ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟೆಬೆಳಗುಲಿ ಗ್ರಾಮಕ್ಕೆ ಶೀತಬಾಧೆ

Last Updated 8 ಜನವರಿ 2014, 5:51 IST
ಅಕ್ಷರ ಗಾತ್ರ

ಹೊಳೆನರಸೀಪುರ: ತಾಲ್ಲೂಕಿನ ಕಟ್ಟೆಬೆಳಗುಲಿ ಗ್ರಾಮದ ಜನರು ಶೀತದಿಂದ ತತ್ತರಿಸಿದ್ದಾರೆ. ಕೊರೆಯುವ ಚಳಿ, ನೆಲದಲ್ಲಿ ಜಿನುಗುವ ನೀರು ಬದುಕನ್ನು ದುಸ್ತರಗೊಳಿಸಿದೆ. ಇದಕ್ಕೆ ಶ್ರೀರಾಮ ದೇವರ ನಾಲೆ ಹಾಗೂ ಹೇಮಾವತಿ ಹಿನ್ನೀರು ಕಾರಣ.

ಗ್ರಾಮದಿಂದ ಕೂಗಳತೆ ದೂರದಲ್ಲಿರುವ ನಾಲೆಯಿಂದಾಗಿ ಗ್ರಾಮದಲ್ಲಿ ಶೀತ ಹೆಚ್ಚಾಗಿ ಮನೆಯ ಒಳಗಿನ ನೆಲದಲ್ಲೇ ಸದಾ ಕಾಲ ನೀರು ಜಿನುಗುತ್ತಿರುತ್ತದೆ. ಗೋಡೆಗಳಿಗೆ ಶೀತ ಹಿಡಿದಿದೆ. ಊರಿನ ರಸ್ತೆಗಳಲ್ಲೂ ನೀರು ನಿಲ್ಲುತ್ತಿದೆ. ಮನೆಯೊಳಗೆ ಕಾಲಿಟ್ಟರೆ ಮಂಜುಗಡ್ಡೆಯ ಮೇಲೆ ಕಾಲಿಟ್ಟಂತಾಗುತ್ತದೆ. ಗ್ರಾಮದ ಜನರು 1989ರಿಂದಲೂ ಈ ತೊಂದರೆ ಅನುಭವಿಸುತ್ತಿದ್ದಾರೆ. ಆದರೂ, ಅವರಿಗೆ ಪುನರ್ವಸತಿ ಇನ್ನೂ ಕನಸಾಗಿಯೇ ಉಳಿದಿದೆ.

ದಿ.ಜಿ. ಪುಟ್ಟಸ್ವಾಮಿಗೌಡರು ನೀರಾವರಿ ಸಚಿವರಾಗಿದ್ದಾಗ ಈ ಗ್ರಾಮವನ್ನು ಸ್ಥಳಾಂತರಿಲು ಸುತ್ತೋಲೆ ಹೊರಡಿಸಿದ್ದರು. ಆದರೆ ಸ್ಥಳಾಂತರ ಮಾತ್ರ ಆಗಲೇ ಇಲ್ಲ. ಕಳೆದ ವಿಧಾನ ಸಭಾ ಚುನಾವಣೆಗೆ ಮುನ್ನ ಶೀತ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಲು ಬಂದಿದ್ದ ಪ್ರಾದೇಶಿಕ ಆಯುಕ್ತೆ ಜಯಂತಿ ನೇತೃತ್ವದ ತಂಡ ಈ ಗ್ರಾಮಕ್ಕೂ ಭೆೇಟಿ ನೀಡಿ ನಿವಾಸಿಗಳ ಕಷ್ಟವನ್ನು ನೋಡಿ ಮರುಗಿತ್ತು. ಆದರೆ, ಆ ತಂಡ ಏನು ವರದಿ ನೀಡಿದೆ ಎಂಬುದು ಯಾರಿಗೂ ತಿಳಿದಿಲ್ಲ.

‘ಚುನಾವಣೆ ಮುಗಿಯುತ್ತಿದ್ದಂತೆ ಸ್ಥಳಾಂತರ ಪ್ರಕ್ರಿಯೆಗೂ ಪೂರ್ಣವಿರಾಮ ಬಿದ್ದಿತು. ಈಗ ಮತ್ತೆ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಗ್ರಾಮದ ಜನರ ಕಷ್ಟಗಳ ಬಗ್ಗೆ ಕನಿಕರ ತೋರುತ್ತ ಮುಖಂಡರು ಬರುವ ಸಾಧ್ಯತೆ ಇದೆ. ಪ್ರತಿ ಚುನಾವಣೆ ಸಂದರ್ಭದಲ್ಲೂ ಇಂಥ ನಾಟಕ ನಡೆಯುತ್ತದೆ’ ಎಂದು ಹೆಸರು ಹೇಳಲಿಚ್ಚಿಸದ ಹಿರಿಯರೊಬ್ಬರು ನುಡಿಯುತ್ತಾರೆ.

ಗ್ರಾಮದಲ್ಲಿ 230 ಮನೆಗಳಿದ್ದು, ಕೆಲವರು ತಮ್ಮ ಮನೆಗಳಲ್ಲಿ ವಾಸ ಮಾಡಲಾಗದೆ ಎತ್ತರ ಪ್ರದೇಶದಲ್ಲಿ ಜನತಾ ಮನೆ ಕಟ್ಟಿಕೊಂಡು ವಾಸ ಇದ್ದಾರೆ. ಜನತಾ ಮನೆಗಳನ್ನು ಪಡೆದುಕೊಳ್ಳಲಾಗದ ಬಡವರು ಶೀತದ ಮನೆಯಲ್ಲೇ ವಾಸಿಸುತ್ತಿದ್ದಾರೆ.

‘ನಮ್ಮ ಗ್ರಾಮ ಸ್ಥಳಾಂತರ ಮಾಡಿಸಲು ಪ್ರಭಾವಿ ನಾಯಕರಿಗೆ ಕಷ್ಟ ಇರಲಿಲ್ಲ. ಆದರೆ  ನಮ್ಮ ಏಳಿಗೆಯನ್ನು ಜನನಾಯಕರು ಬಯಸುತ್ತಿಲ್ಲ’ ಎಂದು ಗ್ರಾಮದ ಮುಖಂಡರೊಬ್ಬರು ಆರೋಪಿಸುತ್ತಾರೆ.

ತಟ್ಟೆಕೆರೆ ಗ್ರಾಮಕ್ಕೆ ಅಗತ್ಯಕ್ಕಿಂತ ಹೆಚ್ಚು ಹಣ ಕೊಡಿಸಿದ್ದಾರೆ. ಹಣ ಪಡೆದುಕೊಂಡವರು ಇನ್ನೂ ಅದೇ ಹಳ್ಳಿಯಲ್ಲಿದ್ದಾರೆ. ಸ್ಥಳಾಂತರಗೊಂಡಿದೆ ಎಂದು ಹೇಳುವ ಗ್ರಾಮದ ರಸ್ತೆಗೆ ಈಗಲೂ ಡಾಂಬರೀಕರಣ ಮಾಡಿಸುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಾಲ್ಲೂಕಿನ ಕಟ್ಟೆಬೆಳಗುಲಿ, ಒಡ್ಡರಹಳ್ಳಿ, ತೆವಡಹಳ್ಳಿ, ಗುಂಜೇವು ಸೋಮನಹಳ್ಳಿ ಬಿದರಕ್ಕ ಸೇರಿದಂತೆ ಇನ್ನೂ ಕೆಲವು ಗ್ರಾಮಗಳು ಶೀತ ಪೀಡಿತವಾಗಿವೆ. ಆದರೆ, ಇವುಗಳ ಸ್ಥಳಾಂತರ ಆಗಲಿಲ್ಲ. ನಿವಾಸಿಗಳ ಬವಣೆ ತಪ್ಪಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT