ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚೂರು: ವಾರ್ಷಿಕ ಉತ್ಸವ ಸಂಪನ್ನ

Last Updated 23 ಜನವರಿ 2012, 8:40 IST
ಅಕ್ಷರ ಗಾತ್ರ

ಬ್ರಹ್ಮಾವರ: ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮೊದಲಾದ ಜಿಲ್ಲೆಗಳಲ್ಲಿರುವ ಸುಮಾರು 1 ಸಾವಿರ ಬಬ್ಬುಸ್ವಾಮಿ ದೇವಸ್ಥಾನಗಳಿಗೆ ಮೂಲಕ್ಷೇತ್ರವಾದ ಬಾರ್ಕೂರು ಸಮೀಪದ ಕಚ್ಚೂರು ಮಾಲ್ತಿದೇವಿ ಹಾಗೂ ಬಬ್ಬುಸ್ವಾಮಿ ಕ್ಷೇತ್ರದ ಜಾತ್ರೋತ್ಸವ ಭಾನುವಾರ ಸಂಪನ್ನಗೊಂಡಿತು.

ಕಳೆದ ಮೂರ‌್ನಾಲ್ಕು ವರ್ಷಗಳ ಬಳಿಕ ಈ ಬಾರಿ ಜಾತ್ರೆ ಬಹು ವಿಜೃಂಭಣೆಯಿಂದ ನಡೆಯಿತು.
ಶನಿವಾರ  ಕಲಶಾಭಿಷೇಕ, ಕಂಬಿಗಾರ ದೇವರ ದರ್ಶನ, ಬೈಲಕೆರೆ ದೀಪೋತ್ಸವ ಮತ್ತು ರಾತ್ರಿ ಗೆಂಡಸೇವೆ ನಡೆಯಿತು. ಭಾನುವಾರ ಬೆಳಿಗ್ಗೆ ತುಲಾಭಾರ ಸೇವೆ, ದರ್ಶನ ಸೇವೆ ಕೊರಗಜ್ಜ ದೈವದ ದರ್ಶನ ಸೇವೆ ನಡೆಯಿತು. 5 ಜಿಲ್ಲೆಗಳಿಂದ ಸುಮಾರು 10ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡರು.

ಮುಖ್ಯಮಂತ್ರಿ ಡಿ.ವಿಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಮತ್ತು ಇನ್ನಿತರ ಮುಖಂಡರ ಸಮಕ್ಷಮದಲ್ಲಿ ವಿವಿಧ ಕಾಮಗಾರಿಗಳು ಹಾಗೂ ಸಮಾವೇಶಕ್ಕೆ ಮಾಲ್ತೀದೇವಿ, ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್‌ಗೆ ಚಾಲನೆ ನೀಡಲಾಯಿತು.

ಬೇಡಿಕೆಗಳು: ಶನಿವಾರ ನಡೆದ ಸಮಾವೇಶದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯಿಂದ ವಿವಿಧ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿ ಸದಾನಂದ ಗೌಡ ಅವರಿಗೆ ಸಲ್ಲಿಸಲಾಯಿತು.

ಎಂಟು ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸುಮಾರು 5ಲಕ್ಷ ಮಂದಿ ಬಬ್ಬುಸ್ವಾಮಿಯನ್ನು ಕುಲದೇವರನ್ನಾಗಿ ಆರಾಧಿಸುತ್ತಾರೆ. ನಮ್ಮ ಸಮಾಜವನ್ನು ದ.ಕ, ಮಡಿಕೇರಿ, ಚಿಕ್ಕಮಗಳೂರು, ಹಾಸನ, ಕಾಸರಗೋಡು ಜಿಲ್ಲೆಯಲ್ಲಿ ಮುಂಡಾಳ ಎಂದೂ, ಉಡುಪಿ, ಶಿವಮೊಗ್ಗ ಜಿಲ್ಲೆಯಲ್ಲಿ ಆದಿದ್ರಾವಿಡ ಹಾಗೂ ಉಪ್ಪಾರ ಎಂದೂ ಕರೆಯಲಾಗುತ್ತಿದೆ.

ಇದನ್ನು ಒಂದೇ ಜಾತಿಯಡಿಯಲ್ಲಿ ತರಲು ಸರ್ಕಾರ ಕುಲ ಅಧ್ಯಯನ ಸಮಿತಿ ರಚನೆ ಮಾಡಬೇಕು. ಕಚ್ಚೂರು ಮಾಲ್ತೀದೇವಿ, ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಇತರ ಯೋಜನೆಗಳಿಗೆ ನಿವೇಶನದ ಅಗತ್ಯವಿದ್ದು, ಉಡುಪಿ, ದಕ್ಷಿಣಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕನಿಷ್ಟ 5ಎಕ್ರೆ ನಿವೇಶನ ಒದಗಿಸಬೇಕು.

ವಿವಿಧ ಜಿಲ್ಲೆಗಳಲ್ಲಿರುವ ಬಬ್ಬುಸ್ವಾಮಿ ದೇವಸ್ಥಾನಗಳ ನಿವೇಶನ ಸರ್ಕಾರಿ ಜಾಗದಲ್ಲಿದ್ದು, ಅವುಗಳನ್ನು ಆಯಾ ದೇವಸ್ಥಾನಗಳ ಹೆಸರಿಗೆ ನೋಂದಾಯಿಸಬೇಕು. ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ಯಾತ್ರಿ ನಿವಾಸ ಹಾಗೂ ಅನ್ನಛತ್ರ ನಿರ್ಮಾಣ ಮಾಡಲು ಸರ್ಕಾರದ ವಿಶೇಷ ಅನುದಾನ ನೀಡಬೇಕು. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ದೇವಸ್ಥಾನಗಳ ಆಡಳಿತ ಮಂಡಳಿಯಲ್ಲಿ ಸಮಾಜಕ್ಕೆ ಆದ್ಯತೆ ನೀಡುವಂತೆ ಮನವಿ ಯಲ್ಲಿ ಸಮಾಜದ ಮುಖಂಡರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT