ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಆರ್ಥಿಕ ಕ್ರಮಕ್ಕೆ ಸಿಂಗ್ ಚಿಂತನೆ

Last Updated 4 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಕಾನ್ (ಫ್ರಾನ್ಸ್): ದೇಶದ ವಿತ್ತೀಯ ಕೊರತೆಗೆ ಕಡಿವಾಣ ಹಾಕಿ, ಆರ್ಥಿಕ ಶಿಸ್ತು ತರುವ ಉದ್ದೇಶದಿಂದ ಸಬ್ಸಿಡಿ ಖೋತಾ, ಸರ್ಕಾರಿ ಸ್ವಾಮ್ಯದ ಉದ್ಯಮಗಳ ಷೇರು ವಿಕ್ರಯ ಹಾಗೂ ಕೆಲವು ವಸ್ತುಗಳ ಮೇಲಿನ ನಿಯಂತ್ರಣ ರದ್ದು ಮಾಡುವಂಥ ಕಠಿಣ ಕ್ರಮ ಕೈಗೊಳ್ಳುವ ಸುಳಿವನ್ನು ಪ್ರಧಾನಿ ಡಾ. ಮನಮೋಹನ್ ಸಿಂಗ್ ಶುಕ್ರವಾರ ನೀಡಿದ್ದಾರೆ. ಆದರೆ, ಇದರ ರಾಜಕೀಯ ಪರಿಣಾಮಗಳನ್ನು ಗಮನದಲ್ಲಿ ಇಟ್ಟುಕೊಂಡು ಎಚ್ಚರಿಕೆಯ ಹೆಜ್ಜೆ ಇಡುವುದಾಗಿಯೂ ಹೇಳಿದ್ದಾರೆ.

ಇಲ್ಲಿ ನಡೆಯುತ್ತಿರುವ ಜಿ-20 ರಾಷ್ಟ್ರಗಳ ಎರಡು ದಿನಗಳ ಶೃಂಗ ಸಮ್ಮೇಳನದ ನಡುವೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಬ್ಸಿಡಿ ಖೋತಾ, ಷೇರು ವಿಕ್ರಯ ಮತ್ತು ನಿಯಂತ್ರಣ ರದ್ದು ಮಾಡುವಂಥ ಕಠಿಣ ಕ್ರಮಗಳ ಮೂಲಕ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ ಎಂದರು.
 
ಪೆಟ್ರೋಲ್‌ನಂತೆ ಇನ್ನೂ ಕೆಲವು ವಸ್ತುಗಳ ಮೇಲಿನ ನಿಯಂತ್ರಣ ರದ್ದು ಮಾಡಬೇಕು, ಸರ್ಕಾರಿ ಸ್ವಾಮ್ಯದ ಉದ್ಯಮಗಳ ಷೇರು ವಿಕ್ರಯ ಹಾಗೂ ಸಬ್ಸಿಡಿ ಖೋತಾ ಆಗಬೇಕು. ಇವು ಅತ್ಯಂತ ಸೂಕ್ಷ್ಮ ವಿಷಯಗಳಾಗಿರುವುದರಿಂದ ರಾಜಕೀಯ ಪರಿಣಾಮಗಳನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.

ಪ್ರಸಕ್ತ ಬಜೆಟ್‌ನಲ್ಲಿ ವಿತ್ತೀಯ ಕೊರತೆ ಪ್ರಮಾಣವನ್ನು ಶೇಕಡ 4.6ಕ್ಕೆ ಇಳಿಸುವುದಾಗಿ ಪ್ರಕಟಿಸಲಾಗಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಶಿಸ್ತು ತರಬೇಕಾದರೆ ಕಠಿಣ ತೀರ್ಮಾನಗಳು ಅನಿವಾರ್ಯ. ಸೋರಿಕೆಗೂ ತಡೆ ಹಾಕಬೇಕಿದೆ. ಆದರೆ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ರಾಜಕೀಯ ಸಾಧಕ-ಬಾಧಕಗಳ ಕುರಿತೂ ಚಿಂತಿಸಬೇಕಿದೆ ಎಂದು ಪ್ರಧಾನಿ ಸೂಚ್ಯವಾಗಿ ಹೇಳಿದರು.

`ಹಣವು ಮರದ ಮೇಲೆ ಬೆಳೆಯುವುದಿಲ್ಲ. ಆದಾಯ ಮತ್ತು ವೆಚ್ಚದ ಮೇಲೆ ಸಮತೋಲನ ಸಾಧಿಸುವ ಮೂಲಕ ನಮ್ಮ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರಬೇಕು. ಇದು ಸುಲಭದ ಕೆಲಸವಲ್ಲ. ಬಹುತೇಕರಿಗೆ ಅಪ್ರಿಯವಾದ ಕಾರ್ಯ~ ಎಂದು ಅವರು ವಿಶ್ಲೇಷಿಸಿದರು.

ಹಣದುಬ್ಬರದಿಂದ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಕುರಿತು ಪ್ರಸ್ತಾಪಿಸಿದ ಪ್ರಧಾನಿ, `ಆಹಾರ ಧಾನ್ಯಗಳ ಬೆಲೆ ಸ್ಥಿರವಾಗಿದೆ, ಆದರೆ ತರಕಾರಿ, ಮೀನು, ಮೊಟ್ಟೆಯಂತಹ ಪೂರಕ ಪದಾರ್ಥಗಳ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ; ಇದು ಬೇಡಿಕೆ ಮತ್ತು ಪೂರೈಕೆಯ ನಡುವಿನ ವ್ಯತ್ಯಯದ ಪರಿಣಾಮ~ ಎಂದು ಅಭಿಪ್ರಾಯಪಟ್ಟರು.

`ದೇಶದ ವಾರ್ಷಿಕ ಆದಾಯ ಶೇಕಡ 8ರಷ್ಟು ಹೆಚ್ಚಾಗಿದೆ. ಜನಸಂಖ್ಯೆ ವಾರ್ಷಿಕ ಶೇಕಡ 1.6ರ ದರದಲ್ಲಿ ಹೆಚ್ಚುತ್ತಿದೆ. ತಲಾ ಆದಾಯವೂ ಶೇಕಡ 6.5ರಿಂದ 7ರಷ್ಟು ಹೆಚ್ಚಳ ಕಾಣುತ್ತಿದೆ~ ಎಂದು ಅಂಕಿ-ಅಂಶ ನೀಡಿದರು.

`ಯೂರೊ ವಲಯದ ಬಿಕ್ಕಟ್ಟಿನ ಪರಿಣಾಮ ಭಾರತದ ಮೇಲೂ ಆಗಬಹುದು~ ಎಂಬ ಆತಂಕ ವ್ಯಕ್ತಪಡಿಸಿದ ಪ್ರಧಾನಿ, `ನಮ್ಮದು ಸಮನ್ವಯದ ಜಗತ್ತು. ನಾವು ಪರಸ್ಪರರನ್ನು ಅವಲಂಬಿಸಿ ಬದುಕುತ್ತಿದ್ದೇವೆ, ಐರೋಪ್ಯ ರಾಷ್ಟ್ರಗಳ ಜೊತೆ ಹೆಚ್ಚಿನ ವ್ಯಾಪಾರ ಸಂಬಂಧ ಇದೆ. ಈ ರಾಷ್ಟ್ರಗಳು ಸಂಕಷ್ಟಕ್ಕೆ ಒಳಗಾದರೆ ನಮಗೆ ಬರುವ ಬಂಡವಾಳ, ತಂತ್ರಜ್ಞಾನ, ವ್ಯಾಪಾರ ಎಲ್ಲಕ್ಕೂ ತೊಂದರೆ ಆಗಲಿದೆ. ಈ ಕಾರಣಕ್ಕೆ ಯೂರೋ ವಲಯ ಮತ್ತು ಗ್ರೀಸ್ ಬಿಕ್ಕಟ್ಟನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ~ ಎಂದು ತಿಳಿಸಿದರು.

`ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪುಹಣ ಪತ್ತೆ ಮಾಡಿ ಯಾವಾಗ ಮರಳಿ ತರುತ್ತೇವೆ ಎಂದು ಕಾಲಮಿತಿ ನಿಗದಿ ಮಾಡಲು ನಾನು ಭವಿಷ್ಯಕಾರನಲ್ಲ. ಈ ವಿಷಯದಲ್ಲಿ ಹಲವು ರಾಷ್ಟ್ರಗಳ ಸಹಕಾರ ಅಗತ್ಯವಿದೆ. ನಮ್ಮ ಇಚ್ಛೆಯಂತೆಯೇ ಅವರೂ ನಡೆಯಬೇಕಲ್ಲವೇ~ ಎಂದು ಪ್ರಶ್ನಿಸಿದರು.

`ವಿದೇಶಿ ಬ್ಯಾಂಕ್‌ಗಳಲ್ಲಿರುವ ಹಣದ ಪ್ರಮಾಣ ಎಷ್ಟಿರಬಹುದು ಎಂಬ ಬಗ್ಗೆಯೂ ನಮಗೆ ಅಂದಾಜಿಲ್ಲ. ಈ ಕುರಿತು ತನಿಖೆ ನಡೆಸಲು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಅತ್ಯಲ್ಪ ಅವಧಿಯಲ್ಲಿ ಇದನ್ನು ವಾಪಸ್ ತರಲು ಸಾಧ್ಯವಿಲ್ಲ~ ಎಂದರು. `ಭಾರತದಲ್ಲಿ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. ಆದ್ದರಿಂದ ಮುಂದೆ ವಾತಾವರಣ ಬದಲಾವಣೆಯಾಗಬಹುದು. ಹೆಚ್ಚುವರಿ ಹಣ ನಮ್ಮಲ್ಲೇ ಹೂಡಿಕೆ ಆಗಬಹುದು~ ಎಂದು ಅವರು ಆಶಿಸಿದರು.

ಪಾಕಿಸ್ತಾನ ಭಾರತಕ್ಕೆ ಪರಮಾಪ್ತ ದೇಶದ ಸ್ಥಾನಮಾನ ನೀಡುತ್ತಿರುವ ಕುರಿತು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಪಾಕಿಸ್ತಾನ ತಡವಾಗಿಯಾದರೂ ಸರಿಯಾದ ನಿರ್ಧಾರವನ್ನೇ ಮಾಡಿದೆ. ಅದರ ಮನಸ್ಥಿತಿ ಹೀಗೆಯೇ ಮುಂದುವರಿಯುವುದೇ ಎಂಬುದನ್ನು ಕಾದು ನೋಡಬೇಕಿದೆ ಎಂದರು.

`ಚೀನಾದ ಅಧ್ಯಕ್ಷರು ನನ್ನ ಒಳ್ಳೆಯ ಮಿತ್ರರು. ಸಮ್ಮೇಳನದ ಸಮಯದಲ್ಲಿ ಭೇಟಿ ಮಾಡಿ ಮಾತನಾಡಿದರು. ಯೂರೊ ವಲಯದ ಬಿಕ್ಕಟ್ಟು ಕುರಿತು ನಾವು ಸೂಚಿಸಿದ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಜರ್ಮನಿ ಛಾನ್ಸಲರ್ ಕೂಡ ಭೇಟಿ ಮಾಡಿ, ನನ್ನನ್ನು ಅಲ್ಲಿಗೆ ಆಹ್ವಾನಿಸಿದ್ದಾರೆ. ಆದರೆ ಅವರಿಗೇ ಭಾರತಕ್ಕೆ ಬರಲು ಹೇಳಿದ್ದೇವೆ. ಅವರೂ ಆಸಕ್ತರಾಗಿದ್ದಾರೆ~ ಎಂದರು.

`ಜಿ-20 ಚರ್ಚಾ ವೇದಿಕೆ ಅಷ್ಟೆ. ಯೂರೋ ವಲಯದ ಬಿಕ್ಕಟ್ಟು ಮತ್ತು ಅದರ ಜಾಗತಿಕ ಪರಿಣಾಮ ಕುರಿತು ನಾವು ಚರ್ಚಿಸಿದ್ದೇವೆ, ಎರಡು ದಿನಗಳಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಸಮಾಲೋಚನೆ ನಡೆದಿದೆ. ಮುಂದಿನ ಸಭೆಗಳಲ್ಲಿ ಈ ನಿಟ್ಟಿನಲ್ಲಿ ಆಗಿರುವ ಬೆಳವಣಿಗೆ ಕುರಿತು ಚರ್ಚೆ ನಡೆಯಲಿದೆ~ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT