ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಾಗೆ ಜಾಮೀನು ನಿರಾಕರಣೆ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಜಾಮೀನು ನೀಡಲು ಲೋಕಾಯುಕ್ತ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ಆದರೆ, ಬಂಧನದಲ್ಲೇ ಪೊಲೀಸ್ ನಿಗಾ ಮತ್ತು ಭದ್ರತೆಯಲ್ಲಿ ದೇಶದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡಿದೆ.

ರಕ್ತದ ಕ್ಯಾನ್ಸರ್‌ಗೆ (ಲಿಂಫೋಮಾ) ಚಿಕಿತ್ಸೆ ಪಡೆಯಲು ಜಾಮೀನು ಮಂಜೂರು ಮಾಡುವಂತೆ ಕೋರಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಲ್ಲಿಸಿದ್ದ ಅರ್ಜಿ ಕುರಿತು `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಸೋಮವಾರ ಆದೇಶ ಪ್ರಕಟಿಸಿದರು.

ಆರೋಪಿಯು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಮತ್ತು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುವ ಸಂಭವ ಇರುವುದರಿಂದ ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಿದರು.

ಆಗಸ್ಟ್ 8ರಂದು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ವಿಶೇಷ ನ್ಯಾಯಾಲಯ, ಕಟ್ಟಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಹೈಕೋರ್ಟ್ ಕೂಡ ಆಗಸ್ಟ್ 23ರಂದು ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ವೈದ್ಯಕೀಯ ಕಾರಣಗಳ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡುವಂತೆ ಮತ್ತೆ ಸೆಪ್ಟೆಂಬರ್ 23ರಂದು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಕೇವಲ 14 ದಿನ ಕಾರಾಗೃಹದಲ್ಲಿದ್ದ ಆರೋಪಿಯನ್ನು, ಆ. 22ರಂದು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಕತ್ತಿನ ನರದ ಶಸ್ತ್ರ ಚಿಕಿತ್ಸೆಗಾಗಿ ಜಾಮೀನು ನೀಡುವಂತೆ ಕೋರಲಾಗಿತ್ತು.

ನಂತರ, ಆರೋಪಿಗೆ ನಾನ್ ಹಾಡ್ಜ್‌ಕಿನ್‌ಲಿಂಫೋಮಾ ಕ್ಯಾನ್ಸರ್ ರೋಗವಿದ್ದು, ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಲು ಜಾಮೀನು ನೀಡುವಂತೆ ಮನವಿ ಮಾಡಲಾಗಿತ್ತು.

ವಿಕ್ಟೋರಿಯಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ, ನಿರ್ದೇಶಕ, ಕ್ಯಾನ್ಸರ್ ತಜ್ಞರಿಂದ ನ್ಯಾಯಾಲಯ ಕಟ್ಟಾ ಆರೋಗ್ಯ ಸ್ಥಿತಿ ಕುರಿತು ವರದಿ ಪಡೆದಿತ್ತು. ಈ ಸಂಬಂಧ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ ಎಲ್ಲ ವೈದ್ಯಕೀಯ ದಾಖಲೆಗಳನ್ನು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ವಿಜಯಕುಮಾರ್ ಅವರಿಂದ ಪರಿಶೀಲನೆಗೆ ಒಳಪಡಿಸಿ, ನ್ಯಾಯಾಲಯ ವರದಿ ಪಡೆದಿತ್ತು.

2004ರಲ್ಲಿ ಕಟ್ಟಾ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. 2008ರಲ್ಲಿ ಲಂಡನ್‌ನ ರಾಯಲ್‌ಫ್ರೀ ಆಸ್ಪತ್ರೆಯಲ್ಲಿ ಅವರಿಗೆ `ಆಕರ ಕೋಶ~ (ಸ್ಟೆಮ್ ಸೆಲ್) ಚಿಕಿತ್ಸೆ ನೀಡಲಾಗಿತ್ತು. ಲಂಡನ್ ಆಸ್ಪತ್ರೆಯಲ್ಲಿ `ಆಕರ ಕೋಶ~ಗಳನ್ನು ಸಂಗ್ರಹಿಸಿ ಇಟ್ಟಿರುವುದರಿಂದ ಅಲ್ಲಿಗೆ ತೆರಳಿ ಚಿಕಿತ್ಸೆ ಪಡೆಯಲು ಪೂರಕವಾಗಿ ಜಾಮೀನು ನೀಡುವಂತೆ ಆರೋಪಿ ಪರ ವಕೀಲರು ಮನವಿ ಮಾಡಿದ್ದರು. ಕೊನೆಯಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ಜಾಮೀನು ನೀಡುವಂತೆ ಕೋರಿದ್ದರು.

ಆದರೆ, ಕಟ್ಟಾ ಅವರಿಗೆ ಪೂರ್ಣ ಪ್ರಮಾಣದ ಜಾಮೀನು ನೀಡುವುದನ್ನು ಲೋಕಾಯುಕ್ತ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಐ.ಎಸ್.ಪ್ರಮೋದ್‌ಚಂದ್ರ ಪ್ರಬಲವಾಗಿ ವಿರೋಧಿಸಿದ್ದರು. ಜಾಮೀನು ನಕಾರ: `ಜೈಲಿನಲ್ಲಿರುವ ಆರೋಪಿ ಅಥವಾ ಅಪರಾಧಿಗೆ ಚಿಕಿತ್ಸೆ ಪಡೆಯುವ ಹಕ್ಕು ಇದೆ ಎಂಬ ವಾದವನ್ನು ನ್ಯಾಯಾಲಯ ಮಾನವೀಯ ನೆಲೆಗಟ್ಟಿನಲ್ಲೇ ಮಾನ್ಯ ಮಾಡುತ್ತದೆ. ಸಾಮಾನ್ಯವಾಗಿ ಬಂಧನದಲ್ಲಿರುವ ಕೈದಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಬೇಕು. ಆದರೂ ನ್ಯಾಯಾಲಯ ಒಂದು ಹೆಜ್ಜೆ ಮುಂದೆ ಹೋಗಿ ದೇಶದ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ಪಡೆಯಲು ಅನುಮತಿ ನೀಡುತ್ತದೆ. ಆರೋಪಿ ಸ್ವಂತ ವೆಚ್ಚದಲ್ಲೇ ಚಿಕಿತ್ಸೆ ಪಡೆಯಬೇಕು. ಈ ಅವಧಿಯಲ್ಲಿ ಪೊಲೀಸ್ ನಿಗಾ ಮತ್ತು ಭದ್ರತೆ ಇರಬೇಕು~ ಎಂದು ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.

`ಲಿಂಫೋಮಾ ಕ್ಯಾನ್ಸರ್‌ಗೆ ಚಿಕಿತ್ಸೆ ಬೆಂಗಳೂರಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ ಎಂದು ಕಿದ್ವಾಯಿ ನಿರ್ದೇಶಕರ ವರದಿ ತಿಳಿಸಿದೆ. ಆದರೂ ಆರೋಪಿಯ ಇಚ್ಛೆಯಂತೆ ಮುಂಬೈನ ಲೀಲಾವತಿ ಆಸ್ಪತ್ರೆ, ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯೂ ಸೇರಿದಂತೆ ದೇಶದ ಯಾವುದೇ ಆಸ್ಪತ್ರೆಯಲ್ಲಾದರೂ ಚಿಕಿತ್ಸೆ ಪಡೆಯಬಹುದು~ ಎಂಬ ವಿಷಯ ಆದೇಶದಲ್ಲಿದೆ.

`ಜಾಮೀನು ಅರ್ಜಿಯ ಬಗ್ಗೆ ಆದೇಶ ನೀಡುವಾಗ ಆರೋಪಿಯ ಆರೋಗ್ಯದ ವಿಷಯ ಮತ್ತು ಪ್ರಕರಣದಲ್ಲಿ ಅಡಗಿರುವ ಸಾರ್ವಜನಿಕ ಹಿತ ಎರಡನ್ನೂ ಪರಿಗಣಿಸಬೇಕಾಗುತ್ತದೆ. ಆರೋಪಿಯು ಶಾಸಕ, ಮೇಲಾಗಿ ಮಾಜಿ ಸಚಿವ. ತನಗಿರುವ ಪ್ರಭಾವವನ್ನು ಬಳಸಿಕೊಂಡು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಮತ್ತು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುವ ಸಂಭವ ಇದೆ ಎಂಬುದನ್ನು ಮೊದಲ ಬಾರಿ ಜಾಮೀನು ಅರ್ಜಿಯ ಸಂಬಂಧ ನೀಡಿದ ಆದೇಶದಲ್ಲೇ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಈ ಬಾರಿಯೂ ಅದೇ ಕಾರಣಗಳನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ. ಆದ್ದರಿಂದಲೇ ಆರೋಪಿಗೆ ಜಾಮೀನು ಮಂಜೂರು ಮಾಡಲಾಗದು~ ಎಂದು ಹೇಳಿದೆ.

ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಹೊರತಾಗಿಯೂ 100ಕ್ಕೂ ಹೆಚ್ಚು ಸಾಕ್ಷಿಗಳಿದ್ದಾರೆ. ಈ ಪೈಕಿ ಶೇಕಡ 70ರಷ್ಟು ಮಂದಿ ಹಳ್ಳಿಯವರು ಮತ್ತು ಅನಕ್ಷರಸ್ಥರು. ಆರೋಪಿಯ ವಿರುದ್ಧ ಫೋರ್ಜರಿ, ವಂಚನೆ, ದಾಖಲೆ ತಿದ್ದಿರುವುದು, ಬೆದರಿಕೆ ಹಾಕಿರುವುದು, ಲಂಚ ಪಡೆದಿರುವುದು ಸೇರಿದಂತೆ ಹತ್ತಾರು ಆರೋಪಗಳಿವೆ. ನೂರಾರು ಕೋಟಿ ರೂಪಾಯಿ ಅವ್ಯವಹಾರ ಮತ್ತು ನೂರಾರು ಎಕರೆ ಭೂಮಿಯ ವಿಷಯ ಪ್ರಕರಣದಲ್ಲಿದೆ. ಜಾಮೀನು ನೀಡುವುದರಿಂದ ಸಾಕ್ಷಿ ಮತ್ತು ಸಾಕ್ಷ್ಯಗಳ ಮೇಲೆ ಆಗಬಹುದಾದ ಪರಿಣಾಮವನ್ನೂ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ ಎಂದು ತಿಳಿಸಿದೆ.

ಮಫ್ತಿಯಲ್ಲಿ ಪೊಲೀಸರು: ಪೊಲೀಸ್ ನಿಗಾ ಇಡುವುದರಿಂದ ಚಿಕಿತ್ಸೆಯ ವೇಳೆ ಸಂಚಾರಕ್ಕೆ ತೊಂದರೆ ಆಗಬಹುದು ಎಂಬ ಆರೋಪಿಪರ ವಕೀಲರ ವಾದವನ್ನು ನ್ಯಾಯಾಲಯ ಸ್ಪಷ್ಟವಾಗಿ ತಳ್ಳಿಹಾಕಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಾಗ ಮಫ್ತಿ ಪೊಲೀಸರು  ಭದ್ರತೆ ಒದಗಿಸಬೇಕು. ಪೊಲೀಸರ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಆರೋಪಿಯ ಚಿಕಿತ್ಸೆಗೆ ಅಗತ್ಯವಿರುವ ನಿಗಾ ಮತ್ತು ಭದ್ರತಾ ವ್ಯವಸ್ಥೆಯನ್ನು ಕಾರಾಗೃಹ ಡಿಐಜಿ ಮಾಡಬೇಕು ಎಂದು ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.

ಚಿಕಿತ್ಸೆಗೆ ಕಿದ್ವಾಯಿ ಸಹಮತ
ಜಾಮೀನು ಆದೇಶ ಪ್ರಕಟವಾಗುತ್ತಿದ್ದ ಸಂದರ್ಭದಲ್ಲೇ, ಕಟ್ಟಾ ಅವರಿಗೆ ಚಿಕಿತ್ಸೆ ನೀಡಲು ಸಿದ್ಧವಿರುವುದಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ವಿಜಯಕುಮಾರ್ ಸಲ್ಲಿಸಿರುವ ಪತ್ರ ನ್ಯಾಯಾಲಯಕ್ಕೆ ತಲುಪಿತು. ಅದನ್ನು ಪರಿಶೀಲಿಸಿದ ನ್ಯಾಯಾಧೀಶರು, `ಆರೋಪಿಯ ಸಹಮತ ಇದ್ದಲ್ಲಿ ಕಿದ್ವಾಯಿ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಬಹುದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT