ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಕ್ರಮ ಎಲ್ಲಿ?

Last Updated 12 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಮಂಗಳೂರಿನ `ಹೋಂ ಸ್ಟೇ~ ದಾಳಿ ಪ್ರಕರಣ ನಡೆದು, ಎರಡು ವಾರಕ್ಕಿಂತ ಹೆಚ್ಚಿನ ದಿನಗಳಾದವು. ಹೀಗಿದ್ದೂ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯದ ಬಿಜೆಪಿ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂಬುದು ಎದ್ದು ಕಾಣುತ್ತಿರುವ ಸಂಗತಿ.

ತಮ್ಮಷ್ಟಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಜನರ ಮೇಲೆ `ಭಾರತೀಯ ಸಂಸ್ಕೃತಿ~ ರಕ್ಷಿಸುವ ನೆಪದಲ್ಲಿ  ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದೈಹಿಕ ಹಲ್ಲೆ ನಡೆಸಿದ್ದು ರಾಷ್ಟ್ರದಾದ್ಯಂತ ತೀವ್ರ ಖಂಡನೆಗೆ ಒಳಗಾಗಿದೆ. ರಾಜ್ಯದ ಹೈಕೋರ್ಟ್ ಸಹ ಈ ಪ್ರಕರಣ ಕುರಿತಂತೆ ತೀವ್ರ ಟೀಕೆಗಳನ್ನು ಮಾಡಿದೆ.

ಹೀಗಿದ್ದೂ ಈ ಪ್ರಕರಣ ಕುರಿತಂತೆ ಕಠಿಣ ನಿಲುವನ್ನು ಸರ್ಕಾರ ಪ್ರದರ್ಶಿಸದಿರುವುದು ಖಂಡನೀಯ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಷ್ಟು ಜನರನ್ನು ಬಂಧಿಸಲಾಗಿದೆ ಅಷ್ಟೆ. ಆದರೆ ರಾಜ್ಯ ವಿಧಾನಸಭೆಯಲ್ಲಿ ಗೃಹ ಸಚಿವರು ವಚನ ನೀಡಿದಂತೆ, ಈ ದುಷ್ಕರ್ಮಿಗಳ ವಿರುದ್ಧ ಗೂಂಡಾ ಕಾಯಿದೆ ಅನ್ವಯ ಪ್ರಕರಣಗಳನ್ನು ದಾಖಲಿಸಲು ಹಿಂದೇಟು ಹಾಕುತ್ತಿರುವುದು ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ.

ಹೀಗಾಗಿಯೇ ಬಿಜೆಪಿ ಯಥಾಪ್ರಕಾರ ಈ ಪ್ರಕರಣವನ್ನೂ ತನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿರುವುದು ಸಹಜ. ಈ ಮಧ್ಯೆ ರಾಜ್ಯ ಮಹಿಳಾ ಆಯೋಗ, ಈ ಪ್ರಕರಣ ಕುರಿತಂತೆ ನೀಡಿರುವ ವರದಿ ಹಾಗೂ ಶಿಫಾರಸುಗಳು ಆಯೋಗದ ಸ್ಥಾಪನೆಯ ಉದ್ದೇಶವನ್ನೇ ಅಣಕಿಸುವಂತಿದೆ. ಈ ಘಟನೆಯ ಬಗ್ಗೆ ತೋರಬೇಕಿದ್ದ ಕಾಳಜಿಯನ್ನಾಗಲಿ, ಸಂವೇದನಾಶೀಲತೆಯನ್ನಾಗಲಿ ಮಹಿಳಾ ಆಯೋಗ ತೋರದಿರುವುದು ದುರದೃಷ್ಟಕರ. 

 ಬಿಜೆಪಿ ಸರ್ಕಾರದಿಂದ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನೇಮಕಗೊಂಡಿರುವ ಸಿ. ಮಂಜುಳಾ ಅವರು, ದಾಳಿ ನಡೆಸಿದ `ಹಿಂದೂ ಜಾಗರಣ ವೇದಿಕೆ~ ಹೆಸರನ್ನೇ ಗೃಹ ಸಚಿವರಿಗೆ ನೀಡಿರುವ ತಮ್ಮ ವರದಿಯಲ್ಲಿ ಪ್ರಸ್ತಾಪಿಸದಿರುವುದು ದುರುದ್ದೇಶಪೂರಿತ.

ಆಡಳಿತ ಪಕ್ಷದೊಂದಿಗೆ ಸಂಪರ್ಕಗಳನ್ನು ಹೊಂದಿರುವ ಈ `ಸ್ವಘೋಷಿತ ನೈತಿಕ ಪೊಲೀಸ್ ಗೂಂಡಾ~ಗಳ ವಿರುದ್ಧದ ಆರೋಪಗಳ ಮೇಲಿನ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ಇದು.

ಇದನ್ನು  ಅರಿಯದಷ್ಟು ಜನರು ದಡ್ಡರಲ್ಲ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಪೊಲೀಸರನ್ನು ಟೀಕಿಸಿರುವ ಈ ವರದಿ, `ಸ್ವೇಚ್ಛೆಯತ್ತ ಕರೆದೊಯ್ಯುತ್ತಿರುವ ಶಕ್ತಿಗಳಿಂದ ಯುವಜನರನ್ನು ರಕ್ಷಿಸಬೇಕಿದೆ~ಎಂಬಂಥ ಬುದ್ಧಿವಾದ ಹೇಳಿದೆ. ಮಹಿಳಾ ಆಯೋಗದ ಪೂರ್ವಗ್ರಹ ಹಾಗೂ ಅದರ ರಾಜಕೀಯ ಕಾರ್ಯಸೂಚಿಗೆ ಸ್ಪಷ್ಟ ನಿದರ್ಶನ ಇದು.

ಪಾರ್ಟಿಯಲ್ಲಿದ್ದ ಹುಡುಗರು ಮಾದಕವಸ್ತು ಸೇವಿಸುತ್ತಿದ್ದರೆಂದು ಯಾವುದೇ ಸಾಕ್ಷಿ ಇಲ್ಲದೆ ವರದಿಯಲ್ಲಿ ಹೇಳಿರುವುದಂತೂ ಬೇಜವಾಬ್ದಾರಿಯ ಪರಮಾವಧಿ. ದಾಳಿ ನಡೆದ ನಂತರ ಸ್ಥಳ ಪರಿಶೀಲಿಸಿದ್ದ ಪೊಲೀಸರೇ, `ಯಾವುದೇ ಮಾದಕವಸ್ತುಗಳಿರಲಿಲ್ಲ~ ಎಂಬುದನ್ನು ಸ್ಪಷ್ಟಪಡಿಸ್ದ್ದಿದುದನ್ನು ಇಲ್ಲಿ ಸ್ಮರಿಸಬಹುದು.

ಈ ಬಗೆಯ ತನಿಖೆ, ವರದಿ ಎಂಬಂತಹ ಪ್ರಹಸನಗಳಲ್ಲಿ ಕಾಲ ತಳ್ಳುವ ಬದಲು, ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಬೇಕಿರುವುದು ತುರ್ತು ಅಗತ್ಯ. ಕಾನೂನಿನ ಕುಣಿಕೆಯಿಂದ ಪಾರಾಗಲು ಅಪರಾಧಿಗಳಿಗೆ ಅವಕಾಶ ನೀಡುವುದಿಲ್ಲವೆಂದು ಭರವಸೆ ನೀಡಿದ್ದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಬೇಕು.
 
ಆ ಮೂಲಕ ರಾಷ್ಟ್ರವ್ಯಾಪಿ ಪ್ರಚಾರ ಪಡೆದ ಇಂತಹ ಅನಾಗರೀಕ, ಅಮಾನವೀಯ ಘಟನೆಗಳಿಗೆ ಸರ್ಕಾರದ ಬೆಂಬಲ ಇಲ್ಲ ಎಂಬ ಗಟ್ಟಿ ಸಂದೇಶವನ್ನು ರಾಷ್ಟ್ರದ ಜನತೆಗೆ ರವಾನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT