ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಒಂದು; ವರ್ಷ ನಾಲ್ಕು!

Last Updated 3 ಡಿಸೆಂಬರ್ 2012, 7:55 IST
ಅಕ್ಷರ ಗಾತ್ರ

ಕಾರವಾರ: ಬೆಳಗಾವಿ ಸುವರ್ಣಸೌಧ ಕಾಮಗಾರಿ ಮೂರೇ ವರ್ಷದಲ್ಲಿ ಪೂರ್ಣಗೊಂಡಿತು. ಕುಮಟಾದ ಹೊಸ ಬಸ್ ನಿಲ್ದಾಣ ಒಂದೇ ವರ್ಷದಲ್ಲಿ ಉದ್ಘಾಟನೆಗೊಂಡಿತು. ಆದರೆ, ಕಾರವಾರ ನೂತನ ಬಸ್ ನಿಲ್ದಾಣಕ್ಕೆ ಅಡಿಗಲ್ಲು ಹಾಕಿ ನಾಲ್ಕು ವರ್ಷ (2008) ಕಳೆದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.
ಬಸ್ ನಿಲ್ದಾಣದ ಕಾಮಗಾರಿ ಇಷ್ಟೊಂದು ದೀರ್ಘ ಅವಧಿ ತೆಗೆದುಕೊಂಡಿರುವುದು ಜಿಲ್ಲೆಯ ಇತಿಹಾಸದಲ್ಲೇ ಮೊದಲು.

60398 ಚದರ ಮೀಟರ್ ಅಳತೆ ಹೊಂದಿರುವ ಸುವರ್ಣಸೌಧದ ಕಾಮಗಾರಿಗೆ ಹೋಲಿಸಿದರೆ ಕಾರವಾರ ಬಸ್ ನಿಲ್ದಾಣ ಯಾವ ಲೆಕ್ಕಕ್ಕೂ ಇಲ್ಲ. ಅಳತೆಯಲ್ಲಿ ಇಲ್ಲಿಯ ಬಸ್ ನಿಲ್ದಾಣ ಸುವರ್ಣಸೌಧಕ್ಕಿಂತ ಸಣ್ಣ ಕಟ್ಟಡವಾಗಿದ್ದರೂ ಕಾಮಗಾರಿ ಮುಗಿಯದೇ ಇರುವುದು ವಿಪರ್ಯಾಸ.

ಕಳೆದ ನಾಲ್ಕು ವರ್ಷದಿಂದ ಬಸ್‌ಗಳು ರಸ್ತೆಯ ಬದಿಯಲ್ಲಿ ನಿಂತುಕೊಳ್ಳುತ್ತಿವೆ. ಸಾರ್ವಜನಿಕರು, ವಾಹನ ಸವಾರರು, ವ್ಯಾಪಾರಸ್ಥರು, ಪ್ರಯಾಣಿಕರು ತೊಂದರೆ ಅನುಭವಿಸುತ್ತಲೇ ಇದ್ದಾರೆ. ಆದರೆ ಸ್ಥಳೀಯ ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ, ವಾಯವ್ಯ  ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಇದ್ಯಾವುದೂ ಗಮನಕ್ಕೆ ಬಂದತ್ತಿಲ್ಲ.

ಬಸ್ ನಿಲ್ದಾಣ ಹಾಗೂ ಕಾರವಾರ ಪ್ರಾದೇಶಿಕ ಸಾರಿಗೆ ವಿಭಾಗ ಕಟ್ಟಡಕ್ಕೆ ಅಂದಾಜು ಎರಡು ಕೋಟಿ ರೂಪಾಯಿ ಅನುದಾನ ಸರ್ಕಾರ ಬಿಡುಗಡೆ ಮಾಡಿತು. ಆರಂಭದಿಂದಲೇ ಕಾಮಗಾರಿ ಆಮೆ ವೇಗ ಪಡೆದುಕೊಂಡಿತ್ತು. ವರ್ಷಕಳೆದಂತೆ ಕಾಮಗಾರಿಯ ವೇಗ ಕಡಿಮೆ ಆಯಿತೇ ಹೊರತು ಚುರುಕು ಪಡೆದುಕೊಳ್ಳಲಿಲ್ಲ.

ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿದಾಗಲೆಲ್ಲ `ಕಲ್ಲುಕ್ವಾರಿ ಸಮಸ್ಯೆ ಇರುವುದರಿಂದ ಕಟ್ಟಡ ನಿರ್ಮಾಣಕ್ಕೆ ಜಲ್ಲಿ ಕಲ್ಲುಗಳು ಸಿಗದೇ ಇರುವುದರಿಂದ ಕಾಮಗಾರಿಗೆ ತೊಂದರೆ ಆಗಿದೆ' ಎಂದು ಹೇಳಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು.

ಆದರೆ, ಇದೇ ಅವಧಿಯಲ್ಲಿ ನಗರದಲ್ಲಿ ಖಾಸಗಿ ಸೇರಿದಂತೆ ಅನೇಕ ಸರ್ಕಾರಿ ಕಟ್ಟಡಗಳ, ಕಾಲು ಸಂಕಗಳ, ಸಣ್ಣ ಸೇತುವೆಗಳ ಕಾಮಗಾರಿ ನಡೆದಿದೆ. ಅವುಗಳಿಗೆ ಜಲ್ಲಿಕಲ್ಲುಗಳ ಸಮಸ್ಯೆ ಎದುರಾಗಲಿಲ್ಲವೇ ಎನ್ನುವುದು ಪ್ರಶ್ನಾರ್ಹ.

ತಹಶೀಲ್ದಾರ ಕಚೇರಿ ಸಮಸ್ಯೆ: ಬಸ್ ನಿಲ್ದಾಣ ಇರುವ ಸ್ಥಳ ಚಿಕ್ಕದಾಗಿದ್ದರಿಂದ ಪಕ್ಕದಲ್ಲಿರುವ ತಹಶೀಲ್ದಾರ ಕಚೇರಿಯ ಜಮೀನು ಪಡೆದು ಬಸ್ ನಿಲ್ದಾಣ ವಿಸ್ತರಿಸುವ ಯೋಜನೆಯನ್ನು ಸಾರಿಗೆ ಇಲಾಖೆ ಹೊಂದಿತ್ತು. ಆದರೆ, ತಹಸೀಲ್ದಾರ ಕಚೇರಿ ಜಮೀನು ಹಸ್ತಾಂತರ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿರುವುದೂ ನಿಲ್ದಾಣ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.

'ತಹಶೀಲ್ದಾರ ಕಚೇರಿ ಕಟ್ಟಡ ಮತ್ತು ಜಮೀನು ಸೇರಿ ಒಂದು ಕೋಟಿ ರೂಪಾಯಿಯನ್ನು ಪಾವತಿಸಬೇಕು ಎಂದು ಕಂದಾಯ ಇಲಾಖೆ ತಿಳಿಸಿತ್ತು. ಈ ಸಂಬಂಧ ಇಲಾಖೆಗಳ ನಡುವೆ ಮಾತುಕತೆ ನಡೆಯುತ್ತಿದೆ. ಈ ವಿಷಯ ಅಂತಿಮ ಆಗದೇ ಇರುವುದರಿಂದ ಕಟ್ಟಡ ನೆಲಸಮಗೊಳಿಸಲು ಆಗುವುದಿಲ್ಲ' ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಸಾರಿಗೆ ಇಲಾಖೆಯ ಅಧಿಕಾರಿ.

ಕಾರವಾರ ನಿಲ್ದಾಣದಿಂದ ಪ್ರತಿನಿತ್ಯ 142 ಮಾರ್ಗಕ್ಕೆ ಬಸ್ ಸಂಚರಿಸುತ್ತವೇ. ಈಗ ನಿರ್ಮಾಣ ಆಗಿರುವ ಬಸ್ ನಿಲ್ದಾಣದಲ್ಲಿ ಕೇವಲ ಆರು ಬಸ್‌ಗಳು ಮಾತ್ರ ನಿಂತುಕೊಳ್ಳಲು ಸ್ಥಳಾವಕಾಶವಿದೆ. ಉಳಿದ ಬಸ್‌ಗಳು ನಿಲ್ದಾಣದ ಹೊರಗಡೆಯೇ ನಿಲ್ಲಬೇಕಾದ ಪರಿಸ್ಥಿತಿ ಇದೆ. ತಹಶೀಲ್ದಾರ ಕಚೇರಿ ಜಮೀನು ಸಿಕ್ಕ ನಂತರಷ್ಟೇ ಬಸ್‌ಗಳ ನಿಲುಗಡೆ ಸುಗಮವಾಗಲಿದೆ.

'ಜಿಲ್ಲಾ ಕೇಂದ್ರಕ್ಕೆ ಪ್ರತಿನಿತ್ಯ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಪ್ರಯಾಣಿಕರು ಬರುತ್ತಾರೆ. ಇದು ಪ್ರವಾಸಿ ಸ್ಥಳವೂ ಆಗಿದ್ದರಿಂದ ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಾರೆ. ಇಂತಹ ಸ್ಥಳದಲ್ಲಿ ನಾಲ್ಕು ವರ್ಷ ಕಳೆದರೂ ಬಸ್ ನಿಲ್ದಾಣದ ಕಾಮಗಾರಿಯ ಮುಗಿಯದೇ ಇರುವುದು ಬೇಸರದ ಸಂಗತಿ' ಎನ್ನುತ್ತಾರೆ ಯುವ ಕಾಂಗ್ರೆಸ್‌ನ ವಿನಾಯಕ ಹರಿಕಂತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT