ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಕಾಯ್ದೆ ಸಡಿಲಿಸಲು ಚೀನಾ ನಿರ್ಧಾರ

ದಂಪತಿಗೆ `ಒಂದೇ ಮಗು' ನಿಯಮ
Last Updated 4 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೀಜಿಂಗ್ (ಪಿಟಿಐ): ವೃದ್ಧರ ಸಂಖ್ಯೆ ಕ್ರಮೇಣ ಹೆಚ್ಚುತ್ತ, ಜನಸಂಖ್ಯೆ ಯೋಜನೆ ಜಾರಿ ಸಮಸ್ಯೆಯಾಗಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಸರ್ಕಾರ, `ದಂಪತಿಗೆ ಒಂದೇ ಮಗು' ನೀತಿಯನ್ನು ತುಸು ಸಡಿಲಗೊಳಿಸಲು ನಿರ್ಧರಿಸಿದೆ.

ಪ್ರಸ್ತುತ ಜಾರಿಯಲ್ಲಿರುವ ನಿಯಮದ ಅನುಸಾರ, ಎರಡನೇ ಮಗು ಪಡೆಯಬೇಕೆಂದರೆ ದಂಪತಿಯಲ್ಲಿ ಇಬ್ಬರೂ ಅವರ ತಂದೆ- ತಾಯಿಗೆ ಒಬ್ಬರೇ ಪುತ್ರ ಅಥವಾ ಪುತ್ರಿ ಆಗಿರಬೇಕು. ಆದರೆ ಹೊಸ ನಿಯಮದ ಪ್ರಕಾರ, ದಂಪತಿಯ ಪೈಕಿ ಒಬ್ಬರು ತಮ್ಮ ತಂದೆ-ತಾಯಿಗೆ ಒಂದೇ ಮಗು ಆಗಿದ್ದರೂ ಎರಡನೇ ಮಗು ಪಡೆಯಲು ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ಕಠಿಣವಾಗಿ ಜಾರಿ ಮಾಡಿದ್ದ ನಿಯಮಗಳನ್ನು ಸರಳಗೊಳಿಸುವ ಕುರಿತು ಮಾಹಿತಿ ನೀಡಿದ ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಯೋಜನೆ ಆಯೋಗದ ವಕ್ತಾರ ಮಾವೊ ಕುನಾನ್, ಬಹು ಕಾಲದಿಂದಲೂ ಜನಸಂಖ್ಯಾ ನಿಯಂತ್ರಣ ಯೋಜನೆಯನ್ನು ಚೀನಾ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಯ್ದೆ ಜಾರಿಯಾಗಿರದಿದ್ದರೆ ದೇಶದ ಜನಸಂಖ್ಯೆಗೆ 400 ದಶಲಕ್ಷ ಶಿಶುಗಳು ಸೇರ್ಪಡೆಯಾಗುತ್ತಿದ್ದವು ಎಂದು ಅವರು ಪ್ರತಿಪಾದಿಸಿದರು.

ಅವಳಿ ಶಿಶು ಜನನ, ಗ್ರಾಮೀಣ ಪ್ರದೇಶದ ದಂಪತಿ, ಜನಾಂಗೀಯ ಅಲ್ಪಸಂಖ್ಯಾತರು ಹಾಗೂ ತಮ್ಮ ತಂದೆ- ತಾಯಿಗೆ ಒಂದೇ ಮಗು ಆಗಿರುವ ದಂಪತಿಯನ್ನು ಹೊರತುಪಡಿಸಿ ಉಳಿದವರು ಒಂದೇ ಮಗು ಹೊಂದಿರಬೇಕು ಎಂಬ ನಿಯಮವನ್ನು 1978ರಲ್ಲಿಯೇ ಜಾರಿಗೆ ತರಲಾಗಿದೆ.

ಕಳೆದ ವರ್ಷ ಪ್ರಕಟವಾದ ವರದಿ ಪ್ರಕಾರ, ಚೀನಾದಲ್ಲಿ 60 ವರ್ಷಕ್ಕಿಂತ ಹೆಚ್ಚು ಸಂಖ್ಯೆ 185 ದಶಲಕ್ಷ ಇದೆ. 2015ರ ಹೊತ್ತಿಗೆ ಇದು 221 ದಶಲಕ್ಷ ತಲುಪುವ ಸಾಧ್ಯತೆಯಿದೆ. ಈ ಪೈಕಿ 51 ದಶಲಕ್ಷ ವೃದ್ಧರು ಮಕ್ಕಳನ್ನು ಕಳೆದುಕೊಂಡವರು.

ತನ್ನ ನಾಲ್ಕನೇ ಮಗುವಿನ ಜನನ ನೋಂದಣಿ ಮಾಡಲು ನಿರಾಕರಿಸಿದ `ಒಂದೇ ಮಗು ಕಾಯ್ದೆ' ಪಾಲನೆ ಅಧಿಕಾರಿಯೊಬ್ಬನನ್ನು ವ್ಯಕ್ತಿಯೊಬ್ಬ ಕೊಂದು, ಹಲವರನ್ನು ಗಾಯಗೊಳಿಸಿದ ಘಟನೆಯು ವ್ಯಾಪಕ ಚರ್ಚೆಗೆ ಒಳಗಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT