ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಲೇಬೇಕಿದೆ ಬೆಕ್ಕಿಗೆ ಗಂಟೆ

Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
ಸಾಮೂಹಿಕ ಅತ್ಯಾಚಾರ ಈಗ ಸಾರ್ವತ್ರಿಕವಾದ ವಿಕೃತ ಪಿಡುಗಾಗಿ ಪರಿಣಮಿಸುತ್ತಿದೆ. ಜಾತಿ, ಜನಾಂಗ, ವರ್ಗ, ಪ್ರದೇಶ, ವಯಸ್ಸು ಎಲ್ಲ ಬಗೆಯ ವ್ಯಾಪ್ತಿಯನ್ನೂ ಮೀರಿ ಈ ಬಗೆಯ ಹೇಯಕೃತ್ಯ ನಡೆಯುತ್ತಿದೆ. ಶಾಲೆ, ಕಾರ್ಯಸ್ಥಳ, ಗದ್ದೆ, ಬಯಲು, ಪಾಳು ಬಿದ್ದ ಕಟ್ಡಡ, ರೈಲು ಬೋಗಿಯ ಶೌಚಾಲಯ, ನಿರಾಶ್ರಿತರ ತಾಣ, ಕ್ಲಬ್- ಬಾರ್... ಹೀಗೆ ಎಲ್ಲೆಂದರಲ್ಲಿ ನಡೆಯುವ ಸಾಮೂಹಿಕ ಅತ್ಯಾಚಾರ ಮನುಷ್ಯನಲ್ಲಿ ಅಂತರ್ಗತವಾಗಿರುವ ಮೃಗೀಯತನಕ್ಕೆ ಸಾಕ್ಷಿಯಂತಿದೆ.
 
ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ ಜಗತ್ತಿನ ಬಹುತೇಕ ಭಾಗಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೈಹಿಕ ಮತ್ತು ಲೈಂಗಿಕ ಹಿಂಸೆಯ ಪ್ರಮಾಣ ಶೇ 30ರಿಂದ 60ರಷ್ಟಿದೆ. ದೇಶದ ಅತ್ಯಾಚಾರ ಪ್ರಕರಣಗಳ ಮೇಲೆ ಕಣ್ಣು ಹಾಯಿಸಿದರೆ 2002ರಲ್ಲಿ 16,373 ಅತ್ಯಾಚಾರ ಪ್ರಕರಣಗಳು ರಾಷ್ಟ್ರೀಯ ಅಪರಾಧ ಮಾಹಿತಿ ವಿಭಾಗದಲ್ಲಿ ದಾಖಲಾಗಿವೆ. 2009ರಲ್ಲಿ ಈ ಪ್ರಮಾಣ 21,397ಕ್ಕೆ ಏರಿದೆ. ವರ್ಷದಿಂದ ವರ್ಷಕ್ಕೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಕೇವಲ ಭಾರತ ಮಾತ್ರವಲ್ಲ ಇತರ ದೇಶಗಳ ಸ್ಥಿತಿಯೂ ಇದಕ್ಕೆ ಹೊರತಾಗೇನೂ ಇಲ್ಲ.
 
ಇಂಗ್ಲೆಂಡ್‌ನ `ದಿ ಇಂಡಿಪೆಂಡೆಂಟ್' ಪತ್ರಿಕೆಯ ಮಾಹಿತಿಯಂತೆ, 2008ರಲ್ಲಿ ಆ ದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಶೇ 85ರಷ್ಟು ಲಂಡನ್ ಮಹಾನಗರವೊಂದರಲ್ಲೇ ದಾಖಲಾಗಿವೆ. ಅಲ್ಲಿ ಇಂತಹ ಘಟನೆಗೆ ಬಹು ಮುಖ್ಯ ಕಾರಣ ಜನಾಂಗೀಯ ಹಿನ್ನೆಲೆಯೇ ಆಗಿರುತ್ತದೆ. 92 ಸಾಮೂಹಿಕ ಅತ್ಯಾಚಾರಿಗಳನ್ನು ಬಂಧಿಸಿದಾಗ, ಅವರಲ್ಲಿ 66 ಮಂದಿ ಕಪ್ಪು ಅಥವಾ ಮಿಶ್ರ ಜನಾಂಗದವರೇ ಆಗಿದ್ದರು. ಹಾಗೆಯೇ ಇಂತಹ ಕೃತ್ಯಗಳಲ್ಲಿ ತೊಡಗಿದ್ದವರಲ್ಲಿ ಹೆಚ್ಚಿನವರು ಹದಿಹರೆಯದವರು. ಹದಿನಾರು ವರ್ಷ ತುಂಬದವರೂ ಅತ್ಯಾಚಾರ ನಡೆಸಿದ ಪ್ರಕರಣಗಳು ಸಹ ಹಲವೆಡೆ ವರದಿ ಆಗುತ್ತಲೇ ಇರುತ್ತವೆ.
 
ಹಿಂದೆ ನಮ್ಮ ದೇಶದ ಪೊಲೀಸ್ ಠಾಣೆಯೊಂದರಲ್ಲಿ ಸಾಮೂಹಿಕ ಅತ್ಯಾಚಾರ ಘಟಿಸಿ, ಅದರಲ್ಲಿ ಪಾಲ್ಗೊಂಡಿದ್ದ ಎಲ್ಲ ಪೊಲೀಸರೂ ಏಡ್ಸ್ ರೋಗಕ್ಕೆ ತುತ್ತಾಗಿದ್ದರು. ಬಲಾತ್ಕಾರಕ್ಕೆ ಒಳಗಾದ ಮಹಿಳೆ ತನಗೆ ಏಡ್ಸ್ ರೋಗ ಇದ್ದ ವಿಷಯವನ್ನು ಉದ್ದೇಶಪೂರ್ವಕವಾಗಿಯೇ ಬಾಯಿ ಬಿಟ್ಟಿರಲಿಲ್ಲ. ಹೆಣ್ಣನ್ನು ಅತ್ಯಂತ ಗೌರವ ಭಾವದಿಂದ ಕಾಣುವ ನಮ್ಮ ನೆಲದಲ್ಲೂ ಸಾಮೂಹಿಕ ಅತ್ಯಾಚಾರ ಈಗೀಗ ಒಂದು ಪಿಡುಗಾಗುತ್ತಿದೆ. ಮೊದಲು ದೆಹಲಿಯಲ್ಲಿ ಅಪರೂಪಕ್ಕೊಮ್ಮೆ ಕೇಳಿಬರುತ್ತಿದ್ದ ಇಂತಹ ಘಟನೆಗಳು, ಈಗ ಯಾವ ಮೂಲೆಯಲ್ಲಿ ಬೇಕಾದರೂ ನಡೆಯಬಹುದು ಎಂಬಂತಾಗಿದೆ.

ಇತ್ತೀಚೆಗೆ 25 ದಿನಗಳ ಅವಧಿಯಲ್ಲಿ ದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳಲ್ಲಿ ಶೇ 10ರಷ್ಟು ಹರ‌್ಯಾಣ ರಾಜ್ಯವೊಂದರಲ್ಲೇ ನಡೆದಿವೆ. ಅಲ್ಲಿ 2011ರಲ್ಲಿ 773 ಅತ್ಯಾಚಾರ ಪ್ರಕರಣಗಳು ನಡೆದಿದ್ದರೆ, ಈ ವರ್ಷದ ಮೊದಲ ಆರು ತಿಂಗಳಲ್ಲೇ 367 ಪ್ರಕರಣಗಳು ವರದಿಯಾಗಿವೆ. ಬಿಹಾರದಲ್ಲಿ 2011ರಿಂದ ಈವರೆಗೆ 1140 ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ.

 ಅವುಗಳಲ್ಲಿ ಪ್ರಮುಖವಾಗಿ ಡಬ್ಲ್ಯು.ಬಿ. ಸ್ಟ್ಯಾಂಡರ್ಡ್ಸ್, ಡಯಾನಾ ರಸಲ್, ಪೋರ್ಟರ್ ಹಾಗೂ ಇತರರು ಹೇಳುವಂತೆ, ಅತ್ಯಾಚಾರ ಒಬ್ಬನಿಂದ ಆಗಿರಲಿ ಅಥವಾ ಸಾಮೂಹಿಕವಾಗೇ ನಡೆದಿರಲಿ ಅದರಲ್ಲಿ ಪಾಲ್ಗೊಳ್ಳುವವರಲ್ಲಿ ಬಹುತೇಕರು ಸಾಮಾನ್ಯವಾಗಿ ಆ ಸಂತ್ರಸ್ತೆಗೆ ಪರಿಚಯದವರೇ ಆಗಿರುತ್ತಾರೆ. ಕೆಲವೊಮ್ಮೆ ಗುಂಪಿನ ಒಬ್ಬ ಹುಡುಗ ಅಥವಾ ಆ ಹುಡುಗಿಯ ಗೆಳತಿಯೇ ಇಂತಹ ಕಾರ್ಯಕ್ಕೆ ಕುಮ್ಮಕ್ಕು ನೀಡಿರುತ್ತಾರೆ. ತೀರಾ ಸಣ್ಣ ಕಾರಣಗಳಿಗಾಗಿ ಹುಡುಗಿಯರ ಮೇಲೆ ಸೇಡು ತೀರಿಸಿಕೊಳ್ಳಲು ಅತ್ಯಾಚಾರ ನಡೆಯುವುದೂ ಇದೆ.
 
ಇಂತಹ ಸ್ಥಿತಿಗೆ ಕಾರಣ ಏನು, ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದು ಈಗ ಸಮಾಜದ ಮುಂದೆ ಸವಾಲಾಗಿ ನಿಂತಿದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ವೇಷಭೂಷಣ, ಆಹಾರ ಪದ್ಧತಿ, ಸಿನಿಮಾ ಸಂಸ್ಕೃತಿ, ಬಿಂದಾಸ್ ಜೀವನ ಶೈಲಿ ಎಲ್ಲವೂ ಇಂತಹ ಕೃತ್ಯಕ್ಕೆ ಕೊಡುಗೆ ನೀಡುತ್ತಿವೆ ಎನಿಸುತ್ತದೆ. ವಿಶ್ವದಾದ್ಯಂತ ಅತ್ಯಾಚಾರದ ಪಿಡುಗು ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದೆ. 
 
ಇಷ್ಟಾದರೂ ಅದರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಇರುವುದನ್ನು ನೋಡಿದರೆ  ಇಡೀ ಸಮಾಜವೇ ಇಂತಹ ಕೆಲವೇ ಕೆಲವು ವ್ಯಕ್ತಿಗಳ ಎದುರು ನಿಂತು `ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?' ಎಂದು ಕೇಳುತ್ತಿರುವಂತೆ ಭಾಸವಾಗುತ್ತಿದೆ. 
 
ಎಲ್ಲೋ ಇಂತಹ ಘಟನೆ ನಡೆದರೆ ನಮಗ್ಯಾಕೆ ಎಂಬ ಭಾವನೆ ಸಹ ಹಲವರಲ್ಲಿ ಮನೆ ಮಾಡಿರುತ್ತದೆ. ಇಂತಹ ಭಾವನೆಯನ್ನು ಹೊಡೆದೋಡಿಸಿ, ಈ ಸಾಮಾಜಿಕ ಪಿಡುಗಿನ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸದಿದ್ದರೆ, ಮುಂದಿನ ಪೀಳಿಗೆಯನ್ನು ನಾವು ಪಾಪಕೂಪಕ್ಕೆ ತಳ್ಳಲು ಸಿದ್ಧರಾಗಿದ್ದೇವೆ ಎಂದೇ ಅರ್ಥ.

ವಿಕೃತಿಗೆ ಹಾಕಿ ಕಡಿವಾಣ 
ಹಿಂದೆಲ್ಲ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿಯಿಂದ ಕತ್ತರಿ ಪ್ರಯೋಗ ನಡೆಯುತ್ತಿತ್ತು. ಆದರೆ ಈಚೆಗಂತೂ ಟಿ.ವಿ.ಯಲ್ಲಿ ಪ್ರಸಾರವಾಗುವ ಸಿನಿಮಾ ಹಾಗೂ ಇತರ ಅನೇಕ ಕಾರ್ಯಕ್ರಮಗಳಲ್ಲಿ ಹೆಣ್ಣಿನ ಮೇಲೆ ನಡೆಯುವ ಲೈಂಗಿಕ ಅತ್ಯಾಚಾರ, ದೌರ್ಜನ್ಯಗಳನ್ನು ವಿವರವಾಗಿ ತೋರಿಸುತ್ತಾರೆ. ಇದರಿಂದ ಇಂತಹವರಿಗೆ ಹೊಸ ಹೊಸ ಕಲ್ಪನೆಗಳು ದೊರಕುವುದರಲ್ಲಿ ಅನುಮಾನವಿಲ್ಲ. ಇಂತಹ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕು.
 
ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳು ಗೌರವದಿಂದ ಕಾಣುವಂತೆ ಮಾಡುವಲ್ಲಿ ಎಲ್ಲ ತಾಯಂದಿರು, ಶಾಲಾ ಉಪಾಧ್ಯಾಯರು ಮುಖ್ಯ ಪಾತ್ರ ವಹಿಸಬೇಕು.
 
ಹೆಣ್ಣು ಮಕ್ಕಳು ಸ್ವಯಂ ರಕ್ಷಣೆ ಮಾಡಿಕೊಳ್ಳಲು ನೆರವಾಗುವ ಕರಾಟೆ ಮುಂತಾದವುಗಳ ತರಬೇತಿ ನೀಡುವ ಜವಾಬ್ದಾರಿಯನ್ನು ಶಾಲಾ ಕಾಲೇಜುಗಳು ವಹಿಸಿಕೊಳ್ಳಬೇಕು. ಪುರುಷನೊಬ್ಬ ಆಕ್ರಮಣ ಮಾಡಿದರೆ ಅವನನ್ನು ಹೇಗೆ ಎದುರಿಸಬೇಕು ಎಂಬ ತರಬೇತಿಯನ್ನೂ ಕೊಡಬೇಕು. 
 
ಮೆಣಸಿನ ಪುಡಿ ಸ್ಪ್ರೇಗಳು ಅಂಗಡಿಗಳಲ್ಲಿ ಸುಲಭವಾಗಿ ಸಿಗುವಂತೆ ಆಗಬೇಕು. ಅಗತ್ಯ ಬಂದರೆ ಬಡ ಹೆಣ್ಣುಮಕ್ಕಳಿಗೆ ಅದನ್ನು ಪುಕ್ಕಟೆಯಾಗಿಯೂ ಹಂಚಬೇಕು. ಎಲ್ಲ ಮಹಿಳೆಯರೂ ಸದಾ ಅದನ್ನು ತಮ್ಮ ಬಳಿಯೇ ಇಟ್ಟುಕೊಂಡಿರಬೇಕು.
 
ಹೆತ್ತವರು ಹೆಣ್ಣು ಮಕ್ಕಳನ್ನು ಹೊರಗೆ ಕಳುಹಿಸುವಾಗ ಅಥವಾ ಹೆಣ್ಣು ಮಕ್ಕಳೇ ಹೊರಗೆ ಹೋಗುವಾಗ ಜಾಗರೂಕರಾಗಿದ್ದು, ನಿರ್ಜನ ಪ್ರದೇಶಗಳಿಂದ ದೂರವಿದ್ದರೆ ಒಳ್ಳೆಯದು. ಇದರಿಂದ ಹೆಣ್ಣು ಮಕ್ಕಳ ಸ್ವಾತಂತ್ರ್ಯಕ್ಕೆ ಧಕ್ಕೆ ಆಗಬಹುದು. ಆದರೆ ನಮ್ಮನ್ನು ಆಳುವವರು ನಮಗೆ ರಕ್ಷಣೆ ನೀಡಲು ವಿಫಲರಾದಾಗ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಷ್ಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT