುಖ್ಯಾತಿ' ಜಿಲ್ಲೆಯದು. ಸಾರ್ವಜನಿಕ ಭೂಮಿಯನ್ನು ಹಿಂದಕ್ಕೆ ಪಡೆಯಲು ಮತ್ತು ಸಂರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರ 2011ರಲ್ಲಿ ರಚಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣಿಯನ್ ನೇತೃತ್ವದ ಕಾರ್ಯಪಡೆ ಜಿಲ್ಲೆಯಲ್ಲಿ ಈವರೆಗೆ ನಡೆದಿರುವ ಒತ್ತುವರಿ ಬಗ್ಗೆ `ದುರಾಸೆ ಮತ್ತು ಷಾಮೀಲು' ಶೀರ್ಷಿಕೆಯಡಿ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿದೆ.

ಜಿಲ್ಲೆಯಲ್ಲಿ 1,06,249 ಎಕರೆ ಕಂದಾಯ ಭೂಮಿ ಮತ್ತು 35,946 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿರುವುದನ್ನು ಕಾರ್ಯಪಡೆ ಪತ್ತೆ ಹಚ್ಚಿದೆ. ಚಿಕ್ಕಮಗಳೂರು ವಿಭಾಗವೊಂದರಲ್ಲೇ 3,778 ಹೆಕ್ಟೇರ್ ಅರಣ್ಯ ಒತ್ತುವರಿಯಾಗಿದೆ. ಕೇವಲ 264 ಹೆಕ್ಟೇರ್ ಮಾತ್ರ ತೆರವು ಮಾಡಲಾಗಿದೆ. 1417 ಪ್ರಕರಣಗಳು ತೆರವಿಗೆ ಬಾಕಿ ಉಳಿದಿವೆ.

70ರ ದಶಕದ ನಂತರ ಶುರುವಾಗಿರುವ ಒತ್ತುವರಿ ಸಮಸ್ಯೆಗೆ ಈವರೆಗೂ ಅಧಿಕಾರ ನಡೆಸಿರುವ ಯಾವುದೇ ಸರ್ಕಾರದಿಂದಲೂ ಒಂದು ಶಾಶ್ವತ ಪರಿಹಾರ ಕೊಡಲು ಸಾಧ್ಯವಾಗಲಿಲ್ಲ ಎನ್ನುವ ಕೊರಗು ಜಿಲ್ಲೆಯ ಜನರಲ್ಲಿ ಇದ್ದೇ ಇದೆ. ಒತ್ತುವರಿ ಸಮಸ್ಯೆ ರಾಜಕೀಯ ಪಕ್ಷಗಳಿಗೆ, ರಾಜಕಾರಣಿಗಳಿಗೆ ಓಟು ತಂದುಕೊಡುವ `ಮತ ಬ್ಯಾಂಕ್' ಆಗಿ ಉಳಿಯದೆ, ಶಾಶ್ವತ ಪರಿಹಾರದ ತುರ್ತು ಅಗತ್ಯ ಎದ್ದುಕಾಣುತ್ತಿದೆ.
(ಮುಂದುವರಿಯಲಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT