ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಕ್ರಮಕ್ಕೆ ಸುಪ್ರೀಂಗೆ ಶಿಫಾರಸು

Last Updated 7 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಬಳ್ಳಾರಿ ಜಿಲ್ಲೆಯಲ್ಲಿ ವ್ಯಾಪಕ ಗಣಿಗಾರಿಕೆ ನಡೆಸಿ ಪರಿಸರಕ್ಕೆ ಹಾನಿ ಮಾಡಿರುವ ಕಂಪೆನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜತೆಗೆ, ಆಗಿರುವ ಹಾನಿಯನ್ನು ಅವರಿಂದಲೇ ತುಂಬಿಕೊಳ್ಳಬೇಕು ಎಂದು ಪರಿಸರ ತಜ್ಞರ ಸಮಿತಿ ಸುಪ್ರೀಂ ಕೋರ್ಟ್‌ಗೆ ಶಿಫಾರಸು ಮಾಡಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಯಿಂದಾಗಿರುವ ಪರಿಸರ ಹಾನಿ ಕುರಿತು ಅಧ್ಯಯನ ನಡೆಸಿದ ಕೇಂದ್ರ ಪರಿಸರ ಸಚಿವಾಲಯದ ~ಅರಣ್ಯ ಸಂಶೋಧನಾ ಮಂಡಲಿ~ ಗಣಿಗಾರಿಕೆ ಸಂಸ್ಥೆಗಳು ಅದರಲ್ಲೂ ಸಣ್ಣಪುಟ್ಟ ಉದ್ದಿಮೆಗಳು ಅಕ್ರಮ ಅವೈಜ್ಞಾನಿಕ ರೀತಿಯಲ್ಲಿ ಗಣಿಗಾರಿಕೆ ನಡೆಸಿ ಪರಿಸರಕ್ಕೆ ಭಾರಿ ಹಾನಿ ಮಾಡಿವೆ ಎಂದು ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಸಲ್ಲಿಸಿದ ವರದಿಯಲ್ಲಿ ಸ್ಪಷ್ಟಪಡಿಸಿವೆ. ಸೀಲು ಮಾಡಿದ ಲಕೋಟೆಯಲ್ಲಿ ಈ ಕೊಡಲಾಗಿದೆ.

ನ್ಯಾಯಾಲಯದ ಸೂಚನೆ ಮೇರೆಗೆ, ಮಂಡಲಿಯ ತಜ್ಞರು ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಆಗಿರುವ ಪರಿಸರ ಹಾನಿ ಕುರಿತು ಪರಿಶೀಲಿಸಿದರು. ಅತಿಯಾದ ಲಾಭದ ಆಸೆಯಿಂದ ಪರಿಸರ ಸಂರಕ್ಷಣೆ ಬಗ್ಗೆ ಎಚ್ಚರ ವಹಿಸದೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಗಣಿಗಾರಿಕೆ ನಡೆಸಲಾಗಿದೆ. ಇದಕ್ಕೆ ಕಾರಣರಾದವರ ಮೇಲೆ ಕ್ರಮ ಜರುಗಿಸಬೇಕು. ಅವರಿಂದ ಈ ಹಾನಿ ತುಂಬಿಕೊಳ್ಳಬೇಕೆಂದು ಶಿಫಾರಸು ಮಾಡಿದೆ.

ಬಳ್ಳಾರಿ, ಹೊಸಪೇಟೆ ಹಾಗೂ ಸಂಡೂರು ತಾಲೂಕುಗಳಲ್ಲಿ ಗಣಿಗಾರಿಕೆಯಿಂದ ಹೆಚ್ಚಿರುವ ವಾಹನಗಳ ಸಂಖ್ಯೆಯಿಂದ ಅಪಘಾತಗಳು ವಿಪರೀತವಾಗಿವೆ. ಸ್ಥಳೀಯ ಜನರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು ಶೇ. 42ರಷ್ಟು ಜನ ದಡಾರ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಎಂಬ ಆತಂಕಕಾರಿ ಅಂಶಗಳ ಮೇಲೆ ಪರಿಸರ ತಜ್ಞರು ಬೆಳಕು ಚೆಲ್ಲಿದ್ದಾರೆ.

ಅಕ್ರಮ ಮತ್ತು ಅನಿಯಂತ್ರಿತವಾಗಿ ನಡೆದಿರುವ ಗಣಿಗಾರಿಕೆ ಜಿಲ್ಲೆಯಲ್ಲಿ ಪ್ರತಿಕೂಲ ಪರಿಣಾಮ ಬೀರಿದೆ. ಪ್ರಾಣಿ ಪಕ್ಷಿ ಮತ್ತು ಸಸ್ಯಸಂಕುಲದ ಮೇಲೂ ತೀವ್ರತರದ ಪರಿಣಾಮ ಉಂಟುಮಾಡಿದೆ. ಗಾಳಿ, ನೀರು ಹಾಗೂ ಕೃಷಿಗೂ ಆತಂಕ ತಂದೊಡ್ಡಿದೆ.

ಗಣಿಗಾರಿಕೆಯಿಂದ ಶೇಖರಣೆಯಾಗುವ ಹೂಳು ಹಾಗೂ ಆ್ಯಸಿಡ್‌ನಿಂದ ಮೀನು, ಕಪ್ಪೆ, ಮೊಸಳೆ, ಆಮೆ ಮತ್ತಿತರ ಜಲಚರಗಳು, ಅಳವಿನ ಅಂಚಿನಲ್ಲಿರುವ ಅಪರೂಪದ ಪ್ರಾಣಿ, ಪಕ್ಷಿ ಸಸ್ಯ ಸಂಕುಲಗಳ ಅಸ್ತಿತ್ವಕ್ಕೂ ಆತಂಕ ಎದುರಾಗಿದ್ದು, ಜೀವ ವೈವಿಧ್ಯತೆ ನಾಶವಾಗಲಿದೆ ಎಂದು ಮಂಡಲಿ ಆತಂಕ ವ್ಯಕ್ತಪಡಿಸಿದೆ.

ಪರಿಸರ ಸಮತೋಲನಕ್ಕೆ ಮಹತ್ವದ ಕೊಡುಗೆ ನೀಡುತ್ತಿರುವ ಚಿಟ್ಟೆ ಮತ್ತಿತರ ಹಾರು ಜಾತಿಯ ಜೀವಿಗಳ ಮೇಲೂ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿದೆ. ತೋಳ ಮತ್ತು ಹಳದಿ ಕೊರಳಿನ ಬುಲ್‌ಬುಲ್ ಹಕ್ಕಿಗಳಿಗೆ ಬಳ್ಳಾರಿ ಅರಣ್ಯ ಆಸರೆಯಾಗಿದ್ದು, ಪರಿಸರ ಸಂರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳದಿದ್ದರೆ ಇವು ಕಣ್ಮರೆ ಆಗಲಿದೆ ಎಂದು ಎಚ್ಚರಿಸಲಾಗಿದೆ.

ಅಳಿವಿನ ಅಂಚಿನಲ್ಲಿರುವ ಅಪರೂಪದ ಪ್ರಾಣಿ ಪಕ್ಷಿ ಸಂಕುಲಗಳನ್ನು ಉಳಿಸಬೇಕಾದರೆ ಗಣಿಗಾರಿಕೆಗೆ ಕಡಿವಾಣ ಹಾಕಬೇಕು. ಪರಿಸರ ಸಂರಕ್ಷಣೆ ಯೋಜನೆ ಸಿದ್ಧಪಡಿಸಿ, ಜಾರಿಗೊಳಿಸಬೇಕು. ಔಷಧ ಸಸ್ಯಗಳ ಸಂರಕ್ಷಣಾ ಕೇಂದ್ರ ಹಾಗೂ ಚಿಟ್ಟೆಗಳ ಸಂರಕ್ಷಣಾ ಕೇಂದ್ರ ಸ್ಥಾಸಿ  ಪರಿಸರ ಸಮತೋಲನ ಕಾಯ್ಡುಕೊಳ್ಳಬೇಕು. ಇದಕ್ಕೆ ಅಗತ್ಯವಾದ ಹಣಕಾಸು ಒದಗಿಸಬೇಕು ಎಂದು ತಿಳಿಸಲಾಗಿದೆ.

ರಾಜ್ಯದ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ವನ್ಯಜೀವಿ ಗಣಿಗಾರಿಕೆ ಪ್ರದೇಶದಲ್ಲಿ ಸಂಶೋಧನೆ ಕೈಗೊಂಡು, ವನ್ಯಜೀವಿಗಳ ಸಂರಕ್ಷಣೆಗೆ ಮಾದರಿ ಸಿದ್ಧಪಡಿಸಿ, ಅನುಷ್ಠಾನಗೊಳಿಸಬೇಕು. ಮತ್ತೆ ಅರಣ್ಯ ಬೆಳೆಸುವುದರ ಕಡೆ ಗಮನ ಹರಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಕಳೆದ 11 ವರ್ಷಗಳ ಅವಧಿಯಲ್ಲಿ ಸುಮಾರು 8.9 ಚದರ ಕಿ.ಮೀ ಅರಣ್ಯ ಪ್ರದೇಶವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ. ನಿಗದಿತ ಪ್ರದೇಶದಾಚೆಗೂ ಗಣಿಗಾರಿಕೆ ನಡೆಸಲಾಗಿದೆ.

ಅಕ್ರಮ ಮತ್ತು ಅವೈಜ್ಞಾನಿಕ ಗಣಿಗಾರಿಕೆ ಮೂಲಕ ಪರಿಸರ ಸಂರಕ್ಷಣೆ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ತಜ್ಞರು ವರದಿಯಲ್ಲಿ ವಿಶ್ಲಷಣೆ ಮಾಡಿದ್ದಾರೆ. ಗಣಿಗಾರಿಕೆ ಚಟುವಟಿಕೆಗಾಗಿ ನಿರ್ದಿಷ್ಟ ವಲಯ ಗುರುತಿಸಬೇಕು.

ದೇಶಿ ಬೇಡಿಕೆಗೆ ಸಾಕಾಗುವಷ್ಟು ಉಕ್ಕು ಉತ್ಪಾದನೆಗೆ ಅಗತ್ಯವಾದ ಅದಿರು ತೆಗೆಯಲು ಅನುಮತಿ ಕೊಬೇಕು. ಹೊರದೇಶಗಳಿಗೆ ರಫ್ತು ಮಾಡುವುದಕ್ಕೆ ಅವಕಾಶ ಕೊಡಬಾರದು. ಗಣಿ ಗುತ್ತಿಗೆ ಅವಧಿಯನ್ನು ಎಲ್ಲರಿಗೂ ಸಮಾನವಾಗಿ ನಿಗದಿಪಡಿಸಬೇಕು.

ಮುಂದಿನ ಐವತ್ತು ವರ್ಷಗಳ ಅಗತ್ಯ ಗಮನದಲ್ಲಿಟ್ಟುಕೊಂಡು ಅದಿರು ಬಳಕೆ ಮಾಡಬೇಕು. ಬಳ್ಳಾರಿಯಲ್ಲಿ 25 ದಶಲಕ್ಷ ಟನ್, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ತಲಾ ಐದು ದಶಲಕ್ಷ ಟನ್ ಅದಿರು ತೆಗೆಯಲು ಸಾಧ್ಯವಿದೆ.

ಪಶ್ಚಿಮ ಘಟ್ಟದಲ್ಲಿ ಭೂಮಿ ಮೇಲ್ಮೈಗೆ ತೊಂದರೆ ಆಗದಂತೆ ರಂಜಕ ಹೊರತೆಗೆಯಲು ತಂತ್ರಜ್ಞಾನ ವಿನ್ಯಾಸಗೊಳಿಸಬೇಕು ಈ ಪ್ರದೇಶದಲ್ಲಿ ಸುಮಾರು ಎಂಟು ಶತ ಕೋಟಿ ಟನ್ ರಂಜಕ ಇದೆ ಎಂದು ವರದಿ ಸ್ಪಷ್ಟಪಡಿಸಿದೆ.

ರಾಜ್ಯದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಬಳ್ಳಾರಿಯಲ್ಲಿ ಪರಿಸರ ಸಂರಕ್ಷಣೆಗೆ ಕೈಗೊಂಡಿರುವ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕು ಎಂದು ಅರಣ್ಯ ಮತ್ತು ಪರಿಸರ ಸಂಶೋಧನಾ ಮಂಡಲಿ ನ್ಯಾಯಾಲಯಕ್ಕೆ ಹೇಳಿದೆ.

ವರದಿಯ ಮುಖ್ಯಾಂಶಗಳು
ಸ್ಥಳೀಯ ಜನರಲ್ಲಿ ಆರೋಗ್ಯ ಸಮಸ್ಯೆ

ಶೇ 42ರಷ್ಟು ಜನರಿಗೆ ದಡಾರ, ಉಸಿರಾಟದ ತೊಂದರೆ

ಜೀವ ವೈವಿಧ್ಯತೆ ನಾಶ- ಆತಂಕ

ಪರಿಸರ ಸಂರಕ್ಷಣೆ ಯೋಜನೆ ಸಿದ್ಧಪಡಿಸಿ, ಜಾರಿಗೊಳಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT