ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಾ: ಕ್ಯಾನ್ಸರ್‌ಗೆ ಚಿಕಿತ್ಸೆ

Last Updated 17 ಸೆಪ್ಟೆಂಬರ್ 2011, 18:45 IST
ಅಕ್ಷರ ಗಾತ್ರ

ಬೆಂಗಳೂರು: ಕೆಐಎಡಿಬಿ ಭೂ ಹಗರಣ ಕುರಿತಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಈ ಹಿಂದೆ ಶಿಫಾರಸು ಮಾಡಿದ್ದಂತೆ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಶನಿವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು.

ಪ್ರಕರಣದ ವಿಚಾರಣೆ ನಡೆಸುತ್ತಿರುವ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದ ವಿಕ್ಟೋರಿಯಾ ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಜೆ.ಕಾಂತರಾಜ್, ಕಟ್ಟಾ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ವರದಿಯನ್ನು ಸಲ್ಲಿಸಿದರು.

ಕಟ್ಟಾ 2004ರಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈಗ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಚಿಕಿತ್ಸೆ ಮುಂದುವರಿಸುವ ಅಗತ್ಯವಿದೆ ಎಂದು ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರಿಗೆ ವಿವರಿಸಿದರು.

ಕತ್ತಿನ ನರದ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಹಿಂದೆ ಶಿಫಾರಸು ಮಾಡಲಾಗಿತ್ತು. ಈ ಸಮಸ್ಯೆಗೆ ಕೇವಲ ಮಾತ್ರೆ ನೀಡಿದರೆ ಸಾಕು. ಆದರೆ, ಕಟ್ಟಾ ಹಲವು ವರ್ಷಗಳಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರು ಬಾರಿ ಕೀಮೋಥೆರಪಿ ಚಿಕಿತ್ಸೆ ಪಡೆದಿದ್ದಾರೆ. ಈಗ ಮತ್ತೆ ಸಮಸ್ಯೆ ಉಲ್ಬಣಿಸಿದ್ದು, ಚಿಕಿತ್ಸೆ ಮುಂದುವರೆಸಲೇಬೇಕಿದೆ ಎಂದು ಕಾಂತರಾಜ್ ನ್ಯಾಯಾಲಯಕ್ಕೆ ತಿಳಿಸಿದರು.

ಆರೋಪಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ನ್ಯಾಯಾಧೀಶರು, `ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವಂತಹ ಹೆಚ್ಚಿನ ಸೌಕರ್ಯಗಳಿಲ್ಲ. ಅಲ್ಲಿ ಆರೋಪಿಯನ್ನು ಹೇಗೆ ಇರಿಸಿಕೊಳ್ಳುತ್ತೀರಿ~ ಎಂದು ವೈದ್ಯರನ್ನು ಪ್ರಶ್ನಿಸಿದರು.

ಈ ಬಗ್ಗೆ ಸೋಮವಾರ ವಿಚಾರಣೆ ಮುಂದುವರಿಸುವುದಾಗಿ ನ್ಯಾಯಾಧೀಶ  ಎನ್.ಕೆ.ಸುಧೀಂದ್ರ ರಾವ್ ತಿಳಿಸಿದರು.

ಕೆಐಎಡಿಬಿ ಭೂ ಹಗರಣದ ಪ್ರಮುಖ ಆರೋಪಿಗಳಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅವರ ಪುತ್ರ ಕಟ್ಟಾ ಜಗದೀಶ್ ಮತ್ತು ಇಟಾಸ್ಕಾ ಸಾಫ್ಟ್‌ವೇರ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ವಿ.ಶ್ರೀನಿವಾಸ್ ಅವರ ನ್ಯಾಯಾಂಗ ಬಂಧನದ ಅವಧಿ ಸೋಮವಾರಕ್ಕೆ ಅಂತ್ಯವಾಗಲಿದೆ.

ಕಟ್ಟಾ ಮತ್ತು ಶ್ರೀನಿವಾಸ್ ಆಸ್ಪತ್ರೆಯಲ್ಲಿದ್ದಾರೆ. ಜಗದೀಶ್ ಅವರನ್ನು ಮಾತ್ರ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಪುನಃ ನ್ಯಾಯಾಂಗ ಬಂಧನ ವಿಸ್ತರಿಸಿ ಸೋಮವಾರ ಆದೇಶ ಹೊರಡಿಸುವ ಸಂಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT