ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟುನಿಟ್ಟಿನ ಚುನಾವಣೆ ಅಗತ್ಯ

Last Updated 21 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಈಗೀಗ ಲಕ್ಷಾಂತರ, ಕೋಟ್ಯಂತರ ಹಣ, ಚಿನ್ನದ ಬಳೆ, ಫ್ಯಾನು, ಸೀರೆ, ದೋತರಗಳನ್ನು ತುಂಬಿಕೊಂಡು ಸಾಗುವ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡ ಸುದ್ದಿ ಪ್ರತಿದಿನವೂ ಕೇಳುತ್ತಿದ್ದೇವೆ.

ಇದು ಹಣ ಮತ್ತು ಇತರ ಆಮಿಷಗಳ ಸ್ಪರ್ಧೆ ಈಗಾಗಲೇ ಆರಂಭವಾಗಿರುವುದರ ಸ್ಪಷ್ಟ ಮುನ್ಸೂಚನೆ ಆಗಿದೆ. ದಿನದಿಂದ ದಿನಕ್ಕೆ ಇದು ಹೆಚ್ಚುತ್ತಿರುವುದರಿಂದ ಚುನಾವಣಾ ಆಯೋಗದ ಕಟ್ಟುನಿಟ್ಟು ಕ್ರಮ ಮತದಾರರಿಗೆ ಆಮಿಷ ಒಡ್ಡುವ ಅಭ್ಯರ್ಥಿಗಳ ಪ್ರವೃತ್ತಿಗೆ ಕಡಿವಾಣವಾಗಿಲ್ಲ ಎನ್ನುವುದು ಸ್ಪಷ್ಟ.

ಈಗಲೇ ಹೀಗೆ ಇರುವಾಗ ಚುನಾವಣಾ ಹಿಂದಿನ ಎರಡು ಮೂರು ದಿನ ಹಣ ಹೇಗೆ ವಿಲೇವಾರಿ ಆಗುತ್ತದೆ ಎಂಬುದನ್ನು ಸುಲಭವಾಗಿ ಯೋಚಿಸಬಹುದು.

ಈ ರೀತಿ ಆಯ್ಕೆಯಾದ ಶಾಸಕರು ಎಷ್ಟರಮಟ್ಟಿಗೆ ಉತ್ತಮ ಆಡಳಿತ ಕೊಡಲು ಸಾಧ್ಯ? ಈ ಸರ್ಕಾರ ಜನಪರ ಸರ್ಕಾರವಾಗಲು ಸಾಧ್ಯವೇ ಎಂಬುದು ಜನ ಸಾಮಾನ್ಯರ ಪ್ರಶ್ನೆ ಯಾವ ಆಮಿಷಕ್ಕೂ ಮತದಾರ ಬಲಿಯಾಗದೆ ಮತ ಚಲಾಯಿಸಲು ಸಾಧ್ಯವಾಗುವಂಥ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಆಯೋಗವೂ ಚಿಂತಿಸಬೇಕಲ್ಲವೇ?

ಕೇವಲ ನೋಟೀಸು ಕೊಡುವುದರಿಂದ ಹಣ ವಶ ಪಡಿಸಿಕೊಳ್ಳುವುದರಿಂದ ಬಾಡೂಟದ ಮೇಲೆ ದಾಳಿ ಮಾಡಿ ತಯಾರಾದ ಅಡುಗೆಯನ್ನು ತಿಪ್ಪೆಗೆ ಹಾಕುವುದರಿಂದ ಖಂಡಿತ ಆಮಿಷ ತಡೆಯಲು ಸಾಧ್ಯವಿಲ್ಲ. ಇದೆಲ್ಲ ನಾನು ಸಿಕ್ಕಂತೆ ಮಾಡುತ್ತೇವೆ ನೀವು ಹಿಡಿದಂತೆ ಮಾಡಿರಿ ಎನ್ನುವ ಜನರ ಕಣ್ಣಿಗೆ ಮಣ್ಣೆರೆಚುವ ಆಟ ಆದೀತು.

ಹಣದ ಮೂಲ ಶೋಧಿಸಿ ಆ ಅಭ್ಯರ್ಥಿಯನ್ನು ತಕ್ಷಣ ಅನರ್ಹಗೊಳಿಸುವ ಸೂಪರ್ ಪವರ್ ಚುನಾವಣಾ ಆಯೋಗ ಹೊಂದಿರದಿದ್ದರೆ ಖಂಡಿತ ಈ ಚುನಾವಣೆಗಳೆಲ್ಲ ಒಂದು ಅಣಕ ವಾದೀತು.

ಮಹಾನಗರಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳು ತಲಾ ಐದೈದು ಕೋಟಿ ಖರ್ಚು ಮಾಡಿದರು ಎಂದು ಪತ್ರಿಕಾ ವರದಿಗಳು ಹೇಳುತ್ತವೆ. ಒಂದು ಶಾಸಕ ಸ್ಥಾನಕ್ಕೆ ಆಯ್ಕೆ ಆಗಲು ಎಷ್ಟು ಖರ್ಚು ಮಾಡುತ್ತಿರಬಹುದು ಎನ್ನುವುದು ಸುಲಭದಲ್ಲಿ ಊಹಿಸಬಹುದು. ಅದಕ್ಕೆ ಹೋಲಿಸಿದರೆ ಈಗ ಸಿಕ್ಕ ಹಣ ಯಾವ ಲೆಕ್ಕಕ್ಕೆ ಎಂದು ಆಶ್ಚರ್ಯವಾಗುತ್ತದೆ.

ಚುನಾವಣಾ ಆಯೋಗಕ್ಕೆ ಈಗಿನ ಕ್ರಮಗಳಿಂದ ಈ ಹಣ ಹೆಂಡಗಳ ಆಮಿಷ ತಡೆಯಲು ಸಾಧ್ಯವಾಗುವುದಿಲ್ಲ ಎಂದು ಮನದಟ್ಟಾದರೆ ರಾಷ್ಟ್ರದ ಮುಖ್ಯಚುನಾವಣಾ ಆಯುಕ್ತರ ಗಮನ ಸೆಳೆದು ಪ್ರಜಾ ಪ್ರಭುತ್ವ ರೀತ್ಯಾ ಚುನಾವಣೆ ನಡೆಸಲು ಅಗತ್ಯವಾದ ನೆರವಿಗೆ ಬೇಡಿಕೆ ಇಡಲಿ. ಸಾಧ್ಯವಾಗದಿದ್ದರೆ ಚುನಾವಣೆಯನ್ನು ಕೆಲ ತಿಂಗಳು ಮುಂದೂಡಲು ಹಿಂದು ಮುಂದು ನೋಡಬಾರದು.

ಹಿಂದೆ ಶೇಷನ್ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ಬಿಹಾರದ ಸ್ಥಿತಿಗತಿ ಮುಕ್ತಚುನಾವಣೆಗೆ ಪೂರಕವಾಗಿಲ್ಲ ಎಂದು ಚುನಾವಣೆಯನ್ನು ಮುಂದೂಡಿದ ಉದಾಹರಣೆ ಇದೆ. ಏಕೆಂದರೆ ಈ ರೀತಿ ಹಣಕೊಟ್ಟು ಆಯ್ಕೆಯಾದ  ಸರ್ಕಾರಕ್ಕೆ ಸಂವಿಧಾನಾತ್ಮಕವಾಗಿ ಆಡಳಿತ ನಡೆಸುವ ಹಕ್ಕು ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT