ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ತ್ಯಾಜ್ಯ ವಿಲೇವಾರಿ: ಕ್ರಮಕ್ಕೆ ಸೂಚನೆ

Last Updated 28 ಮೇ 2012, 9:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ನಗರದ ಹೊರವಲಯಗಳಲ್ಲಿ ಚೆಲ್ಲುವ ಪರಿಪಾಠ ಆರಂಭವಾಗಿದ್ದು, ಅಂಥವರನ್ನು ಪತ್ತೆ ಮಾಡಿ ದಂಡ ವಿಧಿಸುವ ಹಾಗೂ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಪಾಲಿಕೆ ಆರಂಭಿಸಲಿ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಸಲಹೆ ನೀಡಿದರು.

ಇಲ್ಲಿನ ಆದರ್ಶನಗರದ ಸಂತೆ ಮೈದಾನದಲ್ಲಿ ಭಾನುವಾರ ಮಹಾನಗರ ಪಾಲಿಕೆ ಘನತ್ಯಾಜ್ಯ ವಿಲೇವಾರಿಗೆ ಮುನ್ನ ಕೈಗೊಳ್ಳಬೇಕಾದ ಕಸ ವಿಂಗಡಣೆಯ ಕುರಿತು ಏರ್ಪಡಿಸಿದ್ದ `ಆಪರೇಷನ್ ಡರ್ಟಿ~ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

`ಬೆಂಗೇರಿ-ಸುಳ್ಳ ರಸ್ತೆ ಹಾಗೂ ಕುಸಗಲ್ ರಸ್ತೆಯ ಅಕ್ಕಪಕ್ಕದಲ್ಲಿ ಹಲವು ದಿನಗಳಿಂದ ನಿರ್ಮಾಣ ಹಾಗೂ ಇನ್ನಿತರ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ. ಇದರಿಂದ ನಗರದ ಅಂದ ಕೆಡುತ್ತಿದೆ. ಮಳೆಗಾಲದ್ಲ್ಲಲಂತೂ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಹೀಗೆ ಕಸ ಚೆಲ್ಲಲು ಬರುವ ಲಾರಿ, ಟ್ರ್ಯಾಕ್ಟರ್‌ಗಳನ್ನು ಮುಟ್ಟುಗೋಲು ಹಾಕುವ ಕೆಲಸ ಮಾಡಬೇಕು~ ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

`ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡದೆ ಗಟಾರಕ್ಕೆ ಸುರಿಯುತ್ತಿರುವುದರಿಂದ ಕೊಳಚೆ ನೀರು ಸರಿಯಾಗಿ ಹರಿಯದೆ ಕಸದಿಂದ ಮುಚ್ಚಿಹೋಗಿವೆ. ಜನಪ್ರತಿನಿಧಿಗಳು ತಮ್ಮ ವಾರ್ಡ್‌ಗಳಲ್ಲಿ ಆ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಕಸ ವಿಲೇವಾರಿಗೆ ಸಂಬಂಧಿಸಿದ ಗುತ್ತಿಗೆಗಳನ್ನು ನೀಡುವಾಗ ಸ್ವಂತ ಹಿತಾಸಕ್ತಿಗಳನ್ನು ಮರೆತು ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು~ ಎಂದು ಅವರು ಸಲಹೆ ನೀಡಿದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಸ್ವಚ್ಛತೆಗೆ ಗುತ್ತಿಗೆ ನೀಡಲು ಟೆಂಡರ್ ಕರೆಯುವಾಗ ಗುತ್ತಿಗೆದಾರರಿಗೆ ಸೂಕ್ತ ನಿಯಮಾವಳಿಗಳನ್ನು ರೂಪಿಸಿ ಅದನ್ನು ಅನುಷ್ಠಾನಕ್ಕೆ ತರುವಂತೆ ಹೇಳಿದರು. ನಗರದ ಸ್ವಚ್ಛತೆಯ ವಿಚಾರ ಬಂದಾಗ ಯಾವುದೇ ರಾಜಿ ಅಥವಾ ವಿನಾಯಿತಿಗೆ ಅವಕಾಶ ನೀಡದಂತೆ ತಿಳಿಸಿದರು.

ಮೇಯರ್ ಪಾಂಡುರಂಗ ಪಾಟೀಲ ಮಾತನಾಡಿ, ನಾಗರಿಕರಿಗೆ ಮೂಲ ಸೌಕರ್ಯ ಕಲ್ಪಿಸುವುದೇ ದೇಶದ ಎಲ್ಲಾ ಮಹಾನಗರ ಪಾಲಿಕೆಗೆಳ ಮುಂದಿರುವ ದೊಡ್ಡ ಸವಾಲು ಎಂದು ಹೇಳಿದರು. ನಾಗರಿಕರ ಸಹಕಾರದಿಂದ ಮಾತ್ರ ಸ್ವಚ್ಛತೆ ಕಾರ್ಯಕ್ರಮಗಳನ್ನು ಪಾಲಿಕೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ ಎಂದರು.

ಮಹಾನಗರ ಪಾಲಿಕೆ ಕೊಟ್ಟ ಕಸ ಒಯ್ಯಲು ಬದ್ಧವಾಗಿದೆ ಹೊರತು ಚೆಲ್ಲಿದ ಕಸವನ್ನಲ್ಲ ಎಂಬ ಅರಿವು ಎಲ್ಲರಲ್ಲಿಯೂ ಮೂಡಬೇಕಿದೆ. ಕೊಳೆಯುವ ಕಸ ಹಾಗೂ ಕೊಳೆಯದ ಕಸ ಎರಡನ್ನೂ ವಿಂಗಡಿಸಿ ಕಸ ಸಂಗ್ರಹಿಸಲು ಬರುವವರಿಗೆ ನೀಡುವಂತೆ ಅವರು ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ, ಶೂನ್ಯ ಕಸ ನಿರ್ವಹಣೆ ವ್ಯವಸ್ಥೆಯನ್ನು ಈಗಾಗಲೇ ನವನಗರದಲ್ಲಿ ಜಾರಿಗೆ ತರಲಾಗಿದೆ. ಹಂತ ಹಂತವಾಗಿ ನಗರದ ಎಲ್ಲಾ ಬಡಾವಣೆಗಳಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ನಗರದಲ್ಲಿ ಪ್ರತಿ ನಿತ್ಯ 400 ಟನ್ ಕಸ ಸಂಗ್ರಹವಾಗುತ್ತದೆ. ಇದರಲ್ಲಿ ಕೊಳೆಯುವ ಕಸವನ್ನು ಬೇರ್ಪಡಿಸಿ ಒಂದೆಡೆ ಹಾಕಿ ಎರೆಹುಳು ಗೊಬ್ಬರವಾಗಿ ಮಾರ್ಪಡಿಸಿ ಪಾಲಿಕೆಯ ಉದ್ಯಾನಗಳು ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುವ ವ್ಯವಸ್ಥೆ ಮಾಡುವುದಾಗಿ ಹೇಳಿದರು.

ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹಾಕಲು ನಗರದ ಹಲವು ಕಡೆ ಜಾಗ ಗುರುತಿಸಿ ಶೀಘ್ರ ಮಹಾನಗರ ಪಾಲಿಕೆಯಿಂದ ಅಧಿಸೂಚನೆ ಹೊರಡಿಸುವುದಾಗಿ ತ್ರಿಲೋಕಚಂದ್ರ ಹೇಳಿದರು.

ಸಮಾರಂಭದಲ್ಲಿ ಉಪಮೇಯರ್ ಭಾರತಿ ಪಾಟೀಲ, ಪಾಲಿಕೆ ಸದಸ್ಯರಾದ ರಾಜಣ್ಣಾ ಕೊರವಿ, ರಾಘವೇಂದ್ರ ರಾಮದುರ್ಗ, ಮಹೇಶ ಬುರ್ಲಿ, ವಿಜಯಾನಂದ ಹೊಸಕೋಟಿ, ಮಲ್ಲಿಕಾರ್ಜುನ ಸಾವಕಾರ, ರಮೇಶ ಪಾಟೀಲ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT