ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡಗಳ ಸಕ್ರಮಕ್ಕೆ ಶೀಘ್ರ ಆದೇಶ

Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಪ್ರದೇಶದಲ್ಲಿ ನಕ್ಷೆ ಉಲ್ಲಂಘಿಸಿ ನಿರ್ಮಿಸಿ­ರುವ ವಸತಿ, ವಾಣಿಜ್ಯ ಕಟ್ಟಡಗಳನ್ನು ಸಕ್ರಮಗೊಳಿಸುವ ಸಂಬಂಧ ನಿಯಮಾವಳಿ ರೂಪಿಸಲಾಗುತ್ತಿದ್ದು, ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್‌ ಸೊರಕೆ ಹೇಳಿದರು.

ವಸತಿ ಉದ್ದೇಶದ ಕಟ್ಟಡಗಳಾದರೆ ಶೇ 50ರವರೆಗೆ ಹಾಗೂ ವಾಣಿಜ್ಯ ಉದ್ದೇಶದ ಕಟ್ಟಡಗಳಾದರೆ ಶೇ 30ರವರೆಗೆ ನಕ್ಷೆ ಉಲ್ಲಂಘನೆ ಮಾಡಿದ್ದರೆ ದಂಡ ವಿಧಿಸಿ ಸಕ್ರಮಗೊಳಿಸಲು ನಿಯಮಾವಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಅಕ್ರಮ– ಸಕ್ರಮ ಜಾರಿ ಸಂಬಂಧ ರಾಜ್ಯಪಾಲರು ಈ ಮೊದಲೇ ಸುಗ್ರಿವಾಜ್ಞೆ ಹೊರಡಿಸಿದ್ದರು. ಈಚೆಗೆ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಒಪ್ಪಿಗೆ ಪಡೆದುಕೊಳ್ಳಲಾಗಿದೆ. ನಿಯಮಾವಳಿಯಲ್ಲಿ ದಂಡದ ಪ್ರಮಾಣವನ್ನು ತಿಳಿಸಲಾಗುವುದು ಎಂದರು.

2013 ಅಕ್ಟೋಬರ್‌ 19ರವರೆಗೆ ನಕ್ಷೆ ಉಲ್ಲಂಘಿಸಿ ನಿರ್ಮಿಸಿ­ರುವ ಕಟ್ಟಡಗಳನ್ನು ಸಕ್ರಮಗೊಳಿಸಿಕೊಳ್ಳಲು ಅವಕಾಶ ಇದೆ. ಅಕ್ರಮ – ಸಕ್ರಮಕ್ಕೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್‌ನಲ್ಲಿ­ದೆ.  ನ್ಯಾಯಾಲಯ ಹಿಂದೆ ನೀಡಿದ್ದ ಆದೇಶದಂತೆ ನಿಯಮಾ­ವ­ಳಿ ರೂಪಿಸಿ ಪ್ರಮಾಣ ಪತ್ರ ಸಲ್ಲಿಸಲಾಗುವುದು. ನ್ಯಾಯಾ­ಲ­ಯ­ದ ಒಪ್ಪಿಗೆ ದೊರೆತ ನಂತರ ಅನುಷ್ಠಾನವಾಗಲಿದೆ.

ನಿಯಮಾವಳಿ ರೂಪಿಸಿದ ನಂತರ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡ­ಲಾಗುವುದು. ಭೂಮಿಯ ಮಾರುಕಟ್ಟೆ ದರ ಆಧರಿಸಿ ದಂಡದ ಪ್ರಮಾಣವನ್ನು ನಿಗದಿ ಮಾಡಲಾಗುವುದು. ಹೀಗೆ ಸಂಗ್ರಹ­ವಾಗುವ ಹಣವನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಉತ್ತರಿಸಿದರು.

ಸಿಬಿಐಗೆ ಪತ್ರ: ಸಚಿವ ಸೊರಕೆ
ರಾಮನಗರ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲಾಗಿದ್ದು, ಈ ಸಂಬಂಧ ಸಿಬಿಐಗೆ ಪತ್ರ ಬರೆಯಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ನಡೆಯುವ ಭೂ ಮಾಫಿಯಾಗೆ ಕಡಿವಾಣ ಹಾಕಲಾಗುವುದು ಎಂದು ಸಚಿವ ಸೊರಕೆ ಹೇಳಿದರು.

ರಾಮನಗರ, ಚನ್ನಪಟ್ಟಣ ಮತ್ತು ಬಿಡದಿ ಸೇರಿಸಿ ಮಹಾನಗರ ಪಾಲಿಕೆ ರಚಿಸುವುದು, ಮಂಡ್ಯ, ಮದ್ದೂರು ಶ್ರೀರಂಗಪಟ್ಟಣ ಸೇರಿಸಿ ಮತ್ತೊಂದು ಪಾಲಿಕೆ ರಚಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT