ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಾ ಜಾಮೀನು: ವಿಚಾರಣೆ ಮುಂದಕ್ಕೆ

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೆಐಎಡಿಬಿ ಭೂಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆ ವೈದ್ಯರಿಂದ ಮತ್ತಷ್ಟು ವಿವರ ಬಯಸಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

`ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯದ ಆದೇಶದಂತೆ ಮಂಗಳವಾರ ವಿಚಾರಣೆಗೆ ಹಾಜರಾಗಿದ್ದ ವಿಕ್ಟೋರಿಯಾ ಆಸ್ಪತ್ರೆಯ ಕ್ಯಾನ್ಸರ್ ತಜ್ಞರಾದ ಡಾ.ಮೀರಾ, ಕಟ್ಟಾ ಆರೋಗ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿದರು. ಪಿಇಟಿ-ಸಿಟಿ ಸ್ಕ್ಯಾನಿಂಗ್‌ನಿಂದ ಕ್ಯಾನ್ಸರ್ ರೋಗದ ಹಂತವನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಬಳಿಕ ನ್ಯಾಯಾಧೀಶರ ಸೂಚನೆಯಂತೆ ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಿದರು.

ನಂತರ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ವಿಜಯಕುಮಾರ್ ಅವರನ್ನು ನ್ಯಾಯಾಲಯಕ್ಕೆ ಕರೆಸಿಕೊಂಡ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ಕಟ್ಟಾ ಅವರಿಗೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು. ನ್ಯಾಯಾಲಯದ ಒಳಗಡೆಯೇ ಎರಡು ಗಂಟೆಗಳ ಕಾಲ ವೈದ್ಯರ ವರದಿಗಳು, ಹಿಂದೆ ವಿವಿಧ ಆಸ್ಪತ್ರೆಗಳಲ್ಲಿ ನೀಡಿರುವ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳು, ಇತ್ತೀಚೆಗೆ ನಡೆಸಿದ ಸ್ಕ್ಯಾನಿಂಗ್ ವರದಿಯನ್ನು ಪರಿಶೀಲಿಸಿದ ಅವರು ಲಿಖಿತ ಹೇಳಿಕೆಯೊಂದನ್ನು ನೀಡಿದರು.

ಬಳಿಕ ನ್ಯಾಯಾಧೀಶರು ಅತ್ಯಂತ ವಿವರವಾಗಿ ಕಟ್ಟಾ ಆರೋಗ್ಯ ಸ್ಥಿತಿ ಕುರಿತು ವಿಜಯಕುಮಾರ್ ಅವರಿಂದ ಮಾಹಿತಿ ಪಡೆದರು. ಕಟ್ಟಾ 2004ರಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. 2008ರಲ್ಲಿ ಲಂಡನ್‌ನ ರಾಯಲ್ ಫ್ರೀ ಆಸ್ಪತ್ರೆಯಲ್ಲಿ ಆಕರಕೋಶಗಳ ಚಿಕಿತ್ಸೆ ಪಡೆದಿದ್ದರು.

ಈಗಿನ ಸ್ಥಿತಿಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಿಲ್ಲ. ಕೀಮೋಥೆರಪಿ ಮಾತ್ರ ನಡೆಸಬಹುದು ಎಂದು ವಿವರಿಸಿದರು. ಆರೋಪಿಯ ಆರೋಗ್ಯ ಪರಿಸ್ಥಿತಿಯ ನಿಖರ ಮಾಹಿತಿ, ನೀಡಬಹುದಾದ ಚಿಕಿತ್ಸೆ, ಈ ಸಮಸ್ಯೆಗೆ ಚಿಕಿತ್ಸೆ ನೀಡಬಲ್ಲ ಆಸ್ಪತ್ರೆಗಳು ಮತ್ತಿತರ ಸ್ಪಷ್ಟ ವಿವರಗಳನ್ನು ಒಳಗೊಂಡ ವರದಿಯನ್ನು ಸೋಮವಾರ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ನ್ಯಾಯಾಧೀಶರು ವಿಜಯಕುಮಾರ್ ಅವರಿಗೆ ಆದೇಶಿಸಿದರು.

 ಈ ವಿಷಯದಲ್ಲಿ ಹೆಚ್ಚಿನ ಅನುಭವ ಹೊಂದಿರುವ ಕ್ಯಾನ್ಸರ್ ತಜ್ಞರೊಬ್ಬರ ನೆರವು ಪಡೆದು ವರದಿ ಸಲ್ಲಿಸುವಂತೆಯೂ ಆದೇಶದಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT