ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ನೆಲಸಮ: ಪ್ರತಿಭಟನೆ

Last Updated 11 ಡಿಸೆಂಬರ್ 2013, 8:42 IST
ಅಕ್ಷರ ಗಾತ್ರ

ಹಾಸನ: ಬಿ.ಎಂ. ರಸ್ತೆಯಲ್ಲಿರುವ ಕಾಂಗ್ರೆಸ್‌ ಭವನದ ಕಾಂಪೌಂಡ್‌ಗೆ ಹೊಂದಿಕೊಂಡಂತೆ ನಗರಸಭೆಯಿಂದ ಪರವಾನಗಿ ಪಡೆಯದೆಯೇ ನಿರ್ಮಿಸಿದ ತಾತ್ಕಾಲಿಕ ಕಟ್ಟಡವನ್ನು ಸೋಮವಾರ ರಾತ್ರಿ ತೆರವುಗೊಳಿಸಿದ್ದು, ಇದನ್ನು ಖಂಡಿಸಿ ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಮೊದಲು ಕಟ್ಟಡದ ಮುಂದೆಯೇ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಸ್ವಲ್ಪ ಹೊತ್ತು ರಸ್ತೆ ತಡೆ ನಡೆಸಿದರು. ಬಳಿಕ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ಬಳಿಗೆ ಬಂದು ಪ್ರತಿಭಟನೆ ಮುಂದುವರಿಸಿದರು. ‘ಕಟ್ಟಡದ ಜಾಗ ಕಾಂಗ್ರೆಸ್‌ ಟ್ರಸ್ಟ್‌ಗೆ ಸೇರಿದ್ದು, ಟ್ರಸ್ಟ್‌ನಲ್ಲಿರುವವರು ಈಗ ಬಿಜೆಪಿ ಸೇರಿದ್ದು, ಅವರ ಚಿತಾವಣೆಯಿಂದ ಅಧಿಕಾರಿಗಳು ರಾತ್ರಿ ವೇಳೆಯಲ್ಲಿ ಬಂದು ಕಟ್ಟಡ ಒಡೆದುಹಾಕಿದ್ದಾರೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

ಅಕ್ಕಪಕ್ಕದಲ್ಲಿರುವ ತಾಲ್ಲೂಕು ಪಂಚಾಯಿತಿ ಮತ್ತು ಎಚ್‌ಡಿಸಿಸಿ ಬ್ಯಾಂಕ್‌ಗಳೂ ಜಾಗ ಒತ್ತುವರಿ ಮಾಡಿಕೊಂಡು ಕಾಂಪೌಂಡ್‌ ನಿರ್ಮಿಸಿದ್ದು, ಅದನ್ನು ಬಿಟ್ಟು ನಮ್ಮ ಕಟ್ಟಡಕ್ಕೆ ಮಾತ್ರ ಕೈಹಾಕಿದ್ದಾರೆ. ಲೋಪ ಎಸಗಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್‌ ಪಕ್ಷಕ್ಕೆ ಅಪಮಾನ ಮಾಡಲು ಯತ್ನಿಸಿದ ಹಾಗೂ ನಗರಸಭೆ ಅಧಿಕಾರಿಗಳಿಗೆ ಕುಮ್ಮಕ್ಕು ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದೂರಿನ ಹಿನ್ನೆಲೆಯಲ್ಲಿ ಕ್ರಮ: ಕಾಂಗ್ರೆಸ್‌ ಭವನದ ಮುಂದಿನ ಸೆಟ್‌ಬ್ಯಾಕ್‌ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನರ್ಮಿಸಿರುವ ಬಗ್ಗೆ ದೂರು ಬಂದಿತ್ತು. ಅದರ ಆಧಾರದಲ್ಲಿ ಕಾಂಗ್ರೆಸ್‌ ಭವನಕ್ಕೆ ಮೂರು ನೋಟಿಸ್‌ ನೀಡಲಾಗಿದೆ. ಯಾವುದಕ್ಕೂ ಉತ್ತರ ಬಾರದಿರುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಅದನ್ನು ತೆರವು ಮಾಡಿದ್ದೇವೆ ಎಂದು ನಗರಸಭೆ ಆಯುಕ್ತ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಬರಿಯ ಕಾಂಪೌಂಡ್‌ ನಿರ್ಮಿಸಿದ್ದರೆ ಒಡೆಯುವ ಪ್ರಸಂಗ ಬರುತ್ತಿರಲಿಲ್ಲ. ತಾಲ್ಲೂಕು ಪಂಚಾಯಿತಿ ಮತ್ತು ಎಚ್‌ಡಿಸಿಸಿ ಬ್ಯಾಂಕ್‌ನವರು ಅಷ್ಟೇ ಮಾಡಿದ್ದಾರೆ. ಸ್ಟೇಟ್‌ಬ್ಯಾಕ್‌ ಜಾಗದಲ್ಲಿ ಕಟ್ಟಡ ನಿರ್ಮಿಸಿಲ್ಲ. ಆದರೆ ಇಲ್ಲಿ ವ್ಯವಸ್ಥಿತವಾಗಿ ಹೋಟೆಲ್‌ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ಅದಕ್ಕೆ ಪರವಾನಿಗೆ ಪಡೆದಿರಲಿಲ್ಲ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.
ಯುವ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎಸ್‌. ಪ್ರಸನ್ನ ಕುಮಾರ್‌,

ಸಿ.ಆರ್‌. ವಿನೋದ್‌, ಕೆ.ಬಿ. ಲೋಹಿತ್‌, ಮಹೇಶ್‌, ಮಂಜುನಾಥ್‌ ಹಾಗೂ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT